ಅಕ್ರಮ ಆಸ್ತಿ ವಶಪಡಿಸಿಕೊಳ್ಳಿ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಸ್ವಂತಕ್ಕೆ ಆಸ್ತಿ ಮಾಡಿ ಕೊಳ್ಳುವ ದುಷ್ಟ ಪರಂಪರೆ ದೇಶಕ್ಕೆ ಅಂಟಿಕೊಂಡ ಶಾಪ. ಅಧಿಕಾರ ಸಿಕ್ಕಿದಾಕ್ಷಣ ಸ್ವಂತದ ಹೆಸರಿನಲ್ಲಿ ಮತ್ತು ಕುಟುಂಬದ ಎಲ್ಲ ಸದಸ್ಯರ ಹೆಸರಿನಲ್ಲಿ ಆಸ್ತಿ ಮಾಡಿಕೊಳ್ಳುವ ಪ್ರವೃತ್ತಿ, ಶಿಕ್ಷೆಯ ಭಯವಿಲ್ಲದ ಕಾರಣ ಅವ್ಯಾಹತವಾಗಿ ನಡೆಯುತ್ತಿದೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದ ಬಿಜೆಪಿ ಸರ್ಕಾರ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಕುಟುಂಬ ತನ್ನ ಅಧಿಕಾರದ ಅವಧಿಯಲ್ಲಿ ಮಾಡಿದ ಆಸ್ತಿ ವಿವರಗಳನ್ನು ಕಲೆಹಾಕಿ ಪ್ರಕಟಿಸಿದೆ. 62 ನಿರ್ದಿಷ್ಟ ಪ್ರಕರಣಗಳನ್ನು ಪಟ್ಟಿ ಮಾಡಿ ಗೌಡರ ಕುಟುಂಬ ಒಟ್ಟು 1,500 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಗಳಿಸಿದ್ದನ್ನು ಗುರುತಿಸಿದೆ. ಅಕ್ರಮ ಆಸ್ತಿ ಗಳಿಕೆಯ ಪ್ರಕರಣಗಳನ್ನು ಬಯಲು ಮಾಡುವುದರಿಂದ ಸಾರ್ವಜನಿಕರಿಗೆ ಯಾವ ಸಂದೇಶವನ್ನೂ ನೀಡಿದಂತಾಗುವುದಿಲ್ಲ. ಈ ಎಲ್ಲ ಪ್ರಕರಣಗಳನ್ನೂ ತನಿಖೆಗೆ ಒಳಪಡಿಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡುವುದಲ್ಲದೆ, ಕಾನೂನು ಉಲ್ಲಂಘಿಸಿ ಗಳಿಸಿದ ಅಕ್ರಮ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂಥ ದಿಟ್ಟ ನಿರ್ಧಾರವನ್ನು ಬಿಜೆಪಿ ಸರ್ಕಾರ ಕೈಗೊಳ್ಳಬೇಕು. ಆಗ `ಅಧಿಕಾರ ದುರುಪಯೋಗಪಡಿಸಿಕೊಂಡು ಅಕ್ರಮ ಆಸ್ತಿ ಮಾಡಿಕೊಂಡರೆ ಅದನ್ನು ಸರ್ಕಾರ ವಶಪಡಿಸಿಕೊಳ್ಳುತ್ತದೆ; ತಪ್ಪಿತಸ್ಥರು ಜೈಲು ಸೇರುತ್ತಾರೆ~ ಎಂಬ ಸ್ಪಷ್ಟ ಸಂದೇಶ ರವಾನೆಯಾಗುತ್ತದೆ. ಈ ಆರೋಪಗಳನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಸ್ವತಃ ದೇವೇಗೌಡರೇ ಸಲಹೆ ಮಾಡಿರುವುದರಿಂದ ರಾಜ್ಯ ಸರ್ಕಾರ ವಿಳಂಬ ಮಾಡದೆ ಸೂಕ್ತ ತನಿಖೆಗೆ ಆದೇಶ ನೀಡಬೇಕು. ಅಧಿಕಾರ ದುರುಪಯೋಗ, ಸ್ವಜನಪಕ್ಷಪಾತ ಮತ್ತು ಕಾನೂನು ಉಲ್ಲಂಘನೆ ಮಾಡಿ ಕೋಟ್ಯಂತರ ರೂಪಾಯಿ ಆಸ್ತಿ ಮಾಡಿದವರು ಎಷ್ಟೇ ಪ್ರಭಾವಿಗಳಾದರೂ ಶಿಕ್ಷೆಯಿಂದ ತಪ್ಪಿಸಿಕೊಳ್ಳಲಾರರು ಎಂಬುದನ್ನು ದೇಶಕ್ಕೆ ತೋರಿಸಿಕೊಡುವ ಸುವರ್ಣ ಅವಕಾಶವನ್ನು ಬಿಜೆಪಿ ಕಳೆದುಕೊಳ್ಳಬಾರದು. ಅಧಿಕಾರದ ಉನ್ನತ ಸ್ಥಾನಗಳಲ್ಲಿ ಇದ್ದವರ ಭ್ರಷ್ಟಾಚಾರ ಪ್ರಕರಣಗಳ ತನಿಖೆಗೆ ಬಲಿಷ್ಠ ಲೋಕಪಾಲ ವ್ಯವಸ್ಥೆ ರೂಪಿಸುವ ಬಗ್ಗೆ ಚರ್ಚೆ ನಡೆಯುತ್ತಿದ್ದರೂ ಗೌಡರ ಕುಟುಂಬದ ಅಕ್ರಮ ಆಸ್ತಿ ಗಳಿಕೆಯ ಆರೋಪಗಳ ತನಿಖೆಗೆ ರಾಜ್ಯ ಸರ್ಕಾರ ಅಲ್ಲಿಯವರೆಗೆ ಕಾಯುವ ಅಗತ್ಯವಿಲ್ಲ. ಮುಖ್ಯಮಂತ್ರಿ, ಸಚಿವರು ಮತ್ತಿತರ ಅಧಿಕಾರಸ್ಥರ ವಿರುದ್ಧ ಪ್ರಕರಣ ದಾಖಲಿಸುವುದಕ್ಕೆ ಸರ್ಕಾರದ ಪೂರ್ವಾನುಮತಿ ಪಡೆಯಬೇಕೆಂಬ ತಾಂತ್ರಿಕ ನಿಬಂಧನೆಗಳೂ ಈ ಪ್ರಕರಣಗಳಲ್ಲಿಲ್ಲ. ಆದ್ದರಿಂದ ಸರ್ಕಾರ, ಈ ಆರೋಪಗಳನ್ನು ಕಾನೂನು ಪ್ರಕಾರ ವಿಚಾರಣೆಗೆ ಒಳಪಡಿಸಲು ಮುಂದಾಗಬೇಕು. ಪ್ರಕರಣಗಳು ಇತ್ಯರ್ಥವಾಗುವುದಕ್ಕೆ ಸಮಯ ಹಿಡಿಯುವುದನ್ನು ತಪ್ಪಿಸಲು ವಿಶೇಷ ನ್ಯಾಯಾಲಯ ಸ್ಥಾಪನೆಗೆ ನಿರ್ಧರಿಸಬೇಕು. ನಿರ್ದಿಷ್ಟ ಅವಧಿಯಲ್ಲಿ ಎಲ್ಲ ಪ್ರಕರಣಗಳ ವಿಚಾರಣೆ ಮುಗಿಸುವಂತೆ ಅವಶ್ಯಕ ಸೌಲಭ್ಯಗಳನ್ನು ಒದಗಿಸಬೇಕು. ಇಂಥ ಕ್ರಮಗಳನ್ನು ಆರಂಭಿಸದಿದ್ದರೆ, ಅಧಿಕಾರದಲ್ಲಿದ್ದು ಅಕ್ರಮವಾಗಿ ಆಸ್ತಿ ಮಾಡಿದವರ ವಿರುದ್ಧ ಬಿಜೆಪಿ ಸರ್ಕಾರ ಮೃದು ಧೋರಣೆ ತಾಳುತ್ತಿದೆ ಎಂಬ ಸಂಶಯ ಸಾರ್ವಜನಿಕರಲ್ಲಿ ಮೂಡುತ್ತದೆ. ಇಂಥ ಭಾವನೆ ಮೂಡದಂತೆ ತಕ್ಷಣವೇ ಆರೋಪಗಳ ತನಿಖೆಗೆ ಕ್ರಮಕೈಗೊಂಡು ಭ್ರಷ್ಟಾಚಾರದ ವಿರುದ್ಧ ತನ್ನ ಬದ್ಧತೆಯನ್ನು ಸಾಬೀತುಪಡಿಸಲಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.