ರೇಷ್ಮೆ ಬೆಳೆಗಾರರ ಗೋಳು ರೇಷ್ಮೆ ಆಮದು ಸುಂಕ ಇಳಿಸಿರುವ ಕೇಂದ್ರದ ಕ್ರಮದಿಂದಾಗಿ ರಾಜ್ಯದ ರೇಷ್ಮೆ ಬೆಳೆಗಾರರ ಬದುಕಲ್ಲಿ ಬಿರುಗಾಳಿ ಎದ್ದಿದೆ. ಶೇ 31ರಷ್ಟಿದ್ದ ರೇಷ್ಮೆ ಆಮದು ಸುಂಕವನ್ನು ಈ ವರ್ಷ ಕೇಂದ್ರ ಬಜೆಟ್‌ನಲ್ಲಿ ಶೇ 5ಕ್ಕೆ ಇಳಿಸಲಾಯಿತು. ಇಷ್ಟೊಂದು ಭಾರಿ ಪ್ರಮಾಣದ ಇಳಿಕೆಯ ಪರಿಣಾಮ ಪ್ರತಿ ಕೆ.ಜಿ.ಗೆ ರೂ 350ರಿಂದ ರೂ 400ವರೆಗೆ ಮಾರಾಟವಾಗುತ್ತಿದ್ದ ರೇಷ್ಮೆಗೂಡಿನ ಬೆಲೆ ಈಗ ರೂ 150ರಿಂದ ರೂ 160ರವರೆಗೆ ಕುಸಿದಿದೆ. ಈ ಪ್ರಮಾಣದ ಇಳಿಕೆಯಿಂದಾಗುವ ನಷ್ಟ ಭರಿಸಲಾಗದೆ, ಕಳೆದ ಮಾರ್ಚ್‌ನಲ್ಲಿ ಮಂಡ್ಯ ಜಿಲ್ಲೆಯಲ್ಲಿ ರೇಷ್ಮೆ ಕೃಷಿಕ ದಂಪತಿ ಆತ್ಮಹತ್ಯೆ ಮಾಡಿಕೊಂಡಂತಹ ಪ್ರಕರಣವೂ ನಡೆಯಿತು. ಕರ್ನಾಟಕದಲ್ಲಿ ಘಟಿಸಿದ ರೇಷ್ಮೆ ಕೃಷಿಕರ ಮೊದಲ ಆತ್ಮಹತ್ಯೆ ಪ್ರಕರಣ ಎಂದೂ ಇದು ದಾಖಲಾಯಿತು. ಶೇ 60ಕ್ಕೂ ಹೆಚ್ಚು ರೇಷ್ಮೆ ಉತ್ಪಾದಿಸುವ ಕರ್ನಾಟಕದ ಸುಮಾರು 1,50,000 ರೇಷ್ಮೆ ಕೃಷಿಕರ ಬದುಕು ಈ ಜಾಗತೀಕರಣದ ಯುಗದಲ್ಲಿ ಅಭದ್ರತೆಯಲ್ಲಿ ಸಿಲುಕಿಕೊಂಡಿದ್ದು, `ಅಗ್ಗದ ಆಮದು~ ಎಂಬ ಬೆದರಿಕೆಯ ತೂಗುಗತ್ತಿ ಅವರ ಬದುಕನ್ನೇ ಅಳಿಸಿಹಾಕುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ರಾಷ್ಟ್ರದಲ್ಲಿ ಪ್ರತಿ ವರ್ಷ 9,000 ಟನ್ ರೇಷ್ಮೆ ಕೊರತೆ ಬೀಳುತ್ತಿದೆ ಎಂಬುದು ಒಂದು ಅಂದಾಜು. ಈ ಬೇಡಿಕೆ ಪೂರೈಸಲು ಅಪಾರ ಪ್ರಮಾಣದ ಚೀನಾ ರೇಷ್ಮೆಯನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಆದರೆ, ಆಮದಿನ ಬದಲು ರಾಷ್ಟ್ರದಲ್ಲೇ ರೇಷ್ಮೆ ಕೃಷಿ ವಿಸ್ತರಿಸಬಹುದಿತ್ತಲ್ಲವೆ ಎಂಬ ವಾದವನ್ನು ತಜ್ಞರು ಮಂಡಿಸುತ್ತಾರೆ. ಕುತೂಹಲದ ಸಂಗತಿ ಎಂದರೆ, ಇಲ್ಲಿ ಆಮದು ಸುಂಕ ಕಡಿತ ಪ್ರಕಟವಾದ ನಂತರ ಚೀನಾದಲ್ಲಿ ಕಚ್ಚಾ ರೇಷ್ಮೆ ಬೆಲೆಗಳು ದೃಢವಾಗಿವೆ. ಜೊತೆಗೆ, ಭಾರತೀಯ ಮಾರುಕಟ್ಟೆಯನ್ನು ಆಕ್ರಮಿಸಿಕೊಳ್ಳಲು ಚೀನಾಗೆ ಈ ಕ್ರಮ ನೆರವು ನೀಡುತ್ತದೆ ಎಂಬುದು ಬೆಳೆಗಾರರ ಭೀತಿ. ರೇಷ್ಮೆ ಕೃಷಿ, ಶ್ರಮ ಆಧಾರಿತ. ಅದನ್ನು ಹೆಚ್ಚು ಯಾಂತ್ರೀಕರಣಗೊಳಿಸುವುದೂ ಸಾಧ್ಯವಿಲ್ಲ. ಹಿಪ್ಪುನೇರಳೆ ಕೃಷಿಗೆ ಆರಂಭದಲ್ಲಿ ಅಪಾರ ಹಣ ಬೇಕು. ಬೆಲೆಯೇ ಸಿಕ್ಕದು ಎಂದಾದಾಗ ಕೃಷಿಯನ್ನು ಬಿಟ್ಟು ಬಿಡಬೇಕಾಗುತ್ತದೆ. ಆದರೆ, ಪ್ರತಿ ಹಂತದಲ್ಲೂ ರೇಷ್ಮೆ ಉತ್ಪಾದನೆಯ ಕೌಶಲ ಇರುವ ರಾಷ್ಟ್ರ ನಮ್ಮದು ಎಂಬುದನ್ನು ನಾವು ನೆನಪಿಡಬೇಕು. ನಮ್ಮ ರೈತರ ಹಿತಾಸಕ್ತಿಗಳಿಗೆ ಮಾರಕವಾಗುವ ರೀತಿಯಲ್ಲಿ ಅಗ್ಗದ ಚೀನಾ ರೇಷ್ಮೆ ಮಾರುಕಟ್ಟೆಯಲ್ಲಿ ಸಾಮ್ರಾಜ್ಯ ಸ್ಥಾಪಿಸುವುದನ್ನು ತಡೆಯಲು ಹಲವಾರು ಬೆಂಬಲ ಕ್ರಮಗಳನ್ನು ರೂಪಿಸುವುದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕರ್ತವ್ಯ. ಕೆಲವು ರೇಷ್ಮೆ ರಫ್ತುದಾರರನ್ನು ಖುಷಿ ಪಡಿಸಲು ತೆಗೆದುಕೊಂಡಿರುವಂತಹ ಆಮದು ಸುಂಕ ಇಳಿಸುವ ತನ್ನ ನಿರ್ಧಾರವನ್ನು ಮರು ಪರಿಶೀಲಿಸುವಂತೆ ಕೇಂದ್ರದ ಮೇಲೆ ಒತ್ತಡ ಹೇರಲು ಇದು ಸಕಾಲ. ಇಂತಹ ಸನ್ನಿವೇಶದಲ್ಲಿ ರೇಷ್ಮೆ ಬೆಳೆಗಾರರ ಹಕ್ಕುಗಳಿಗಾಗಿ ಹೋರಾಡಲು ಎಲ್ಲಾ ರಾಜಕೀಯ ಪಕ್ಷಗಳೂ ಒಂದಾಗಬೇಕಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.