ಖಾದಿಗೆ ಬೇಕಿದೆ ಉತ್ತೇಜನ ಖಾದಿ ಕೇವಲ ಬಟ್ಟೆ ಮಾತ್ರವಲ್ಲ. ಅದೊಂದು ಗ್ರಾಮೀಣ ಭಾರತದ ಆರ್ಥಿಕ ಸ್ವಾವಲಂಬನೆಗೆ ಪೂರಕವಾದ ಗುಡಿ ಕೈಗಾರಿಕೆಯ ಉತ್ಪನ್ನ. ಸ್ವಾತಂತ್ರ್ಯ ಪೂರ್ವದಲ್ಲಿ ಮಹಾತ್ಮ ಗಾಂಧಿ ಅವರು ಅದಕ್ಕೆ ಸ್ವದೇಶಿ ಚಳವಳಿಯ ರೂಪುಕೊಟ್ಟರು. ಅಂತಹ ಒಂದು ಉತ್ಪನ್ನಕ್ಕೆ ಇದುವರೆಗೆ ಉತ್ತೇಜನ ನೀಡುತ್ತಾ ಬಂದಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದಲೇ ಈಗ ಸಂಕಷ್ಟ ಎದುರಾಗಿದೆ. ಖಾದಿ ಬಟ್ಟೆಗಳ ಮಾರಾಟದ ಮೇಲೆ ನೀಡುತ್ತಿದ್ದ ಶೇ 20ರಷ್ಟು ರಿಯಾಯಿತಿಯನ್ನು ರಾಜ್ಯ ಸರ್ಕಾರ ಹಿಂತೆಗೆದುಕೊಂಡಿರುವುದರಿಂದ ಖಾದಿ ಮಳಿಗೆಗಳಲ್ಲಿ ಮಾರಾಟದ ಪ್ರಮಾಣ ದಿನೇ ದಿನೇ ಕುಸಿಯುತ್ತಿರುವುದು ಗ್ರಾಮೀಣ ಭಾಗದ ಆರ್ಥಿಕ ಚಟುವಟಿಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಖಾದಿ ಬಟ್ಟೆಯನ್ನು ತಯಾರಿಸುವ ಖಾದಿ ಗ್ರಾಮೋದ್ಯೋಗ ಮಂಡಳಿಗಳಿಗೆ ಇದರ ನೇರ ಪರಿಣಾಮ ತಟ್ಟಿದೆ. ಸರ್ಕಾರದ ಈ ನೀತಿಯಿಂದಾಗಿ ಸ್ವಾತಂತ್ರ್ಯೋತ್ಸವ ಮತ್ತು ಗಾಂಧೀ ಜಯಂತಿಯ ತಿಂಗಳುಗಳಲ್ಲಿ ಹೆಚ್ಚಿರುತ್ತಿದ್ದ ಬೇಡಿಕೆ ಈ ವರ್ಷ ಇಲ್ಲವಾಗಬಹುದು. ಗ್ರಾಮೀಣ ಪ್ರದೇಶದ ಜನರಿಗೆ ಅಲ್ಪಸ್ವಲ್ಪ ಉದ್ಯೋಗಾವಕಾಶಗಳನ್ನು ಕಲ್ಪಿಸುತ್ತಿದ್ದ ಈ ಉದ್ಯಮವೂ ಸರ್ಕಾರದ ಉತ್ತೇಜನವಿಲ್ಲದೆ ಅವಸಾನದತ್ತ ತಲುಪುವುದಕ್ಕೆ ಈಗ ಹಾದಿ ಮಾಡಿಕೊಟ್ಟಂತಾಗಿದೆ. ವಾಸ್ತವವಾಗಿ ಕೈಯಿಂದ ನೂಲು ತೆಗೆದು ಕೈಯಿಂದಲೇ ನೇಯುವ ಖಾದಿ ಗಾಂಧೀಜಿ ಪ್ರಚುರಪಡಿಸಿದ ಸ್ವದೇಶಿ ಉತ್ಪನ್ನ. ಜನ ಸಮುದಾಯ ತೊಡಗಿಕೊಳ್ಳುವ ಉತ್ಪಾದನೆ. ಆದರೆ ಗಿರಣಿಯ ನೂಲನ್ನು ತಂದು ವಿದ್ಯುತ್‌ಮಗ್ಗಗಳಿಂದ ನೇಯುವ ಒರಟು ಬಟ್ಟೆಯನ್ನು ಖಾದಿ ಎಂದು ಬಿಂಬಿಸಿ ಲಾಭ ಮಾಡಿಕೊಳ್ಳುವ ಪ್ರವೃತ್ತಿಯೇ ನೈಜ ಖಾದಿಗೆ ಮುಳುವಾಗಿದೆ. ಸರ್ಕಾರದ ರಿಯಾಯಿತಿಯ ದುರುಪಯೋಗಕ್ಕೂ ಇದು ಕಾರಣವಾಗಿದೆ. ಖಾದಿ ಬಟ್ಟೆಯನ್ನು ಜನಪ್ರಿಯಗೊಳಿಸಲು ಅದರ ಗುಣಮಟ್ಟವನ್ನು ಹೆಚ್ಚಿಸುವ, ಸಿದ್ಧ ಉಡುಪುಗಳ ಆಕರ್ಷಕ ತಯಾರಿಕೆಯ ಪ್ರಯತ್ನವನ್ನೂ ಹಲವು ವರ್ಷಗಳಿಂದ ಮಾಡಲಾಗುತ್ತಿದೆ. ರಾಜ್ಯದಲ್ಲಿ ಕೆಲವೇ ಕೆಲವು ಪ್ರದೇಶಗಳಲ್ಲಿ ಆಗುತ್ತಿದ್ದ ಖಾದಿ ಬಟ್ಟೆ ತಯಾರಿಕೆ ಘಟಕಗಳು ಮತ್ತು ಖಾದಿ ಸೊಸೈಟಿ ಮೂಲಕ ನಡೆಯುತ್ತಿದ್ದ ವ್ಯಾಪಾರ ಮಳಿಗೆಗಳಲ್ಲಿ ಅನೇಕವು ಈಗಾಗಲೇ ಮುಚ್ಚಿವೆ. ಬೇರೆ ರಾಜ್ಯಗಳಿಂದ ಬರುವ ಖಾದಿ ಬಟ್ಟೆಗಳಿಗೆ ರಿಯಾಯಿತಿಯನ್ನು ನೀಡದಿರುವುದರಿಂದ ಮೈಸೂರು ಮುಂತಾದ ಕಡೆಗಳಲ್ಲಿ ಲಾಭವಿಲ್ಲದ ವ್ಯಾಪಾರಕ್ಕೆ ಖಾದಿ ಸೊಸೈಟಿಗಳು ಇತಿಶ್ರೀ ಹಾಡಿವೆ. ತಮ್ಮ ಮಳಿಗೆಗಳನ್ನು ಬೇರೆ ಉತ್ಪನ್ನಗಳ ಮಾರಾಟಗಾರರಿಗೆ ಬಾಡಿಗೆಗೆ ನೀಡಿವೆ. ಖಾದಿ ಉದ್ಯಮದ ಈ ಸ್ಥಿತಿಯು ಸರ್ಕಾರಕ್ಕೆ ತಿಳಿಯದ ಸಂಗತಿಯೇನಲ್ಲ. ಖಾದಿ ಗ್ರಾಮೋದ್ಯೋಗ ಮಂಡಳಿ ಕೂಡ ಖಾದಿ ಉದ್ಯಮದ ಪರಿಸ್ಥಿತಿಯನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟು ಅದರಿಂದ ಉತ್ತೇಜಕ ಕ್ರಮಗಳನ್ನು ಪಡೆದುಕೊಳ್ಳಲು ಹಿಂದೆ ಬೀಳಬಾರದು. ಖಾದಿ ಉದ್ಯಮದಲ್ಲಿ ತೊಡಗಿರುವವರು ಗಾಂಧೀಜಿಯ ಆದರ್ಶಕ್ಕೆ ಬದ್ಧರಾದವರು ಮತ್ತು ಬಡವರು ಎನ್ನುವ ಸತ್ಯಸಂಗತಿಯನ್ನು ಮರೆಯಬಾರದು. ಖಾದಿಯ ಹಿಂದೆ ಒಂದು ರಾಷ್ಟ್ರೀಯ ಸಂದೇಶವಿರುವುದರಿಂದ ಈ ಉದ್ಯಮಕ್ಕೆ ಸರ್ಕಾರದ ಆಸರೆ ಮುಂದುವರಿಸುವುದು ಅವಶ್ಯ ಎನ್ನುವುದನ್ನು ಆಡಳಿತ ನಡೆಸುವವರು ಮನಗಾಣಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.