ಚಾರಿತ್ರ್ಯ ಹನನದ ಕುತಂತ್ರ ಸಂದೇಶ ತಮಗೆ ವಿರುದ್ಧವಾಗಿದ್ದರೆ ಸಂದೇಶಕಾರನ ಮೇಲೆ ದಾಳಿ ನಡೆಸುವುದು ಆಳುವ ವರ್ಗದ ಹಳೆಯ ಕುತಂತ್ರ. ಕೇಂದ್ರದ ಯುಪಿಎ ಸರ್ಕಾರ ಇದನ್ನೇ ಮಾಡುತ್ತಿದೆ. ಲೋಕಪಾಲ ಕರಡು ಮಸೂದೆ ರಚನೆಯಲ್ಲಿ ಪಾಲ್ಗೊಂಡಿರುವ ನಾಗರಿಕ ಸಮಿತಿಯ ಸದಸ್ಯರ ಮೇಲೆ ಕೇಂದ್ರ ಸರ್ಕಾರ ಮತ್ತು ಆಡಳಿತಾರೂಢ ಪಕ್ಷದ ಸದಸ್ಯರು ನಾಲ್ದೆಸೆಗಳಿಂದಲೂ ವಾಗ್ದಾಳಿ ಪ್ರಾರಂಭಿಸಿದ್ದಾರೆ. ಅಣ್ಣಾ ಹಜಾರೆ ಅವರು ಆರ್‌ಎಸ್‌ಎಸ್ ಕೈಗೊಂಬೆ ಎಂದು ಆರೋಪಿಸಲಾಗುತ್ತಿದೆ. ನಾಗರಿಕ ಸಮಿತಿಯಲ್ಲಿರುವ ಇತರ ಸದಸ್ಯರ ಆಸ್ತಿ, ಕುಟುಂಬದ ಹಿನ್ನೆಲೆ, ರಾಜಕೀಯ ಒಲವುಗಳನ್ನೆಲ್ಲ ಅಗೆದು ತೆಗೆದು ಪ್ರಚಾರ ನೀಡಲಾಗುತ್ತಿದೆ. ನೈತಿಕವಾಗಿ ಕುಸಿದುಹೋಗುವಂತೆ ಮಾಡಿ ಅವರನ್ನು ಹೋರಾಟದಿಂದ ಹಿಮ್ಮೆಟ್ಟಿಸುವಂತೆ ಮಾಡುವುದು ಈ ಹುನ್ನಾರದ ಉದ್ದೇಶ. ಚಾರಿತ್ರ್ಯಹನನದ ಮೂಲಕವೇ ಬಾಬಾ ರಾಮ್‌ದೇವ್ ಅವರನ್ನು ಮಣಿಸಿ ಅವರ ಸತ್ಯಾಗ್ರಹ ಕೊನೆಗೊಳ್ಳುವಂತೆ ಮಾಡುವ ಮೂಲಕ ಪಡೆದ ಯಶಸ್ಸಿನಿಂದ ಕೇಂದ್ರ ಸರ್ಕಾರ ಸ್ಫೂರ್ತಿ ಪಡೆದಂತಿದೆ. ಅದರ ನಂತರ ಅಣ್ಣಾ ಹಜಾರೆ ಮತ್ತು ಸಂಗಾತಿಗಳ ಮೇಲಿನ ವಾಗ್ದಾಳಿ ತೀವ್ರಗೊಂಡಿದೆ. ಆದರೆ ಬಾಬಾ ರಾಮ್‌ದೇವ್ ಅವರ ಹಿನ್ನೆಲೆಯೇ ವಿವಾದಾತ್ಮಕವಾಗಿದ್ದ ಕಾರಣದಿಂದಾಗಿ ಸುಲಭದಲ್ಲಿ ಕೇಂದ್ರ ಸರ್ಕಾರದ ಸಂಚಿಗೆ ಬಲಿಯಾದರು. ಪ್ರಾಯೋಗಿಕವಲ್ಲದ ಅವರ ಬೇಡಿಕೆಗಳು ಕೂಡಾ ಅವರ ಸತ್ಯಾಗ್ರಹ ಜನಬೆಂಬಲ ಗಳಿಸದೆ ಇರಲು ಕಾರಣ. ಅದೇ ರೀತಿಯಲ್ಲಿ ಅಣ್ಣಾ ಹಜಾರೆ ಸತ್ಯಾಗ್ರಹವನ್ನು ಮುಗಿಸಿಬಿಡಬಹುದೆಂದು ಕೇಂದ್ರ ಸರ್ಕಾರ ನಂಬಿದಂತಿದೆ. ನಾಗರಿಕ ಸಮಿತಿಯ ಸದಸ್ಯರು ಬೇರೆ ಯಾರದ್ದೋ ಕೈಗೊಂಬೆಗಳಾಗಿದ್ದರೆ ಇಲ್ಲವೇ ಭ್ರಷ್ಟರಾಗಿದ್ದರೆ ಕರಡು ಮಸೂದೆ ರಚನೆಯ ಸಮಿತಿಯಲ್ಲಿ ಕೇಂದ್ರ ಸರ್ಕಾರ ಅವರನ್ನು ಯಾಕೆ ಸೇರಿಸಿಕೊಳ್ಳಬೇಕಿತ್ತು? ಒಂದು ತಿಂಗಳ ಅವಧಿಯಲ್ಲಿ ಅವರೆಲ್ಲ ಭ್ರಷ್ಟರಾದರೇ? ಇಂತಹ ಬೇಜವಾಬ್ದಾರಿ ಹೇಳಿಕೆಗಳನ್ನು ಒಪ್ಪಲಾಗದು. ಪ್ರಧಾನಮಂತ್ರಿ ಹುದ್ದೆಯನ್ನು ಲೋಕಪಾಲರ ವ್ಯಾಪ್ತಿಗೆ ಸೇರಿಸುವುದನ್ನು ವಿರೋಧಪಕ್ಷದಲ್ಲಿದ್ದಾಗ ಈಗಿನ ಪ್ರಧಾನಿ ಮನಮೋಹನ್‌ಸಿಂಗ್ ಮಾತ್ರವಲ್ಲ, ಈಗ ಸಚಿವರಾಗಿರುವ ಪ್ರಣವ್ ಮುಖರ್ಜಿ, ಎಂ.ವೀರಪ್ಪ ಮೊಯಿಲಿ ಮತ್ತು ಪಿ.ಚಿದಂಬರಮ್ ಕೂಡಾ ಬೆಂಬಲಿಸಿದ್ದರು ಎನ್ನುವುದನ್ನು ಮರೆಯಬಾರದು. ಅಧಿಕಾರಕ್ಕೆ ಬಂದ ನಂತರ ಇವರು ಬದಲಾಗಿರುವುದು ಆತ್ಮವಂಚನೆಯ ನಡವಳಿಕೆಯಲ್ಲದೆ ಬೇರೇನಲ್ಲ. ಬಲಿಷ್ಠವಾದ ಲೋಕಪಾಲ ಮಸೂದೆ ರಚನೆಯಾಗಬೇಕು ಮತ್ತು ಅದರ ವ್ಯಾಪ್ತಿಯಲ್ಲಿ ಪ್ರಧಾನಮಂತ್ರಿ, ನ್ಯಾಯಮೂರ್ತಿಗಳು, ಕೇಂದ್ರಸರ್ಕಾರದ ಎಲ್ಲ ಅಧಿಕಾರಿಗಳು ಹಾಗೂ ಸಂಸತ್‌ನೊಳಗಿನ ಸಂಸದರ ನಡವಳಿಕೆಗಳು ಸೇರಬೇಕು ಎಂಬುದು ಇಡೀ ದೇಶದ ಜನತೆಯ ಒಕ್ಕೊರಲಿನ ಕೂಗು. ಈ ಕಾರಣದಿಂದಾಗಿಯೇ ಅಣ್ಣಾ ಹಜಾರೆ ಹೋರಾಟಕ್ಕೆ ವ್ಯಾಪಕ ಜನಬೆಂಬಲ ವ್ಯಕ್ತವಾಗಿರುವುದು. ಆದ್ದರಿಂದ ಕೇಂದ್ರ ಸರ್ಕಾರ ಚಾರಿತ್ರ್ಯಹನನದಂತಹ ಕುತಂತ್ರಕಾರಿ ನಡವಳಿಕೆಯನ್ನು ಕೈಬಿಟ್ಟು ನಾಗರಿಕ ಸಮಿತಿಯ ಬೇಡಿಕೆಗಳನ್ನು ತಕ್ಷಣ ಒಪ್ಪಿಕೊಳ್ಳಬೇಕು. ಸರ್ಕಾರದ ಆರೋಪಗಳಿಗೆ ಅದೇ ಧಾಟಿಯಲ್ಲಿ ಉತ್ತರಿಸಲು ಹೋಗಿ ನಾಗರಿಕ ಸಮಿತಿ ಸದಸ್ಯರು ಕೂಡಾ ಬೋನಿಗೆ ಬೀಳದಂತೆ ಎಚ್ಚರ ವಹಿಸಬೇಕು. ಜನಾಭಿಪ್ರಾಯದ ಬಗ್ಗೆ ಕೇಂದ್ರ ಸರ್ಕಾರಕ್ಕೆ ಇನ್ನೂ ಅನುಮಾನಗಳಿದ್ದರೆ ನಾಗರಿಕ ಸಮಿತಿ ಸಲಹೆ ನೀಡಿರುವಂತೆ ಇದೇ ವಿಷಯದ ಮೇಲೆ ಜನಮತಗಣನೆ ನಡೆಸಲಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.