ಎಚ್‌ಐವಿ ಜಾಗೃತಿ ಸಾಲದು ಬಾಗಲಕೋಟೆ ಜಿಲ್ಲೆಯಲ್ಲಿ ಹದಿನೇಳು ಸಾವಿರಕ್ಕೂ ಹೆಚ್ಚು ಎಚ್‌ಐವಿ ಸೋಂಕು ಪೀಡಿತರಿದ್ದಾರೆ ಎಂಬ ಸಂಗತಿಯೇ ಆತಂಕಕಾರಿ. ಎಚ್‌ಐವಿ ಹಾಗೂ ಏಡ್ಸ್ ವಿರುದ್ಧ ಜನರಲ್ಲಿ ತಿಳುವಳಿಕೆ ಮೂಡಿಸುವ ಕಾರ್ಯಕ್ರಮಗಳಿಂದ ಹೆಚ್ಚಿನ ಪ್ರಯೋಜನವಾಗಿಲ್ಲ ಎನ್ನುವುದಕ್ಕೆ ಈ ಬೆಳವಣಿಗೆ ನಿದರ್ಶನ. ಕಳೆದ ಐದು ವರ್ಷಗಳಲ್ಲಿ ಜಿಲ್ಲೆಯಲ್ಲಿ 1761 ಜನರು ಈ ಪಿಡುಗಿನಿಂದ ಸತ್ತಿದ್ದಾರೆ. ಎಚ್‌ಐವಿ ಪೀಡಿತರ ಸಂಖ್ಯಾದೃಷ್ಟಿಯಿಂದ ಬಾಗಲಕೋಟೆ ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದೆ. ದೇಶದಲ್ಲಿ ಮೂರನೇ ಸ್ಥಾನದಲ್ಲಿದೆ. ಸರ್ಕಾರದ ಗಮನಕ್ಕೆ ಬಂದ ಸೋಂಕು ಪೀಡಿತರೇ ಇಷ್ಟಿರುವಾಗ ಇನ್ನು ಖಾಸಗಿ ವೈದ್ಯರ ಬಳಿ ಗುಟ್ಟಾಗಿ ಚಿಕಿತ್ಸೆ ಪಡೆಯುತ್ತಿರುವವರು ಹಾಗೂ ಸೋಂಕು ತಗುಲಿರುವುದು ಗೊತ್ತೇ ಇಲ್ಲದ ಅಮಾಯಕರು ಎಷ್ಟಿರಬಹುದು? ಈ ಬೆಳವಣಿಗೆ ದುರದೃಷ್ಟಕರ ಮಾತ್ರವಲ್ಲ, ಅಪಾಯಕಾರಿ. ಎಚ್‌ಐವಿ ಸೋಂಕಿಗೆ ತುತ್ತಾದವರಲ್ಲಿ ಬಡವರು ಹಾಗೂ ನಿರಕ್ಷರಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಎಚ್‌ಐವಿ ವಿರುದ್ಧ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಮರವನ್ನೇ ಸಾರಿವೆ. ಪ್ರತಿ ವರ್ಷ ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡುತ್ತಿವೆ. ಸರ್ಕಾರೇತರ ಸ್ವಯಂ ಸೇವಾ ಸಂಘಟನೆಗಳು ವಿದೇಶಿ ನೆರವು ಪಡೆದು ಇದೇ ಕೆಲಸ ಮಾಡುತ್ತಿವೆ. ಆದರೂ ಎಚ್‌ಐವಿ ನಿಯಂತ್ರಣ ಸಾಧ್ಯವಾಗಿಲ್ಲ. ಬಾಗಲಕೋಟೆ ಮಾತ್ರವಲ್ಲ, ಉತ್ತರ ಕರ್ನಾಟಕದ ಇನ್ನೂ ಕೆಲ ಜಿಲ್ಲೆಗಳಲ್ಲಿ ಏಡ್ಸ್ ಮತ್ತು ಎಚ್‌ಐವಿ ಪೀಡಿತರ ಸಂಖ್ಯೆ ಹೆಚ್ಚುತ್ತಿದೆ. ಇದಕ್ಕೆ ದೇವದಾಸಿ ಪದ್ಧತಿಯೇ ಕಾರಣ ಎಂಬ ಮಾತು ಕೇಳಿ ಬರುತ್ತಿದೆ. ಅದೊಂದೇ ಅಲ್ಲ, ಇತ್ತೀಚಿನ ವರ್ಷಗಳಲ್ಲಿ ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳು ಪದೇ ಪದೇ `ಬರ~ದ ಪರಿಸ್ಥಿತಿ ಎದುರಿಸುತ್ತಿವೆ. ಸಣ್ಣ ರೈತರು ಮತ್ತು ಕೃಷಿ ಕಾರ್ಮಿಕರು ಉದ್ಯೋಗ ಹುಡುಕಿಕೊಂಡು ನೆರೆಯ ಮಹಾರಾಷ್ಟ್ರ, ಗೋವಾ ರಾಜ್ಯಗಳಿಗೆ ದೊಡ್ಡ ಪ್ರಮಾಣದಲ್ಲಿ ಗುಳೇ ಹೋಗುತ್ತಾರೆ. ಐದಾರು ತಿಂಗಳು ಕುಟುಂಬಗಳಿಂದ ದೂರವಿದ್ದು ದುಡಿಯುವ ಈ ಜನರು ದೈಹಿಕ ಬಯಕೆಗಳನ್ನು ಹತ್ತಿಕ್ಕಿಕೊಳ್ಳಲಾಗದೆ ಅಡ್ಡದಾರಿ ಹಿಡಿಯುವ ಸಾಧ್ಯತೆಗಳು ಹೆಚ್ಚಾಗಿವೆ. ಸುರಕ್ಷಿತ ಲೈಂಗಿಕ ಜೀವನದ ಬಗ್ಗೆ ತಿಳುವಳಿಕೆ ಇಲ್ಲದೆ ಎಚ್‌ಐವಿ ಸೋಂಕು ಅಂಟಿಸಿಕೊಂಡು ಊರಿಗೆ ಬಂದು ಅದನ್ನು ಹೆಂಡತಿ, ಮಕ್ಕಳಿಗೂ ಅಂಟಿಸಿ ಕೊನೆಗೆ ಇಡೀ ಸಮುದಾಯಕ್ಕೆ ಹರಡುತ್ತಿದ್ದಾರೆ. ಈ ಪ್ರವೃತ್ತಿ ವಿರುದ್ಧ ಇನ್ನೂ ಹೆಚ್ಚಿನ ಅರಿವು ಮೂಡಿಸುವ ಕೆಲಸ ಆಗಬೇಕು. ಇದು ನಿರಂತರವಾಗಿ ನಡೆಯಬೇಕಾದ ಕೆಲಸ. ಅದಕ್ಕಿಂತ ಮುಖ್ಯವಾಗಿ ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳನ್ನು ಬೇಗ ಮುಗಿಸಿದರೆ ಕೃಷಿ ಕಾರ್ಮಿಕರು ನೆರೆ ರಾಜ್ಯಗಳಿಗೆ ಗುಳೇ ಹೋಗುವುದು ತಪ್ಪುತ್ತದೆ. ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು. ದೇವದಾಸಿ ಪದ್ಧತಿ ಹಾಗೂ ಸ್ವೇಚ್ಛಾಚಾರದ ಲೈಂಗಿಕ ಜೀವನವನ್ನು ನಡೆಸುವುದರಿಂದ ಆಗುವ ಅಪಾಯಗಳ ಬಗ್ಗೆ ಜನ ಸಾಮಾನ್ಯರಲ್ಲಿ ಇನ್ನೂ ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದೆ. ಸಂಘ ಸಂಸ್ಥೆಗಳು, ಮಠಗಳು ಹಾಗೂ ಪ್ರಜ್ಞಾವಂತರು ಈ ಕೆಲಸದಲ್ಲಿ ಸರ್ಕಾರದ ಜತೆ ಕೈಜೋಡಿಸಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.