ಆಣೆ ಪ್ರಮಾಣದ ವರಸೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಯಾಗಿ, ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರನ್ನು ಧರ್ಮಕ್ಷೇತ್ರವೊಂದರಲ್ಲಿ `ಪ್ರಮಾಣ~ ಮಾಡುವಂತೆ ಹಾಕಿರುವ ಸವಾಲಿಗೆ ಸಂಸದೀಯ ಪ್ರಜಾಸತ್ತೆಯಲ್ಲಿ ಅವಕಾಶವಿಲ್ಲ. ಆಣೆ, `ಪ್ರಮಾಣ~ ಎಂಬುವು ವ್ಯಕ್ತಿಯ ವೈಯಕ್ತಿಕ ನಂಬಿಕೆ ಆಧರಿಸಿದ ನಡವಳಿಕೆಗಳಾದರೂ ಈ ವಿಧಾನಗಳಿಂದ ಬರುವ ತೀರ್ಮಾನಗಳಿಗೆ ಸಂವಿಧಾನ ವ್ಯವಸ್ಥೆಯಲ್ಲಿ ಅಂತರ್ಗತವಾಗಿರುವ ನ್ಯಾಯ ಪ್ರಕ್ರಿಯೆಯಲ್ಲಿ ಮಾನ್ಯತೆ ಇಲ್ಲ. ಕುಮಾರಸ್ವಾಮಿ ಅವರು ಬಹಿರಂಗವಾಗಿ ನೀಡಿದ ಹೇಳಿಕೆಯಿಂದ ತಮ್ಮ ವರ್ಚಸ್ಸಿಗೆ ಧಕ್ಕೆ ಆಗುತ್ತಿದೆ ಎನಿಸಿದರೆ ಮುಖ್ಯಮಂತ್ರಿ ಅವರು ಕಾನೂನು ಪ್ರಕಾರ ಕ್ರಮ ಕೈಗೊಂಡು ಪರಿಹಾರ ಪಡೆಯುವುದು ಯೋಗ್ಯ ಮಾರ್ಗವಾಗಿತ್ತು. ಅದನ್ನು ಕೈಬಿಟ್ಟು ತಮ್ಮ ದೈವಭಕ್ತಿ ಮತ್ತು ನಂಬಿಕೆಯನ್ನು ಆಧರಿಸಿದ ಆಣೆ `ಪ್ರಮಾಣ~ದ ಮಾರ್ಗವನ್ನು ಹಿಡಿದು ಸವಾಲು ಹಾಕಿರುವುದು ರಾಜ್ಯದ ಮುಖ್ಯಮಂತ್ರಿ ಸ್ಥಾನದಲ್ಲಿರುವ ವ್ಯಕ್ತಿಗೆ ಯೋಗ್ಯವಾದ ನಡವಳಿಕೆಯಲ್ಲ. ದೇವರ ಎದುರಿನಲ್ಲಿ `ಪ್ರಮಾಣ~ ಮಾಡಿಸುವ ಮೂಲಕ ತಮ್ಮ ನಿರಪರಾಧಿತ್ವವನ್ನು ಸಾಬೀತುಪಡಿಸಲು ಹೊರಟಿರುವ ಮುಖ್ಯಮಂತ್ರಿಗಳ ನಡವಳಿಕೆ, ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಸಂವಿಧಾನ ವ್ಯವಸ್ಥೆಯಿಂದ ತಮಗೆ ನ್ಯಾಯ ಸಿಗಲಾರದು ಎಂಬುದನ್ನು ಬಹಿರಂಗವಾಗಿ ಒಪ್ಪಿಕೊಂಡ ಸಂದೇಶವನ್ನು ರವಾನಿಸುತ್ತದೆ. ಮುಖ್ಯಮಂತ್ರಿ ಅವರ ಸವಾಲನ್ನು ಕುಮಾರಸ್ವಾಮಿಯವರು ಒಪ್ಪಿಕೊಂಡು `ಪ್ರಮಾಣ~ ಮಾಡಲು ಒಪ್ಪಿಕೊಂಡಿರುವುದರಿಂದ ಮುಂದಿನ ತೀರ್ಮಾನದ ಸ್ವರೂಪ ಏನೆಂಬುದನ್ನು ಸ್ವತಃ ಮುಖ್ಯಮಂತ್ರಿಗಳೇ ಬಹಿರಂಗಪಡಿಸಬೇಕಿದೆ. ದೇಶದ ಜನತೆ ಅಂಗೀಕರಿಸಿರುವ ಜಾತ್ಯತೀತ ಸ್ವರೂಪದ ಪ್ರಜಾಸತ್ತೆಯ ವ್ಯವಸ್ಥೆಯಲ್ಲಿ ಯಾವೊಂದು ನಿರ್ದಿಷ್ಟ ಧಾರ್ಮಿಕ ನಡವಳಿಕೆ ನ್ಯಾಯಾಂಗ ವ್ಯವಸ್ಥೆಗಿಂತ ಶ್ರೇಷ್ಠ ಎನಿಸಲಾರದು. ಇದಕ್ಕೆ ವ್ಯತಿರಿಕ್ತವಾದ ನಡವಳಿಕೆ ಸಂವಿಧಾನಕ್ಕೆ ಎಸಗುವ ಅಪಚಾರ. ಅದರಲ್ಲಿಯೂ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಅಧಿಕಾರ ಹಿಡಿದ ಭಾರತೀಯ ಜನತಾ ಪಕ್ಷದ ಸರ್ಕಾರ, ಆರಂಭದಿಂದಲೂ ಸರ್ಕಾರಿ ಕಚೇರಿಗಳಲ್ಲಿ ಹೋಮ ಹವನಗಳನ್ನು ನಡೆಸುತ್ತ ರಾಜಕೀಯ ವಿರೋಧಿಗಳಿಗೆ ಸಂಬಂಧಿಸಿ ಮಾಟ ಮಂತ್ರಗಳ ಅಪಪ್ರಚಾರ ನಡೆಸುತ್ತ, ರಾಷ್ಟ್ರಮಟ್ಟದಲ್ಲಿ ಜಾತ್ಯತೀತ ನಡವಳಿಕೆಯಲ್ಲಿ ಪುರೋಗಾಮಿ ರಾಜ್ಯವೆಂದು ಹೆಸರಾಗಿದ್ದ ಕರ್ನಾಟಕದ ವರ್ಚಸ್ಸಿಗೆ ಕಳಂಕ ತಂದಿತ್ತು. ವೈಜ್ಞಾನಿಕ ಚಿಂತನೆ ಮತ್ತು ವೈಚಾರಿಕ ನಡವಳಿಕೆಗೆ ಕರ್ನಾಟಕ ನೂರಾರು ವರ್ಷಗಳಿಂದಲೂ ಪ್ರಖ್ಯಾತವಾಗಿರುವುದು ಐತಿಹಾಸಿಕ ಸಂಗತಿ. ಕಾಯಕ ತತ್ವಕ್ಕೆ ಸಮಷ್ಟಿ ಸ್ವರೂಪ ನೀಡಿದ್ದ ಬಸವಣ್ಣನವರ ವಿಚಾರಸರಣಿಯಲ್ಲಿ ಮೂಢನಂಬಿಕೆಯ ವಿರುದ್ಧವೂ ದನಿ ಎತ್ತಿರುವುದನ್ನು ಸಮಾಜಶಾಸ್ತ್ರಜ್ಞರು ಗುರುತಿಸಿದ್ದಾರೆ. ಸಾಮಾಜಿಕವಾಗಿ, ಸಾಹಿತ್ಯಕವಾಗಿ, ಸಾಂಸ್ಕೃತಿಕವಾಗಿ ದೇಶದ ಮುಂಚೂಣಿಯ ರಾಜ್ಯಗಳಲ್ಲಿ ಒಂದಾಗಿ ಪರಿಗಣಿತವಾಗಿರುವ ರಾಜ್ಯದ ಈಗಿನ ರಾಜಕೀಯ ನಾಯಕತ್ವ ಆಣೆ `ಪ್ರಮಾಣ~ಗಳಂಥ ನಂಬಿಕೆಗಳನ್ನು ಆಧರಿಸಿ ರಾಜಕೀಯ ವಿರೋಧವನ್ನು ಹತ್ತಿಕ್ಕಲು ನಡೆಸುತ್ತಿರುವ ಪ್ರಯತ್ನ ರಾಜ್ಯದ ಪ್ರಬುದ್ಧ ಜನತೆಗೆ ಮಾಡುತ್ತಿರುವ ಅಪಮಾನ. ರಾಜ್ಯದ ನ್ಯಾಯಾಂಗ ವ್ಯವಸ್ಥೆಯನ್ನು ಅಪ್ರಸ್ತುತಗೊಳಿಸುವ ನಿರಂಕುಶ ಪ್ರವೃತ್ತಿ. ಇಂಥ ಕೃತ್ಯಗಳು ರಾಜ್ಯದ ಸಾಮಾಜಿಕ ವ್ಯವಸ್ಥೆಯನ್ನು ಮಧ್ಯಯುಗೀನ ಕಾಲಕ್ಕೆ ತಳ್ಳುವಂತಾಗಿರುವುದು ದುರಂತ. ಆಣೆ `ಪ್ರಮಾಣ~ಗಳನ್ನು, ಆರೋಪಗಳಿಂದ ಖುಲಾಸೆಯಾಗಲು ಬಳಸುತ್ತಿರುವ ಈಗಿನ ವಿಧಾನ ಗಮನಿಸಿದರೆ, ರಾಜ್ಯದಲ್ಲಿ ಸಂವಿಧಾನ ವ್ಯವಸ್ಥೆ ಅಸ್ತಿತ್ವದಲ್ಲಿ ಇದೆ ಎಂದು ಹೇಳುವುದು ಕಷ್ಟ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.