ಮೈಮೇಲೆ ಎಳೆದುಕೊಂಡ ವಿವಾದ ಭಾರತ ಧರ್ಮನಿರಪೇಕ್ಷ ರಾಷ್ಟ್ರ ಎಂಬುದನ್ನು ನಾವು ಸಂವಿಧಾನಬದ್ಧವಾಗಿ ಒಪ್ಪಿಕೊಂಡಿದ್ದೇವೆ. ಜನತಂತ್ರ ವ್ಯವಸ್ಥೆಯಲ್ಲಿ ಎಲ್ಲ ಧರ್ಮಗಳೂ ಸಮಾನ. ವೈವಿಧ್ಯತೆಯಲ್ಲಿ ಏಕತೆ ಎನ್ನುವ ಮಂತ್ರವೇ ದೇಶವನ್ನು ಒಟ್ಟಾಗಿ ಹಿಡಿದಿಟ್ಟುಕೊಂಡಿದೆ. ಈ ಉದಾತ್ತ ತತ್ವಕ್ಕೆ ಧಕ್ಕೆ ಆಗದಂತೆ ಸರ್ಕಾರ ಮತ್ತು ಸಮಾಜ ನಡೆಯಬೇಕೆನ್ನುವುದು ಧರ್ಮನಿರಪೇಕ್ಷ ತತ್ವದಲ್ಲಿ ನಂಬಿಕೆ ಇಟ್ಟಿರುವವರ ಆಶಯ. ಆದರೂ ಇಂಥ ಆಶಯಕ್ಕೆ ವಿರುದ್ಧವಾದ ಚಟುವಟಿಕೆಗಳು ಆಡಳಿತ ನಡೆಸುವವರಿಂದಲೇ ಆಗಾಗ ನಡೆಯುತ್ತಿರುತ್ತವೆ. ಶಿರಸಿಯ ಸೋಂದಾ ಸ್ವರ್ಣವಲ್ಲಿ ಮಠ ಸರ್ಕಾರಿ ಶಾಲೆಗಳಲ್ಲಿ ಕೈಗೊಂಡಿರುವ `ಭಗವದ್ಗೀತೆ ಅಭಿಯಾನ~ಕ್ಕೆ ಸರ್ಕಾರ ಒತ್ತಾಸೆಯಾಗಿ ನಿಂತಿರುವುದು ವಿವೇಚನೆಯಿಂದ ಕೂಡಿದ್ದಲ್ಲ. ಈ ಅಭಿಯಾನ ಸರ್ಕಾರದ ಒಂದು ಅಧಿಕೃತ ಕಾರ್ಯಕ್ರಮ ಎನ್ನುವ ರೀತಿಯಲ್ಲಿಯೇ ನಡೆಯುತ್ತಿರುವುದನ್ನು ಸಮರ್ಥಿಸುವುದಕ್ಕೆ ಕಾರಣಗಳಿಲ್ಲ. ಬಿಜೆಪಿ ಸರ್ಕಾರವು ತನ್ನ ಹಿಂದುತ್ವದ ರಹಸ್ಯ ಕಾರ್ಯಸೂಚಿಯನ್ನು ಜಾರಿಮಾಡುವ ಆರೋಪಗಳಿಗೆ ಈ ಕಾರ್ಯಕ್ರಮ ಪುರಾವೆ ನೀಡಿದಂತಾಗಿದೆ. ಒಂದು ಧರ್ಮಕ್ಕೆ ವಿಶೇಷ ಒಲವು ಮತ್ತು ಉತ್ತೇಜನ ನೀಡುವುದನ್ನು ಆಡಳಿತ ನಡೆಸುವವರ ನಿಷ್ಪಕ್ಷಪಾತದ ನಿರ್ಧಾರ ಎನ್ನಲಾಗದು. ವಿದ್ಯಾರ್ಥಿಗಳಿಗೆ ನೀತಿ ಪಾಠ ಮತ್ತು ಧಾರ್ಮಿಕ ವಿಚಾರಗಳ ತಿಳುವಳಿಕೆ ಅವಶ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ಉದ್ದೇಶದಿಂದ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಮಟ್ಟದಲ್ಲಿ ಹಲವಾರು ವರ್ಷಗಳಿಂದ ಪ್ರತಿಯೊಂದು ಧರ್ಮ ಮತ್ತು