ಬಾಬಾ, ಸ್ವಾಮಿ, ಜ್ಯೋತಿಷಿ, ಮಂತ್ರವಾದಿ ಇತ್ಯಾದಿ.. ದೇಶದಲ್ಲಿ ಸಾಕ್ಷರತೆ ಮತ್ತು ಶಿಕ್ಷಣ ಪಡೆದವರ ಸಂಖ್ಯೆ ಈಗ ಹಿಂದೆಂದಿಗಿಂತಲೂ ದೊಡ್ಡದಾಗಿದ್ದರೂ ನಿರಕ್ಷರರಾಗಿರುವವರು ಮತ್ತು ವಿದ್ಯಾವಂತರಲ್ಲದವರು ಇನ್ನೂ ಕೆಲವು ಕೋಟಿ ಇದ್ದಾರೆ. ಶಾಲೆ ಕಾಲೇಜು ಓದಿದವರಿಗೆಲ್ಲ ತಾವು ಮುಂದಕ್ಕೂ ಓದುವವರಾಗಿಯೇ ಇರಬೇಕು, ವಿದ್ಯಾವಂತ ಪ್ರಜ್ಞಾವಂತ ಸತ್ಪ್ರಜೆಯಾಗಿಯಾಗಿರಬೇಕು ಎಂಬ ಸದಪೇಕ್ಷೆಯನ್ನು ಹುಟ್ಟಿಸುವ ರೀತಿಯಲ್ಲಿ ನಮ್ಮ ಶಿಕ್ಷಣ ವಿಧಾನ ಇಲ್ಲದಿರುವುದು ಇನ್ನೊಂದು ಕೊರತೆ. ಹೊಸದಾಗಿ ಸಾಕ್ಷರರಾದವರ ವಿದ್ಯಾವಂತಿಕೆಯಂತೂ ಸಹಿ ಹಾಕುವ ಹಂತದಲ್ಲೇ ನಿಂತುಹೋಗಿರುವ ನಿದರ್ಶನಗಳೇ ಅಧಿಕ. ಈಗ ಕಾಯಿಲೆ ಕಸಾಲೆಗಳಿಗೆ ಇರುವಷ್ಟು ವೈದ್ಯಕೀಯ ಸೌಲಭ್ಯ ಹಿಂದೆಂದೂ ಇರಲಿಲ್ಲ. ಆದರೆ ಅದನ್ನು ಪಡೆದುಕೊಳ್ಳಲು ಹೋಗದೆ ಸಾವಿರಾರು ಮಂದಿ ಸ್ವಾಮಿಗಳ, ಬಾಬಾಗಳ, ಮಂತ್ರವಾದಿಗಳ ಬಳಿಗೆ ಹೋಗುತ್ತಾರೆ. ಕಷ್ಟ ಬಂದಾಗ, ಸಮಸ್ಯೆಗಳು ಎದುರಾದಾಗ ಅದನ್ನು ಪರಿಹರಿಸಿಕೊಳ್ಳಲು ಬೇಕಾದ ಅರಿವು ಮತ್ತು ಜ್ಞಾನ ಇಲ್ಲದ ಮಂದಿ ನೇರವಾಗಿ ಜ್ಯೋತಿಷಿಗಳ ಬಳಿ, ಜಾತಕ ನೋಡಿ ಫಲ ದೋಷ ತಿಳಿಸುವ ಸ್ವಘೋಷಿತ ಜ್ಞಾನಿಗಳ ಬಳಿ ಹೋಗುತ್ತಾರೆ. ಇಂಥ ಅಮಾಯಕರು ನಮ್ಮ ಹಳ್ಳಿಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ಸಣ್ಣ ಸಂಖ್ಯೆಯಲ್ಲಿ ನಗರಗಳಲ್ಲಿಯೂ ಇದ್ದಾರೆ. ಈಗ ಟೀವಿ ಮೂಲಕ ಜ್ಯೋತಿಷಿಗಳು, ಸ್ವಾಮಿಗಳು, ಬಾಬಾಗಳು, ಮಾಟ ಮಂತ್ರ ಮಾಡುವವರು ಹೆಚ್ಚು ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಕಾಡು