ಮುಂದುವರಿದ ಭಟ್ಟಂಗಿತನ ವಂಶಾಡಳಿತ ಪರಂಪರೆಯ ಮುಂದುವರಿಕೆಯನ್ನು ಶಾಶ್ವತಗೊಳಿಸುವಂತೆ ವರ್ತಿಸುತ್ತಿರುವ ಕೆಲವು ಕಾಂಗ್ರೆಸ್ ಮುಖಂಡರ ನಡವಳಿಕೆ ಆ ಪಕ್ಷದ ಪ್ರಸ್ತುತತೆಯನ್ನು ಜನ ಶಂಕಿಸುವಂತೆ ಮಾಡಿದೆ. ರಾಜ್ಯವೊಂದರ ಮುಖ್ಯಮಂತ್ರಿಯಾಗಿ ಕಾರ‌್ಯನಿರ್ವಹಿಸಿದ್ದ ಏಐಸಿಸಿ ಪ್ರಧಾನ ಕಾರ‌್ಯದರ್ಶಿ ದಿಗ್ವಿಜಯ ಸಿಂಗ್ `ರಾಹುಲ್ ಗಾಂಧಿ ಪ್ರಧಾನಿ ಹುದ್ದೆಯನ್ನು ವಹಿಸಿಕೊಳ್ಳಲು ಸಮಯ ಪ್ರಶಸ್ತವಾಗಿದೆ~ ಎಂದು ಹೇಳುವ ಮೂಲಕ ತಮ್ಮ ಭಟ್ಟಂಗಿತನವನ್ನು ಪ್ರದರ್ಶಿಸಿದ್ದಾರೆ. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಬಗ್ಗೆ ಜನ ಅಸಹ್ಯಪಟ್ಟುಕೊಳ್ಳುವಷ್ಟು ಭ್ರಷ್ಟಾಚಾರ ಹಗರಣಗಳು ಒಂದೊಂದಾಗಿ ಹೊರಬರುತ್ತಿರುವ ಈ ಸಂದರ್ಭದಲ್ಲಿ ಪಕ್ಷದ ವರ್ಚಸ್ಸನ್ನು ಹೆಚ್ಚಿಸಿಕೊಳ್ಳಲು ಇಂಥ ಹೇಳಿಕೆ ನೀಡಲಾಯಿತೇ ಎಂಬುದೇನೂ ಸ್ಪಷ್ಟವಿಲ್ಲ. `ಅಂಥ ತುರ್ತೇನೂ ಇಲ್ಲ, ತಮ್ಮ ಅಧಿಕಾರದ ಅವಧಿಯನ್ನು ಪ್ರಧಾನಿ ಮನಮೋಹನಸಿಂಗ್ ಅವರು ಪೂರೈಸುತ್ತಾರೆ~ ಎಂಬಂಥ ಸ್ಪಷ್ಟನೆಯೇನೋ ಪಕ್ಷದ ವಕ್ತಾರರಿಂದ ಹೊರಬಿದ್ದಿದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಪಕ್ಷದ ಪ್ರಧಾನ ಕಾರ‌್ಯದರ್ಶಿಯ ಹುದ್ದೆಯಲ್ಲಿಯೇ ಮುಂದುವರಿದಿರುವ ಸಂಸದ ರಾಹುಲ್ ಗಾಂಧಿ ಇಂಥ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡುತ್ತಾರೆಂದು ನಿರೀಕ್ಷಿಸುವಂತಿಲ್ಲ. ಪ್ರಧಾನಿಯ ಹುದ್ದೆ ಸದ್ಯದಲ್ಲಿ ತೆರವಾಗುವ ಸಂಭವ ಇಲ್ಲದಿರುವಾಗ ಪಕ್ಷದ ಜವಾಬ್ದಾರಿ ಸ್ಥಾನದ ವ್ಯಕ್ತಿಯಿಂದ ಬಂದ ಇಂಥ ಹೇಳಿಕೆ ವರಿಷ್ಠ ನಾಯಕತ್ವದ ಸೂಚನೆ ಇಲ್ಲದೆ ಹೊರಬಂದಿರುವ ಸಾಧ್ಯತೆ ಕಡಿಮೆ. ಭ್ರಷ್ಟಾಚಾರದ ವಿರುದ್ಧ ಬಲಿಷ್ಠ ಲೋಕಪಾಲ ವ್ಯವಸ್ಥೆ ರೂಪಿಸುವುದಕ್ಕೆ ಸಾರ್ವಜನಿಕವಾಗಿ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಜನರ ಗಮನವನ್ನು ಬೇರೆಡೆ ಸೆಳೆಯಲು