ಮನೆ ಪಾಠದ ಮೋಹ ಶಿಕ್ಷಣ ಎನ್ನುವುದು ಮಕ್ಕಳ ಪಾಲಿಗೆ ಸವಾಲಿನ ವಿಷಯವಾಗಿರುವುದರಿಂದ, ಪೋಷಕರ ದೃಷ್ಟಿಯಲ್ಲಿ ಪ್ರತಿಷ್ಠೆಯಾಗಿರುವುದರಿಂದ ಖಾಸಗಿ ಮನೆಪಾಠ ಅನಿವಾರ್ಯ ಎನ್ನುವ ಸ್ಥಿತಿ ಶಿಕ್ಷಣರಂಗದಲ್ಲಿ ತಲೆದೋರಿರುವುದು ಚಿಂತನಾರ್ಹ ಸಂಗತಿ. ರಾಷ್ಟ್ರದ ಗ್ರಾಮೀಣ ಪ್ರದೇಶದ ಮಕ್ಕಳು ಸುಧಾರಿತ ಶಿಕ್ಷಣ ಪಡೆಯಬೇಕೆಂದರೆ ಖಾಸಗಿ ಮನೆಪಾಠವನ್ನು ಅವಲಂಬಿಸುವುದು ಅನಿವಾರ್ಯ ಎನ್ನುವ ಅಂಶವನ್ನು ಶೈಕ್ಷಣಿಕ ವಾರ್ಷಿಕ ಸ್ಥಿತಿಗತಿ (ಎಎಸ್‌ಇಆರ್) ವರದಿ ಹೇಳಿದೆ. ಖಾಸಗಿ ಮನೆಪಾಠಕ್ಕೆ ಹೋಗುವವರ ಕಲಿಕಾಮಟ್ಟ ಅಧಿಕವಿರುವುದು, ಸರ್ಕಾರಿ ಶಾಲೆಗಳ ಬೋಧನಾ ಗುಣಮಟ್ಟವನ್ನು ಪ್ರಶ್ನಿಸುತ್ತದೆ. ಸರ್ಕಾರಿ ಶಾಲೆಯೇ ಇರಲಿ, ಖಾಸಗಿ ಶಾಲೆಯೇ ಇರಲಿ, ಮಕ್ಕಳು ಶಾಲೆಗಿಂತ ಹೆಚ್ಚಾಗಿ ಮನೆಪಾಠದಲ್ಲೇ ಹೆಚ್ಚಾಗಿ ಮನವರಿಕೆ ಮಾಡಿಕೊಳ್ಳುತ್ತಾರೆ. ಶಾಲಾ ಶಿಕ್ಷಕರು ಬದಲಾಗುತ್ತಿರುವ ಪಠ್ಯಕ್ರಮಕ್ಕೆ, ಬದಲಾವಣೆಗೆ ಒಳಗಾಗುತ್ತಿರುವ ಬೋಧನಾ ಕ್ರಮಕ್ಕೆ ಒಡ್ಡಿಕೊಳ್ಳದಿರುವುದೂ ಇಂತಹ ಏರುಪೇರಿನ ಸ್ಥಿತಿಗೆ ಕಾರಣವಾಗಿದೆ. ಹೀಗಾಗಿ ಮನೆಪಾಠದ ಆಕರ್ಷಣೆ ಹೆಚ್ಚಾಗಿದೆ. ಭಾರತದಲ್ಲಿ ಮನೆಪಾಠ ಮತ್ತು ಟ್ಯುಟೋರಿಯಲ್‌ಗಳ ಒಟ್ಟು ಹಣಕಾಸು ವಹಿವಾಟು ವರ್ಷಕ್ಕೆ ಸುಮಾರು 35 ಸಾವಿರ ಕೋಟಿ ರೂಪಾಯಿಗಳಾಗಿದೆ ಎನ್ನುವುದು ಒಂದು ಅಂದಾಜು. 2018ರ ವೇಳೆಗೆ ರಾಷ್ಟ್ರದ ಗ್ರಾಮೀಣ ಪ್ರದೇಶದಲ್ಲಿ ಕೂಡ ಶೇ.50 ರಷ್ಟು ವಿದ್ಯಾರ್ಥಿಗಳು ಖಾಸಗಿ ಶಿಕ್ಷಣದ ಮೊರೆ ಹೋಗುವ ಸಂಭವವಿದೆ ಎಂದು ವರದಿಯಲ್ಲಿ ವಿಶ್ಲೇಷಿಸಿರುವುದು ಕೂಡ ಬದಲಾಗುತ್ತಿರುವ ಸನ್ನಿವೇಶಕ್ಕೆ ಉದಾಹರಣೆಯಂತಿದೆ. ಮಕ್ಕಳ ಓದಿನ ಗುಣಮಟ್ಟ ಕುಸಿದಿರುವುದು ಒಂದು