ವೇತನ ತಾರತಮ್ಯ ಅಂತ್ಯವಾಗಲಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ದುಡಿಮೆಗೆ ತಕ್ಕ ವೇತನ ನೀಡಿಕೆಯಲ್ಲಿ ಲಿಂಗತಾರತಮ್ಯ ಇನ್ನೂ ಮುಂದುವರಿದಿರುವುದು ವಿಪರ್ಯಾಸ. ದೆಹಲಿಯ ರಾಷ್ಟ್ರೀಯ ಸಾಮಾನ್ಯ ಸಮೀಕ್ಷೆ ಸಂಸ್ಥೆ ಐದು ವರ್ಷಗಳಿಗೊಮ್ಮೆ ನಡೆಸುವ ಸಮೀಕ್ಷೆಯಲ್ಲಿ ಈ ಅಂಶ ಸ್ಪಷ್ಟವಾಗಿ ಕಂಡು ಬಂದಿದೆ. 2009-2010ರ ಅವಧಿಯಲ್ಲಿ ಪುರುಷರು ಮತ್ತು ಮಹಿಳೆಯರಿಗೆ ಗ್ರಾಮೀಣ ಪ್ರದೇಶಗಳಲ್ಲಿ ಸಿಗುತ್ತಿದ್ದ ದಿನಗೂಲಿ ಕ್ರಮವಾಗಿ ರೂ. 249 ಮತ್ತು ರೂ. 156. ಹಾಗೆಯೇ ನಗರಗಳಲ್ಲಿ ಪುರುಷರಿಗೆ ರೂ. 377 ಮತ್ತು ಮಹಿಳೆಯರಿಗೆ ರೂ. 309. ಹೀಗೆ ವಿವಿಧ ಕ್ಷೇತ್ರಗಳಲ್ಲಿ ವೇತನ ನೀಡಿಕೆಯಲ್ಲಿ ಭಾರಿ ವ್ಯತ್ಯಾಸ ಇರುವುದು ದುರದೃಷ್ಟಕರ. ಈ ತಾರತಮ್ಯ ಕೇಂದ್ರ ಸರ್ಕಾರದ ಉದ್ಯೋಗ ಖಾತರಿ (ಎಂಎನ್‌ಆರ್‌ಇಜಿ) ಕಾರ್ಯಕ್ರಮದಲ್ಲೂ ಇರುವುದು ವಿಚಿತ್ರ. ಅದರಲ್ಲಿ ಪುರುಷರಿಗೆ ರೂ. 98 ಮತ್ತು ಮಹಿಳೆಯರಿಗೆ ರೂ. 86 ನೀಡಲಾಗುತ್ತಿದೆ.ದೈಹಿಕವಾಗಿ ಮಹಿಳೆ ಪುರುಷರಿಗಿಂತ ದುರ್ಬಲಳು ಎನ್ನುವ ಕಾರಣ ನೀಡಿ ವೇತನದಲ್ಲಿ ತಾರತಮ್ಯ ನೀತಿಯನ್ನು ಈಗಲೂ ಮುಂದುವರಿಸಿಕೊಂಡು ಬರಲಾಗಿದೆ. ಕೆಲವು ಉದ್ಯೋಗಗಳಲ್ಲಿ ಮಹಿಳೆಯರು ಪುರುಷರಿಗಿಂತ ಕಡಿಮೆ ಇಲ್ಲದಂತೆ ಸರಿ ಸಮಾನವಾಗಿ ದುಡಿಯುತ್ತಿದ್ದಾರೆ. ಈ ಅಂಶವನ್ನು ಸರ್ಕಾರ ಮತ್ತು ಖಾಸಗಿ ವಲಯದ ಒಡೆಯರು ಅರ್ಥಮಾಡಿಕೊಳ್ಳಬೇಕು. ವಿಚಿತ್ರ ಎಂದರೆ ನಮ್ಮ ಸಾಮಾಜಿಕ ವ್ಯವಸ್ಥೆಯೇ ಹೀಗೆ. ಹುಟ್ಟಿನಿಂದಲೇ ಶುರುವಾಗುವ ತಾರತಮ್ಯ ಬದುಕಿನ ಎಲ್ಲ ರಂಗವನ್ನೂ ವ್ಯಾಪಿಸಿದೆ. ಲಿಂಗ ತಾರತಮ್ಯವನ್ನು ಹೋಗಲಾಡಿಸಲು ಒಂದಲ್ಲ ಒಂದು ಪ್ರಯತ್ನ, ಹೋರಾಟಗಳು ನಡೆದಿವೆ. ಕೆಲವು ಕ್ಷೇತ್ರಗಳಲ್ಲಿ ತಾರತಮ್ಯ ನೀತಿ ಕ್ರಮೇಣ ಕಡಿಮೆ ಆಗುತ್ತಾ ಬಂದಿರುವುದು ನಿಜ. ಇದಕ್ಕಾಗಿ ಸಂವಿಧಾನಬದ್ಧವಾಗಿ ಕಾನೂನಿನ ಬಲವನ್ನೂ ನೀಡಲಾಗಿದೆ. ಮಹಿಳೆಯರನ್ನು ಸಮಾನವಾಗಿ ಕಾಣುವ ನೀತಿಗಳು ಜಾರಿಯಲ್ಲಿವೆ. ಆದರೂ ಆಚರಣೆಯಲ್ಲಿ ಮಾತ್ರ ಇನ್ನೂ ತಾರತಮ್ಯ ಮುಂದುವರಿದುಕೊಂಡೇ ಬಂದಿದೆ.ಸುಲಭವಾಗಿ ಬದಲಾಗದ ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿಯೇ ಇರುವ ದೋಷವಿದು. ಮಹಿಳೆಯರು ಈಗ ಎಲ್ಲ ಕ್ಷೇತ್ರಗಳಲ್ಲೂ ಸಾಮರ್ಥ್ಯ ಮತ್ತು ಬುದ್ಧಿವಂತಿಕೆಯಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಪುರುಷರಿಗಿಂತ ತಾವೇನೂ ಕಡಿಮೆ ಇಲ್ಲ ಎಂಬುದನ್ನು ಹಲವು ಕ್ಷೇತ್ರಗಳಲ್ಲಿ ಸಾಧಿಸಿ ತೋರಿಸಿದ್ದಾರೆ. ಆದ್ದರಿಂದ ತಾರತಮ್ಯ ನೀತಿಯನ್ನು ಮುಂದುವರಿಸುವುದು ಅಕ್ಷಮ್ಯ. ಈ ದಿಶೆಯಲ್ಲಿ ಕೇಂದ್ರ ಸರ್ಕಾರ ದುಡಿಮೆಗೆ ತಕ್ಕಂತೆ ಲಿಂಗ ಭೇದವಿಲ್ಲದೆ ಸಮಾನ ವೇತನ ನೀತಿಯನ್ನು ಜಾರಿಗೆ ತರಬೇಕು. ಖಾಸಗಿಯವರಿಗೆ ಸರ್ಕಾರದ ನೀತಿ ಮಾರ್ಗದರ್ಶಿಯಾಗಬೇಕು. ಸಮಾನ ವೇತನ ಕಾಯ್ದೆಯನ್ನು ಜಾರಿಗೆ ತರಬೇಕು. ಅದನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು.ಸಮಾನತೆ ಪ್ರಸ್ತುತ ಬದುಕಿನ ಸಾಮಾಜಿಕ ನೀತಿ. ತಾರತಮ್ಯಕ್ಕೆ ಇನ್ನು ಅವಕಾಶವಿಲ್ಲ ಎಂಬ ಬಗೆಗೆ ಜನಜಾಗೃತಿ ಮೂಡಿಸುವ ಪ್ರಯತ್ನ ನಡೆಯಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.