ಟೀಕೆಗೆ ನಿರ್ಲಕ್ಷ್ಯವೇ ಮದ್ದು ಭ್ರಷ್ಟಾಚಾರದ ವಿರುದ್ದ ಹೋರಾಟಕ್ಕೆ ಇಳಿದಿರುವ ಅಣ್ಣಾ ಹಜಾರೆ ಅವರ ತೇಜೋವಧೆಗಾಗಿ ಯುಪಿಎ ಸರ್ಕಾರದ ಸಚಿವರು ಮತ್ತು ಕಾಂಗ್ರೆಸ್ ಪಕ್ಷದ ನಾಯಕರು ನಿರಂತರವಾಗಿ ಪ್ರಯತ್ನ ನಡೆಸಿದ್ದಾರೆ. `ಹಜಾರೆ ಅವರು ಆರ್‌ಎಸ್‌ಎಸ್ ಮತ್ತು ಬಿಜೆಪಿಯ ಮುಖವಾಡ~ ಎನ್ನುವುದು ಕಾಂಗ್ರೆಸ್ ನಾಯಕರ ಮುಖ್ಯ ಆರೋಪ. ಇದರಿಂದ ನೊಂದ ಅಣ್ಣಾ ಹಜಾರೆ ಅವರು ಸೋನಿಯಾಗಾಂಧಿ ಅವರಿಗೆ ದೀರ್ಘವಾದ ಪತ್ರ ಬರೆದು ದೂರಿದ್ದಾರೆ. ಅಣ್ಣಾ ಹಜಾರೆ ಅವರಿಗೆ ಇನ್ನೂ ಸೋನಿಯಾಗಾಂಧಿ ಮೇಲೆ ಭರವಸೆ ಇದ್ದಂತಿದೆ. ಆದರೆ ಸೋನಿಯಾ ಗಾಂಧಿ ಅವರು ಆಡಳಿತಾರೂಢ ಪಕ್ಷದ ಅಧ್ಯಕ್ಷರು ಎನ್ನುವುದನ್ನು ಮರೆಯಬಾರದು. ಅಣ್ಣಾ ಅವರ ಮೇಲೆ ಕಾಂಗ್ರೆಸ್ ನಾಯಕರು ನಡೆಸುತ್ತಿರುವ ವಾಗ್ದಾಳಿ ಸೋನಿಯಾಗಾಂಧಿಯವರಿಗೆ ಗೊತ್ತಾಗದಂತೆ ನಡೆದ ಪ್ರಮಾದವೇನಲ್ಲ. ಪಕ್ಷದ ಅನುಮತಿ ಇಲ್ಲದೆ ಈ ನಾಯಕರು ಊರೂರಿಗೆ ಹೋಗಿ ಅಣ್ಣಾಹಜಾರೆ ವಿರುದ್ಧ ಹೇಳಿಕೆ ನೀಡಿದ್ದಾರೆ ಎನ್ನುವುದನ್ನು ನಂಬಲಾಗದು. ಸೋನಿಯಾಗಾಂಧಿಯವರು ಕೂಡಾ ಈ ನಾಯಕರ ವರ್ತನೆ ತಪ್ಪೆಂದು ಎಲ್ಲೂ ಹೇಳದಿರುವುದರಿಂದ ಇದಕ್ಕೆ ಅವರ ಸಮ್ಮತಿಯೂ ಇದೆ ಎಂದೇ ಅರ್ಥವಲ್ಲವೇ? ಆದ್ದರಿಂದ ಅಣ್ಣಾ ಹಜಾರೆ ಅವರ ಪತ್ರ ಒಂದು ಅನಗತ್ಯವಾದ ವ್ಯರ್ಥ ಕಸರತ್ತು. ಮೂರು ಪುಟಗಳ ಪತ್ರಕ್ಕೆ ಹತ್ತು ದಿನಗಳ ನಂತರ ಎರಡು ಪ್ಯಾರಾಗಳ ಉತ್ತರ ನೀಡಿದ್ದೇ ಸೋನಿಯಾಗಾಂಧಿ ಅವರು ಅಣ್ಣಾ ಹಜಾರೆ ಅವರ ಪತ್ರವನ್ನು ಎಷ್ಟು ಗಂಭೀರವಾಗಿ ತೆಗೆದುಕೊಂಡಿದ್ದಾರೆ ಎನ್ನುವುದಕ್ಕೆ ಸಾಕ್ಷಿ. ವ್ಯವಸ್ಥೆಯ ಬದಲಾವಣೆ ಮಾಡಲು ಹೊರಟಾಗ ಅಲ್ಲಿರುವ ಪಟ್ಟಭದ್ರರು ಕೈಕಟ್ಟಿ ಕೂರುವುದಿಲ್ಲ. ಬದಲಾವಣೆಯನ್ನು ವಿಫಲಗೊಳಿಸಲು ಸಾಧ್ಯ ಇರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಾರೆ. ಅಂತಹ ಪ್ರಯತ್ನಗಳಲ್ಲಿ ಮೊದಲನೆಯದು ಹೋರಾಟದ ನಾಯಕತ್ವ ವಹಿಸಿದವರ ಚಾರಿತ್ರ್ಯಹನನ. ತಮ್ಮ ವಿರುದ್ಧ ನಾಲ್ಕು ದಿಕ್ಕುಗಳಿಂದಲೂ ಎರಗಿ ಬರುತ್ತಿರುವ ಟೀಕಾಸ್ತ್ರಗಳಿಂದ ನೊಂದಿರುವ ಅಣ್ಣಾ ಹಜಾರೆ ಅವರು ಮೊದಲು ಇದನ್ನು ಅರ್ಥಮಾಡಿಕೊಳ್ಳಬೇಕು. ಭ್ರಷ್ಟಾಚಾರದ ವಿರುದ್ಧದ ಹೋರಾಟದ ಮೂಲಕ ಅವರು ಪ್ರಭಾವಶಾಲಿಯಾಗಿರುವ ಶತ್ರುಸಮೂಹವನ್ನು ಎದುರು ಹಾಕಿಕೊಂಡಿರುವುದರಿಂದ ವಿರೋಧ ಅನಿರೀಕ್ಷಿತವೇನಲ್ಲ. ಭ್ರಷ್ಟರ ಕಬಂಧಬಾಹು ಉನ್ನತ ಅಧಿಕಾರದ ಪೀಠದ ವರೆಗೂ ಚಾಚಿರುತ್ತದೆ. ಹೋರಾಟದ ಮೈದಾನದಲ್ಲಿ ಇವೆಲ್ಲ ಸಹಜ ಬೆಳವಣಿಗೆ. ಇದಕ್ಕಾಗಿ ಅಂಜಬೇಕಾಗಿಲ್ಲ, ಅಳುಕಬೇಕಾಗಿಲ್ಲ. ಸಾರ್ವಜನಿಕ ಜೀವನದಲ್ಲಿ ಇಷ್ಟೊಂದು ಸೂಕ್ಷ್ಮಮತಿಗಳಾಗುವ ಅಗತ್ಯವೂ ಇಲ್ಲ. ಇಂತಹ ಟೀಕೆಗಳಿಗೆ ಸಮಜಾಯಿಷಿ ನೀಡುತ್ತಾ ಆರೋಪ-ಪ್ರತ್ಯಾರೋಪಗಳ ಸುಳಿಯಲ್ಲಿ ಸಿಕ್ಕಿಹಾಕಿಕೊಂಡರೆ ಉದ್ದೇಶಿತ ಗುರಿಯನ್ನು ತಲುಪುವುದು ಸಾಧ್ಯವಾಗದು. ಇದರಿಂದ ಮನಸ್ಸು ನೋಯಿಸಿಕೊಂಡು ದೂರು ನೀಡುವುದು, ಅಲವತ್ತುಕೊಳ್ಳುವುದು ನಾಯಕತ್ವದ ದೌರ್ಬಲ್ಯದ ಪ್ರದರ್ಶನವಾಗುತ್ತದೆ. ಈ ರೀತಿ ಚಳವಳಿಯ ನಾಯಕರ ವಿಶ್ವಾಸಾರ್ಹತೆಯ ಬಗ್ಗೆಯೇ ಸಾರ್ವಜನಿಕರಲ್ಲಿ ಅನುಮಾನಗಳನ್ನು ಮೂಡಿಸಿ ಹೋರಾಟದ ಹಾದಿ ತಪ್ಪಿಸುವುದೂ ಟೀಕಾಕಾರರ ಉದ್ದೇಶ ಎನ್ನುವುದನ್ನು ಅಣ್ಣಾ ಹಜಾರೆ ಮರೆಯಬಾರದು. ಆದ್ದರಿಂದ ಟೀಕೆಗಳನ್ನು ನಿರ್ಲಕ್ಷಿಸುವುದೇ ಸರಿಯಾದ ಮಾರ್ಗ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.