ಕಡೆಯಾದರೆ, ಗಣಿತದಲ್ಲಿ ಹಿಂದೆಬಿದ್ದಿರುವುದೂ ಕೂಡ ವಿಶ್ಲೇಷಣೆಗೆ ಒಳಪಡಬೇಕಾದ ಸಂಗತಿ. ಟ್ಯೂಷನ್ ಪಿಡುಗು ಇಂದು ನಗರವಷ್ಟೇ ಅಲ್ಲದೆ ಗ್ರಾಮೀಣ ಪ್ರದೇಶಕ್ಕೂ ವ್ಯಾಪಿಸಿದೆ. ಅಂಕಗಳನ್ನು ಗಳಿಸುವ ಪೈಪೋಟಿಯಲ್ಲಿ ಶಿಕ್ಷಣದ ಜ್ಞಾನ ಸಂಪಾದನೆಯ ಮೂಲ ಉದ್ದೇಶವನ್ನೇ ಮರೆತು, ಅದನ್ನು ಜೀವನೋಪಾಯದ ಮಾರ್ಗವನ್ನಾಗಿ ಪರಿವರ್ತಿಸಿಕೊಂಡಿರುವ ಬೆಳವಣಿಗೆ ಕಂಡುಬರುತ್ತಿದೆ. ಇದಕ್ಕಾಗಿ ಅಂಕಗಳಿಕೆಗಾಗಿ ಎಲ್ಲ ವಿದ್ಯಾರ್ಥಿಗಳೂ ಹಪಹಪಿಸುತ್ತಾರೆ. ಈ ಅಗತ್ಯವನ್ನು ಪೂರೈಸುವುದಕ್ಕಾಗಿಯೇ ಖಾಸಗಿ ಮನೆ ಪಾಠ ಹೇಳುವವರು ಹೆಚ್ಚಾಗುತ್ತಿದ್ದಾರೆ. ಸಮಾನ ಶಿಕ್ಷಣ ವ್ಯವಸ್ಥೆಯಿಂದ ಮಾತ್ರ ಸಮಾನತೆಯ ತಳಹದಿಯ ಮೇಲೆ ಸಮಾಜವನ್ನು ಕಟ್ಟಲು ಸಾಧ್ಯ. ಆದರೆ ಶಿಕ್ಷಣ ಕ್ಷೇತ್ರವನ್ನು ಖಾಸಗಿಯವರಿಗೆ ಬಿಟ್ಟುಕೊಟ್ಟು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಾ ಬರುತ್ತಿರುವ ಸರ್ಕಾರಗಳು. ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ನಿಯಂತ್ರಿಸುವ ಶಕ್ತಿಯನ್ನು ಕೂಡಾ ಕಳೆದುಕೊಂಡಿವೆ. ಸರ್ಕಾರಿ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳ ಶಿಕ್ಷಕರು ಟ್ಯೂಷನ್ ತರಗತಿಗಳನ್ನು ನಡೆಸುವುದು ಕಾನೂನು ಪ್ರಕಾರ ಅಪರಾಧ. ಆದರೆ ಸರ್ಕಾರದಿಂದ ಸಂಬಳ ಪಡೆದೂ ಮನೆಪಾಠ ಹೇಳುವ ಪ್ರವೃತ್ತಿಯೂ ಹೆಚ್ಚುತ್ತಿದೆ. ಹೀಗಾಗಿ ಮಕ್ಕಳೂ ಮನೆಪಾಠವನ್ನು ಅವಲಂಬಿಸುವ ಸ್ಥಿತಿ ಬಂದೊದಗಿದೆ. ಬೌದ್ಧಿಕ ಬೆಳವಣಿಗೆಗೆ ಮಕ್ಕಳು ಶಾಲೆಯನ್ನೇ ಅವಲಂಬಿಸುವಂತೆ ಮಾಡುವ ನಿಟ್ಟಿನಲ್ಲಿ ಚಿಂತಿಸಬೇಕಾದ ಸಮಯ ಈಗ ಬಂದಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.