ದುರುದ್ದೇಶದ ವಿರೋಧ ವಿಶ್ವಪರಂಪರೆಯ ಪಟ್ಟಿಗೆ ಪಶ್ಚಿಮಘಟ್ಟ ಪ್ರದೇಶದ ಹತ್ತು ಸ್ಥಳಗಳನ್ನು ಸೇರಿಸುವ ಪ್ರಸ್ತಾಪಕ್ಕೆ ರಾಜ್ಯದ ಸಚಿವರ ಗುಂಪು ವ್ಯಕ್ತಪಡಿಸಿರುವ ವಿರೋಧಕ್ಕೆ ತಾರ್ಕಿಕ ಕಾರಣಗಳಿಲ್ಲ. ಇಂಥ ಘೋಷಣೆಯಿಂದ ನೈಸರ್ಗಿಕ ಸಂಪತ್ತಿನ ಲೂಟಿಗೆ ಅವಕಾಶ ಇಲ್ಲವೆಂಬ ಆತಂಕವೇ ಈ ವಿರೋಧದ ಹಿಂದೆ ಕೆಲಸ ಮಾಡಿರುವಂತೆ ತೋರುತ್ತದೆ. ಸಹ್ಯಾದ್ರಿ ಶ್ರೇಣಿಯಲ್ಲಿನ ನೈಸರ್ಗಿಕ ಅರಣ್ಯ ವಿಶ್ವದ ಜೀವಿ ವೈವಿಧ್ಯದ ಅಪರೂಪದ ತಾಣವೆಂದು ಜಾಗತಿಕವಾಗಿ ಗುರುತಿಸಲಾಗಿರುವ ಪ್ರದೇಶ. ಅದನ್ನು ಸಂರಕ್ಷಿಸುವುದು ಮನುಕುಲದ ಕರ್ತವ್ಯ ಎಂಬ ಉದ್ದೇಶದಿಂದಲೇ ಅದನ್ನು ವಿಶ್ವಪರಂಪರೆಯ ಸ್ಥಳಗಳ ಪಟ್ಟಿಗೆ ಸೇರಿಸಬೇಕೆಂಬ ಪ್ರಸ್ತಾಪ ರೂಪುಗೊಂಡಿದೆ. ಈ ಮಾನ್ಯತೆ ಪಡೆಯಲು ಯುನೆಸ್ಕೊಗೆ ದುಂಬಾಲು ಬೀಳುವಂತಹ ಪರಿಸ್ಥಿತಿ ಇರುವಾಗ ರಾಜ್ಯದ ಹತ್ತು ಅರಣ್ಯಗಳಿಗೆ ಸಿಗಬಹುದಾದ ಅವಕಾಶವನ್ನು ತಿರಸ್ಕರಿಸಹೊರಡುವುದು ಮೂರ್ಖತನ. ಅಷ್ಟಕ್ಕೂ ಈ ಪ್ರಸ್ತಾಪವನ್ನು 2006ರಲ್ಲಿಯೇ ಕೇಂದ್ರ ಸರ್ಕಾರ ರಾಜ್ಯದ ಸಮ್ಮತಿಯೊಂದಿಗೆ ಅಂತಿಮಗೊಳಿಸಿ ಯುನೆಸ್ಕೊಗೆ ಸಲ್ಲಿಸಿದೆ. ಇದನ್ನು ರಾಜ್ಯದ ಸಚಿವರ ಗುಂಪಿನ ಗಮನಕ್ಕೆ ಅಧಿಕಾರಿಗಳು ತರದಿರುವುದು ಆಶ್ಚರ್ಯಕರ. ಈ ಮಹತ್ವದ ಪ್ರದೇಶಗಳನ್ನು `ಅಭಿವೃದ್ಧಿ~ಯ ನೆಪ ಒಡ್ಡಿ ವಿಶ್ವಪರಂಪರೆ ಪಟ್ಟಿಯಲ್ಲಿ ಸೇರಿಸುವುದಕ್ಕೆ ಸಚಿವರು ವಿರೋಧಿಸುವುದಕ್ಕೆ ಅಜ್ಞಾನ ಇಲ್ಲವೇ ದುರುದ್ದೇಶವಷ್ಟೆ ಇರುವುದು ಸಾಧ್ಯ. `ಹೀಗೆ ವಿಶೇಷ ಮಾನ್ಯತೆ ನೀಡುವುದರಿಂದ ಆರ್ಥಿಕ ಲಾಭವಿಲ್ಲ; ಅಲ್ಲಿ ಏನೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕಿದ್ದರೂ ಯುನೆಸ್ಕೊ ಅನುಮತಿ ಪಡೆಯಬೇಕಾಗುತ್ತದೆ~ ಎಂಬ ನೆಪಗಳೆಲ್ಲ ಸಾರ್ವಜನಿಕರ ಹಾದಿ ತಪ್ಪಿಸುವ ಕುತಂತ್ರ. ಜೀವಿ ವೈವಿಧ್ಯದ ನೈಸರ್ಗಿಕ ಪರಂಪರೆಯ ಪ್ರದೇಶವೆಂದು ಗುರುತಿಸಲಾದ ಈ ಪ್ರದೇಶಗಳನ್ನು ವಿಶ್ವಪರಂಪರೆಯ ಪಟ್ಟಿಗೆ ಶೀಘ್ರವೇ ಸೇರಿಸಬೇಕೆಂದು ಆಗ್ರಹಪಡಿಸಬೇಕಾದ ಸರ್ಕಾರವೇ ಕುಂಟು ನೆಪವೊಡ್ಡಿ ವಿರೋಧಿಸುತ್ತಿರುವುದು ಖಂಡನಾರ್ಹ. ಪಶ್ಚಿಮಘಟ್ಟದ ಕುದುರೆಮುಖ, ಕೆಮ್ಮಣ್ಣುಗುಂಡಿ, ಮುಳ್ಳಯ್ಯನಗಿರಿ, ಬಾಬಾ ಬುಡನ್‌ಗಿರಿ, ಪುಷ್ಪಗಿರಿ, ಕುಮಾರಪರ್ವತ ಮೊದಲಾದವು ಒಳಗೊಂಡ ಪ್ರದೇಶವೆಲ್ಲ ಸಹಜವಾಗಿಯೇ ರೂಪುಗೊಂಡ ನೈಸರ್ಗಿಕ ತಾಣಗಳು. ಈ ಪ್ರದೇಶಗಳ ವ್ಯಾಪ್ತಿಯಲ್ಲಿ ಅರಣ್ಯಸಂಪತ್ತಿನ ಅವ್ಯಾಹತ ಲೂಟಿ, ಗಣಿಗಾರಿಕೆ, ಐಷಾರಾಮಿ ರೆಸಾರ್ಟ್‌ಗಳ ನಿರ್ಮಾಣದಂತಹ `ಅಭಿವೃದ್ಧಿ~ ಚಟುವಟಿಕೆಗಳು ನಡೆಯುತ್ತಿರುವುದರಿಂದ ಅವುಗಳ ಮೂಲಸ್ವರೂಪಕ್ಕೆ ಧಕ್ಕೆಯಾಗುತ್ತಿದೆ. ಜೀವಿ ಪರಿಸರದ ನೈಸರ್ಗಿಕ ಸಮತೋಲನ ತಪ್ಪುತ್ತಿದೆ. ಅಪರೂಪದ ಸಸ್ಯ ಮತ್ತು ಇಲ್ಲಿ ಮಾತ್ರವೇ ಕಂಡು ಬರುವ ಅನೇಕ ಪ್ರಾಣಿ ಪ್ರಭೇದಗಳು ಅಳಿವಿನ ಅಂಚು ಮುಟ್ಟಿವೆ. ಇವನ್ನೆಲ್ಲ ಸಂರಕ್ಷಿಸುವುದಕ್ಕೆ ವಿಶೇಷ ಗಮನ ಕೊಡಬೇಕಾದ ಅವಶ್ಯಕತೆ ಇದೆ. ಅರಣ್ಯ ಮತ್ತು ಜೀವ ಸಂಕುಲದ ನಾಶವನ್ನು ತಡೆಯುವುದಕ್ಕೆ ಕಟ್ಟುನಿಟ್ಟಿನ ಕ್ರಮಗಳು ಅಗತ್ಯ. ವನ್ಯಜೀವಿ ಧಾಮ, ಹುಲಿ ಸಂರಕ್ಷಣೆಯ ರಾಷ್ಟ್ರೀಯ ಉದ್ಯಾನ ಮೊದಲಾದ ಘೋಷಣೆಗಳ ಮೂಲಕ ಈ ಪ್ರದೇಶಗಳಲ್ಲಿ ಮಾನವ ಚಟುವಟಿಕೆಗಳನ್ನು ಕನಿಷ್ಠ ಪ್ರಮಾಣಕ್ಕೆ ನಿಯಂತ್ರಿಸುವ ಪ್ರಯತ್ನಗಳು ನಡೆಯುತ್ತಿವೆಯಾದರೂ ಅವು ಸಾಲದಾಗಿದೆ. ಜೈವಿಕ ಸೂಕ್ಷ್ಮವಲಯವೆಂದು ಈ ಪ್ರದೇಶಗಳನ್ನು ಘೋಷಿಸಲು ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ಈಗಾಗಲೇ ಸಿದ್ಧತೆ ಮಾಡಿಕೊಂಡಿದೆ. ಈ ಹಂತದಲ್ಲಿ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಸೇರ್ಪಡೆಯಾಗುವುದು ಅವಶ್ಯಕ ಕ್ರಮ. ಇದನ್ನು `ಅಭಿವೃದ್ಧಿ~ಯ ನೆಪ ಮುಂದೆ ಮಾಡಿಕೊಂಡು ವಿರೋಧಿಸುತ್ತಿರುವುದು ಅಜ್ಞಾನದ ಪರಮಾವಧಿ. ಇಂಥ ಅವಿವೇಕದ ಕ್ರಮಗಳು ಸರ್ಕಾರದ ವರ್ಚಸ್ಸನ್ನು ಹೆಚ್ಚಿಸಲಾರವು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.