ಧಾರ್ಮಿಕ ಗುರುಗಳ ಸಂಕ್ಷಿಪ್ತ ಪರಿಚಯ ಕುರಿತ ಪಠ್ಯಗಳಿವೆ. ಭಾರತದಲ್ಲಿನ ವಿವಿಧ ಧರ್ಮಗಳ ಬಗೆಗೆ ತಿಳಿಯಲು ಇದಿಷ್ಟು ಸಾಕು. ಯಾವುದೇ ಒಂದು ಧರ್ಮದ ಬಗೆಗೆ ಹೆಚ್ಚಿನ ಅಧ್ಯಯನ ಮಾಡಲು ಆಯಾ ಧಾರ್ಮಿಕ ಕೇಂದ್ರಗಳು, ಮಠಗಳು ಮತ್ತು ಅಧ್ಯಯನ ಪೀಠಗಳಿವೆ. ಆಸಕ್ತರು ಇಂತಹ ಕಡೆಗಳಲ್ಲಿ ಅಧ್ಯಯನ ಮಾಡಲು ಮುಕ್ತ ಅವಕಾಶವಿದೆ. ಆದರೂ ಸರ್ಕಾರ ವಿಶೇಷ ಆಸಕ್ತಿವಹಿಸಿ ಭಗವದ್ಗೀತೆ ಅಭಿಯಾನಕ್ಕೆ ಸಹಾಯ ಮಾಡುತ್ತಿದೆ. ಇದನ್ನು ಕೆಲವು ಸಂಘಟನೆಗಳು ಆಕ್ಷೇಪಿಸಿರುವುದನ್ನು ತಪ್ಪು ಎನ್ನಲಾಗದು. ಸೋಂದಾ ಸ್ವರ್ಣವಲ್ಲಿ ಮಠದ ರೀತಿಯಲ್ಲಿಯೇ ಬೇರೆ ಬೇರೆ ಧಾರ್ಮಿಕ ಸಂಸ್ಥೆಗಳು ತಮ್ಮ ಧರ್ಮಗಳ ಬಗೆಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಸಹಕಾರ ಮತ್ತು ಅನುಮತಿ ಕೇಳಿದರೆ ಸರ್ಕಾರ ಏನು ಉತ್ತರ ನೀಡುತ್ತದೆ? ಇಂದು ಶಾಲೆಗಳಲ್ಲಿ ಪಾಠ ಪ್ರವಚನಗಳೇ ಸರಿಯಾಗಿ ನಡೆಯುತ್ತಿಲ್ಲ ಎನ್ನುವ ದೂರುಗಳಿವೆ. ಶಿಕ್ಷಕರು ತಮ್ಮ ಕೆಲಸವನ್ನು ನಿಯತ್ತಿನಿಂದ ಮಾಡುವಂತೆ ಸರ್ಕಾರ ಮಾಡಬೇಕಿದೆ. ಅತ್ತ ಗಮನ ನೀಡುವ ಬದಲು ಸರ್ಕಾರ ಭಗವದ್ಗೀತೆ ಅಭಿಯಾನದಂತಹ ಕಾರ್ಯಕ್ರಮಕ್ಕೆ ಬೆಂಬಲ ನೀಡಿ ಅನವಶ್ಯಕವಾಗಿ ಸಮಸ್ಯೆಯನ್ನು ಮೈಮೇಲೆ ಎಳೆದುಕೊಂಡಿದೆ. ಮಠ ಮಂದಿರಗಳು ನಡೆಸುವ ಧರ್ಮ ಬೋಧನೆಯ ಕಾರ್ಯಕ್ರಮಗಳನ್ನು ಶಿಕ್ಷಣ ಸಂಸ್ಥೆಗಳ ಆವರಣಕ್ಕೆ ತರುವುದು ಸರ್ಕಾರದ ಕೆಲಸವಲ್ಲ. ಈಗಾಗಲೇ ಮಠಗಳಿಗೆ ಬಜೆಟ್ ಮೂಲಕವೇ ಹಣಕಾಸು ನೀಡುವ ಮೂಲಕ ಸಾರ್ವಜನಿಕವಾಗಿ ಟೀಕೆಗೆ ಒಳಗಾಗಿರುವ ಸರ್ಕಾರ ಇನ್ನೂ ಪಾಠ ಕಲಿಯದಿರುವುದು ದುರದೃಷ್ಟಕರ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.