ಬಡ್ಡಿ ಹೆಚ್ಚಳ; ಸೀಮಿತ ಪ್ರಯೋಜನ ನಿಯಂತ್ರಣಕ್ಕೆ ಸಿಗದೆ ಏರುಗತಿಯಲ್ಲಿಯೇ ಇರುವ ಅವಶ್ಯಕ ಸರಕುಗಳ ವಾರ್ಷಿಕ ಬೆಲೆ ಏರಿಕೆ ದರಕ್ಕೆ (ಹಣದುಬ್ಬರಕ್ಕೆ) ಮೂಗುದಾರ ಹಾಕಲು ಭಾರತೀಯ ರಿಸರ್ವ್ ಬ್ಯಾಂಕ್, ಎಲ್ಲರ ನಿರೀಕ್ಷೆಗೆ ವ್ಯತಿರಿಕ್ತವಾಗಿ ತನ್ನ ಅಲ್ಪಾವಧಿ ಬಡ್ಡಿ ದರಗಳನ್ನು ಶೇ 0.50ರಷ್ಟು ಹೆಚ್ಚಿಸಿ ಅಚ್ಚರಿ ಮೂಡಿಸಿದೆ. ಮಾರುಕಟ್ಟೆಯಲ್ಲಿ ಹಣದ ಹರಿವು ತಗ್ಗಿಸಲು ನೀತಿ ನಿರೂಪಣಾ ಬಡ್ಡಿ ದರಗಳಾದ ರೆಪೊ, ಮತ್ತು ರಿಸರ್ವ್ ರೆಪೊ ದರಗಳ ಹೆಚ್ಚಳಕ್ಕೆ ಕೈಗಾರಿಕಾ ವಲಯದ ಆಕ್ಷೇಪಗಳ ಹೊರತಾಗಿಯೂ ಕಠಿಣ ನಿರ್ಧಾರ ತೆಗೆದುಕೊಂಡಿರುವುದು ಕೇಂದ್ರೀಯ ಬ್ಯಾಂಕ್‌ನ ಆಕ್ರಮಣಕಾರಿ ಧೋರಣೆಗೆ ಸಾಕ್ಷಿಯಾಗಿದೆ. ಇದರಿಂದ, ವಾಣಿಜ್ಯ ಬ್ಯಾಂಕ್‌ಗಳು ತಮ್ಮ ವಿವಿಧ ಬಗೆಯ ಸಾಲಗಳ ಮೇಲಿನ ಬಡ್ಡಿ ದರಗಳನ್ನು ಶೇ 0.50ರಷ್ಟು ಹೆಚ್ಚಿಸಲು ನಿರ್ಧರಿಸಿ ತಕ್ಷಣಕ್ಕೆ ಜಾರಿಗೆ ತರಲು ಮುಂದಾಗಿರುವುದು ಜನಸಾಮಾನ್ಯರು ಸೇರಿದಂತೆ ಎಲ್ಲರಿಗೂ ಇನ್ನಷ್ಟು ಬಿಸಿ ಮುಟ್ಟಿಸಲಿದೆ. ಗೃಹ, ವಾಹನ, ಮತ್ತು ಕೈಗಾರಿಕಾ ಉದ್ದೇಶದ ಸಾಲಗಳಿಗೆ ಹೆಚ್ಚು ಬಡ್ಡಿ ಪಾವತಿಸಬೇಕಾಗುತ್ತದೆ. ಗೃಹ, ವಾಹನ ಸಾಲಗಳ ಸಮಾನ ಮಾಸಿಕ ಕಂತುಗಳ (ಇಎಂಐ) ಹೊರೆಯೂ ಹೆಚ್ಚಲಿದೆ. ಬ್ಯಾಂಕ್ ಸಾಲಗಳು ದುಬಾರಿಯಾಗುವುದು ತಕ್ಷಣಕ್ಕೆ ಜಾರಿಗೆ ಬಂದರೆ, ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರ ಹೆಚ್ಚಳವು ದೀರ್ಘಾವಧಿವರೆಗೆ ಠೇವಣಿ ಇಡುವ ಸೀಮಿತ ಪ್ರಮಾಣದ ಗ್ರಾಹಕರಿಗೆ ಮಾತ್ರ ಪ್ರಯೋಜನಕ್ಕೆ ಬರಲಿದೆ. ವಾರ್ಷಿಕ ಉದರಿ ನೀತಿಯ ಮೊದಲ ತ್ರೈಮಾಸಿಕ ಪರಾಮರ್ಶೆಯಲ್ಲಿ, ಆರ್ಥಿಕ ವೃದ್ಧಿ ದರ ಶೇ 8ರಷ್ಟೇ ಇರುವ ಅಂದಾಜು ಮಾತ್ರ ಆಶಾದಾಯಕ. ಹಣದ ಹರಿವಿಗೆ ಕಡಿವಾಣ ಹಾಕುವ ತನ್ನ ಕಠಿಣ ಕ್ರಮಗಳಿಂದ ಆರ್ಥಿಕ ಬೆಳವಣಿಗೆಗೆ ಯಾವುದೇ ಅಡಚಣೆ ಉಂಟಾಗಲಾರದು ಎಂಬುದು `ಆರ್‌ಬಿಐ~ನ ದೃಢ ನಿರೀಕ್ಷೆಯಾಗಿರುವಂತಿದೆ. ಆರ್ಥಿಕ ವೃದ್ಧಿ ದರವು ಸತತವಾಗಿ ಶೇ 8ಕ್ಕಿಂತ ಕಡಿಮೆ ಮಟ್ಟಕ್ಕೆ ಇಳಿದರೆ ಮಾತ್ರ ಬಿಗಿಯಾದ ಹಣಕಾಸು ನೀತಿ ಧೋರಣೆ ಕೈಬಿಡುವುದಾಗಿ ಆರ್‌ಬಿಐ ಗವರ್ನರ್ ಡಿ. ಸುಬ್ಬರಾವ್ ಹೇಳಿರುವುದು ಕೇಂದ್ರೀಯ ಬ್ಯಾಂಕ್‌ನ ತಕ್ಷಣದ ಆದ್ಯತೆ ಏನು ಎಂಬುದೂ ವೇದ್ಯವಾಗುತ್ತದೆ. ಅಲ್ಪಾವಧಿಯಲ್ಲಿ ಹಣದುಬ್ಬರ ತಗ್ಗಿಸಲು ಆರ್ಥಿಕ ವೃದ್ಧಿ ದರ ಕುಂಠಿತಗೊಳ್ಳುವುದು ಅನಿವಾರ್ಯ. ಹಣದುಬ್ಬರ ನಿಗ್ರಹಿಸಲು ವಿತ್ತೀಯ ಕೊರತೆ ಕಡಿಮೆ ಮಾಡುವ, ನೇರ ಹೂಡಿಕೆ ಹೆಚ್ಚಿಸುವ ಮತ್ತು ಸರಕುಗಳ ಪೂರೈಕೆ ಅಡೆತಡೆಗಳನ್ನು ನಿವಾರಿಸಲು ಕೇಂದ್ರ ಸರ್ಕಾರ ಮುಂದಾಗಬೇಕು ಎನ್ನುವ ಆಶಯವನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಬೆಲೆ ಸ್ಥಿರತೆ ಜೊತೆಗೆ ಸುಸ್ಥಿರ ಆರ್ಥಿಕ ಅಭಿವೃದ್ಧಿ ಸಾಧಿಸಲು ತೆರಿಗೆ ಮತ್ತು ಹಣಕಾಸು ನೀತಿಗಳು ಜತೆಜತೆಯಾಗಿ ಸಾಗಬೇಕಾಗುತ್ತದೆ. ಈ ನಿಟ್ಟಿನಲ್ಲಿ `ಆರ್‌ಬಿಐ~ ಆಕ್ರಮಣಕಾರಿ ಧೋರಣೆ ಮುಂದುವರೆಸಿಕೊಂಡು ತನ್ನ ಕರ್ತವ್ಯವನ್ನು ಸಮರ್ಪಕವಾಗಿ ನಿಭಾಯಿಸುತ್ತಿದ್ದು, ಅದಕ್ಕೆ ಕೇಂದ್ರ ಸರ್ಕಾರ ಸ್ಪಂದಿಸಬೇಕಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.