ರನ್ನರ್ ನಿಯಮ ರದ್ದು ಕ್ರೀಡೆ ಯಾವುದೇ ಇರಲಿ ಅದು ವ್ಯಕ್ತಿಯ ಸಾಮರ್ಥ್ಯಕ್ಕೆ ಒರೆಗಲ್ಲು. ತಂಡವಾಗಿ ಸೆಣೆಸುವ ಕ್ರೀಡೆಗಳಲ್ಲಿಯೂ ವ್ಯಕ್ತಿಯ ಪ್ರತಿಭೆ, ಹೋರಾಟದ ಛಲ, ಗೆಲ್ಲುವ ಹಠಗಳು ಪ್ರಧಾನ. ವಿಕೆಟ್, ರನ್ನುಗಳ ಲೆಕ್ಕಾಚಾರದಲ್ಲಿ ಗೆಲುವಿನ ರೋಚಕತೆಯನ್ನು ಪ್ರೇಕ್ಷಕರಿಗೆ ನೀಡುತ್ತಿರುವ ಕ್ರಿಕೆಟ್, ಅತ್ಯಾಧುನಿಕ ತಾಂತ್ರಿಕತೆಗಳನ್ನು ಅಳವಡಿಸಿಕೊಂಡಿದ್ದರೂ ಮೂಲದಲ್ಲಿ ಆಟಗಾರನ ಪ್ರತಿಭೆ, ಸಾಮರ್ಥ್ಯವನ್ನೇ ಅವಲಂಬಿಸಿದ್ದು. ಆಟದ ಪ್ರತಿ ಹಂತವನ್ನೂ ವಿವಿಧ ಕೋನಗಳಲ್ಲಿ ಸೆರೆ ಹಿಡಿದು ನೇರ ಪ್ರಸಾರ ಮಾಡುವ ಸಂಪರ್ಕ ತಾಂತ್ರಿಕತೆಯ ಕಾರಣ ಈ ಕ್ರೀಡೆಯನ್ನು ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ಪ್ರತ್ಯಕ್ಷದರ್ಶಿಗಳಂತೆ ವೀಕ್ಷಿಸುವುದು ಸಾಧ್ಯ. ಈ ಕಾರಣದಿಂದ ವಿಶ್ವದಾದ್ಯಂತ ಕೋಟ್ಯಂತರ ಕ್ರೀಡಾಭಿಮಾನಿಗಳನ್ನು ಹೊಂದಿರುವ ಕ್ರಿಕೆಟ್‌ಗೆ ಈಗ ಕಾರ್ಪೊರೇಟ್ ಸ್ವರೂಪವೂ ಬಂದಿದೆ. ಆಟಗಾರನ ಸಾಮರ್ಥ್ಯಕ್ಕೆ ತಕ್ಕಂತೆ ಪೈಪೋಟಿಯ ಮೇಲೆ ಬೆಲೆ ಕಟ್ಟುವಂಥ ಮಾರುಕಟ್ಟೆ ಮೌಲ್ಯ ಕ್ರಿಕೆಟ್ ಪಟುಗಳಿಗೆ ಸಿಗುತ್ತಿದೆ. ಆಟದ ಸ್ವರೂಪದಲ್ಲಿಯೂ ಬದಲಾವಣೆಗಳಾಗಿವೆ. ಐದು ದಿನಗಳ ಟೆಸ್ಟ್ ಸ್ವರೂಪ ಉಳಿದುಕೊಂಡಿದೆ; ಜೊತೆಗೆ ಐವತ್ತು ಮತ್ತು ಇಪ್ಪತ್ತು ಓವರುಗಳ ಚುಟುಕು ಆವೃತ್ತಿಗಳು ಆಟದ ಸಾಧ್ಯತೆಯನ್ನು ವಿಸ್ತರಿಸಿವೆ. ಸ್ವರೂಪದಲ್ಲಿ ಏನೇ ಬದಲಾವಣೆಗಳಾಗಿದ್ದರೂ ಕ್ರೀಡೆಗೆ ಜೀವಂತಿಕೆಯನ್ನು ತರುತ್ತಿರುವುದು ಆಟಗಾರನ ಪ್ರತಿಭೆ ಮತ್ತು ಸಾಮರ್ಥ್ಯ. ಬದಲಾಗುತ್ತಿರುವ ಸಂದರ್ಭಕ್ಕೆ ತಕ್ಕಂತೆ ಕ್ರಿಕೆಟ್ ಆಟದ ನಿಯಮಗಳಲ್ಲಿಯೂ ಬದಲಾವಣೆಗಳಾಗುತ್ತಿವೆ. ಅದರಂತೆ ಕಣದಲ್ಲಿದ್ದಾಗ ಗಾಯಗೊಂಡ ಬ್ಯಾಟ್ಸ್‌ಮನ್‌ಗೆ ರನ್ನರ್ ಒದಗಿಸುವ ನಿಯಮ ರದ್ದು ಮಾಡಲು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಲಿ (ಐಸಿಸಿ) ನಿರ್ಣಯಿಸಿದೆ. ಕಣದಲ್ಲಿ ಗಾಯಗೊಂಡ ಆಟಗಾರರಿಗೆ ರನ್ನರ್ ಒದಗಿಸುವ ನಿಯಮ ನೂರು ವರ್ಷಗಳ ಹಿಂದೆ (1884) ಯಾವ ಸಂದರ್ಭದಲ್ಲಿ ರೂಪುಗೊಂಡಿತ್ತೋ. ಅದೇ ಸ್ಥಿತಿ ಈಗಂತೂ ಇಲ್ಲ. ಬೌಲರ್ ಗಾಯಗೊಂಡರೆ ಅವನಿಗೆ ಬದಲಾಗಿ ಇನ್ನೊಬ್ಬ ಬೌಲರ್ ಅನ್ನು ಒದಗಿಸುವ ನಿಯಮವೇನೂ ಇಲ್ಲ. ರನ್ನರ್ ಪಡೆಯುವ ನಿಯಮ ಈಚಿನ ವರ್ಷಗಳಲ್ಲಿ ದುರುಪಯೋಗವಾಗುತ್ತಿರುವುದನ್ನು ಐಸಿಸಿ ಪರಿಗಣಿಸಿದೆ. ಒಂದು ಸಣ್ಣಗಾಯ ಇಲ್ಲವೇ ಸ್ನಾಯು ಸೆಳೆತದ ನೆಪದಲ್ಲಿ ಮೈದಾನದಲ್ಲಿ ಕುಂಟುತ್ತಾ ರನ್ನರ್ ಸೌಲಭ್ಯ ಪಡೆದುಕೊಳ್ಳುವ ಆಟಗಾರರ ತಂತ್ರ ಏಕದಿನದ ಪಂದ್ಯಗಳಲ್ಲಿ ಒಂದೊಂದೇ ರನ್ನುಗಳನ್ನು ಗಳಿಸಿ ಫಲಿತಾಂಶವನ್ನೇ ಬದಲಿಸಬಲ್ಲದು. ಇದು ಕ್ರೀಡಾಮನೋಭಾವಕ್ಕೆ ಹೊರತಾದ ತಂತ್ರ. ಆದ್ದರಿಂದಲೇ ತಡವಾಗಿಯಾದರೂ ಐಸಿಸಿ ಈ ನಿಯಮದ ಬಗ್ಗೆ ವಾಸ್ತವ ದೃಷ್ಟಿಯನ್ನು ತಾಳಿರುವುದು ಸ್ವಾಗತಾರ್ಹ. ಕ್ರಿಕೆಟ್‌ಗೆ ಬಹುರಾಷ್ಟ್ರೀಯ ಸಂಸ್ಥೆಗಳಿಗೆ ಇರುವ ಕಾರ್ಪೊರೇಟ್ ಸ್ವರೂಪದ ಕಾರಣ ಆಟಗಾರರಿಗೆ ಚಿತ್ರನಟರಿಗೆ ಇರುವಂಥ ತಾರಾಮೌಲ್ಯ ಒದಗಿಸಿದೆ. ಅಂದ ಮಾತ್ರಕ್ಕೆ ಅಪಾಯಕಾರಿ ಸಾಹಸದೃಶ್ಯಗಳಲ್ಲಿ ಅಭಿನಯಿಸುವ ನಟರಿಗೆ ಬದಲಿ ಸಾಹಸ ಕಲಾವಿದನನ್ನು ಒದಗಿಸುವಂತೆ, ಬ್ಯಾಟ್ಸ್‌ಮನ್‌ಗೆ ರನ್ನರ್ ಒದಗಿಸಬೇಕೆಂದು ನಿರೀಕ್ಷಿಸಲಾಗದು. ಸ್ನಾಯುಸೆಳೆತ, ಗಾಯದ ಕಾರಣದಿಂದ ಆಡಲಾಗದಿದ್ದರೆ ಕಣದಿಂದ ನಿರ್ಗಮಿಸುವುದು ಉತ್ತಮ. ಈಗ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯ ಆಡಬಲ್ಲ ಪ್ರತಿಭಾವಂತ ಯುವಕರಿಗೆ ಕೊರತೆ ಇಲ್ಲ. ನಡುವಯಸ್ಸಿನ ಸನಿಹದಲ್ಲಿದ್ದರೂ ಶತಕಗಳ ದಾಖಲೆ ನಿರ್ಮಿಸುತ್ತಿರುವ ಸಚಿನ್ ತೆಂಡೂಲ್ಕರ್ ಕೂಡ ರನ್ನರ್ ಸೌಲಭ್ಯ ಆಟಗಾರನ ಏಕಾಗ್ರತೆಗೆ ಭಂಗ ತರುವುದೆಂಬುದನ್ನು ಒಪ್ಪಿಕೊಂಡಿದ್ದಾರೆ. ಐಸಿಸಿ ತಡವಾಗಿಯಾದರೂ ಕೈಗೊಂಡ ತಿದ್ದುಪಡಿಗೆ ಬೆಂಬಲ ಸಿಗಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.