ಅಕ್ರಮ ಸಾಗಣೆ ತಡೆಯಿರಿ ರಾಜ್ಯದಲ್ಲಿ ಮಾನವ ಅಕ್ರಮ ಸಾಗಣೆ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಆತಂಕಕಾರಿಯಾಗಿ ಏರಿಕೆ ಕಾಣುತ್ತಿವೆ. ದೆಹಲಿಯಲ್ಲಿ ಒಂದು ಲಕ್ಷ ರೂಪಾಯಿಗೆ ಮಾರಾಟವಾಗಿದ್ದ ಚಿಕ್ಕಬಳ್ಳಾಪುರ ಯುವತಿಯ ಪ್ರಕರಣ, ಇಂತಹ ಪ್ರಕರಣಗಳ ಸಾಲಿಗೆ ಹೊಸ ಸೇರ್ಪಡೆ. ವಾಸ್ತವವಾಗಿ, ಮಾನವ ಅಕ್ರಮ ಸಾಗಣೆ ವಿವಿಧ ಉದ್ದೇಶಗಳಿಗಾಗಿ ನಡೆಯುತ್ತದೆ. ಆದರೆ ಮಹಿಳೆ ಮತ್ತು ಮಕ್ಕಳ ಅಕ್ರಮ ಸಾಗಣೆ ಹೆಚ್ಚು ವ್ಯಾಪಕವಾಗಿದ್ದು ಇದರ ಮುಖ್ಯ ಉದ್ದೇಶ ಲೈಂಗಿಕ ಶೋಷಣೆ. ಲೈಂಗಿಕ ಶೋಷಣೆಯೇನೂ ಹೊಸದಲ್ಲ. ನಮ್ಮ ಧಾರ್ಮಿಕ ನಂಬಿಕೆಗಳು ಹಾಗೂ ಸಂಸ್ಕೃತಿಯ ಭಾಗವಾಗಿಯೂ ಇದು ನಡೆದುಕೊಂಡು ಬರುತ್ತಿದೆ. ಆದರೆ ಜಾಗತೀಕರಣ ಹಾಗೂ ತಂತ್ರಜ್ಞಾನದ ಬೆಳವಣಿಗೆಗಳು, ಪ್ರವಾಸೋದ್ಯಮ ಹಾಗೂ ಲೈಂಗಿಕ ಉದ್ಯಮಕ್ಕೆ ಮಾನವ ಅಕ್ರಮ ಸಾಗಣೆಯನ್ನು ಕೊಂಡಿಯಾಗಿಸಿರುವುದು ಈ ಸಮಸ್ಯೆಯನ್ನು ಸಂಕೀರ್ಣವಾಗಿಸಿದೆ. ಮಾನವ ಅಕ್ರಮ ಸಾಗಣೆಯನ್ನು ತಡೆಯುವುದು ಈಗ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ವಿಚಾರ. ಬಲವಂತದ ಮದುವೆ, ಮನೆಗೆಲಸ, ಅಂಗಾಂಗ ಜೋಡಣೆ, ಭಿಕ್ಷಾಟನೆ, ಮಾದಕ ವಸ್ತುಗಳ ಸಾಗಣೆ ಇತ್ಯಾದಿ ಉದ್ದೇಶಗಳಿಗಾಗಿ ಮಾನವ ಅಕ್ರಮ ಸಾಗಣೆಗಳು ನಡೆಯುತ್ತವೆ. ಉದ್ಯೋಗ ಕೊಡಿಸುವ ಭರವಸೆ, ಬಡತನ ನಿವಾರಣೆ, ಸಾಮಾಜಿಕ ಸ್ಥಾನಮಾನ ಹೆಚ್ಚಳ ಇತ್ಯಾದಿ ಆಮಿಷಗಳನ್ನೊಡ್ಡಿ ಮುಗ್ಧರನ್ನು ಈ ಜಾಲಕ್ಕೆ ಸೆಳೆದುಕೊಳ್ಳುವುದು ಈವರೆಗೂ ಅನುಸರಿಸಿಕೊಂಡು ಬಂದಿರುವ ಕಾರ್ಯತಂತ್ರವಾಗಿದೆ. ಉತ್ತರ ಕರ್ನಾಟಕದಲ್ಲಿ ಪೋಷಕರ ಮನ ಒಲಿಸಿ ನಡೆಯುವಂತಹ `ಗುಜ್ಜರ್' ಮದುವೆಗಳಲ್ಲಿ `ಮಾರಾಟ'ವಾಗುವ, ಉತ್ತರ ಕರ್ನಾಟಕದ ಬಡ ಹೆಣ್ಣುಮಕ್ಕಳು