ಸಮಾಜಕ್ಕೆ ಕಳಂಕ ದೇಶಕ್ಕೆ ಸ್ವಾತಂತ್ರ್ಯ ಬಂದು 64 ವರ್ಷಗಳಾದರೂ ಬಹುತೇಕ ಎಲ್ಲ ರಾಜ್ಯಗಳಲ್ಲಿ ಇನ್ನೂ ತಲೆಯ ಮೇಲೆ ಮಲಹೊರುವ ಹೀನಾಯ ಪದ್ಧತಿ ಜಾರಿಯಲ್ಲಿರುವುದರಿಂದ ನಮ್ಮದು ನಾಗರಿಕ ಸಮಾಜ ಎಂದು ಹೇಳಿಕೊಳ್ಳುವುದಕ್ಕೆ ನಾಚಿಕೆ ಪಡಬೇಕು. `ಇನ್ನು ಆರು ತಿಂಗಳ ಒಳಗೆ ದೇಶದ ಯಾವುದೇ ಭಾಗದಲ್ಲೂ ಮನುಷ್ಯರು ಮತ್ತೊಬ್ಬರ ಮಲವನ್ನು ತಲೆಯ ಮೇಲೆ ಹೊರುವ ಪದ್ಧತಿ ಇರಕೂಡದು. ನಾಗರಿಕ ಸಮಾಜಕ್ಕೇ ಕಳಂಕ ತರುವ ಈ ಕೆಟ್ಟ ವ್ಯವಸ್ಥೆಯನ್ನು ನಿರ್ಮೂಲ ಮಾಡಬೇಕು~ ಎಂದು ಪ್ರಧಾನಿ ಡಾ. ಮನಮೋಹನ್ ಸಿಂಗ್ ರಾಜ್ಯಗಳಿಗೆ ಕಟ್ಟುನಿಟ್ಟಾಗಿ ಕರೆ ನೀಡಿರುವುದು ಸ್ವಾಗತಾರ್ಹ. ಮಲಹೊರುವ ಪದ್ಧತಿಯನ್ನು ಉಳಿಸಿಕೊಂಡಿರುವುದು ಅಭಿವೃದ್ಧಿ ಪ್ರಕ್ರಿಯೆಗೆ ಒಂದು ಕಪ್ಪುಚುಕ್ಕೆ. ಈ ವ್ಯವಸ್ಥೆಯನ್ನು ತೊಡೆದು ಹಾಕಲು ಸಂಕಲ್ಪ ಮಾಡಬೇಕೆಂದು ಅವರು ಸಾಮಾಜಿಕ ನ್ಯಾಯ ಖಾತೆಯ ರಾಜ್ಯ ಸಚಿವರುಗಳಿಗೆ ಹೇಳಿದ್ದಾರೆ. ಪ್ರಧಾನಿ ಅವರ ಈ ಮಾತಿನಲ್ಲಿ ಈ ಅನಿಷ್ಟ ಪದ್ಧತಿಯ ವಿರುದ್ಧ ತಣ್ಣನೆಯ ಆಕ್ರೋಶ ವ್ಯಕ್ತವಾಗಿದೆ. ನಾಲ್ಕು ದಶಕಗಳ ಹಿಂದೆಯೇ ಮಲ ಹೊರುವ ಪದ್ಧತಿಯನ್ನು ಮೊದಲು ನಿಷೇಧಿಸಿದ ಕೀರ್ತಿ ಕರ್ನಾಟಕದ್ದು. ಆಗಿನ ನಗರಾಭಿವೃದ್ಧಿ ಸಚಿವರಾಗಿದ್ದ ಬಿ.ಬಸವಲಿಂಗಪ್ಪ ಈ ಬಗೆಗೆ ಕಾಯ್ದೆಯೊಂದನ್ನು ಜಾರಿಗೆ ತಂದಾಗ ವ್ಯವಸ್ಥೆಯ ಬದಲಾವಣೆಗೆ ಒಲ್ಲದ ಜಿಡ್ಡುಗಟ್ಟಿದ ಮನಸ್ಸಿನ ಹಲವರು ವಿರೋಧ ಮಾಡಿದ್ದರು. ಆದರೆ ಅವರು ಪಟ್ಟು ಹಿಡಿದು ಕಾಯ್ದೆಯನ್ನು ಜಾರಿಗೆ ತಂದರು. ಆದರೂ, ಈ ಅಮಾನವೀಯ ಪದ್ಧತಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಇನ್ನೂ ಉಳಿದುಕೊಂಡಿದೆ. ಇದು ನಾಚಿಕೆಗೇಡಿನ ಸಂಗತಿ. ಪ್ರತಿಯೊಂದು ಮನೆಯಲ್ಲೂ ಶೌಚಾಲಯ ನಿರ್ಮಿಸಿಕೊಳ್ಳಲು ಸರ್ಕಾರದಿಂದ ಹಣ ಮಂಜೂರಾಯಿತು. ಈ ಹಣ ಅನೇಕ ಕಡೆಗಳಲ್ಲಿ ದುರುಪಯೋಗವೂ ಆಯಿತು. ಕೆಲವು ನಗರ ಮತ್ತು ಪುರಸಭೆಗಳು ಈ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲಿಲ್ಲ. ಮೌಢ್ಯ ತುಂಬಿಕೊಂಡಿರುವ ಹಲವು ಜನರು ತಮ್ಮ ಮನೆಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಿಕೊಳ್ಳಲು ಮುಂದಾಗಲಿಲ್ಲ. ದೇವರು ಮತ್ತು ಧರ್ಮದ ಕಂದಾಚಾರಗಳ ಹೆಸರಿನಲ್ಲಿ ಈ ಕೊಳಕು ವ್ಯವಸ್ಥೆಯನ್ನೇ ಉಳಿಸಿಕೊಂಡಿರುವುದು ಈ ಪದ್ಧತಿ ಜಾರಿಯಲ್ಲಿರಲು ಮತ್ತೊಂದು ಕಾರಣ. ಈ ವ್ಯವಸ್ಥೆ ಸಂಪೂರ್ಣ ನಿರ್ಮೂಲವಾಗಬೇಕೆಂದು ಕರೆ ನೀಡಿದರೆ ಸಾಲದು. ಈ ಪದ್ಧತಿ ಎಲ್ಲೆಲ್ಲಿ ಉಳಿದುಕೊಂಡಿದೆ ಎನ್ನುವ ಸಮೀಕ್ಷೆ ನಡೆಸಿ ಎಲ್ಲರ ಮನೆಗಳಲ್ಲೂ ಶೌಚಾಲಯಗಳನ್ನು ನಿರ್ಮಿಸಿಕೊಳ್ಳಲು ಕಟ್ಟಾಜ್ಞೆ ಮಾಡಬೇಕು. ಅಸಹಾಯಕರಿಗೆ ಆರ್ಥಿಕ ಸಹಾಯವನ್ನೂ ಮಾಡಬೇಕು. ಮನುಷ್ಯರು ಮತ್ತೊಬ್ಬರ ಮಲವನ್ನು ತಲೆಯ ಮೇಲೆ ಹೊರಿಸುವುದನ್ನು ಅಪರಾಧ ಎಂದು ಪರಿಗಣಿಸಿ, ಆ ಕೆಲಸ ಮಾಡುವುದಕ್ಕೆ ಅಂತ್ಯ ಹಾಡಬೇಕು. ಮಲ ಹೊರುವ ಪದ್ಧತಿಯನ್ನು ನಿರ್ಮೂಲ ಮಾಡಲು ಅಸಹಕಾರ ತೋರುವ ಸ್ಥಳೀಯ ಸಂಸ್ಥೆಗಳಿಗೆ ಸರ್ಕಾರದ ಅನುದಾನವನ್ನು ನಿಲ್ಲಿಸುವ ಮೂಲಕ ಅವುಗಳಿಗೆ ಸರಿಯಾದ ಪಾಠ ಕಲಿಸಬೇಕು. ಮಲ ಸ್ವಚ್ಛತಾ ಕಾರ್ಯಕ್ರಮಗಳಿಗೆ ಬೇಕಾದ ಆಧುನಿಕ ಯಂತ್ರೋಪಕರಣಗಳ ಬಳಕೆಯನ್ನು ಕಡ್ಡಾಯ ಮಾಡಬೇಕು. ಈ ದಿಶೆಯಲ್ಲಿ ರಾಜ್ಯ ಸರ್ಕಾರಗಳು ತಮ್ಮ ಪ್ರಾಮಾಣಿಕ ಬದ್ಧತೆಯನ್ನು ಪ್ರದರ್ಶಿಸಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.