ಮಹಿಳಾ ಸಬಲೀಕರಣದ ಅಣಕ ಗುಲ್ಬರ್ಗ ಜಿಲ್ಲಾಪಂಚಾಯತ್‌ನ ಕೆಲವು ಸದಸ್ಯೆಯರು ಸಾಮಾನ್ಯ ಸಭೆಯಲ್ಲಿ ಸ್ವಂತವಾಗಿ ನಿರ್ಧಾರ ಕೈಗೊಳ್ಳಲು ಅಸಮರ್ಥರಾಗಿರುವುದು ನಾಚಿಕೆಗೇಡು. ಇದು ರಾಜಕೀಯದಲ್ಲಿ ಮಹಿಳಾ ಸಬಲೀಕರಣದ ಅಣಕ. ತಮ್ಮಂದಿಗೆ ಭಾಗವಹಿಸುವುದಕ್ಕೆ ತಮ್ಮ ಪತಿಗೆ ಅವಕಾಶ ನೀಡುವಂತೆ ಸದಸ್ಯೆಯೊಬ್ಬರು ಬೇಡಿಕೆ ಮಂಡಿಸಿದರೆ, ಸದಸ್ಯರಾಗಿ ಕರ್ತವ್ಯ ನಿರ್ವಹಿಸಲು ಅವರು ಅರ್ಹರಲ್ಲವೆಂಬುದನ್ನು ಅದು ಸಾಬೀತು ಮಾಡುತ್ತದೆ. ಸದಸ್ಯೆಯರ ಬದಲಿಗೆ ಅವರ ಪತಿ ಇಲ್ಲವೇ ಕುಟುಂಬದ ಇನ್ಯಾರೋ ಅಧಿಕಾರ ಚಲಾಯಿಸಲು ಆಸ್ಪದ ಕೊಡುವುದು ಪಂಚಾಯತ್ ರಾಜ್ ಕಾಯ್ದೆಯ ಉಲ್ಲಂಘನೆ. ಇಂಥ ಮಹಿಳೆಯರಿಗೆ ಟಿಕೆಟ್ ನೀಡಿ ಅವರನ್ನು ಚುನಾವಣೆಯಲ್ಲಿ ಗೆಲ್ಲಿಸಿದ ರಾಜಕೀಯ ಪಕ್ಷಗಳ ನೈತಿಕ ದಿವಾಳಿತನಕ್ಕೂ ಈ ಪ್ರಹಸನ ನಿದರ್ಶನವಾಗಿದೆ. ಜನಪ್ರತಿನಿಧಿಯಾಗಿ ಕರ್ತವ್ಯ ನಿರ್ವಹಿಸಲು ಯಾವುದೇ ಮಹಿಳೆಗೆ ಸಾಧ್ಯವಿಲ್ಲದಿದ್ದರೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಬೇರೆಯವರಿಗೆ ಅವಕಾಶ ಕಲ್ಪಿಸಬೇಕು. ತಮ್ಮ ಬದಲಿಗೆ ಇನ್ನ್ಯಾರೋ ಅಧಿಕಾರ ಚಲಾಯಿಸುವುದಕ್ಕೆ ಆಸ್ಪದ ಕೊಡುವುದು ಮಹಿಳೆಯ ಸಾಮರ್ಥ್ಯಕ್ಕೆ ತಕ್ಕುದಲ್ಲ. ಗಂಡ, ಮಕ್ಕಳ ಯೋಗಕ್ಷೇಮ ಮತ್ತು ಮನೆಯ ವ್ಯವಹಾರವನ್ನು ಯಶಸ್ವಿಯಾಗಿ ನಿರ್ವಹಿಸುವ ಮಹಿಳೆ ಸಾರ್ವಜನಿಕ ಕ್ಷೇತ್ರದ ಕಾರ್ಯದಲ್ಲಿ ಕೆಲಸ ಮಾಡಲು ಸಮರ್ಥಳಲ್ಲ ಎಂದು ಭಾವಿಸಲಾಗದು. ಸ್ವಂತ ನಿರ್ಧಾರ ತೆಗೆದುಕೊಳ್ಳಲು ಪತಿ ಇಲ್ಲವೇ ಮನೆಯ ಹಿರಿಯರು ಅವಕಾಶ ನೀಡುತ್ತಿಲ್ಲ ಎಂಬುದು ವಾಸ್ತವ ಸಂಗತಿ. ಮಹಿಳೆಯನ್ನು ಮುಂದಿಟ್ಟುಕೊಂಡು ಅಧಿಕಾರ ಚಲಾಯಿಸಹೊರಡುವ ಪುರುಷರ ಧೋರಣೆಗೆ ಅಧಿಕಾರಿಗಳು ಅವಕಾಶ ನೀಡಬಾರದು. ಪುರುಷರಿಗೆ ಸಮಾನವಾಗಿ ಆಡಳಿತದಲ್ಲಿ ಭಾಗವಹಿಸಲು ಮಹಿಳೆಯರಿಗೆ ನೀಡಲಾದ ಅಧಿಕಾರವನ್ನು `ಪರಭಾರೆ~ ಮಾಡುವುದಕ್ಕೆ ಅವಕಾಶವಿಲ್ಲ. ಇಂಥ ಬೆಳವಣಿಗೆ ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ನೀಡುವ ಪಂಚಾಯತ್ ರಾಜ್ ವ್ಯವಸ್ಥೆಗೆ ಮಾಡುವ ಅಪಚಾರ. ಸದಸ್ಯರಲ್ಲದವರು ಜಿಲ್ಲಾಪಂಚಾಯತ್ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವವರನ್ನು ಪೊಲೀಸರಿಗೆ ಒಪ್ಪಿಸುವಂಥ ದಿಟ್ಟ ಕ್ರಮಗಳ ಮೂಲಕ ನಿರ್ಬಂಧಿಸದಿದ್ದರೆ, ಸರ್ಕಾರ ಅಂಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ಬೆಳವಣಿಗೆ ಒಂದು ಜಿಲ್ಲಾಪಂಚಾಯತ್‌ಗೆ ಸೀಮಿತವಾಗಿಲ್ಲ. ರಾಜ್ಯದ ಎಲ್ಲ ಕಡೆಯೂ ಇರುವಂಥದ್ದೆ. ಸದಸ್ಯೆಯರು ಆಯ್ಕೆಯಾದ ಸಂದರ್ಭದಲ್ಲಿ ಅವರ ಕರ್ತವ್ಯ ನಿರ್ವಹಣೆ ಕುರಿತಾಗಿ ತರಬೇತಿ ನೀಡುವ ವ್ಯವಸ್ಥೆ ಇದೆಯಾದರೂ ಅಷ್ಟರಮಟ್ಟಿನ ತರಬೇತಿ ಸಾಕಾಗುತ್ತಿಲ್ಲ ಎಂಬುದು ಗುಲ್ಬರ್ಗ ಜಿಲ್ಲಾಪಂಚಾಯತ್ ವಿದ್ಯಮಾನಗಳಿಂದ ವ್ಯಕ್ತವಾಗಿದೆ. ನಿರ್ಧಾರ ತೆಗೆದುಕೊಳ್ಳಲು ತಮಗೆ ಸಂವಿಧಾನದತ್ತವಾಗಿ ಸಿಕ್ಕಿದ ಅವಕಾಶವನ್ನು ಬಳಸಿಕೊಳ್ಳುವುದಕ್ಕೆ ಸದಸ್ಯೆಯರನ್ನು ಸಜ್ಜುಗೊಳಿಸುವುದು ಅವರನ್ನು ಸಾರ್ವಜನಿಕ ಕ್ಷೇತ್ರಕ್ಕೆ ಎಳೆದುತಂದಿರುವ ರಾಜಕೀಯ ಪಕ್ಷಗಳ ನೈತಿಕ ಹೊಣೆಗಾರಿಕೆ. ಸರ್ಕಾರದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುವ ರೀತಿ, ಅಧಿಕಾರಿಗಳ ಕರ್ತವ್ಯ, ಜನಪ್ರತಿನಿಧಿಯಾಗಿ ತಮ್ಮ ಹಕ್ಕುಬಾಧ್ಯತೆ ಕುರಿತಾಗಿ ಸದಸ್ಯೆಯರಿಗೆ ಅರ್ಥವಾಗುವಂತೆ ತರಬೇತಿ ನೀಡುವ ಅಗತ್ಯವನ್ನು ಸರ್ಕಾರ ಮನಗಾಣಬೇಕು. ಅವರು ಸ್ವತಂತ್ರವಾಗಿ ಕಾರ್ಯನಿರ್ವಹಿಸಲಾಗದಿದ್ದರೆ `ಮಹಿಳಾ ಸಬಲೀಕರಣ~ ಕಾಗದದ ಮೇಲಷ್ಟೆ ಉಳಿಯುವ ಆದರ್ಶವಾಗುತ್ತದೆ. ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಮೀಸಲಾತಿ ಜಾರಿಗೆ ಬಂದಾಗ, ಅಲ್ಲಿಗೂ ಇಂಥವರೇ ಹೋಗುವಂತಾದರೆ ಮಹಿಳಾ ಮೀಸಲಾತಿಯೂ ಅಪ್ರಯೋಜಕವಾಗುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.