ಗಿಡಮೂಲಿಕೆ ಕಳ್ಳಸಾಗಣೆ ಬೆಳಗಾವಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಅರಣ್ಯಗಳಿಂದ ಬಹು ಅಮೂಲ್ಯವಾದ ಔಷಧಿ ಸಸ್ಯಗಳ ಕಳ್ಳಸಾಗಣೆ ನಡೆಯುತ್ತಿದೆ ಎಂಬ ಮಾಹಿತಿಯೇ ಆತಂಕಕಾರಿ. ಕೆಲ ವರ್ಷಗಳಿಂದ ಅಬಾಧಿತವಾಗಿ ನಡೆಯುತ್ತಿರುವ ಈ ಕಳ್ಳ ಸಾಗಾಣಿಕೆಯನ್ನು ತಡೆಯುವ ಪ್ರಯತ್ನವನ್ನೇ ಮಾಡದೆ ಅರಣ್ಯ ಇಲಾಖೆ ಅಸಹಾಯಕತೆಯನ್ನು ಪ್ರದರ್ಶಿಸಿದೆ. ಕಳ್ಳ ಸಾಗಾಣಿಕೆ ತಡೆಯಲು ಬೇಕಾದ ಸಿಬ್ಬಂದಿ ಇಲ್ಲ. ಇರುವ ಸಿಬ್ಬಂದಿಗೆ ಚುರುಕಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಇಲ್ಲ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳೇ ಒಪ್ಪಿಕೊಂಡು ಕೈಚೆಲ್ಲಿ ಕುಳಿತಿದ್ದಾರೆ. ಇದು ಅಸಹಾಯಕತೆಯೋ ಅಥವಾ ಅರಣ್ಯ ಗಿಡಮೂಲಿಕೆಗಳ ಲೂಟಿಗೆ ನೀಡುತ್ತಿರುವ ಪರೋಕ್ಷ ಉತ್ತೇಜನವೋ ತಿಳಿಯದು. ಔಷಧ ಸಸ್ಯಗಳ ಲೂಟಿ ತಡೆಯಲು ವಿಫಲವಾಗಿರುವ ಅರಣ್ಯ ಇಲಾಖೆ ಶ್ರೀಗಂಧ, ತೇಗ, ಬೀಟೆ ಮತ್ತಿತರ ಬೆಲೆಬಾಳುವ ಮರಗಳು ಹಾಗೂ ಅರಣ್ಯ ಕಿರು ಉತ್ಪನ್ನಗಳು, ವನ್ಯಜೀವಿಗಳನ್ನು ರಕ್ಷಿಸುವ ಕೆಲಸವನ್ನು ಎಷ್ಟರಮಟ್ಟಿಗೆ ಮಾಡುತ್ತಿರಬಹುದು? ಖಾನಾಪುರ ಮತ್ತು ಜೋಯಿಡಾ ತಾಲ್ಲೂಕುಗಳ ಅರಣ್ಯಗಳಲ್ಲಿ ಸಿಗುವ, ಕ್ಯಾನ್ಸರ್ ಹಾಗೂ ಕರುಳು ಸಂಬಂಧಿ ರೋಗಗಳ ಔಷಧಿ ತಯಾರಿಕೆಯಲ್ಲಿ ಬಳಸುವ ಸಪ್ತರಂಗಿ ಹಾಗೂ ಗುವಾಡ ಸಸ್ಯಗಳನ್ನು ದೊಡ್ಡ ಪ್ರಮಾಣದಲ್ಲಿ ಕಳ್ಳ ಸಾಗಣೆಮಾಡಲಾಗುತ್ತಿದೆ ಎಂಬ ವಿಷಯವನ್ನು ಲಘುವಾಗಿ ಪರಿಗಣಿಸಲಾಗದು. ಅರಣ್ಯ ಪ್ರದೇಶದ ಅಕ್ಕಪಕ್ಕದ ಹಳ್ಳಿಗಳ ಜನರಿಗೆ ಸ್ವಲ್ಪ ಹಣ ಕೊಟ್ಟು ಅಮೂಲ್ಯವಾದ ಔಷಧ ಸಸ್ಯಗಳನ್ನು ಸಾಗಿಸುತ್ತಿರುವ ವ್ಯಕ್ತಿಗಳು ಯಾರು? ಅವರು