ಅನ್ಯಾಯದ ಸಾವು ಉತ್ತರ ಭಾರತದ ಜೀವ ನದಿ ಗಂಗಾ ಕಲುಷಿತಗೊಂಡು ಹಲವಾರು ವರ್ಷಗಳಾಗಿವೆ. ಹಿಮಾಲಯದಲ್ಲಿ ಹುಟ್ಟಿ ಸುಮಾರು 2500 ಕಿಮೀ ಉದ್ದ ಹರಿದು ಬಂಗಾಳಕೊಲ್ಲಿಗೆ ಸೇರುವ ಗಂಗಾ ನದಿಯ ಆಸುಪಾಸಿನಲ್ಲಿ ನಡೆಯುತ್ತಿರುವ ಗಣಿಗಾರಿಕೆಯನ್ನು ನಿಷಿದ್ಧಗೊಳಿಸಬೇಕೆನ್ನುವ ಬೇಡಿಕೆಯನ್ನಿಟ್ಟುಕೊಂಡು ಕಳೆದ ಫೆಬ್ರುವರಿಯಿಂದ ಹರಿದ್ವಾರದಲ್ಲಿ ನಿರಶನ ನಡೆಸುತ್ತಿದ್ದ 34 ವರ್ಷದ ಸ್ವಾಮಿ ನಿಗಮಾನಂದ ಸಾವನ್ನಪ್ಪಿರುವುದು ಕೇಂದ್ರ ಮತ್ತು ಉತ್ತರಾಖಂಡ ಸರ್ಕಾರಗಳ ದಿವ್ಯ ನಿರ್ಲಕ್ಷ್ಯವನ್ನು ತೋರಿಸುತ್ತದೆ. 115 ದಿನ ನಿರಶನ ನಡೆಸಿದ ಅವರ ಆರೋಗ್ಯ ಸ್ಥಿತಿ ಏಪ್ರಿಲ್ 27ರಿಂದಲೇ ಕ್ಷೀಣಿಸುತ್ತಾ ಬಂದಿತ್ತು. ಅವರನ್ನು ಡೆಹರಾಡೂನ್‌ನ ಹಿಮಾಲಯನ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸೇರಿಸಲಾಯಿತಾದರೂ, ಅಲ್ಲಿಯೂ ಅವರಿಗೆ ಸೂಕ್ತ ಚಿಕಿತ್ಸೆ ದೊರೆಯಲಿಲ್ಲ ಎನ್ನುವುದಕ್ಕೆ ಅವರ ಸಾವೇ ಸಾಕ್ಷಿ. ಮೇ 2ರಂದು ಸ್ವಾಮಿ ನಿಗಮಾನಂದರಿಗೆ ದಾದಿಯೊಬ್ಬರು ಇಂಜಕ್ಷನ್ ನೀಡಿದ ಬಳಿಕ ಅವರು ಕೋಮಾ ಸ್ಥಿತಿಗೆ ಹೋದರು. ಮತ್ತೆ ಅವರಿಗೆ ಪ್ರಜ್ಞೆ ಬರಲಿಲ್ಲ. ಇಂಜಕ್ಷನ್ ಮೂಲಕ ವಿಷಪ್ರಾಶನ ಮಾಡಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿ ಬಂದಿವೆ. ಈ ಸಾವಿನ ಹಿಂದೆ ಅವರು ಹೋರಾಟ ನಡೆಸುತ್ತಿದ್ದ ಗಣಿಗಾರಿಕೆ ಮಾಫಿಯಾದ ಕೈವಾಡ ಇದೆ ಎನ್ನುವ ಮಾತುಗಳು ಇವೆ. ಈ ನಿಗೂಢವನ್ನು ಭೇದಿಸಲು ಉತ್ತರಾಖಂಡ ಸರ್ಕಾರ ಸಿಬಿ-ಸಿಐಡಿ ತನಿಖೆಗೆ ಆಜ್ಞೆ ಮಾಡಿದೆಯಾದರೂ ಅಲ್ಲಿಗೆ ತನ್ನ ಜವಾಬ್ದಾರಿ ಮುಗಿಯಿತೆಂದು ಸುಮ್ಮನಿರಬಾರದು. ವಿದೇಶಿ ಬ್ಯಾಂಕುಗಳಲ್ಲಿ ಭಾರತೀಯರು ಇಟ್ಟಿರುವ ಕಪ್ಪುಹಣವನ್ನು ವಾಪಸ್ ತರಬೇಕೆಂದು ಒಂದು ವಾರ ನಿರಶನ ಮಾಡಿ ಹಿಮಾಲಯನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಾಬಾ ರಾಮ್‌ದೇವ್ ಬಗೆಗೆ ರಾಜಕೀಯ ಪಕ್ಷಗಳು ಮತ್ತು ಸಮಾಜ ತೋರಿದ ಕಾಳಜಿ ನಿಗಮಾನಂದ ಸ್ವಾಮಿಯ ಹೋರಾಟದ ಬಗೆಗೆ ತೋರದೇ ಹೋದುದು ನಮ್ಮ ಮನಸ್ಥಿತಿಯಲ್ಲಿಯೇ ಇರುವ ತಾರತಮ್ಯವನ್ನು ತೋರಿಸುತ್ತದೆ. ರಾಮ್‌ದೇವ್ ಅವರನ್ನು ನೋಡಲು ಹರಿದ್ವಾರಕ್ಕೆ ತೆರಳಿದ್ದ ಬಿಜೆಪಿ ಮತ್ತು ಸಂಘ ಪರಿವಾರದ ನಾಯಕರು ತಮ್ಮದೇ ಪಕ್ಷದ ಆಡಳಿತವಿರುವ ರಾಜ್ಯ ಸರ್ಕಾರ, ನಿಗಮಾನಂದರ ನಿರಶನವನ್ನು ಕಡೆಗಣಿಸಿದ್ದರ ಬಗೆಗೆ ಜಾಣ ಮೌನ ತೋರಿದ್ದು ಅಕ್ಷಮ್ಯ. ಗಣಿಗಾರಿಕೆ ನಡೆಸುವ ಗುತ್ತಿಗೆದಾರರ ಕೈಗೊಂಬೆಯಾಗಿರುವ ಭ್ರಷ್ಟ ರಾಜಕೀಯ ವ್ಯವಸ್ಥೆಗೆ ಸ್ವಾಮಿ ನಿಗಮಾನಂದ ಬಲಿಯಾಗಿದ್ದಾರೆ. ಹಿಂದೂ ಧರ್ಮದಲ್ಲಿ ಶ್ರದ್ಧೆ ಇರುವ ಕೋಟ್ಯಂತರ ಜನರ ಪವಿತ್ರ ಗಂಗಾ ನದಿಯನ್ನು ರಕ್ಷಿಸಬೇಕೆನ್ನುವುದಷ್ಟೇ ಸ್ವಾಮಿ ನಿಗಮಾನಂದರ ಉದ್ದೇಶವಾಗಿತ್ತು. ಈ ಪುಣ್ಯ ನದಿಯ ಪಾವಿತ್ರ್ಯ ಉಳಿಸಲು ನಡೆಸಿದ ಹೋರಾಟಕ್ಕೆ ಜನ ಬೆಂಬಲ ಸಿಗದೇ ಯುವ ಸಂತರೊಬ್ಬರು ಪ್ರಾಣತ್ಯಾಗ ಮಾಡಬೇಕಾಗಿ ಬಂದುದು ದುರ್ದೈವ. ಇದು ಅನ್ಯಾಯದ ಸಾವು. ಈ ಸಾವಿನ ಹಿಂದಿರುವ ಕುಕೃತ್ಯಗಳನ್ನು ಬಯಲಿಗೆಳೆದು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಳ್ಳಲು ಉತ್ತರಾಖಂಡ ಸರ್ಕಾರ ಇನ್ನಾದರೂ ಪ್ರಾಮಾಣಿಕತೆಯಿಂದ ನಡೆದುಕೊಳ್ಳಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.