ಇಂಥ ಕುತಂತ್ರ ನಡೆಸುವುದು ಬೌದ್ಧಿಕವಾಗಿ ದಿವಾಳಿ ಎದ್ದು ಹೋಗಿರುವ ರಾಜಕೀಯ ಪಕ್ಷಗಳಿಂದ ಮಾತ್ರ ಸಾಧ್ಯ. ನೆಹರೂ ವಂಶದ ಕುಡಿ ಎಂದ ಮಾತ್ರಕ್ಕೆ ಜನ ಕಣ್ಣು ಮುಚ್ಚಿಕೊಂಡು ಬೆಂಬಲ ನೀಡುತ್ತಾರೆ ಎಂಬ ಕಾಂಗ್ರೆಸ್ಸಿಗರ ನಿರೀಕ್ಷೆಯನ್ನು ದೇಶದ ವಿವಿಧ ರಾಜ್ಯಗಳ ಜನತೆ ಈಗಾಗಲೇ ಹುಸಿ ಮಾಡಿದ್ದಾರೆ. ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು ರಾಜ್ಯಗಳಲ್ಲಿ ವಿಧಾನ ಸಭೆ ಚುನಾವಣೆಗಳಲ್ಲಿ ಅಧಿಕಾರದ ಹತ್ತಿರಕ್ಕೂ ಬರುವುದಕ್ಕೆ ಸಾಧ್ಯವಾಗಿಲ್ಲ. ಬದಲಾಗುತ್ತಿರುವ ಸಾಮಾಜಿಕ ಆರ್ಥಿಕ ಪರಿಸ್ಥಿತಿಯಲ್ಲಿ ರಾಜಕೀಯ ಲೆಕ್ಕಾಚಾರಗಳೂ ಬದಲಾಗಬೇಕಾಗುತ್ತದೆ ಎಂಬುದು ಕಾಂಗ್ರೆಸ್ಸಿನ ವರಿಷ್ಠರಿಗೆ ಅರ್ಥವಾಗತ್ತಿಲ್ಲ. ಜನತೆಯ ಆಶೋತ್ತರಗಳನ್ನು ನಿರ್ಲಕ್ಷಿಸಿ ಕೇಂದ್ರೀಯ ಆಡಳಿತ ವ್ಯವಸ್ಥೆಯನ್ನು ಪೋಷಿಸುತ್ತಿರುವ ಕಾಂಗ್ರೆಸ್ಸಿನ ನಿರಂಕುಶ ಮನಃಸ್ಥಿತಿಯ ಕಾರಣ ದೇಶದ ಹೆಚ್ಚಿನ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಜನಬೆಂಬಲ ಗಳಿಸುತ್ತಿರುವುದು ಈಚಿನ ದಶಕಗಳಲ್ಲಿ ಕಂಡು ಬಂದಿರುವ ವಿದ್ಯಮಾನ. ಭಾರತದಂತಹ ವೈವಿಧ್ಯಮಯ ಸಂಸ್ಕೃತಿ, ನಡವಳಿಕೆ, ಪ್ರಾದೇಶಿಕ ಭಿನ್ನತೆ ಇರುವ ಬೃಹತ್ ದೇಶದ ಆಡಳಿತ ಚುಕ್ಕಾಣಿ ಹಿಡಿಯಬಲ್ಲಂಥ ಅನುಭವಿ ಆಡಳಿತಗಾರರಿಗೆ ಕಾಂಗ್ರೆಸ್ಸಿನಲ್ಲಿ ಕೊರತೆ ಇಲ್ಲದಿದ್ದರೂ ಇಂಥ ಭಟ್ಟಂಗಿ ಪ್ರವೃತ್ತಿಯಿಂದಾಗಿ ಅವರೆಲ್ಲ ಅಪ್ರಸ್ತುತರಾಗುತ್ತಿದ್ದಾರೆ. ಆಕರ್ಷಕ ವರ್ಚಸ್ಸಿನ ಕೇಂದ್ರೀಯ ನಾಯಕತ್ವವನ್ನು ಪ್ರದರ್ಶಿಸಿದರೂ ಮೂರು ವರ್ಷಗಳಿಂದ ಕರ್ನಾಟಕ ವಿಧಾನಸಭೆಯ ಒಂದಾದರೂ ಉಪಚುನಾವಣೆಯನ್ನು ಕಾಂಗ್ರೆಸ್ಸಿನಿಂದ ಗೆಲ್ಲಲಾಗಲಿಲ್ಲ. ಪಕ್ಷದ ನಾಯಕತ್ವ ಜನಪರವಾಗಿ ಯೋಚಿಸದಿದ್ದರೆ ಇಂಥ ಫಲಿತಾಂಶ ರಾಷ್ಟ್ರಮಟ್ಟದಲ್ಲಿಯೂ ಪುನರಾವರ್ತನೆಯಾಗುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.