ಮಾತುಕತೆ ಅನಿವಾರ್ಯ ಕಳೆದ ಶುಕ್ರವಾರ ಮುಕ್ತಾಯಗೊಂಡ ಭಾರತ- ಪಾಕಿಸ್ತಾನ ವಿದೇಶಾಂಗ ಕಾರ‌್ಯದರ್ಶಿಗಳ ಸಭೆಯಲ್ಲಿ ದ್ವಿಪಕ್ಷೀಯ ಬಾಂಧವ್ಯ ಸುಧಾರಣೆ ಕುರಿತಂತೆ ಹೆಚ್ಚಿನ ಪ್ರಗತಿ ಆಗಿಲ್ಲವೆಂಬುದು ನಿಜ. ಆದರೆ, ಸಭೆಯಲ್ಲಿ ಸಂಧಾನ ಮುಂದುವರಿಸುವ ಭರವಸೆ ಮೂಡಿದೆ. ಮುಂಬೈ ದಾಳಿಯ ನಂತರ ಪರಸ್ಪರ ಅವಿಶ್ವಾಸದ ವಾತಾವರಣದಲ್ಲಿ ಅನೇಕ ಸಲ ಸಭೆಗಳು ನಡೆದರೂ ಯಾವುದೇ ತೀರ್ಮಾನ ಆಗದಿರುವಾಗ ಇಷ್ಟರಮಟ್ಟಿಗೆ ಚರ್ಚೆ ನಡೆದಿರುವುದು ಉಭಯ ದೇಶಗಳ ಮಧ್ಯೆ ಬಾಂಧವ್ಯ ಸುಧಾರಿಸುವ ನಿಟ್ಟಿನಲ್ಲಿ ಬೆಳವಣಿಗೆಯೆಂದೇ ಹೇಳಬೇಕು. ಒಸಾಮ ಬಿನ್ ಲಾಡೆನ್ ಅಡಗುತಾಣದ ಮೇಲೆ ಅಮೆರಿಕ ನೇರ ಕಾರ್ಯಾಚರಣೆ ನಡೆಸಿ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಪಾಕಿಸ್ತಾನದ ಬದ್ಧತೆ ಎಷ್ಟೆಂಬುದನ್ನು ಜಗತ್ತಿಗೆ ತೋರಿಸಿಕೊಟ್ಟ ಮೇಲೆ, ಜಾಗತಿಕವಾಗಿ ಮುಖಭಂಗಕ್ಕೆ ಒಳಗಾಗಿದ್ದ ಪಾಕಿಸ್ತಾನಕ್ಕೆ ಭಾರತದ ಜೊತೆ ನಡೆಸಿದ ಮಹತ್ವದ ಸಭೆ ಇದಾಗಿತ್ತು. ಮುಂಬೈ ದಾಳಿಯ ನಂತರ, ಸಂಧಾನ ಮಾತುಕತೆಯನ್ನು ಭಾರತ ರದ್ದುಪಡಿಸಿತ್ತು. ಕೆಲವು ಕಾಲದ ನಂತರ ಭಾರತದ ಆಸಕ್ತಿಯಿಂದ ನಡೆದ ವಿದೇಶಾಂಗ ಸಚಿವರ ಸಭೆಗಳಲ್ಲಿ ಪಾಕಿಸ್ತಾನ ಉದ್ಧಟತನದಿಂದ ವರ್ತಿಸಿ ಸಂಧಾನ ಯತ್ನಗಳನ್ನು ವಿಫಲಗೊಳಿಸಿತ್ತು. ಆದರೆ ಈ ಸಲ ಅಂಥ ದುಸ್ಸಾಹಸ ಪ್ರದರ್ಶಿಸಿಲ್ಲ. ಮುಂಬೈ ದಾಳಿಯ ಸಂಚುಕೋರರನ್ನು ಹಿಡಿದು ಕಾನೂನು ಪ್ರಕಾರ ಶಿಕ್ಷೆ ನೀಡುವುದಕ್ಕೆ ಸಹಕಾರ ನೀಡದಿದ್ದರೂ ಪಾಕಿಸ್ತಾನದ ಜೊತೆಗೆ ಸಂಧಾನದ ಮಾರ್ಗದ ವಿನಾ ಭಾರತಕ್ಕೆ ಬೇರೆ ಪರ್ಯಾಯವಿಲ್ಲ. ಭಯೋತ್ಪಾದನೆ ವಿರುದ್ಧ ಹೋರಾಟದ ನೆಪದಲ್ಲಿ ಅಮೆರಿಕದಿಂದ ಪಡೆದ ಯಾವತ್ತೂ ಶಸ್ತ್ರಾಸ್ತ್ರ ನೆರವನ್ನು ಭಾರತದ ವಿರುದ್ಧ ಬಳಸುವ ಕುತಂತ್ರ ನಡೆಸಿದ್ದ ಪಾಕಿಸ್ತಾನ ಈಚಿನ ದಿನಗಳಲ್ಲಿ ತಾನೇ ಬೆಳೆಸಿದ ಭಯೋತ್ಪಾದಕ ಶಕ್ತಿಗಳಿಂದ ಪೆಟ್ಟು ತಿನ್ನುತ್ತಿದೆ. ಜೊತೆಗೆ ಆಂತರಿಕ ಸಮಸ್ಯೆಗಳನ್ನೂ ಎದುರಿಸುತ್ತಿದೆ. ಜಮ್ಮು ಮತ್ತು ಕಾಶ್ಮೀರದ ಪ್ರಶ್ನೆಯೂ ಸೇರಿದಂತೆ ಎರಡೂ ದೇಶಗಳು ಎದುರಿಸುತ್ತಿರುವ ಹಲವು ಸಮಸ್ಯೆಗಳ ಪರಿಹಾರಕ್ಕೆ ಸಂಧಾನ ಪ್ರಕ್ರಿಯೆ ಮುಂದುವರಿಯಬೇಕಿದೆ. ಮುಂದಿನ ತಿಂಗಳು ನಡೆಯಲಿರುವ ವಿದೇಶಾಂಗ ಸಚಿವರ ಮಟ್ಟದ ಸಭೆ ನಿಗದಿಯಾಗಿದೆ. ಈ ಸಭೆಗೂ ಮೊದಲು ಕಾರ್ಯದರ್ಶಿಗಳ ಮಟ್ಟದಲ್ಲಿ ಇನ್ನೊಂದು ಸಭೆ ನಡೆಯುವುದು ಬಾಂಧವ್ಯ ಸುಧಾರಣೆಯ ಪ್ರಯತ್ನದಲ್ಲಿ ಮಹತ್ವದ್ದಾಗಿದೆ. ಪರಸ್ಪರ ಅವಿಶ್ವಾಸದ ವಾತಾವರಣ, ಉಪಖಂಡದಲ್ಲಿ ಶಾಂತಿ ಸಾಮರಸ್ಯಕ್ಕೆ ಧಕ್ಕೆ ಒಡ್ಡುತ್ತಿರುವುದನ್ನು ಪಾಕಿಸ್ತಾನ ಇನ್ನಾದರೂ ಅರ್ಥ ಮಾಡಿಕೊಳ್ಳಬೇಕು. ಎರಡೂ ದೇಶಗಳ ಜನತೆ ಶಾಂತಿ ಸಾಮರಸ್ಯವನ್ನು ಬಯಸುತ್ತಾರೆ. ಕಳೆದ ಒಂದು ವರ್ಷದಿಂದ ಸೊಮಾಲಿಯ ಕಡಲುಗಳ್ಳರ ವಶದಲ್ಲಿದ್ದ 22 ಮಂದಿ ನಾವಿಕರನ್ನು ಬಿಡಿಸುವಲ್ಲಿ ಪಾಕಿಸ್ತಾನದ ಮಾನವ ಹಕ್ಕು ಹೋರಾಟಗಾರ ಅನ್ಸಾರ್ ಬರ್ನಿ ನಡೆಸಿದ ಸಂಧಾನ ಯತ್ನ ಇದಕ್ಕೊಂದು ನಿದರ್ಶನ. ಕಡಲುಗಳ್ಳರ ವಶದಲ್ಲಿದ್ದ ಪಾಕಿಸ್ತಾನಿಯರೊಂದಿಗೆ ಆರು ಮಂದಿ ಭಾರತೀಯ ನಾವಿಕರೂ ಬರ್ನಿ ಅವರ ಸಂಧಾನದಿಂದ ಸುರಕ್ಷಿತವಾಗಿ ಸ್ವದೇಶಕ್ಕೆ ಮರಳುವಂತಾಗಿರುವುದು ದ್ವೇಷದ ರಾಜಕಾರಣದ ಮಧ್ಯೆ ಗೋಚರವಾದ ಆಶಾಕಿರಣ. ಜನರ ನಡುವಣ ವ್ಯವಹಾರ ಮಾನವೀಯ ತುಡಿತಗಳಿಂದ ಕೂಡಿರುತ್ತದೆ ಎಂಬುದಕ್ಕೆ ಈ ಪ್ರಕರಣ ನಿದರ್ಶನ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.