ವಿ‌ವೇ‌ಚ‌ನೆ‌ಯಿಂದ ನಿರ್ಧ‌ರಿ‌ಸ‌ಲಿ ‌ಗ‌ದಗ ಜಿಲ್ಲೆ‌ಯಲ್ಲಿ ದಕ್ಷಿಣ ಕೊರಿ‌ಯಾದ ~ಫೋ‌ಸ್ಕೊ~ (ಪೊ‌ಹಾಂಗ್‌ ಸ್ಟೀಲ್‌ ಕಂಪೆ‌ನಿ) ಆರಂ‌ಭಿ‌ಸ‌ಬೇ‌ಕೆಂ‌ದಿ‌ರುವ ಆರವತ್ತು ಲಕ್ಷ ಟನ್‌ ಸಾಮ‌ರ್ಥ್ಯದ ಉಕ್ಕು ಕಾರ್ಖಾ‌ನೆಗೆ ಬೇಕಾ‌ಗಿ‌ರುವ ಭೂಮಿಯ ಸ್ವಾಧೀನ ಪ್ರಕ್ರಿ‌ಯೆಗೆ ನಿರೀ‌ಕ್ಷೆ‌ಯಂತೆ ರೈತ‌ರಿಂದ ಭಾರಿ ವಿರೋಧ ವ್ಯಕ್ತ‌ವಾ‌ಗಿದೆ. ಸುಮಾರು 32 ಸಾವಿರ ಕೋಟಿ ರೂಪಾಯಿ ಬಂಡ‌ವಾಳ ಹೂಡಿ‌ಕೆಯ ಈ ಉದ್ದೇ‌ಶಿತ ಉಕ್ಕು‌ಸ್ಥಾ‌ವ‌ರಕ್ಕೆ 3,382 ಎಕರೆ ಭೂಮಿ ಬೇಕೆಂದು ~ಫೋ‌ಸ್ಕೊ~ ಕೇಳಿದೆ. ಇಷ್ಟು ಪ್ರಮಾ‌ಣದ ಭೂಮಿಯ ಸ್ವಾಧೀ‌ನಕ್ಕೆ ರೈತರು ಒಡ್ಡಿ‌ರುವ ಪ್ರತಿ‌ರೋಧ, ಬಹು‌ರಾ‌ಷ್ಟ್ರೀಯ ಕಂಪೆ‌ನಿ‌ಗ‌ಳಿಗೆ ಕೆಂಪು‌ಹಾ‌ಸಿನ ಸ್ವಾಗತ ನೀಡಲು ಮುಂದಾ‌ಗಿ‌ರುವ ರಾಜ್ಯ ಸರ್ಕಾ‌ರದ ವಿಶೇಷ ಆಸ‌ಕ್ತಿಗೆ ಅಡ್ಡ‌ಗಾಲು ಹಾಕಿ‌ದಂ‌ತಾ‌ಗಿದೆ. ನಮ್ಮದು ಕೃಷಿ ಪ್ರಧಾ‌ನ‌ದೇಶ. ಹಳ್ಳಿ‌ಗಾ‌ಡಿನ ಜನರು ನೂರಾರು ವರ್ಷ‌ಗ‌ಳಿಂದ ಭೂಮಿ‌ಯನ್ನೇ ನಂಬಿ ಬದು‌ಕಿ‌ದ್ದಾರೆ. ಅನ್ನ ಕೊಡುವ ಭೂಮಿಯ ಬಗೆಗೆ ಅವ‌ರಿಗೆ ಭಾವ‌ನಾತ್ಮಕ ನಂಟಿದೆ. ಕೃಷಿ‌ಯನ್ನು ಬಿಟ್ಟು ಅವ‌ರಿಗೆ ಬೇರೇನೂ ಮಾಡುವ ವಿದ್ಯೆ ಕರ‌ಗ‌ತ‌ವಾ‌ಗಿಲ್ಲ. ಆದ್ದ‌ರಿಂದ ಇರುವ ಭೂಮಿ‌ಯನ್ನೂ ಕಳೆ‌ದು‌ಕೊಳ್ಳುವ ರೈತರು ಏನು ಮಾಡ‌ಬೇಕು ಎನ್ನುವ ಪ್ರಶ್ನೆಗೂ ಸರ್ಕಾ‌ರವೇ ಉತ್ತರ ಹುಡು‌ಕ‌ಬೇಕು. ಈಗ ಸ್ವಾಧೀ‌ನ‌ಪ‌ಡಿ‌ಸಿ‌ಕೊ‌ಳ್ಳ‌ಬೇ‌ಕೆ‌ನ್ನುವ ಭೂಮಿ‌ಯಲ್ಲಿ ರೈತರು ಜೋಳ, ಗೋದಿ, ಹತ್ತಿ, ವಿವಿಧ ಬಗೆಯ ದ್ವಿದಳ ಧಾನ್ಯ ಮತ್ತು ಈರು‌ಳ್ಳಿ‌ಯನ್ನು ಯಥೇ‌ಚ್ಛ‌ವಾಗಿ ಬೆಳೆ‌ಯು‌ತ್ತಿ‌ದ್ದಾರೆ. ಬಹು‌ತೇಕ ಈ ಪ್ರದೇಶ ಈಗಾ‌ಗಲೇ ಸಿಂಗ‌ಟಾ‌ಲೂರು ಏತ ನೀರಾ‌ವರಿ ಪ್ರದೇ‌ಶಕ್ಕೆ ಒಳ‌ಪ‌ಡ‌ಲಿದೆ. ರೈತರು ತಮ್ಮ ಭೂಮಿ ಬಿಟ್ಟು‌ಕೊ‌ಡಲು ವಿರೋಧ ವ್ಯಕ್ತ‌ಪ‌ಡಿ‌ಸು‌ವು‌ದಕ್ಕೆ ಇದೇ ಪ್ರಮುಖ ಕಾರಣ ಎಂಬು‌ದನ್ನು ಸರ್ಕಾರ ಮನಗಾಣಬೇ‌ಕಿದೆ. ರೈ‌ತ‌ರಿಂದ ವ್ಯಕ್ತ‌ವಾ‌ಗು‌ತ್ತಿ‌ರುವ ವಿರೋ‌ಧ‌ವನ್ನು ಈಗಷ್ಟೇ ಮನ‌ವ‌ರಿಕೆ ಮಾಡಿ‌ಕೊ‌ಳ್ಳು‌ತ್ತಿ‌ರುವ ಸರ್ಕಾರ, ~ಭೂಮಿ ಸ್ವಾಧೀ‌ನಕ್ಕೆ ಮುನ್ನ ರೈತರ ಮನ‌ವೊ‌ಲಿ‌ಸ‌ಲಾ‌ಗು‌ವುದು. ಆದರೆ, ಅವ‌ರಿಂದ ಬಲಾ‌ತ್ಕಾ‌ರ‌ವಾಗಿ ಭೂಮಿ‌ಯನ್ನು ಕಸಿ‌ದು‌ಕೊ‌ಳ್ಳು‌ವು‌ದಿ‌ಲ್ಲ~ ಎಂಬ ಭರ‌ವಸೆ ನೀಡಿದೆ. ಇದು ಕೃಷಿ‌ಯನ್ನೇ ನಂಬಿ‌ರುವ ಜನ ಸದ್ಯ ನಿಟ್ಟು‌ಸಿರು ಬಿಡು‌ವಂ‌ತಾ‌ಗಿದೆ. ~ಫೋ‌ಸ್ಕೊ‌~ಗೆ ಭೂಮಿ ನೀಡು‌ವು‌ದಕ್ಕೆ ಒಡಿ‌ಶಾ‌ದಲ್ಲೂ ಈಗಾ‌ಗಲೇ ತೀವ್ರ ವಿರೋಧ ವ್ಯಕ್ತ‌ವಾ‌ಗಿದೆ. ಅದೇ ಪ್ರತಿ‌ರೋಧ ರಾಜ್ಯ‌ದಲ್ಲೂ ಮರು‌ಕ‌ಳಿ‌ಸಿ‌ರು‌ವು‌ದ‌ರಿಂದ ರಾಜ್ಯ ಸರ್ಕಾರ ಈ ಬಗೆಗೆ ಎಚ್ಚ‌ರಿ‌ಕೆ‌ಯಿಂದ ಮುನ್ನ‌ಡೆ‌ಯು‌ವುದು ಅವಶ್ಯ. ~ಫೋ‌ಸ್ಕೊ‌~‌ದಿಂದ ರಾಜ್ಯದ ಬೊಕ್ಕ‌ಸಕ್ಕೆ ಸಿಗುವ ಆದಾಯ, ಸ್ಥಳೀ‌ಯರು ಸೇರಿ‌ದಂತೆ ರಾಜ್ಯದ ಜನ‌ರಿಗೆ ಸಿಗುವ ಉದ್ಯೋ‌ಗಾ‌ವ‌ಕಾ‌ಶದ ಪ್ರಮಾಣ ಮತ್ತು ಸಂಪ‌ನ್ಮೂಲ ಅಭಿ‌ವೃ‌ದ್ಧಿಗೆ ಅದರ ಕೊಡುಗೆ ಎಷ್ಟೆಂ‌ಬು‌ದರ ಬಗೆಗೆ ಜನ‌ರಿಗೆ ಮನ‌ವ‌ರಿಕೆ ಮಾಡಿ‌ಕೊ‌ಡ‌ಬೇ‌ಕಿದೆ. ವಿಶೇಷ ಆರ್ಥಿಕ ವಲ‌ಯ‌ದಿಂದ ಸಿಗುವ ಲಾಭ ಮತ್ತು ಅನ‌ವ‌ಶ್ಯ‌ಕ‌ವಾಗಿ ಹೆಚ್ಚು ಭೂಮಿ ಪಡೆದು ಮುಂದಿನ ದಿನ‌ಗ‌ಳಲ್ಲಿ ಅದನ್ನು ಬೇರೆ ಬೇರೆ ಉದ್ದೇ‌ಶ‌ಗ‌ಳಿಗೆ ಬಳ‌ಸಿ‌ಕೊಂಡು ಹೆಚ್ಚು ಹಣ ಮಾಡಿ‌ಕೊ‌ಳ್ಳುವ ದೂರ‌ದೃ‌ಷ್ಟಿಯ ದಂಧೆಗೆ ರೈತ‌ರನ್ನು ಬಲಿ‌ಪಶು ಮಾಡ‌ಬಾ‌ರದು. ನಿಜ, ರಾಜ್ಯ‌ದಲ್ಲಿ ಉದ್ಯ‌ಮ‌ಗಳು ಬೆಳೆ‌ಯ‌ಬೇಕು. ಇಲ್ಲಿನ ಸಂಪ‌ನ್ಮೂ‌ಲ‌ಗಳ ಬಳಕೆ ಆಗ‌ಬೇಕು. ಆದರೆ ಬಹು‌ರಾ‌ಷ್ಟ್ರೀಯ ಸಂಸ್ಥೆ‌ಗಳು ಲಾಭ ಮಾಡಿ‌ಕೊ‌ಳ್ಳು‌ವು‌ದಕ್ಕೆ ಮಣ್ಣಿನ ಮಕ್ಕ‌ಳನ್ನು ಬಲಿ ಕೊಡ‌ಬಾ‌ರದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.