ಹಿಂಸೆಯನ್ನು ಸಹಿಸಲಾಗದು ಕಪ್ಪುಹಣದ ವಿರುದ್ಧ ದನಿ ಎತ್ತಿ ದೇಶದ ಸಜ್ಜನಸಮೂಹದಲ್ಲಿ ಹೊಸ ನಿರೀಕ್ಷೆಯ ಬುಗ್ಗೆಗಳನ್ನೆಬ್ಬಿಸಿದ್ದ ಬಾಬಾ ರಾಮ್‌ದೇವ್ ಬಹುಬೇಗ ನಿರಾಶೆಗೊಳಿಸಿದ್ದಾರೆ.`ಗಾಂಧಿಗಿರಿ~ಯಿಂದ `ಗೂಂಡಾಗಿರಿ~ ಕಡೆ ಹೊರಟ ಅವರ ನಡೆಯನ್ನು ಜನತೆ ವಿಷಾದದಿಂದ ನೋಡುವಂತಾಗಿದೆ. `ರಾಮಲೀಲಾ ಮೈದಾನದಲ್ಲಿ ನಡೆದಂತಹ ಘಟನೆಯನ್ನು ಎದುರಿಸಲು ಸಶಸ್ತ್ರ ಯುವಕ- ಯುವತಿಯರ ಪಡೆಯನ್ನು ಕಟ್ಟುವೆ~ ಎಂದು ಅವರು ಸರ್ಕಾರಕ್ಕೆ ಸವಾಲು ಹಾಕಿದ್ದಾರೆ. ಇದು ಮಾವೋವಾದಿಗಳ ಭಾಷೆ, ಗಾಂಧಿವಾದಿಯದಲ್ಲ. ಅನ್ಯಾಯದ ವಿರುದ್ಧ ಸಿಡಿದೇಳಬೇಕಾದ ರಾಮ್‌ದೇವ್ ಸಿಟ್ಟು, ವ್ಯಗ್ರಮನಸ್ಸಿನ ಕಹಿಯಾಗಿ, ಮೈ ಪರಚಿಕೊಳ್ಳುವ ವ್ಯರ್ಥ ಕೋಪವಾಗಿ ವ್ಯಕ್ತವಾಗಿದೆ. ಅವರ ಹೋರಾಟವನ್ನು ಬಗ್ಗುಬಡಿಯಲು ಹೊರಟಿರುವ ಕೇಂದ್ರ ಸರ್ಕಾರದ ಕೈಗೆ ಇಂತಹ ಹತಾಶೆಯ ಹೇಳಿಕೆ ಮೂಲಕ ರಾಮ್‌ದೇವ್ ಹೊಸ ಆಯುಧವನ್ನು ಕೊಟ್ಟಿದ್ದಾರೆ. ಚುನಾಯಿತ ಸರ್ಕಾರದ ವಿರುದ್ಧ ಸಶಸ್ತ್ರಹೋರಾಟಕ್ಕೆ ಇಳಿಯುವುದು ಭಾರತೀಯ ದಂಡಸಂಹಿತೆಯ ಪ್ರಕಾರ ರಾಜದ್ರೋಹದ ಅಪರಾಧ. ಕಾಡಿನಲ್ಲಿರುವ ಮಾವೋವಾದಿಗಳಿಗೆ ಅನ್ವಯವಾಗುವ ಈ ಕಾನೂನು ನಾಡಿನಲ್ಲಿರುವ ದಾರಿತಪ್ಪಿದ ಸತ್ಯಾಗ್ರಹಿಗಳಿಗೂ ಅನ್ವಯವಾಗುತ್ತದೆ ಎನ್ನುವುದನ್ನು ರಾಮ್‌ದೇವ್ ಮರೆಯಬಾರದು. ನೆಲದ ಕಾನೂನಿನ ಮುಂದೆ ಎಲ್ಲರೂ ಸಮಾನರು, ಪ್ರಜಾಪ್ರಭುತ್ವದಲ್ಲಿ ಹಿಂಸೆಗೆ ಅವಕಾಶ ಇಲ್ಲ. ಸಾರ್ವಜನಿಕ ಜೀವನದಲ್ಲಿ ಅತೀ ಅಗತ್ಯವಾಗಿ ಬೇಕಾಗಿರುವ ಪಾರದರ್ಶಕತೆ ರಾಮ್‌ದೇವ್ ಅವರ ನಡವಳಿಕೆಯಲ್ಲಿ ಪ್ರಾರಂಭದಿಂದಲೂ ಇರಲಿಲ್ಲ. ಅವರ ಪೂರ್ವಾಶ್ರಮದ ಕತೆಗಳಿಂದ ಹಿಡಿದು, ಅವರು ಗಳಿಸಿರುವ ಆಸ್ತಿ, ನೀಡುತ್ತಿರುವ ಯೋಗಚಿಕಿತ್ಸೆಯ ವಿಶ್ವಾಸಾರ್ಹತೆ ಎಲ್ಲವೂ ವಿವಾದಗಳ ಸುಳಿಯಲ್ಲಿಯೇ ಇವೆ. ಉಪವಾಸ ಕೈಬಿಡುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಗುಟ್ಟಾಗಿ ನೀಡಿದ್ದ ಪತ್ರ ಕೂಡಾ ಅವರ ಬೆಂಬಲಿಗರ ಪಾಲಿನ ವಿಶ್ವಾಸಘಾತದ ನಡವಳಿಕೆಯೇ ಆಗಿದೆ. ತಾನು ನಂಬಿರುವ ಸತ್ಯದ ಮೇಲೆ ನಂಬಿಕೆ ಇಟ್ಟಿರುವ ಸತ್ಯಾಗ್ರಹಿ, ಎದುರಾಗುವ ಪ್ರಭುತ್ವದ ವಿರೋಧವನ್ನು, ದಿಟ್ಟತನದಿಂದ ಎದುರಿಸಬೇಕಾಗುತ್ತದೆ. ಆದರೆ ತಮ್ಮ ಬೆಂಬಲಿಗರನ್ನು ಪೊಲೀಸರ ದೌರ್ಜನ್ಯಕ್ಕೆ ತುತ್ತಾಗಲು ಬಿಟ್ಟು ತಾನು ಮಾತ್ರ ಮಹಿಳೆಯರ ಉಡುಪು ಧರಿಸಿ ತಪ್ಪಿಸಿಕೊಳ್ಳಲು ಪ್ರಯತ್ನ ನಡೆಸಿದ್ದ ರಾಮ್‌ದೇವ್ ನಡವಳಿಕೆ ಕೂಡಾ ಬೆಂಬಲಿಗರ ಕಣ್ಣಿನಲ್ಲಿ ಅವರನ್ನು ಕುಬ್ಜಗೊಳಿಸಿದೆ. ಕಪ್ಪುಹಣವನ್ನು ರಾಷ್ಟ್ರೀಯ ಆಸ್ತಿ ಎಂದು ಘೋಷಿಸಬೇಕು, ಕಪ್ಪುಹಣ ಹೊಂದಿದ್ದವರನ್ನು ಗಲ್ಲಿಗೇರಿಸಬೇಕು ಎಂಬ ಅವರ ಬೇಡಿಕೆಗಳು ಕೂಡಾ ಪ್ರಾಯೋಗಿಕವಾದುದಲ್ಲ. ಯೋಗವಿದ್ಯೆಯ ಜತೆ ರಾಮ್‌ದೇವ್ ಅವರು ಸಂವಿಧಾನ ಮತ್ತು ಈ ನೆಲದ ಕಾನೂನನ್ನೂ ಅಧ್ಯಯನ ಮಾಡಿದ್ದರೆ ಇಂತಹ ಎಡವಟ್ಟುಗಳನ್ನು ಮಾಡಿಕೊಳ್ಳುತ್ತಿರಲಿಲ್ಲ. ರಾಮ್‌ದೇವ್ ಅವರ ಇಂತಹ ದಾರಿತಪ್ಪಿದ ನಡೆ-ನುಡಿಗಳಿಂದಾಗಿ ಅಣ್ಣಾ ಹಜಾರೆ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟವನ್ನೂ ಜನ ಸಂಶಯದಿಂದ ನೋಡುವಂತಾಗಿರುವುದು ದುರಂತ. ಪ್ರಭುತ್ವದ ವಿರುದ್ದ ಜನ ದನಿ ಎತ್ತುವುದು ಪ್ರಜಾಪ್ರಭುತ್ವದಲ್ಲಿ ಹೊಸದೇನಲ್ಲ. ಎಲ್ಲ ಅಧಿಕಾರ ಕೇಂದ್ರಗಳನ್ನು ಅನುಮಾನದಿಂದ ನೋಡುವ, ತಪ್ಪಿದಾಗ ತಿದ್ದುವ, ಮಣಿಯದಾಗ ಬೀದಿಗಳಿಯುವ ಆರೋಗ್ಯಪೂರ್ಣ ಹೋರಾಟ ಪ್ರಜಾಪ್ರಭುತ್ವದ ಹೆಗ್ಗಳಿಕೆ. ಅಚಲವಾದ ಅಖಂಡ ನೈತಿಕಬಲದಿಂದ ನಡೆಸಿದ ಹೋರಾಟಕ್ಕೆ ಗಟ್ಟಿಮುಟ್ಟಾದ ಸಿಂಹಾಸನಗಳು ಉರುಳಿಬಿದ್ದ ನಿದರ್ಶನಗಳು ಚರಿತ್ರೆಯಲ್ಲಿವೆ. ಆದರೆ ಇವೆಲ್ಲವೂ ಪ್ರಜಾಪ್ರಭುತ್ವದ ವ್ಯಾಪ್ತಿಯಲ್ಲಿಯೇ ನಡೆಯಬೇಕು. ಈ ನಿಯಮವನ್ನು ಉಲ್ಲಂಘಿಸಿ ನಡೆಯುವ ಹೋರಾಟ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ದೇಶದ್ರೋಹದ ಕೆಲಸವಾಗುತ್ತದೆ. ಅಂತಹ ಸಂದರ್ಭದಲ್ಲಿ ದೇಶದ್ರೋಹಿಯ ವಿರುದ್ಧದ ಕ್ರಮವನ್ನೇ ಕೇಂದ್ರ ಕೈಗೊಳ್ಳಬೇಕಾಗುತ್ತದೆ. ಅದಕ್ಕೆ ಹಿಂಜರಿಯಬಾರದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.