ಅತ್ಯಾಚಾರ ಪ್ರಕರಣಗಳ ಸರಣಿ ಎರಡು ದಿನಗಳಲ್ಲಿ ಐದು ಅತ್ಯಾಚಾರ ಪ್ರಕರಣಗಳು ಉತ್ತರಪ್ರದೇಶದಲ್ಲಿ ನಡೆದಿವೆ. ಈ ಅತ್ಯಾಚಾರ ಪ್ರಕರಣಗಳನ್ನು ವೃತ್ತಿಪರ ನಿಷ್ಠೆಯಿಂದ ತನಿಖೆ ಮಾಡಿ ಅಪರಾಧಿಗಳನ್ನು ನ್ಯಾಯಾಲಯದ ಕಟಕಟೆಗೆ ತರುವ ಬದಲು, ಯಥಾಪ್ರಕಾರ, ಅವನ್ನು ಮುಚ್ಚಿ ಹಾಕುವ ಪ್ರಯತ್ನಗಳನ್ನು ಪೊಲೀಸರು ಮಾಡಿರುವುದು ವರದಿಯಾಗಿದೆ. ಇತ್ತೀಚಿನ ಪ್ರಕರಣದಲ್ಲಿ, ಇಟಾದ ಮಹಿಳೆಯೊಬ್ಬಳ ಮೇಲೆ ಐವರು ಸಾಮೂಹಿಕ ಅತ್ಯಾಚಾರ ಮಾಡಿ ಆಕೆಯನ್ನು ಜೀವಂತವಾಗಿ ಸುಟ್ಟುಹಾಕಿರುವುದು ನಡೆದಿದೆ. `ಅತ್ಯಾಚಾರ ನಡೆದೇ ಇಲ್ಲ . ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ~ ಎಂದು ಹೇಳಿ ಆರಂಭದಲ್ಲಿ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ. ನಂತರ, `ಒಬ್ಬ ವ್ಯಕ್ತಿ ಮಾತ್ರ ಅತ್ಯಾಚಾರ ಮಾಡಿದ್ದಾನೆ~ ಎಂದು ಈ ಹೀನ ಅಪರಾಧದ ತೀವ್ರತೆಯನ್ನೇ ತಗ್ಗಿಸುವ ರೀತಿಯಲ್ಲಿ ಈಗ ಇದರ ತನಿಖೆ ನಡೆಸುತ್ತಿರುವ ಪೊಲೀಸರು ಹೇಳಿಕೆ ನೀಡಿದ್ದಾರೆ. ತಮ್ಮನ್ನು ಗುರುತು ಹಿಡಿದಳೆಂಬ ಕಾರಣಕ್ಕಾಗಿ ಆಕೆಯನ್ನೇ ಜೀವಂತವಾಗಿ ದಹಿಸಿದ ಈ ಪ್ರಕರಣ ಅಮಾನುಷವಾದುದು. ಇದೇ ರೀತಿ ಅತ್ಯಾಚಾರ ಯತ್ನಕ್ಕೆ ಅಡ್ಡಿಪಡಿಸಿದ ಕಾರಣಕ್ಕಾಗಿ ಕನೌಜ್ ಜಿಲ್ಲೆಯ ದಲಿತ ಬಾಲಕಿಯ ಕಣ್ಣುಗಳಿಗೆ ಚಾಕುವಿನಿಂದ ಇರಿದಿರುವ ಪ್ರಕರಣ ಅತ್ಯಂತ ಕ್ರೂರವಾದದ್ದು. ಈ ಪ್ರಕರಣದ್ಲ್ಲಲೂ ಪ್ರಥಮ ಮಾಹಿತಿ ವರದಿ ದಾಖಲಿಸಿಕೊಳ್ಳಲು ವಿಫಲರಾದ ಒಬ್ಬ ಪೊಲೀಸ್ ಕಾನ್‌ಸ್ಟೆಬಲ್ ಹಾಗೂ ಸಬ್‌ಇನ್ಸ್‌ಪೆಕ್ಟರ್‌ನನ್ನು ಉತ್ತರಪ್ರದೇಶ ಸರ್ಕಾರ ಅಮಾನತುಗೊಳಿಸಿದೆ. ಇತ್ತೀಚೆಗೆ ಲಖೀಂಪುರಖೇರಿ ಜಿಲ್ಲೆಯಲ್ಲಿ ಪೊಲೀಸ್ ಠಾಣೆಯ ಆವರಣದ್ಲ್ಲಲೇ ಮರವೊಂದರಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ 14 ವರ್ಷದ ಬಾಲಕಿಯ ದೇಹ ಪತ್ತೆಯಾಗಿತ್ತು. ಈ ಪ್ರಕರಣದಲ್ಲೂ ಆಕೆಯ ಸಾವಿಗೆ ಕಾರಣವಾದ ಸನ್ನಿವೇಶಗಳನ್ನು ಪ್ರಾಮಾಣಿಕವಾಗಿ ತನಿಖೆ ಮಾಡುವ ಬದಲು ಸತ್ಯ ಮುಚ್ಚಿಡಲು ಪೊಲೀಸರು ಯತ್ನಿಸಿದ್ದರು. ಮಹಿಳೆ ವಿರುದ್ಧದ ದೌರ್ಜನ್ಯ ಪ್ರಕರಣಗಳಿಗೆ ಪೊಲೀಸರ ಈ ಬಗೆಯ ನಿರ್ಲಕ್ಷ್ಯದ ಪ್ರತಿಕ್ರಿಯೆಗಳೇ ಅಪರಾಧಿಗಳಿಗೆ ಕುಮ್ಮಕ್ಕು ನೀಡುವಂತಹದ್ದು. ಅತ್ಯಾಚಾರದಂತಹ ಪ್ರಕರಣಗಳ್ಲ್ಲಲಿ, ಮೊಕದ್ದಮೆ ದಾಖಲಿಸಲು ನಿಧಾನ ಮಾಡಿ, ದೈಹಿಕ ಸಾಕ್ಷ್ಯಗಳ ಸಂಗ್ರಹದಲ್ಲಿ ಉದಾಸೀನ ತೋರಿ ನಂತರ ನ್ಯಾಯಾಲಯದಲ್ಲಿ ಪ್ರಕರಣ ಸಾಬೀತುಪಡಿಸುವುದನ್ನು ಕಷ್ಟವಾಗಿಸುವುದು ಮಾಮೂಲು. ಮಹಿಳೆಯನ್ನು ಅಭದ್ರಗೊಳಿಸುವ ಇಂತಹ ಅಪರಾಧಗಳು ಪ್ರತಿಪಕ್ಷಗಳಿಗೆ ರಾಜಕೀಯ ಅಸ್ತ್ರಗಳಾಗುತ್ತವೆ ಅಷ್ಟೆ. ಮಹಿಳಾ ಮುಖ್ಯಮಂತ್ರಿಯದೇ ಆಡಳಿತವಿದ್ದರೂ ಮಹಿಳೆಯರು ಸುರಕ್ಷಿತವಾಗಿಲ್ಲ ಎಂದು ಮಾಯಾವತಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಈಗ ಮುಗಿಬಿದ್ದಿವೆ. ಮಹಿಳೆ ವಿರುದ್ಧದ ಲೈಂಗಿಕ ಅಪರಾಧಗಳು ಉತ್ತರಪ್ರದೇಶದಲ್ಲಿ ಮಾತ್ರವಲ್ಲ, ದೆಹಲಿಯಲ್ಲೂ ನಡೆಯುತ್ತವೆ. ಮಹಿಳೆಯ ದೇಹವನ್ನು ಅನುಭೋಗಿಸುವ ಸರಕಿನಂತೆ ಕಾಣುವಂತಹ ದೃಷ್ಟಿಕೋನದ ಫಲ ಇದು. ಭ್ರಷ್ಟಾಚಾರದ ವಿರುದ್ಧ ಎಲ್ಲೆಡೆ ವಿರೋಧ ವ್ಯಕ್ತವಾಗುತ್ತದೆ. ಆದರೆ ಮಹಿಳೆ ವಿರುದ್ಧದ ದೌರ್ಜನ್ಯಗಳನ್ನು ಖಂಡಿಸುವಲ್ಲಿ ಇಂತಹ ತೀವ್ರತೆ ಕಾಣುವುದು ಅಪರೂಪ. ಸಮಾಜ, ಕಾನೂನು ಹಾಗೂ ಇಡೀ ವ್ಯವಸ್ಥೆ ಈ ಬಗ್ಗೆ ಹೆಚ್ಚು ಸಂವೇದನೆ ತೋರಬೇಕಾದುದು ಮುಖ್ಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.