ಮರ್ಯಾದಾ ಹತ್ಯೆಗೆ ಗಲ್ಲು `ಮರ್ಯಾದಾ ಹತ್ಯೆ~ಗಳು `ಅಪರೂಪದಲ್ಲಿ ಅಪರೂಪದ~ ಪ್ರಕರಣಗಳು. ಈ ಅಪರಾಧಕ್ಕೆ ಗಲ್ಲುಶಿಕ್ಷೆ ಆಗಬೇಕು ಎಂಬಂತಹ ಅಭಿಪ್ರಾಯವನ್ನು ಸುಪ್ರೀಂ ಕೋರ್ಟ್ ಕಳೆದ ತಿಂಗಳಷ್ಟೇ ವ್ಯಕ್ತಪಡಿಸಿತ್ತು. ಉತ್ತರ ಪ್ರದೇಶದ ಇಟಾ ಜಿಲ್ಲೆಯ ಸ್ಥಳೀಯ ನ್ಯಾಯಾಲಯ, `ಮರ್ಯಾದಾ ಹತ್ಯೆ~ಗೆ ಕಾರಣರಾದ ಹತ್ತು ಜನರಿಗೆ ಮರಣ ದಂಡನೆ ಶಿಕ್ಷೆ ವಿಧಿಸಿರುವುದು ಮಹತ್ವದ ಹೆಜ್ಜೆ. ಮನೆತನ, ಜಾತಿ ಅಥವಾ ಗ್ರಾಮದ ಮರ್ಯಾದೆ ಕಾಪಾಡುವ ನೆಪ ಒಡ್ಡಿ, ಪ್ರೀತಿಸಿ ಮದುವೆಯಾಗುವ ಯುವಜೋಡಿಗಳ ಹತ್ಯೆ ಮಾಡುವ ಪ್ರವೃತ್ತಿಯನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ಟೀಕಿಸಿತ್ತು. `ಈ ಹಂತಕರಿಗೆ ಗಲ್ಲುಶಿಕ್ಷೆಯೇ ಮದ್ದು. ಇಂತಹ ಅನಾಗರಿಕ, ದೌರ್ಜನ್ಯದ ನಡವಳಿಕೆಗಳಿಗೆ ಎಚ್ಚರಿಕೆ ನೀಡುವ ತಡೆಗೋಡೆಯಾಗಿ ಇದು ಅಗತ್ಯ. `ಮರ್ಯಾದಾ ಹತ್ಯೆ~ ಮಾಡಲು ಯೋಜಿಸುತ್ತಿರುವವರಿಗೆಲ್ಲಾ, ಮುಂದೆ ತಮಗೆ ಗಲ್ಲು ಶಿಕ್ಷೆ ಕಾದಿರುತ್ತದೆ ಎಂಬುದು ಅವರ ಪ್ರಜ್ಞೆಯೊಳಗೆ ಇಳಿದಿರಬೇಕು~ ಎಂದು ನ್ಯಾಯಮೂರ್ತಿಗಳಾದ ಮಾರ್ಕಂಡೇಯ ಕಟ್ಜು ಹಾಗೂ ಜ್ಞಾನ ಸುಧಾ ಮಿಶ್ರಾ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠ ಹೇಳಿತ್ತು. ಗಲ್ಲುಶಿಕ್ಷೆ ವಿಧಿಸುವುದು `ಅಪರೂಪದಲ್ಲಿ ಅಪರೂಪ~ದ ಪ್ರಕರಣಗಳಲ್ಲಿ.