ಮೇಡುಗಳಲ್ಲಿರುವ ವಿಚಿತ್ರವಾದ ಗುಡಿ ಮಂದಿರಗಳು ಕೂಡ ಪ್ರಸಿದ್ಧಿಯನ್ನು ಪಡೆದು ಜನರನ್ನು ಆಕರ್ಷಿಸುತ್ತಿವೆ. ಈ ವಿಪರೀತ ಜ್ಞಾನಿಗಳ ವಿಲಕ್ಷಣವಾದ ಕಾರ್ಯಕ್ರಮಗಳನ್ನು ತಪ್ಪದೆ ವೀಕ್ಷಿಸುವ ಮಂದಿಯೂ ಇದ್ದಾರೆ. ಪರಿಣಾಮ: ಮೂಢನಂಬಿಕೆಗಳು ಹೆಚ್ಚಾಗುತ್ತಿವೆ. ನಿಂಬೆ ಹಣ್ಣು, ಅರಸಿನ ಪುಡಿ, ಕುಂಕುಮ ಇತ್ಯಾದಿಗಳ ಮೂಲಕ ವಿದ್ಯಾವಂತರನ್ನು, ಹಣವಂತರನ್ನು ರಾಜಕಾರಣಿಗಳನ್ನು ಬೆಚ್ಚಿಬೀಳಿಸಲು ಸಾಧ್ಯ ಎಂದು ಕಿಡಿಗೇಡಿಗಳು ತಿಳಿದುಕೊಂಡಿದ್ದಾರೆ. ಬಡವರಂತೂ ತಮ್ಮ ಮನೆಯ ಮುಂದೆ ರಸ್ತೆಯಲ್ಲಿ ಬಿದ್ದಿರುವ ಕೊಳೆತ ನಿಂಬೆಹಣ್ಣನ್ನೇ ಕಂಡು ಬೆಚ್ಚಿ ಬೀಳುತ್ತಾರೆ. ಅಂಥದನ್ನು ಕಂಡು, ತನ್ನ ಜೀವಕ್ಕೇ ಕುತ್ತು ಬಂತು ಎಂದು ಸುಳ್ಳು ಸುಳ್ಳೇ ಕೂಗಾಡುವ ರಾಜಕಾರಣಿಗಳಿದ್ದಾರೆ. ನಿಜವಾಗಿಯೂ ವಿದ್ಯಾವಂತರಾದವರು, ವೈಜ್ಞಾನಿಕವಾಗಿ ವಿಚಾರವಂತರಾದವರು ಇದನ್ನೆಲ್ಲ ನೋಡಿ ನಕ್ಕು ಸುಮ್ಮನಿರುತ್ತಾರೆಯೇ ವಿನಾ ಇದಕ್ಕೆ ತಾವೇನಾದರೂ ಮಾಡಬೇಕು, ಸಮಾಜದಲ್ಲಿ ಇಂಥ ಪ್ರತಿಗಾಮಿತ್ವ ಬೆಳೆಯುವುದು ಸಮಾಜ ಜೀವಿಗಳಿಗೂ ಒಳ್ಳೆಯದಲ್ಲ, ಪ್ರಜಾಪ್ರಭುತ್ವಕ್ಕೂ ಒಳ್ಳೆಯದಲ್ಲ ಎಂದು ಯಾಕೆ ಯೋಚಿಸುವುದಿಲ್ಲ ಎಂದು ಆಶ್ಚರ್ಯವಾಗುತ್ತದೆ. ಜಾತಕ ತಾಳೆ ಮಾಡದೆ ಮದುವೆಯೇ ಇಲ್ಲ ಎಂಬಂಥ ಕಾಲದಲ್ಲಿ ನಾವಿದ್ದೇವೆ. ಜಾತಕ ತಾಳೆಯಾಗಿ ಆದ ಮದುವೆಯಾಗಿರಲಿ, ಪ್ರೇಮ ವಿವಾಹವಾಗಿರಲಿ, ವಿವಾಹ ವಿಚ್ಛೇದನ ಆಗುವುದು ಆಗಿಯೇ ಆಗುತ್ತದೆ; ಆಗದಿರುವುದು ಆಗುವುದಿಲ್ಲ. ಅವಘಡದಲ್ಲಿ ಜರಗುವ ಸಾವು ತಪ್ಪುವುದಿಲ್ಲ. ಜಗತ್ತಿನ ನೂರಾರು ದೇಶಗಳಲ್ಲಿ ಜಾತಕವೆಂಬುದು ಇಲ್ಲದೆ ನಮ್ಮ ಹಾಗೆಯೇ ಇರುವ ಮಂದಿ ಬದುಕುವುದು ನಾವು ಬದುಕುವ ಹಾಗೆಯೇ. ನಮಗೆ ನಮ್ಮ ನಂಬಿಕೆ ಆಚರಣೆಗಳ ಮೂಲಕ ಅವಘಡಗಳನ್ನು, ಆಕಸ್ಮಿಕಗಳನ್ನು, ಸಾವನ್ನು, ವಿಚ್ಛೇದನಗಳನ್ನು ತಪ್ಪಿಸಲಾಗಿಲ್ಲ. ಅವರಿಂದಲೂ ಆಗಿಲ್ಲ. ನಾಳೆ ಸುನಾಮಿಯೋ ಭೂಕಂಪವೋ ಉಂಟಾದರೆ ನಮ್ಮ ನಂಬಿಕೆಗಳು, ಆಚಾರ ವಿಚಾರಗಳು ಯಾವುದನ್ನೂ ತಡೆಯಲಾರವು. ಇಷ್ಟೇ ಅಲ್ಲ, ನಾವು ನಮ್ಮ ಕುರುಡು ಆಚಾರ ವಿಚಾರಗಳ ಬಗ್ಗೆ ಮಾತಾಡುವುದು, ಟೀವಿಯಲ್ಲಿ ಅದರ ದೃಶ್ಯ ನೋಡುವುದು ನಮ್ಮ ಧ್ಯಾನಕ್ಕೆ, ವಿಚಾರ ಶಕ್ತಿಗೆ ಅಡ್ಡಿಯಾಗಿದೆ. ವೈಜ್ಞಾನಿಕ ಚಿಂತನೆಯ ದಾರಿಗೆ ಅಡ್ಡಗೋಡೆಯಾಗಿದೆ. ಈ ಕಾರಣಕ್ಕೆ ಈ ವೈಜ್ಞಾನಿಕ ಯುಗದಲ್ಲಿ ವಿಜ್ಞಾನ ಓದಿದವರಲ್ಲಿಯೇ ವೈಜ್ಞಾನಿಕ ಚಿಂತನೆ ಕಡಿಮೆಯಾಗಿದೆ. ಬದುಕಿನಲ್ಲಿ ಧೈರ್ಯ ತಂದುಕೊಡಬೇಕಾದ ವೈಜ್ಞಾನಿಕ ಚಿಂತನೆ ಅದೃಶ್ಯವಾಗಿ, ಮೂಢನಂಬಿಕೆಗಳು ಹುಟ್ಟಿಸುವ ಭಯದ ಪ್ರತೀಕವಾದ ಆಚರಣೆಗಳು ಎಲ್ಲಾ ಕಡೆ ವಿಜೃಂಭಿಸುತ್ತಿವೆ. ಮೂಢ ನಂಬಿಕೆಗೆ ಸಂಬಂಧಿಸಿದ ಟೀವಿ ಕಾರ್ಯಕ್ರಮಗಳಲ್ಲಿ ನೂರಾರು ಮಂದಿ ನಿರಕ್ಷರಸ್ಥರಾದ ಅಮಾಯಕ ಹಳ್ಳಿಗರ ಮಾತುಗಳನ್ನು ಬಿತ್ತರಿಸಲಾಗುತ್ತದೆ. ಯಾವುದೋ ಬಾಬಾನ ಆಶೀರ್ವಾದದಿಂದ ಕಾಯಿಲೆ ವಾಸಿಯಾಯಿತೆಂದೋ, ಯಾವ ಔಷಧಿಯಿಂದಲೂ ವಾಸಿಯಾಗದ ಕಾಯಿಲೆ ಬಾಬಾ ಕೊಟ್ಟ ನೀರಿನಿಂದ ವಾಸಿಯಾಯಿತೆಂದೋ, ಬಾಬಾ ಹೇಳಿದ ದೇವರಿಗೆ ಪೂಜೆ ಸಲ್ಲಿಸಿದ್ದರಿಂದ ಮಗಳಿಗೆ ಗಂಡು ಸಿಕ್ಕಿತೆಂದೋ ಹೆಂಗಸು ಹೇಳುತ್ತಾಳೆ. ಇಂಥ ಕಾರ್ಯಕ್ರಮಗಳಿಂದ ದಿಢೀರನೆ ಕುಗ್ರಾಮಗಳ ಮೂಲೆಯಲ್ಲಿರುವ ಕಲ್ಲುಗಳೆಲ್ಲ ದೇವಾಲಯಗಳಾಗಿ ಸಾವಿರಾರು ಜನರನ್ನು ಸೆಳೆಯತೊಡಗಿರುವುದು ಈ ದಶಕದ ದೊಡ್ಡ ಬೆಳವಣಿಗೆ. ಈ ಬೆಳವಣಿಗೆ ದಿನದಿಂದ ದಿನಕ್ಕೆ ತೀವ್ರವಾಗುತ್ತಿದೆ. ಅಷ್ಟೇ ವೇಗದಲ್ಲಿ, ಬಾಬಾಗಳು, ಸ್ವಾಮಿಗಳು, ಜ್ಯೋತಿಷಿಗಳು, ಮಂತ್ರವಾದಿಗಳು ಮುಂತಾದವರ ಸಂಖ್ಯೆ ಕೂಡ ಸೊಳ್ಳೆಗಳಂತೆ ವೃದ್ಧಿಯಾಗುತ್ತಿದೆ. ವಿಜ್ಞಾನಿಗಳು ಮತ್ತು ಜ್ಯೋತಿಷಿಗಳನ್ನು ಅಕ್ಕಪಕ್ಕದಲ್ಲಿ ಕುಳ್ಳಿರಿಸಿ ನಡೆಸುವ ಟೀವೀ ಸಂವಾದಗಳಲ್ಲಿ ಜ್ಯೋತಿಷಿಯ ಯದ್ವಾ ತದ್ವಾ ವಾದಕ್ಕೆ ವಿಜ್ಞಾನಿಗಳು ಬೆಪ್ಪಾಗಿ ಬಾಯಿ ಮುಚ್ಚಿ ಕುಳಿತುಕೊಳ್ಳುತ್ತಾರೆ. ವೈಚಾರಿಕತೆ ಎನ್ನುವುದು ರಾಜಕೀಯದಂತೆ ನಾಲಿಗೆಯ ಬಲದಿಂದ ಗೆಲ್ಲುವಂಥದಲ್ಲ ಎಂದು ಎಲ್ಲರಿಗೂ ಅರ್ಥವಾಗುತ್ತದೆಯೆ? ಇತ್ತೀಚೆಗಿನ ದಿನಗಳಲ್ಲಿ ಗ್ರಹಣ ಎಂಬುದು ಎಷ್ಟು ಘೋರ ಎಂದು ಜ್ಯೋತಿಷಿಗಳು ವರ್ಣಿಸಿ ವರ್ಣಿಸಿ ಜನರನ್ನು ಕುರುಡರಾಗಿಸಿಬಿಟ್ಟಿದ್ದಾರೆ. ಜ್ಯೋತಿಷಿ ಪಾಣಿಗ್ರಹಣವನ್ನೂ ಸೇರಿಸಿ ಗ್ರಹಣಗಳ ಸಂಖ್ಯೆಯನ್ನು ಇಪ್ಪತ್ತಾರಕ್ಕೆ ಏರಿಸಿದ್ದರಿಂದ ಜನರು ಹೊಸ ಗ್ರಹಣಗಳ ಬಗ್ಗೆಯೂ ಭಯಪಟ್ಟುಕೊಂಡರೆ ಅಚ್ಚರಿಯಿಲ್ಲ. ಸೂರ್ಯಗ್ರಹಣ, ಚಂದ್ರಗ್ರಹಣ ಎಂದರೆ ಏನು ಎಂದು ವಿಜ್ಞಾನಿ ಎಷ್ಟು ಸ್ಪಷ್ಟಪಡಿಸಿದರೂ ಜೋತಿಷಿ ಅದನ್ನು ಅಸ್ಪಷ್ಟಪಡಿಸುವಲ್ಲಿ ಸಫಲನಾಗುತ್ತಾನೆ. ಜ್ಯೋತಿಷ್ಯಶಾಸ್ತ್ರದ ಸಾರ್ವಭೌಮತ್ವವನ್ನು ಸಾರುತ್ತಾ, `ವಿಜ್ಞಾನದಿಂದ ಎಲ್ಲವನ್ನೂ ಕಾಣಲಿಕ್ಕಾಗುವುದಿಲ್ಲ~ ಎಂದು ಜ್ಯೋತಿಷಿ ಹೇಳಿದರೆ, ಜ್ಯೋತಿಷ್ಯ ಎಲ್ಲವನ್ನೂ ಕಾಣಿಸುತ್ತದೆ ಎಂದು ಅರ್ಥ ಮಾಡಿಕೊಳ್ಳಬೇಕು! ಗ್ರಹ, ನಕ್ಷತ್ರಗಳು ಅವುಗಳ ಪಾಡಿಗಿವೆ. ಅವುಗಳಿಂದ ಕೋಟ್ಯಂತರ ಮೈಲು ದೂರದಲ್ಲಿರುವ ಮನುಷ್ಯ ಅವನ ಪಾಡಿಗಿದ್ದಾನೆ. ಅವುಗಳ ಪ್ರಭಾವ ಮನುಷ್ಯನ ಮೇಲೆ ಏನೂ ಇಲ್ಲ. ಮನುಷ್ಯನ ಬದುಕನ್ನು ನಿರ್ಧರಿಸುವುದು ಅವನ ಬುದ್ಧಿ ಮತ್ತು ಅವನ ಕರ್ಮ. ಇದನ್ನು ಅರ್ಥ ಮಾಡಿಸುವಂಥ ಕಾರ್ಯಕ್ರಮಗಳು ಟೀವಿಯಲ್ಲಿ ಯಾಕಿಲ್ಲ? ನಮ್ಮ ದೇಶದಲ್ಲಿ ಶಿಕ್ಷಣ ಪಡೆದವರೆಲ್ಲ ನಿಜವಾದ ಅರ್ಥದಲ್ಲಿ ಸುಶಿಕ್ಷಿತರಾಗಲಿಲ್ಲ. ಶಿಕ್ಷಣ ಕೆಲವು ವಿಷಯಗಳ ಅಧ್ಯಯನ ಮತ್ತು ಉದ್ಯೋಗ ಗಳಿಕೆಗೆ ಸೀಮಿತವಾಗಿದೆ. ವೈಜ್ಞಾನಿಕ ತಿಳಿವಳಿಕೆ ಹಿಂದೆಯೇ ಉಳಿದಿದೆ. ಹಳೆಯ ಮೂಢನಂಬಿಕೆಗಳು ಹಾಗೆಯೇ ಮುಂದುವರಿದಿವೆ. ವಿದ್ಯಾವಂತರು ಕೂಡ ಹಳೆಯ ನಂಬಿಕೆಗಳನ್ನು ಬಿಟ್ಟಿಲ್ಲ. ವೈಜ್ಞಾನಿಕ ಚಿಂತನೆಯ ಬಗ್ಗೆ ಅದು ಏನು, ಹೇಗೆ ಎಂದು ಗೊತ್ತಿಲ್ಲದ ಅನಕ್ಷರಸ್ಥರು ಮೌನವಾಗಿರುತ್ತಾರೆ. `ವಿಜ್ಞಾನದ ಮೂಲಕ ಎಲ್ಲ ಸತ್ಯವನ್ನು ಕಾಣಲಿಕ್ಕಾಗುವುದಿಲ್ಲ~ ಎನ್ನುವುದು ವೈಜ್ಞಾನಿಕ ಚಿಂತನೆಯ ವಿರುದ್ಧ ಒಂದು ಜನಪ್ರಿಯ ವಾದ. ಸತ್ಯ ಎನ್ನುವುದು ಸಾರ್ವಕಾಲಿಕವಲ್ಲ, ಅದನ್ನು ಕಾಣಿಸುವುದು ವಿಜ್ಞಾನದ ಕೆಲಸವಲ್ಲ. ತನ್ನ ಮುಂದೆ ಇರುವುದನ್ನು ಅರ್ಥಮಾಡಿಕೊಂಡು ಜೀವಿಸುವುದು ನಮ್ಮ ಕೆಲಸ. ಅದಕ್ಕೆ ವಿಜ್ಞಾನದ ಜ್ಞಾನ ಅಗತ್ಯ. ಈ ಬಾಬಾಗಳು, ಸ್ವಾಮಿಗಳು ತಮ್ಮ ನಿದ್ರೆಯಲ್ಲಿ, ಕನಸಿನಲ್ಲಿ, ಕಲ್ಪನೆಯಲ್ಲಿ ಕಂಡದ್ದನ್ನು ಸತ್ಯ ಎಂದು ಪ್ರತಿಪಾದಿಸುತ್ತಾರೆ. `ನಾನು ದೇವರನ್ನು ಕಂಡಿದ್ದೇನೆ~ ಎನ್ನುತ್ತಾರೆ. ಇತರರೂ ಕಾಣುವಂತೆ ಮಾಡುತ್ತಾರೆ! ಈ ರೀತಿ ಮಾತಿನಲ್ಲಿ ಮರುಳು ಮಾಡಲು ಸಂಸ್ಕೃತ ಭಾಷೆಯ ನೆರವನ್ನು ಪಡೆಯುವವರೂ ಇದ್ದಾರೆ. ಕನ್ನಡದಲ್ಲಿ ಹೇಳುವುದನ್ನೇ ಯಾರೋ ಬರೆದಿರಿಸಿದ ಒಂದು ಸಂಸ್ಕೃತ ನುಡಿಯಲ್ಲಿ ಹೇಳಿದರೆ ಭವ್ಯವಾಗಿ ಕೇಳಿಸುತ್ತದೆ! ಶಿಕ್ಷಣದ ಮೂಲಕ ಗಳಿಸಿದ ಮಾತಾಡುವ ಮತ್ತು ಬರೆಯುವ ಕೌಶಲವನ್ನು ಈ ರೀತಿ ಉಪಯೋಗಕ್ಕೆ ಹಚ್ಚುವುದು ಒಂದು ವಿಲಕ್ಷಣ ಸಾಮಾಜಿಕ ಬೆಳವಣಿಗೆಯಾಗಿದೆ. ಅಶಿಕ್ಷಿತರು, ಮುಗ್ಧರು ಇವರ ಮಾತಿಗೆ ಮರಳಾಗುತ್ತಾರೆ. ಸ್ವಾಮಿ ಅಥವಾ ಅದೇ ಅರ್ಥದ `ಗುರು~ ಭಾರತದ ಹೊರತು ಜಗತ್ತಿನಲ್ಲಿ ಬೇರೆಲ್ಲಿಯೂ ಇಲ್ಲ. ಮುಲ್ಲಾ, ಪಾದ್ರಿ ಎಂಬುದು ಸಾಂಸ್ಥಿಕ. ಆದ್ದರಿಂದ ಗುರು ಅಥವಾ `ಸ್ವಾಮಿ~ ಆಗಲು ನಿರ್ದಿಷ್ಟವಾದ ಮಾನದಂಡಗಳು ಬೇಕು, ಸರ್ಕಾರದ ಪರವಾನಗಿ ಬೇಕು. ಪೊಲೀಸ್ ಉಡುಪು ಹಾಕಿಕೊಂಡು ತಾನು ಪೊಲೀಸ್ ಎನ್ನಲಿಕ್ಕಾಗುವುದಿಲ್ಲ. ಹಾಗೆಯೇ ಕಾವಿ ತೊಟ್ಟುಕೊಂಡು ತಾನು `ಗುರು~ ಅಥವಾ `ಸ್ವಾಮಿ~ ಎಂದು ಜನರನ್ನು ವಂಚಿಸಲು ಅವಕಾಶ ಇರಕೂಡದು. ಜನಸೇವೆಗೆ ತನ್ನನ್ನು ಅರ್ಪಿಸಿಕೊಳ್ಳಬಯಸುವಾತನಿಗೆ ಕಾವಿ ಬಟ್ಟೆ ಅನಿವಾರ್ಯವೇನಲ್ಲ. ಸಮಾಜದ ಸಾಂಸ್ಥಿಕ ಒಪ್ಪಿಗೆ ಸಾಕು. ಕಾವಿ ಸಮವಸ್ತ್ರ ಬೇಕೆಂದಾದರೆ ಅದಕ್ಕೆ ಸರ್ಕಾರದ ಪರವಾನಗಿ ಬೇಕು. ತನ್ನನ್ನೇ ತಾನು ಗುರು ಅಥವಾ ಸ್ವಾಮಿ ಅಂಥ ಘೋಷಿಸುವುದು ಅಪರಾಧ ಎಂದಾಗಬೇಕು. ಕೆಲವರು ತಾವು ಹಣ ಮಾಡುತ್ತಿಲ್ಲ, ಸಮಾಜಸೇವೆ ಮಾಡುತ್ತಿದ್ದೆೀವೆ ಎನ್ನಬಹುದು. ಆದರೆ ಯಾವ ಬೇಕಾಬಿಟ್ಟಿ ಸ್ವಾಮಿಯೂ ಸಾವಿನ ವರೆಗೆ ಶುದ್ಧ ಸಮಾಜಸೇವೆಗೆ ಬದ್ಧನಾಗಿರುವುದಿಲ್ಲ. ಈಗ ಗಲ್ಲಿಗೊಬ್ಬ ಸ್ವಾಮಿ ಎಂಬಂತಾಗಿದ್ದಾರೆ. ಅಲ್ಲೇ ಅವರ ಮಠ, ಅವರ ದೇವಮಂದಿರ. ಕೆಲವರಿಗೆ ಸಂಸಾರ ಕೂಡ ಇರುತ್ತದೆ. ಕೆಲವು `ಸಬಲ~ ಸ್ವಾಮಿಗಳು, `ಗುರು~ಗಳು `ಅಣ್ಣ~ಗಳು ರಾಜಕಾರಣಿಗಳ ವೋಟು ಬ್ಯಾಂಕು ಸಹ ಆಗಿರುತ್ತಾರೆ. ಆ ರೀತಿಯಿಂದ ಆರಂಭ ಮಾಡಿ ಲಕ್ಷಗಟ್ಟಲೆ, ಕೋಟಿಗಟ್ಟಲೆ ಸಂಪಾದಿಸಿದವರು ನಮ್ಮ ಸುತ್ತ ಮುತ್ತ ಇದ್ದಾರೆ. ಅವರ ಸಂಪಾದನೆಗೆ ಲೆಕ್ಕಾಚಾರ ಇಲ್ಲ. ಇದು ಕೂಡ ಭ್ರಷ್ಟಾಚಾರ ಅಲ್ಲವೇ? ಇದು ಸಾಂಸ್ಥಿಕ ಭ್ರಷ್ಟಾಚಾರಕ್ಕಿಂತ ಕೆಟ್ಟದು, ಯಾಕೆಂದರೆ, ಇದು ಅನಾಚಾರಕ್ಕೆ ಅವಕಾಶ ಮಾಡಿಕೊಡುತ್ತದೆ. ಸಾಂಸ್ಥಿಕ ಭ್ರಷ್ಟಾಚಾರಕ್ಕಾದರೂ ಜನಲೋಕಪಾಲ ಮಸೂದೆ ಕೊನೆ ತರಬಹುದು. ಇಂಥ ಸಮಾಜವ್ಯಾಪೀ, ಜೀವ ವಿರೋಧಿ ಭ್ರಷ್ಟಾಚಾರವನ್ನು ನಿಲ್ಲಿಸುವುದು ಹೇಗೆ? ಇಂಥವರನ್ನು ಸರ್ಕಾರ ಮಾತ್ರವಲ್ಲ, ಸಾಮಾಜಿಕ ಸಂಘಟನೆಗಳು ಮತ್ತು ಬುದ್ಧಿಜೀವಿಗಳು ಕೂಡ ವಿಚಾರಿಸಿಕೊಳ್ಳಬೇಕು. ಒಂದು ಕಾನೂನಿನಿಂದ ಸಾರ್ವಜನಿಕ ಸ್ಥಳದಲ್ಲಿ ಹೇಗೆ ಹೊಗೆಬತ್ತಿ ಸೇವನೆ ಅದೃಶ್ಯವಾಯಿತು ನೋಡಿ. ಅದೇ ರೀತಿ, ಒಂದಂಕಿ ಲಾಟರಿ ರಾತ್ರಿ ಬೆಳಗಾಗುವುದರಲ್ಲಿ ಕಾಲು ಕೀಳಲಿಲ್ಲವೆ? ರೋಗಿ ಮನಸ್ಸಿನವರು ತಮ್ಮ ವ್ಯಸನವನ್ನು ಮುಂದುವರಿಸಲು ಬೇರೆ ದಾರಿ ಹುಡುಕಿಯಾರು. ಅದು ಯಾವ ಕಾಲಕ್ಕೂ ಇದ್ದದ್ದೇ. ಆದರೆ ಕಾನೂನಿಂದ ಸಮಾಜಕ್ಕಂಟಿದ ಪೀಡೆಯನ್ನು ಬಹುಮಟ್ಟಿಗೆ ನಿವಾರಿಸಲು ಸಾಧ್ಯವಿದೆ. ಈ ಸ್ವಾಮಿ, ಬಾಬಾ, ಮಂತ್ರವಾದಿಗಳ ಸಾಮ್ರಾಜ್ಯವನ್ನು ಮುಗಿಸಲು ಸರ್ಕಾರದಿಂದ ಸಾಧ್ಯವಿಲ್ಲವೆ? ಕಮ್ಯೂನಿಸ್ಟ್ ಸೋಶಿಯಲಿಸ್ಟ್ ಆಡಳಿತೆಯ ಎಷ್ಟೋ ರಾಷ್ಟ್ರಗಳು ರಾತ್ರಿ ಬೆಳಗಾಗುವುದರೊಳಗೆ ತಮ್ಮ ದೇಶದಲ್ಲಿರುವ ಎಲ್ಲ ಮಂತ್ರವಾದಿಗಳ, ಕಣಿ ಹೇಳುವವರ, ವಿಚ್-ಡಾಕ್ಟರುಗಳ ಹುಟ್ಟಡಗಿಸಿದ್ದಾರೆ. ಪ್ರಜಾಪ್ರಭುತ್ವವಿರುವ ನಮ್ಮ ರಾಷ್ಟ್ರದಿಂದ ಯಾಕಾಗಲಿಕ್ಕಿಲ್ಲ? ಪುಸ್ತಕಗಳಿಂದ ಮಾಡಲಾಗದ್ದನ್ನು ಟೀವಿ ಮಾಧ್ಯಮ ಮಾಡಬಹುದು. ವಿದ್ಯಾವಂತರಾಗಿದ್ದರೂ ಪುಸ್ತಕವೋದುವ ತಾಳ್ಮೆ ಇಲ್ಲದವರಿದ್ದಾರೆ. ಆದರೆ ಅವರನ್ನು ಟೀವಿ ತಲುಪುತ್ತದೆ. ಅಕ್ಷರಜ್ಞಾನ ಇರುವವರು ಬೇರೆ ಬೇರೆ ನೆಲೆಯವರು. ಅವರೆಲ್ಲ ಓದುವವರಲ್ಲ. ಓದಿ ಅರ್ಥ ಮಾಡಿಕೊಳ್ಳುವುದು, ಅವರಲ್ಲಿ ಎಲ್ಲರಿಂದ ಸಾಧ್ಯವೂ ಇಲ್ಲ. ಆದುದರಿಂದ ಟೀವಿಯ ಮೂಲಕ ಜನರಿಗೆ ಶಿಕ್ಷಣ ನೀಡಲು ಸಾಧ್ಯವಿದೆ. ದೊಡ್ಡ ಸ್ವರದಲ್ಲಿ ಮಾತಾಡಲಾಗದ ವಿಜ್ಞಾನಿಗಳನ್ನು ಮೂಢನಂಬಿಕೆಯ ವಕ್ತಾರರ ಜೊತೆಯಲ್ಲಿ ಕುಳ್ಳಿರಿಸಿ ಸಂದರ್ಶನ ನಡೆಸಿ ವಿಜ್ಞಾನಿಗಳ ಮುಖಭಂಗ ಮಾಡುವುದು ಯಾಕೆ? ಹೆಚ್ಚಿನ ವೀಕ್ಷಕರಿಗೆ ವಿಜ್ಞಾನಿಗಳು ಹೇಳಿದ್ದನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಇಲ್ಲ. ಆದರೆ ಅವರಿಗೆ ಜ್ಯೋತಿಷಿಗಳು ಹೇಳಿದ್ದು ಸುಲಭದಲ್ಲಿ ಅರ್ಥವಾಗುತ್ತದೆ! ಕಾರ್ಯಕ್ರಮದ ನಂತರ ಜ್ಯೋತಿಷಿಯ ಬಿಜಿನೆಸ್ ವೃದ್ಧಿಸುತ್ತದೆ. ಟೀವಿಯಿಂದ ಜನರ ಮೌಢ್ಯವನ್ನು ತೊಲಗಿಸುವ ಕಾರ್ಯಕ್ರಮಗಳನ್ನು ನಡೆಸಲಿಕ್ಕೆ ಆಗುವುದಿಲ್ಲವೆ? ವೈಜ್ಞಾನಿಕ ವಿಚಾರಕ್ಕೆ ಪ್ರತ್ಯೇಕ ಕಾರ್ಯಕ್ರಮ ಕೂಡ ಇರಬೇಕು. ಅದೆಷ್ಟು ಚಾನೆಲುಗಳು ಜಾತಕ ಫಲ, ದಿನ ಭವಿಷ್ಯ ಇತ್ಯಾದಿ ಹೇಳುವುದಿಲ್ಲ? ಇದನ್ನು ಟೀವಿಗಳು ಯಾಕೆ ಮಾಡುತ್ತವೆ? (ಅನಿವಾರ್ಯ ಕಾರಣಗಳಿಂದ `ಅನಾವರಣ~ ಅಂಕಣ ಪ್ರಕಟವಾಗಿಲ್ಲ) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.