ನಿಖರ ಉತ್ತರ ಸಿಗದ ಮುಂದಿನ ಭವಿಷ್ಯದ ಜಿಜ್ಞಾಸೆ ಮುಂದೇನು ಎಂಬ ಪ್ರಶ್ನೆ ನಮ್ಮನ್ನು ಹಲವು ಬಗೆಗಳಲ್ಲಿ ಸದಾ ಕಾಡುತ್ತಿರುತ್ತದೆ. ನಾಳೆ ಏನಾಗಬಹುದು, ಮುಂದಿನ ವರ್ಷ ಹೇಗಿರುತ್ತದೆ, ಹತ್ತು ವರ್ಷಗಳ ಬಳಿಕ ನಮ್ಮ ಕತೆ ಏನು, ಸತ್ತ ಮೇಲೆ ನಮಗೇನಾಗುತ್ತದೆ? ಈ ಬಗ್ಗೆ ವ್ಕಕ್ತಿಗಳಿಗೆ, ಸಮುದಾಯಗಳಿಗೆ ಸದಾ ಭಯ, ಆತಂಕ, ಕಾತರ, ಕೌತುಕ. ಒಂದು ರೀತಿಯ ಧಾರ್ಮಿಕ ಚಿಂತನೆ ನಮ್ಮ ಇಂದನ್ನು ನಾಳೆಯ ತಯಾರಿಯನ್ನಾಗಿಸಿಬಿಡುತ್ತದೆ. ಮಧ್ಯಯುಗದ ಯೂರೋಪಿನಲ್ಲಿ ಹೀಗಾಗಿತ್ತು. ಭುವಿಯ ಮೇಲಿನ ಬದುಕನ್ನು ಮರಣೋತ್ತರ ಬದುಕಿಗೆ ತಯಾರಿಯನ್ನಾಗಿ ಪರಿಗಣಿಸಲಾಗಿತ್ತು. ಇಲ್ಲಿ ಸರಿಯಾಗಿ ಅಂದರೆ ಧಾರ್ಮಿಕ ನಿಬಂಧನೆಗಳಿಗನುಸಾರ ಬದುಕಿದರೆ- ಸತ್ತ ಮೇಲೆ ಸ್ವರ್ಗವೆಂತಲೂ, ಇಲ್ಲದೆ ಹೋದರೆ ರೌರವ ನರಕವೆಂತಲೂ ನಂಬಿಸಲಾಗುತ್ತಿತ್ತು. ಈ ತೆರನ ನಂಬಿಕೆಗಳು ಸಾಮಾಜಿಕ ಶೋಷಣೆಯ ಅತ್ಯಂತ ಪ್ರಬಲವಾದ ಅಸ್ತ್ರಗಳಾಗಿ ಹಲವು ಚಾರಿತ್ರಿಕ ಘಟ್ಟಗಳಲ್ಲಿ ಕೆಲಸ ಮಾಡಿವೆ. ನರಕದ ದಿಗಿಲನ್ನು ತೋರಿಸಿ ಬಹುಪಾಲು ಜನರನ್ನು ತಮ್ಮ ತಾಳಕ್ಕೆ ತಕ್ಕಂತೆ ಕುಣಿಯುವ ಹಾಗೆ ಮಾಡಿವೆ ಆಳುವ ವರ್ಗಗಳು. ಈ ಬಗೆಯ ಪ್ರವೃತ್ತಿ ಮಧ್ಯಯುಗದ ಯೂರೋಪಿಗೆ ಮಾತ್ರ ಸೀಮಿತವಲ್ಲ. ಆಧುನಿಕ ಮನೋಧರ್ಮವನ್ನು ಪ್ರಜ್ಞಾಪೂರ್ವಕವಾಗಿ ಒಪ್ಪಿಕೊಂಡವರೆಲ್ಲಾ ಗೊತ್ತಿದ್ದೋ ಗೊತ್ತಿಲ್ಲದೆಯೋ ಸ್ವರ್ಗ-ನರಕಗಳ ಬಯಕೆ ಮತ್ತು ಭಯದಲ್ಲಿ ಉಸಿರಾಡುತ್ತಿರುತ್ತಾರೆ. ನನ್ನ ಚಿಕ್ಕ ವಯಸ್ಸಿನಲ್ಲಿ ಸ್ವರ್ಗದ ಸುಖಗಳನ್ನು ಮತ್ತು ನರಕದ ಚಿತ್ರಹಿಂಸೆಗಳನ್ನು ಚಿತ್ರಿಸುವ ದೃಶ್ಯಗಳಿರುತ್ತಿದ್ದವು. ಅವುಗಳಲ್ಲಿ ಕೆಲವು ನನಗಿನ್ನೂ ಕಣ್ಣಿಗೆ ಕಟ್ಟಿದ ಹಾಗಿವೆ: ಪಾಪ ಮಾಡಿದವರನ್ನು ಇಬ್ಬರು ಕಟುಕರು ಗರಗಸದಿಂದ ಕೊಯ್ಯುವುದು, ಸುಳ್ಳು ಹೇಳಿದವನ ನಾಲಗೆಯನ್ನು ಸೀಳುವುದು, ಕೆಟ್ಟದ್ದನ್ನು ನೋಡಿದವನ ಕಣ್ಣುಗಳನ್ನು ಕಬ್ಬಿಣದ ಕಾಗೆಯ ಕೊಕ್ಕಿನಿಂದ ಕುಕ್ಕಿಸುವುದು ಇತ್ಯಾದಿ. ಇಂತಹ ಭಯಾನಕ ಚಿತ್ರಗಳು ನಮ್ಮನ್ನು ಸುಳ್ಳು ಹೇಳುವುದು ಮುಂತಾದ `ಪಾಪ~ಗಳಿಂದ ಪೂರ್ತಿಯಾಗಿ ಬಿಡಿಸುತ್ತಿರಲಿಲ್ಲ, ನಿಜ. ಆದರೆ ಆ ಬಗ್ಗೆ ಅತಿಗೆ ಹೋಗದ ಹಾಗೆ ತಡೆಯುತ್ತಿದ್ದವು. ನಮ್ಮ ಕುಟುಂಬದವರ, ಸಮಾಜದ ನಂಬಿಕೆಗಳಿಗೆ ಹೊಂದಿಕೊಂಡು ಬದುಕಲು ಪ್ರೇರಿಸುತ್ತಿದ್ದವು. ಇನ್ನು ಸ್ವರ್ಗ ಹೇಗಿರಬಹುದೆಂಬ ಚಿತ್ರಗಳನ್ನೂ ಹಲವು ಸಮಾಜಗಳು ನಮ್ಮ ಮುಂದಿಡುತ್ತವೆ. ಹಿಂದೆ ನಮ್ಮ ಗಂಡಾಳಿಕೆಯ ಸಮಾಜದಲ್ಲಿ ಸತಿ ಹೋದ ಹೆಂಗಸರು ಸ್ವರ್ಗಕ್ಕೆ ಹೋಗುವರೆಂಬ ನಂಬಿಕೆಯನ್ನು ಬಲಪಡಿಸಲು ಮಾಸ್ತಿಕಲ್ಲುಗಳನ್ನು ನೆಡಲಾಗುತ್ತಿತ್ತು. ಅವುಗಳಲ್ಲಿ ಸತಿ ಹೋದ ಮಹಿಳೆಯರು ದೇವಾಂಗನೆಯರ ಸಮೇತ ಸ್ವರ್ಗಾರೋಹಣ ಮಾಡುತ್ತಿರುವ ಚಿತ್ರಗಳನ್ನು ಕೆತ್ತುತ್ತಿದ್ದರು. ಇದೇ ರೀತಿ ರಾಜನಿಗಾಗಿ, ಊರಿಗಾಗಿ ಹೋರಾಡಿ ಪ್ರಾಣ ತೆತ್ತ ವೀರರೂ ಸ್ವರ್ಗಕ್ಕೆ ಹೋಗಬೇಕಲ್ಲ. ಅಂಥವರಿಗಾಗಿ ವೀರಗಲ್ಲುಗಳನ್ನು ನೆಡಲಾಗುತ್ತಿತ್ತು. ಅವುಗಳಲ್ಲಿ ವೀರ ಹೋರಾಡುವ ದೃಶ್ಯಗಳ ಜೊತೆಗೆ ಅವನು ಚವುರಿಧಾರಿಗಳಾದ ದೇವಕನ್ನಿಕೆಯರ ಜೊತೆ ಸ್ವರ್ಗದ ಕಡೆಗೆ ಹಾರುತ್ತಿರುವುದನ್ನು ಚಿತ್ರಿಸುತ್ತಿದ್ದರು. ಇಂಥ ಚಿತ್ರಗಳು ಇತರ ವೀರರಿಗೆ ಸ್ವರ್ಗದ ಆಸೆ ತೋರಿಸಿ ರಣರಂಗಗಳಲ್ಲಿ ಪ್ರಾಣ ಕಳೆದುಕೊಳ್ಳಲು ಸ್ಫೂರ್ತಿ ಕೊಡುತ್ತಿದ್ದವು. ಹೀಗೆ ಚಿತ್ರಗಳ, ಕತೆಗಳ, ಗಾದೆಗಳ, ನಂಬಿಕೆಗಳ ಮೂಲಕ ಹಿಂದಿನ ಸಮಾಜಗಳಲ್ಲಿ ಆಳುವ ವರ್ಗಗಳು ಅಧೀನರಾದವರನ್ನು ತಮ್ಮ ಇಚ್ಛೆಗೆ ಹೊಂದಿಕೊಂಡು ನಡೆಯುವಂತೆ ಮಾಡುತ್ತಿದ್ದವು. ಮುಂದಿನ ಭಯವೇ ಈ ತೆರನ ಸುಲಿಗೆಯ ಬುನಾದಿಯಾಗಿತ್ತು. ಮುಂದಿನ ಬಗೆಗಿನ ನಿರೀಕ್ಷೆ ಮತ್ತು ಭೀತಿಗಳು ಜನ್ಮಾಂತರದ ನಂಬಿಕೆಗಳಿಗೂ ಕಾರಣವಾಗಿವೆ. ಆದ್ದರಿಂದ ಈ ನಂಬಿಕೆಗಳನ್ನೂ ಪ್ರತಿಷ್ಠಿತ ಧರ್ಮಗಳು ತಮ್ಮ ಮೌಲ್ಯಗಳ ಪ್ರಚಾರಕ್ಕಾಗಿ ಬಳಸಿಕೊಂಡಿವೆ. ಜನ್ಮಾಂತರದ ನಂಬಿಕೆ ಹಿಂದು, ಬೌದ್ಧ ಮತ್ತು ಜೈನ ಧರ್ಮಗಳಿಗೆ ಸಮಾನವಾಗಿದೆ. ಜನ್ಮಾಂತರಗಳ ಸಂಬಂಧವನ್ನು ಚಿತ್ರಿಸುವಲ್ಲಿ ಜೈನ ಕಥಾನಕಗಳು ಭವಾವಳಿಯ ತಂತ್ರವನ್ನು ಬಳಸಿವೆ. ಉದಾಹರಣೆಗೆ `ಯಶೋಧರ ಚರಿತೆ~ಯಲ್ಲಿ ಒಂದು ಹಿಟ್ಟಿನ ಕೋಳಿಯನ್ನು ಬಲಿ ಕೊಟ್ಟ ಸಣ್ಣ ಪಾಪಕ್ಕಾಗಿ ಆ ಪಾತ್ರಗಳು ಅದೆಷ್ಟು ಜನ್ಮಗಳಲ್ಲಿ ಶಿಕ್ಷೆ ಅನುಭವಿಸಬೇಕಾಯಿತೆಂಬುದನ್ನು ವಿವರವಾಗಿ ಚಿತ್ರಿಸಲಾಗಿದೆ. ಒಟ್ಟಿನಲ್ಲಿ ಮುಂದಿನದರ ಬಗೆಗಿನ ನಮ್ಮ ಭೀತಿ, ಆತಂಕಗಳೇ ಧರ್ಮಗಳ ಬಂಡವಾಳ. ಧಾರ್ಮಿಕ ಆಚರಣೆಯನ್ನು ಪ್ರೇರಿಸಲೂ ಜುಡಾಯಿಕ್ ಧರ್ಮಗಳು ಸ್ವರ್ಗ ನರಕಗಳ ಕಟ್ಟುಕತೆಗಳನ್ನು ಪ್ರಚಾರ ಮಾಡಿದವು. ಜನ್ಮಾಂತರಗಳನ್ನು ನಂಬುವ ಇತರ ಧರ್ಮಗಳು ಕರ್ಮಫಲದ ಅನಿವಾರ್ಯತೆಯನ್ನು ಎತ್ತಿ ಹಿಡಿದವು. ಸಾಂಪ್ರದಾಯಿಕ ಸಮಾಜಗಳಿಗೆ ನಂಬಿಕೆಯೇ ಅಸ್ತಿವಾರ. ಆದರೆ, ಆ ನಂತರ ಬಂದ ಆಧುನಿಕ ವೈಜ್ಞಾನಿಕ ಸಂಸ್ಕೃತಿಯ ಮನೋಧರ್ಮಕ್ಕೆ ಸಂಶಯವೇ ತಳಹದಿಯಾಯಿತು. ಈ ದೃಷ್ಟಿಯಲ್ಲಿ ಸಾವಿನ ನಂತರದ ಬದುಕಿಗಿಂತ ಇಹದ ಬದುಕೇ ಮುಖ್ಯ. ಇದರ ಕಾಳಜಿ ಮನುಷ್ಯನೇ ಹೊರತು ದೇವರಲ್ಲ; ಇಹಲೋಕವೇ ಹೊರತು ಪರಲೋಕವಲ್ಲ. ಈ ಬೆಳವಣಿಗೆಯ ಪರಿಣಾಮ: ಮಾನವತಾವಾದದ ಉಗಮ. ಮಾನವತಾವಾದೀ ದೃಷ್ಟಿ ಹಲವು ಸಾಂಪ್ರದಾಯಿಕ ಕಟ್ಟುಗಳಿಂದ ನಮ್ಮನ್ನು ಬಿಡಿಸಿದ್ದು ನಿಜವಾದರೂ ಸಾವಿನ ಸೂತಕದಿಂದ ನಮಗೆ ಮುಕ್ತಿ ನೀಡಲಿಲ್ಲ. ಒಂದು ರೀತಿಯಲ್ಲಿ ಈ ಮಾನವಕೇಂದ್ರಿತ ಲೋಕದೃಷ್ಟಿಯ ಸರ್ವವ್ಯಾಪೀ ಪರಿಣಾಮವನ್ನು ತನ್ನ ಕೃತಿಗಳಲ್ಲಿ ಶೋಧಿಸಿದವರಲ್ಲಿ ಷೇಕ್ಸ್‌ಪಿಯರ್ ಮೊದಲಿಗ. ಸಾವಿನ ನಂತರದ ಬಗೆಗಿನ ದಂದುಗ ಅವನನ್ನು ಹಲವು ಸಲ ಕಾಡಿದೆ. ಹ್ಯಾಮ್ಲೆಟ್ ತನ್ನ ಒಂದು ಸ್ವಗತದಲ್ಲಿ ಹೇಳುತ್ತಾನೆ: `ಬದುಕಿನ ನಂತರ ನಮಗೇನು ಕಾದಿದೆ ಎಂಬುದರ ಬಗ್ಗೆ ನಮಗೆ ಭೀತಿಯಿರುವುದರಿಂದಲೇ ನಾವು ಬದುಕಿನ ಸಾವಿರ ನೋವುಗಳನ್ನು ಸಹಿಸುತ್ತೇವೆ; ಮುಂದಿನದರ ಭಯವೇ ನಮ್ಮನ್ನು ಆತ್ಮಹತ್ಯೆ ಮಾಡಿಕೊಳ್ಳದಂತೆ ತಡೆಯುತ್ತದೆ~. ಸಾವಿನ ನಂತರ ಬದುಕುಳಿಯುವ ಆತ್ಮದ ಬಗ್ಗೆ ನಮಗೆ ನಂಬಿಕೆಯಿರಲಿ, ಬಿಡಲಿ, ಸಾವಿನ ಸೂತಕದಿಂದ ನಾವ್ಯಾರೂ ಮುಕ್ತರಲ್ಲ. ಆ ಭೀತಿ ಹಲವು ಮೂಢನಂಬಿಕೆಗಳ ಬುಡವಾಗಿರುವ ಹಾಗೆಯೇ ಹಲವಾರು ಇತ್ಯಾತ್ಮಕ ಕೆಲಸಗಳನ್ನೂ ನಮ್ಮಿಂದ ಮಾಡಿಸುತ್ತಾ ಬಂದಿದೆ. ಹಿಂದೆ ಸ್ವರ್ಗ, ನರಕ, ಪರಲೋಕಗಳ ಭೀತಿ ಮತ್ತು ಪ್ರತಿಫಲಾಭಿಲಾಷೆಗಳಿಂದಲೇ ಜನ ಪುಣ್ಯ ಸಂಪಾದನೆ ಮಾಡಲು ಯತ್ನಿಸುತಿದ್ದರು. ಮರ ನೆಡುತ್ತಿದ್ದರು. ಕೆರೆಬಾವಿ ಕುಂಟೆಗಳನ್ನು, ಅನ್ನ ಸತ್ರಗಳನ್ನು ಕಟ್ಟಿಸುತ್ತಿದ್ದರು; ದಾನಧರ್ಮ ಮಾಡುತ್ತಿದ್ದರು. ಈ ತೆರನ ಪ್ರವೃತ್ತಿಗಳು ಇಂದಿಗೂ ಮುಂದುವರಿದಿವೆ. ಎಲ್ಲ ಪುಣ್ಯಾಚರಣೆಗಳ ಮೇಲೂ ಯಮಪಾಶದ ಛಾಯೆಯಿದೆ ಅಥವಾ ಅವುಗಳಲ್ಲಿ ಮರಣೋತ್ತರ ಭೋಗದ ಮೋಹವಿದೆ. ಭೋಗವಾದವೂ ಸಾವಿನ ಅನಿವಾರ್ಯತೆಗೆ ತೋರುವ ಪ್ರತಿಕ್ರಿಯೆಯೇ. ಸಾವಿನ ಬಳಿಕ ಏನಿದೆಯೋ ನಮಗೆ ಗೊತ್ತಿಲ್ಲ. ಈಗಿನ ಬದುಕನ್ನು ಚೆನ್ನಾಗಿ ಸವಿಯಬೇಕು ಅನ್ನುವುದೇ ಇದರ ಹುರುಳು. ಯೋಗಿ ಸರ್ವಜ್ಞನೂ ಒಂದೊಂದು ಸಲ ಇಹಪರ ವಕೀಲನಾಗಿ ಬಿಡುತ್ತಾನೆ, ಬೆಚ್ಚನೆಯ ಮನೆ, ವೆಚ್ಚಕ್ಕೆ ಹೊನ್ನು, ಇಚ್ಛೆಯನ್ನರಿವ ಸತಿಯಿದ್ದರೆ, ಸ್ವರ್ಗಕ್ಕೆ ಕಿಚ್ಚನಿಕ್ಕು ಎನ್ನುತ್ತಾನೆ. ಉಳ್ಳಲ್ಲಿ ಉಣದವನ, ಉಳ್ಳಲ್ಲಿ ಉಡದವನ ಧನ ಕಳ್ಳ ಅಥವಾ ನೃಪನ ಪಾಲು ಎನ್ನುತ್ತಾನೆ. ಮೃತ್ಯವಿನ ನಂತರದ ಭೀತಿ ಎಷ್ಟು ಗಾಢವೋ ನಾಳೆಗಳ ದಂದುಗಗಳೂ ಅಷ್ಟೇ ಗಾಢ. ಮೊನ್ನೆಯಂತೆ ನಿನ್ನೆ, ನಿನ್ನೆಯಂತೆ ಇಂದು ಎಂಬುದು ನಾಳೆಯೂ ಇಂದಿನ ಹಾಗೇ ಮುಂಬರಿಯಬಹುದೆಂಬ ನಂಬುಗೆಯ ಆಧಾರ. ಆದರೆ ಈ ಬಗೆಯ ಸಾತತ್ಯದ ವಿಶ್ವಾಸವನ್ನು ಮುರಿಯುವ ಘಟನೆಗಳು, ತಿರುವುಗಳು ನಮ್ಮೆಲ್ಲರ ಅನುಭವದ ಭಾಗ. ಅನಿರೀಕ್ಷಿತ ಸಾವುಗಳು, ಆಕಸ್ಮಿಕಗಳು, ಸಾಮಾಜಿಕ ಅನಾಹುತಗಳು, ಪ್ರಕೃತಿವಿಕೋಪಗಳು