ನಂತರ ದೂರದ ಭಾಷೆ ತಿಳಿಯದ ರಾಜ್ಯಗಳಲ್ಲಿ `ಲೈಂಗಿಕ ಜೀತ'ದ ಬದುಕಿಗೆ ಸಿಲುಕುವ ದಾರುಣ ಸಂಗತಿಗಳು ವರದಿಯಾಗುತ್ತಲೇ ಇವೆ. ರಾಜ್ಯದ ಪೊಲೀಸರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಂಗ್ರಹಿಸಿರುವ ಅಂಕಿ ಅಂಶಗಳ ಪ್ರಕಾರ, 2012ರಲ್ಲಿ 8084 ಮಹಿಳೆಯರು ಹಾಗೂ ಹೆಣ್ಣುಮಕ್ಕಳು ಕಾಣೆಯಾಗಿದ್ದಾರೆ. ಕಾಣೆಯಾಗುವ ಹೆಣ್ಣುಮಕ್ಕಳ ಪ್ರಮಾಣ ಪ್ರತಿ ವರ್ಷವೂ ಹೆಚ್ಚಾಗುತ್ತಿರುವುದು ಆತಂಕದ ಸಂಗತಿ. ಗ್ರಾಮೀಣ ಬದುಕಿನ ವಿಘಟನೆ, ಭೂಮಿ ಮತ್ತಿತರ ಸಂಪನ್ಮೂಲಗಳ ಜೊತೆಗಿನ ಸಂಪರ್ಕ ಕಡಿತ, ಉದ್ಯೋಗ ನಷ್ಟ, ನಗರೀಕರಣ, ಪ್ರವಾಸೋದ್ಯಮದ ಬೆಳವಣಿಗೆ ಇತ್ಯಾದಿ ಕಾರಣಗಳು ಈ ಸಮಸ್ಯೆಗೆ ಮೂಲ. ಈ ಹಿನ್ನೆಲೆಯಲ್ಲಿ ಮಾನವ ಅಕ್ರಮ ಸಾಗಣೆಯ ಪಿಡುಗು ನಿಯಂತ್ರಣಕ್ಕೆ ಸಮಗ್ರವಾದ ಕಾರ್ಯಯೋಜನೆ ಅತ್ಯಗತ್ಯ. ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ನೆಲೆಗಳಲ್ಲಿ ಈ ಸಮಸ್ಯೆ ನಿವಾರಣೆಗೆ ಶ್ರಮಿಸಬೇಕು. ಕಾಣೆಯಾಗುತ್ತಿರುವ ಹೆಣ್ಣುಮಕ್ಕಳ ಬಗ್ಗೆ ಇತ್ತೀಚೆಗಷ್ಟೇ 110ಪುಟಗಳ ವರದಿಯನ್ನು ಸಲ್ಲಿಸಿರುವ ರಾಜ್ಯ ಮಹಿಳಾ ಆಯೋಗ, `ಕಾಣೆಯಾಗುವವರು' ಎಂಬುದನ್ನು `ಮನೆಯಿಂದ ತಪ್ಪಿಸಿಕೊಂಡು ಓಡಿ ಹೋಗುವವರು' ಎಂಬಂಥ ಅರ್ಥದಲ್ಲಿ ಪ್ರಧಾನವಾಗಿ ಬಳಸಿದೆ. ಆದರೆ, ಮಾನವ ಅಕ್ರಮ ಸಾಗಣೆಯ ವ್ಯಾಖ್ಯಾನ ಅಥವಾ ವಿವರಣೆ ಕುರಿತಂತೆ ಒಮ್ಮತ ಇರುವುದು ಮುಖ್ಯ. ಈ ಸಮಸ್ಯೆಯ ನಿರ್ವಹಣೆಗೆ ಕಾನೂನಿನ ಚೌಕಟ್ಟು, ವ್ಯವಸ್ಥಿತ ಸಂಶೋಧನೆ ಹಾಗೂ ಪರಿಹಾರಕ್ರಮಗಳಿಗೆ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಲು ಇದು ಅತ್ಯಗತ್ಯ ಎಂಬುದನ್ನು ಮನಗಾಣಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.