ಮಧ್ಯಯುಗೀನ ಮನಸ್ಥಿತಿಯನ್ನು ಬಿಂಬಿಸುವ `ಮರ್ಯಾದಾ ಹತ್ಯೆ~ಯಂತಹ ಅಪರಾಧವನ್ನು `ಅಪರೂಪದಲ್ಲಿ ಅಪರೂಪದ್ದು~ ಎಂದು ಪರಿಗಣಿಸಿರುವುದು ಈ ಅಪರಾಧದ ಗಂಭೀರತೆಯನ್ನು ಗ್ರಹಿಸಿದಂತಾಗಿದೆ. ಕಳೆದ ವರ್ಷ, ಹರಿಯಾಣದ ಕರ್ನಾಲ್ ಕೋರ್ಟ್, ಮನೋಜ್ - ಬಬ್ಲಿ ಎಂಬ ಯುವದಂಪತಿಗಳ ಹತ್ಯೆಯ ಪ್ರಕರಣದಲ್ಲಿ ಐವರಿಗೆ ಗಲ್ಲು ಶಿಕ್ಷೆ ವಿಧಿಸಿದ್ದು ನ್ಯಾಯವನ್ನು ಎತ್ತಿ ಹಿಡಿದಿತ್ತು. ನ್ಯಾಯಾಲಯಗಳ ಈ ಆದೇಶಗಳು ಮುಂದಿನ ಎಲ್ಲಾ ಮೇಲ್ಮನವಿಗಳ ಹಂತಗಳನ್ನೂ ದಾಟಿ ಜಾರಿಯಾಗಬೇಕು. ಆಗ ಮಾತ್ರ ಇಂಥ ಅಪರಾಧಗಳ ತೀವ್ರತೆಯನ್ನು ಸಮಾಜ ಮನವರಿಕೆಯಾಗಲು ಸಾಧ್ಯ. ವಿಭಿನ್ನ ಜಾತಿಯವರು, ಸಗೋತ್ರದವರು ಹಾಗೂ ಒಂದೇ ಗ್ರಾಮದ ಯುವಕ-ಯುವತಿ ಪ್ರೀತಿಸಿ ಮದುವೆಯಾಗುವುದಕ್ಕೆ ಅಡ್ಡಿಪಡಿಸಿ ಅವರನ್ನು ದಾರುಣವಾಗಿ ಹತ್ಯೆ ಮಾಡುವ ಕ್ರೂರ ಪ್ರವೃತ್ತಿ ಅತ್ಯಾಧುನಿಕ ಕಾಲದಲ್ಲೂ ನಡೆಯುತ್ತಿರುವುದು ವಿಪರ್ಯಾಸ. ಹರಿಯಾಣ, ಉತ್ತರ ಪ್ರದೇಶ, ಪಂಜಾಬ್ ಹಾಗೂ ರಾಜಸ್ತಾನದ ಕೆಲವು ರಾಜ್ಯಗಳ ಗ್ರಾಮಗಳಲ್ಲಿ ಚಾಲ್ತಿಯಲ್ಲಿದ್ದ ಈ ಪಿಡುಗು ಇತ್ತೀಚಿನ ದಿನಗಳಲ್ಲಿ ರಾಜಧಾನಿ ದೆಹಲಿಗೂ ಹಬ್ಬಿದೆ. ಸಗೋತ್ರ ವಿವಾಹ ನಿಷೇಧಿಸಲು ಹಿಂದೂ ವಿವಾಹ ಕಾಯಿದೆಗೇ ತಿದ್ದುಪಡಿ ತರಬೇಕೆಂಬುದು ಖಾಪ್ ಪಂಚಾಯಿತಿಗಳ ಒತ್ತಾಯ. ಸಂಗಾತಿಯ ಆಯ್ಕೆ ಹಕ್ಕುಗಳನ್ನೂ ನಿರಾಕರಿಸುವಂತಹ ಈ ಖಾಪ್ ಪಂಚಾಯಿತಿಗಳಿಗೆ ಮತಬ್ಯಾಂಕ್ ರಾಜಕಾರಣ ಮಾಡುವ ರಾಜಕೀಯ ಪಕ್ಷಗಳ ಬೆಂಬಲ ಇರುವುದು ಖಂಡನೀಯ. `ಮರ್ಯಾದಾ ಹತ್ಯೆ~ಯನ್ನು ಹೇಯ ಅಪರಾಧವಾಗಿ ಪರಿಗಣಿಸಲು ಅಗತ್ಯವಾದ ಶಾಸನಾತ್ಮಕ ತಿದ್ದುಪಡಿಗಳನ್ನು ತರುವ ಬಗ್ಗೆ ಸರ್ಕಾರ ಈ ಹಿಂದೆ ಭರವಸೆ ನೀಡಿದ್ದು ಅದು ಆದ್ಯತೆಯ ಮೇರೆಗೆ ಕಾರ‌್ಯರೂಪಕ್ಕೆ ಬರಬೇಕಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.