ಯಾರಿಗಾಗಿ ಈ ಕೆಲಸ ಮಾಡುತ್ತಿದ್ದಾರೆ? ಈ ಔಷಧ ಸಸ್ಯಗಳು ಎಲ್ಲಿಗೆ ಹೋಗುತ್ತಿವೆ? ಈ ಎಲ್ಲ ಪ್ರಶ್ನೆಗಳಿಗೆ ಅರಣ್ಯ ಇಲಾಖೆ ಉತ್ತರಿಸಬೇಕು. ನಮ್ಮ ಅರಣ್ಯಗಳಲ್ಲಿರುವ ಔಷಧ ಸಸ್ಯಗಳು ಇಡೀ ರಾಜ್ಯದ ಸಂಪತ್ತು. ಅದನ್ನು ಬೇರೆ ಯಾರೋ ಕಬಳಿಸುವುದಕ್ಕೆ ಅವಕಾಶ ಮಾಡಿಕೊಡುವುದು ಅಕ್ಷಮ್ಯ ಅಪರಾಧ. ಪಶ್ಚಿಮ ಘಟ್ಟದ ಹತ್ತು ಮೀಸಲು ಅರಣ್ಯ ಪ್ರದೇಶಗಳನ್ನು ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಸೇರಿಸುವ ಕೇಂದ್ರ ಸರ್ಕಾರದ ಪಸ್ತಾವಕ್ಕೆ ರಾಜ್ಯ ಸರ್ಕಾರ ವಿರೋಧ ವ್ಯಕ್ತಪಡಿಸಿದೆ. ಈ ಅರಣ್ಯಗಳನ್ನು ಕಾಪಾಡುವ ಸಾಮರ್ಥ್ಯ ರಾಜ್ಯ ಸರ್ಕಾರಕ್ಕೆ ಇದೆ ಎಂದು ಅರಣ್ಯ ಸಚಿವರು ಹೇಳುತ್ತಾರೆ. ಆದರೆ ಈಗ ನಡೆಯುತ್ತಿರುವುದೇನು? ಇದು ಸಂರಕ್ಷಣೆ ಮಾಡುವ ಕ್ರಮವೇ? ಪಶ್ಚಿಮ ಘಟ್ಟದ ಅರಣ್ಯಗಳು ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಸೇರ್ಪಡೆಯಾದರೆ ಆ ನೆಪದಲ್ಲಾದರೂ ಇನ್ನಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡು ಅರಣ್ಯ ಸಂರಕ್ಷಣೆ ಮಾಡಬಹುದಲ್ಲವೇ? ಔಷಧ ಕಂಪೆನಿಗಳು ಮತ್ತು ಟಿಂಬರ್ ಲಾಬಿಯ ಒತ್ತಾಯಕ್ಕೆ ಮಣಿದು ಕೇಂದ್ರದ ಪ್ರಸ್ತಾವ ವಿರೋಧಿಸುವ ಬದಲು ರಾಜ್ಯದ ಅರಣ್ಯಗಳ ವಾಸ್ತವ ಸ್ಥಿತಿಯನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಔಷಧ ಸಸ್ಯಗಳ ಕಳ್ಳ ಸಾಗಾಣಿಕೆ ತಡೆಯಲು ಸಿಬ್ಬಂದಿ ಇಲ್ಲ ಎಂಬುದನ್ನು ಒಪ್ಪಲಾಗದು. ಬೇರೆ ಇಲಾಖೆಗಳಿಂದ ಸಿಬ್ಬಂದಿಯನ್ನು ತಾತ್ಕಾಲಿಕವಾಗಿ ಎರವಲು ಪಡೆದಾದರೂ ಔಷಧ ಸಸ್ಯಗಳ ಕಳ್ಳ ಸಾಗಾಣಿಕೆ ತಡೆಯಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.