ಆಗಾಗ ಜರುಗುತ್ತಲೇ ಇರುತ್ತವೆ. ನಾಗರಿಕತೆ ವಿಕಾಸಗೊಂಡಂತೆ ವಿಜ್ಞಾನ ಆರೋಗ್ಯದ, ಪ್ರಕೃತಿಯ ಏರುಪೇರುಗಳಿಂದ ಬಚಾವಾಗುವ ಅನೇಕ ಉಪಾಯಗಳನ್ನು ಕಂಡುಹಿಡಿಯುತ್ತಾ ಬಂದಿದೆ. ವಿಮೆ, ಉಳಿತಾಯ ಮೊದಲಾದ ಉಪಾಯಗಳು ಸ್ವಲ್ಪಮಟ್ಟಿಗೆ ವ್ಯಕ್ತಿಯ ಬದುಕಿನ ಏರಿಳಿವುಗಳಿಂದ ನಮ್ಮನ್ನು ಕಾಪಾಡಬಲ್ಲವು. ಶಾಂತಿಸಂಧಾಗಳು ಯುದ್ಧದಂತಹ ಅನಾಹುತಗಳನ್ನು ತಪ್ಪಿಸಬಲ್ಲವು. ಆದರೂ ಬದುಕಿನ ಘಟನಾವಳಿಗಳು ನಮ್ಮ ಎಣಿಕೆಗಳನ್ನು ಆಗಾಗ ಸುಳ್ಳು ಮಾಡುತ್ತಲೇ ಇರುತ್ತವೆ. ಇತಿಹಾಸದ ನಿರ್ಣಾಯಕ ಘಟನೆಗಳು ನಮ್ಮ ಅತ್ಯುತ್ತಮವಾದ, ಅತ್ಯಂತ ಪ್ರಾಮಾಣಿಕವಾದ ಪ್ರಯತ್ನಗಳನ್ನೂ ಮೀರಿ ನಡೆಯುತ್ತವೆ ಎಂಬ ಸ್ವೀಡಿಷ್ ಇತಿಹಾಸಕಾರ ಫ್ರೆಡ್ ಗೇಳಲ್‌ನ ಮಾತು ನಿಜ ಅನಿಸುತ್ತದೆ. ವಿಜ್ಞಾನದ ವಿಶ್ವಾತ್ಮಕ ಭೌತಿಕ ನಿಯಮಗಳಿಗೂ ಸೆಡ್ಡು ಹೊಡೆಯುವ ಕಪ್ಪು ರಂಧ್ರಗಳು ಖಗೋಳ ಶಾಸ್ತ್ರದಲ್ಲಿವೆ. ಮುಂದಿನದರ ದಂದುಗವೇ ಜ್ಯೋತಿಷ್ಯದ ಹಲವು ಪ್ರಕಾರಗಳಿಗೆ ಜನ್ಮ ನೀಡಿದೆ.ನಮ್ಮ ಸುತ್ತಮುತ್ತಲಿನ ಪ್ರಕೃತಿಯ ವಿವರಗಳನ್ನು, ನಾವು ಮಾಡುವ ಕೆಲವು ಕ್ರಿಯೆಗಳನ್ನು ಸಂಕೇತಗಳನ್ನಾಗಿ ಪರಿಗಣಿಸಿ ಆ ಆಧಾರದ ಮೇಲೆ ಮುಂದಿನ ಗೂಢಗಳನ್ನು ಅರಿತುಕೊಳ್ಳುವ ಪ್ರಯತ್ನ ಈ ಎಲ್ಲ ಪದ್ಧತಿಗಳ ಸಾಮಾನ್ಯ ಲಕ್ಷಣ. ಮೋಡದ ಬಣ್ಣ ನೋಡಿ ಮಳೆ ಬರುತ್ತದೋ ಇಲ್ಲವೋ ಎಂಬುದನ್ನು ನಮ್ಮ ಹಳ್ಳಿಗರು ಇಂದಿಗೂ ಊಹಿಸುತ್ತಾರೆ. ಪ್ರಾಚೀನ ನಾರ್ಡಿಕ್ ಸಂಸ್ಕೃತಿಯಲ್ಲಿ ರೂನ್ ಸಂಕೇತಗಳ ಮೂಲಕ ಭವಿಷ್ಯ ಹೇಳುತ್ತಿದ್ದರು. ಈ ರಹಸ್ಯಮಯ ಸಂಕೇತಗಳನ್ನು ಓಡಿನ್ ದೇವತೆ ತನ್ನ ಕಠೋರ ತಪಸ್ಸಿನ ಮೂಲಕ ಕಂಡುಕೊಂಡನಂತೆ. ಆತ ಹಾಗೆ ಕಂಡುಕೊಂಡ ಇಪ್ಪತ್ತೊಂದು ಸಂಕೇತಗಳೇ ಮುಂದೆ ರೋಮನ್ ಅಕ್ಷರಮಾಲೆಯಾಗಿ ವಿಕಸಿತವಾದವು. ಇಂದಿಗೂ ನಾರ್ಡಿಕ್ ದೇಶಗಳಲ್ಲಿ ಎಲ್ಲೆಂದರಲ್ಲಿ ರೂನ್ ಕಲ್ಲುಗಳು ಸಿಗುತ್ತವೆ. ಉದಾಹರಣೆಗೆ ಸ್ಟಾಕ್‌ಹೋಂ ನ ಕೇಂದ್ರವಾದ ಅರಮನೆಯ ಬದಿಯ ಗಲ್ಲಿಗಳಲ್ಲಿ ರೂನಿಕ್ ಅಕ್ಷರಮಾಲೆಯ ಶಾಸನಗಳನ್ನು ಇಂದಿಗೂ ಕಾಣಬಹುದು. ಒಂದು ಕಾಲದಲ್ಲಿ ಬಹಳ ಜನಪ್ರಿಯವಾಗಿದ್ದ ರೂನಿಕ್ ಭವಿಷ್ಯ ಕಲೆಯನ್ನು ಅರಿತವರು ಇವೊತ್ತು ಬಹಳ ಕಡಿಮೆ. ಇದೇ ರೀತಿ ಪ್ರಾಚೀನ ಚೀನದಲ್ಲಿ ಆಯ್ ಚಿಂಗ್ ಪುಸ್ತಕದ 64 ಸಿದ್ಧ ಸಂಕೇತಗಳ ಮೂಲಕ ಮಾನವ ಜೀವನದ ಎಲ್ಲ ರಹಸ್ಯಗಳನ್ನು ಅರ್ಥ ಮಾಡಿಕೊಂಡು ಪರಿಹಾರಗಳನ್ನು ಕಂಡುಕೊಳ್ಳುತ್ತಿದ್ದರು. ಈವತ್ತೂ ಚೀನದಲ್ಲಿ ಇದರ ಪ್ರಯೋಗವಿದೆ. ಕುಂಗ್ ಫೂ ತ್ಸೆಯಂಥ ಜ್ಞಾನಿಯೂ ಆಯ್ ಚಿಂಗ್ ನ ಮೊರೆ ಹೋಗುತ್ತಿದ್ದನಂತೆ. ಹಲವು ಹಿಂದಿನ ಸಂಸ್ಕೃತಿಗಳಲ್ಲಿ ಬೆಳೆದ ಸಂಖ್ಯಾಶಾಸ್ತ್ರ ಗಣಿತದ 7 ಅಥವಾ 9 ಪೂರ್ಣಾಂಕಗಳನ್ನು ಜನರ ವಿವಿಧ ಸ್ವಭಾವಗಳ, ಬಾಳಿನ ವಿವಿಧ ಘಟನೆಗಳ ಸಂಕೇತಗಳನ್ನಾಗಿ ಪರಿಗಣಿಸಿ ಮುಂದನ್ನು ಶೋಧಿಸುತ್ತದೆ. ಸಂಖ್ಯಾಶಾಸ್ತ್ರದ ವಿಕಸಿತ ರೂಪವಾಗಿ ಟ್ಯಾರೋ ಕಾರ್ಡುಗಳ ಪ್ರಯೋಗ ಪ್ರಚುರವಾಯಿತು. ಇದೇ ರೀತಿ ಜನ್ಮಕುಂಡಲಿಯಿಂದ ಅಥವಾ ಪ್ರಶ್ನಮಾರ್ಗದಿಂದ ಭವಿಷ್ಯವನ್ನರಿಯುವ ಹಲವು ಕ್ರಮಗಳು ಬೇರೆ ಬೇರೆ ಸಂಸ್ಕೃತಿಗಳಲ್ಲಿ ಬೆಳೆದಿವೆ. ಇವೆಲ್ಲವೂ ದೀರ್ಘ ಪರಂಪರೆಯಿರುವ ಶಾಸ್ತ್ರಗಳು. ಇವುಗಳ ಜೊತೆಗೆ ತಮ್ಮ ದೇಶಕಾಲ ವಿಶಿಷ್ಟವಾದ ವಿವರಗಳ ಮೂಲಕ ಕಣಿ ಹೇಳುವ, ಶಕುನ ನೋಡುವ ಕ್ರಮಗಳೂ ಚಾಲ್ತಿಯಲ್ಲಿವೆ. ಹಸ್ತಸಾಮುದ್ರಿಕೆ ಕೈಯ ಗೆರೆಗಳನ್ನು, ಮುಖಸಾಮುದ್ರಿಕೆ ಮುಖಲಕ್ಷಣಗಳನ್ನೂ ಆಧರಿಸಿ ಭವಿಷ್ಯವನ್ನರಿಯಲೆಳೆಸುತ್ತವೆ. ಇದೇ ಉದ್ದೇಶಕ್ಕೆ ಕೆಲವು ನಾಡಿ ಗ್ರಂಥಗಳೂ ಹುಟ್ಟಿಕೊಂಡಿವೆ. ಈ ವಿವಿಧ ಪದ್ಧತಿಗಳ ಪ್ರಯೋಜನವೇನು? ಇತಿಹಾಸದ ಅನೇಕ ಗಣ್ಯರು ಇವನ್ನು ನಂಬುತ್ತಿದ್ದರು. ಆದರೆ ಅಷ್ಟೇ ಗಣ್ಯರಾದ ಕೆಲವು ಅನುಭವಿಗಳೂ ಸಂತರೂ ಮತ್ತು ಎಲ್ಲಾ ಯುಗಗಳ ವಿಚಾರವಾದಿಗಳೂ ಇವನ್ನು ಸಾರಾಸಗಟಾಗಿ ನಿರಾಕರಿಸಿದರು. ನನ್ನ ಅನುಭವ ಬೇರೆ ರೀತಿಯದು. ಇವನ್ನು ಪೂರ್ಣವಾಗಿ ನಂಬುವಂತೆಯೂ ಇಲ್ಲ ಅಥವಾ ಒಟ್ಟಾಗಿ ನಿರಾಕರಿಸುವಂತೆಯೂ ಇಲ್ಲ. ಮಾನವ ಸ್ವಭಾವ, ಸಾಧ್ಯತೆಗಳ ಬಗ್ಗೆ ಕೆಲವು ಉಪಯುಕ್ತವಾದ ಒಳನೋಟಗಳನ್ನು ಇವು ನೀಡುವುವಾದರೂ ಇವುಗಳನ್ನೇ ಪರಮಸತ್ಯಗಳೆಂದು ನಂಬಿದವನು ಮಾಟಗಾತಿಯರ ಮಾತನ್ನು ನಂಬಿ ಮಣ್ಣುಮುಕ್ಕಿದ ಮ್ಯಾಕ್‌ಬೆತ್‌ನಂತಾಗುತ್ತಾನೆ. ಇಷ್ಟಾದರೂ ಮುಂದೇನೆಂಬ ಪ್ರಶ್ನೆಗೆ ಯಾವ ಅಂತಿಮವಾದ ಉತ್ತರವೂ ಇಲ್ಲ. ಈ ಬೃಹತ್ ಪ್ರಶ್ನಚಿಹ್ನೆ ನಮ್ಮೆಲ್ಲ ಭೀತಿಗಳಿಗೆ ಕಾರಣವಾದಂತೆ ನಮ್ಮೆಲ್ಲಾ ಸೃಜನಶೀಲ ಅಭಿವ್ಯಕ್ತಿಗಳಿಗೂ ಕಾರಣವಾದ್ದರಿಂದ ಅದನ್ನು ಒಪ್ಪಿಕೊಳ್ಳೋಣ, ಕೀರ್ತಿಸೋಣ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.