ಹಳಿ ತಪ್ಪಿರುವ ಇಲಾಖೆ ಜನಪ್ರಿಯತೆಯ ಹಳಿಯ ಮೇಲೆಯೇ ರೈಲ್ವೆ ಇಲಾಖೆಯನ್ನು ನಡೆಸುತ್ತಾ ಬಂದಿರುವ ಸರ್ಕಾರಕ್ಕೆ ಸುರಕ್ಷತೆ ಎಂದೂ ಆದ್ಯತೆಯ ವಿಷಯ ಆಗಿಯೇ ಇಲ್ಲ. ರೈಲು ಅಪಘಾತ ನಡೆಯುತ್ತದೆ, ಒಂದಷ್ಟು ಅಮಾಯಕ ಜನ ಪ್ರಾಣ ಕಳೆದುಕೊಳ್ಳುತ್ತಾರೆ, ಪರಿಹಾರ ಘೋಷಿಸಲಾಗುತ್ತದೆ, ತನಿಖೆಯ ಆಶ್ವಾಸನೆ ನೀಡಲಾಗುತ್ತದೆ. ಮತ್ತೊಂದು ಅಪಘಾತವಾಗುವವರೆಗೆ ರೈಲ್ವೆ ಇಲಾಖೆ ಆ ಬಗ್ಗೆ ತಲೆಕೆಡಿಸಿಕೊಳ್ಳಲು ಹೋಗುವುದಿಲ್ಲ. ಸರ್ಕಾರ ತನ್ನ ತಪ್ಪನ್ನು ತಿದ್ದಿಕೊಳ್ಳದೆ ಹೋದರೆ ಈ ವರೆಗೆ 63 ಪ್ರಯಾಣಿಕರನ್ನು ಬಲಿತೆಗೆದುಕೊಂಡಿರುವ ಉತ್ತರಪ್ರದೇಶದ ಮಾಲ್ವಾ ನಿಲ್ದಾಣದ ಬಳಿ ನಡೆದ ರೈಲು ಅಪಘಾತ ಕೂಡಾ ಅದೇ ಸಾಲಿಗೆ ಸೇರಲಿದೆ. ರೈಲು ಅಪಘಾತಗಳಿಗೆ ಮಾನವ ನಿರ್ಲಕ್ಷ್ಯ, ತಾಂತ್ರಿಕ ದೋಷ ಮತ್ತು ದುಷ್ಕೃತ್ಯ ಕಾರಣವಾಗಿರುತ್ತವೆ. ಇವುಗಳಲ್ಲಿ ಯಾವುದೂ ಅನಿರೀಕ್ಷಿತವಲ್ಲ. ಆದರೆ ಇದನ್ನು ತಡೆಯಲು ಕೈಗೊಳ್ಳಬೇಕಾಗಿರುವ ಸುರಕ್ಷತಾ ಕ್ರಮಗಳ್ಯಾವುವೂ ಅನುಷ್ಠಾನಕ್ಕೆ ಬಂದಿಲ್ಲ. ವಿಚಿತ್ರವೆಂದರೆ ಸುರಕ್ಷತೆಯ ಬಗ್ಗೆ ಕ್ರಮ ಕೈಗೊಳ್ಳಬೇಕಾಗಿರುವ ರೈಲ್ವೆ ಸುರಕ್ಷತಾ ಆಯೋಗ ಈಗಲೂ ನಾಗರಿಕ ವಿಮಾನಯಾನ ಇಲಾಖೆಯ ಅಧೀನದಲ್ಲಿದೆ. ಅದನ್ನು ರೈಲ್ವೆ ಇಲಾಖೆಯ ಅಧೀನಕ್ಕೊಳಪಡಿಸಬೇಕೆಂಬ ಬೇಡಿಕೆಯೇ ಇನ್ನೂ ಈಡೇರಿಲ್ಲ. ಎರಡು ಇಲಾಖೆಗಳ ನಡುವೆ ಸಮನ್ವಯದ ಕೊರತೆಯಿಂದಾಗಿ ಸುರಕ್ಷತಾ ವ್ಯವಸ್ಥೆಗೆ ಸಂಬಂಧಿಸಿದ ಒಂದು ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆಯಂತೆ. ಸಿಬ್ಬಂದಿ ತರಬೇತಿ, ಹಳಿಗಳು ಮತ್ತು ರೈಲ್ವೆ ಎಂಜಿನ್‌ಗಳ ನಿರ್ವಹಣೆಯೂ ಸೇರಿದಂತೆ ಯಾವ ಸುರಕ್ಷತಾ ಕ್ರಮಗಳ ಕಡೆಯೂ ಸರ್ಕಾರ ಗಮನಹರಿಸಿದಂತಿಲ್ಲ. ಅದರ ಫಲವೇ ಸರಣಿ ಅಪಘಾತಗಳು. ರೈಲ್ವೆ ಇಲಾಖೆ ಹಳಿ ತಪ್ಪಲು ಇಲಾಖೆಯನ್ನು ಆವರಿಸಿಕೊಂಡಿರುವ ರಾಜಕಾರಣವೂ ಕಾರಣ. ಕಳೆದ ಹದಿನೈದು ವರ್ಷಗಳ ಸಮ್ಮಿಶ್ರ ಸರ್ಕಾರಗಳ ಯುಗದಲ್ಲಿ ರೈಲ್ವೆ ಇಲಾಖೆ ಪ್ರಾದೇಶಿಕ ಪಕ್ಷಗಳ ನಿಯಂತ್ರಣದಲ್ಲಿಯೇ ಇದೆ. ರಾಮ್‌ವಿಲಾಸ್ ಪಾಸ್ವಾನ್, ನಿತೀಶ್‌ಕುಮಾರ್, ಲಾಲುಪ್ರಸಾದ್, ಮಮತಾ ಬ್ಯಾನರ್ಜಿ ಮೊದಲಾದ ರೈಲ್ವೆ ಸಚಿವರೆಲ್ಲರೂ ಪ್ರಾದೇಶಿಕ ಪಕ್ಷಗಳ ನಾಯಕರು. ಇವರೆಲ್ಲರೂ ರೈಲ್ವೆ ಇಲಾಖೆಯನ್ನು ರಾಜ್ಯಮಟ್ಟದಲ್ಲಿ ತಮ್ಮ ರಾಜಕೀಯ ನೆಲೆಯ ಬಲವರ್ಧನೆಗೆ ದುರ್ಬಳಕೆ ಮಾಡಿಕೊಂಡು ಬಂದಿದ್ದಾರೆಯೇ ಹೊರತು ರಾಷ್ಟ್ರೀಯ ದೃಷ್ಟಿಕೋನದಿಂದ ಇಲಾಖೆಯ ಅಭಿವೃದ್ದಿಗೆ ಗಮನಕೊಟ್ಟಿಲ್ಲ. ಕಳೆದೆರಡು ವರ್ಷಗಳಲ್ಲಿ ಮಮತಾ ಬ್ಯಾನರ್ಜಿ ರೈಲ್ವೆ ಸಚಿವರಾಗಿ ಇದ್ದೂ ಇಲ್ಲದಂತಿದ್ದರು. ಇನ್ನೊಂದು ಕಾರಣ ಹಣಕಾಸಿನ ಕೊರತೆ. ರೈಲುಗಳು ಸಾಮಾನ್ಯ ಜನರ ನೆಚ್ಚಿನ ಸಂಚಾರ ವ್ಯವಸ್ಥೆ. ಈ ಜನವರ್ಗದ ಮತಗಳ ಮೇಲೆ ಕಣ್ಣಿಟ್ಟಿರುವ ಸರ್ಕಾರಗಳು ಜನಪ್ರಿಯತೆ ಉಳಿಸಿಕೊಳ್ಳಲು ಪ್ರಯಾಣ ದರವನ್ನು ಹೆಚ್ಚಿಸಲು ಹೋಗುವುದಿಲ್ಲ. ಕಳೆದ ಆರು ಬಜೆಟ್‌ಗಳಿಂದ ಪ್ರಯಾಣ ದರವನ್ನು ಹೆಚ್ಚಿಸಿಲ್ಲ. ರೈಲುಗಳು ಈಗಲೂ ಅತ್ಯಂತ ಅಗ್ಗದ ಸಾರ್ವಜನಿಕ ಸಂಚಾರ ವ್ಯವಸ್ಥೆಯಾಗಿರುವ ಕಾರಣ ಪ್ರಯಾಣ ದರವನ್ನು ಅಲ್ಪಪ್ರಮಾಣದಲ್ಲಿ ಏರಿಸಿ ಆ ಮೂಲಕ ಸಂಗ್ರಹವಾದ ಹಣದಿಂದ ರೈಲ್ವೆ ಮೂಲಸೌಕರ‌್ಯವನ್ನು ಅಭಿವೃದ್ಧಿಪಡಿಸಿದರೆ ಯಾರ ವಿರೋಧವೂ ಇರಲಾರದು. ಆದರೆ ಮುಟ್ಟಿದರೆ ಕುಸಿದು ಬೀಳುವಂತಹ ಸ್ಥಿತಿಯಲ್ಲಿರುವ ಈಗಿನ ದುರ್ಬಲ ಸರ್ಕಾರದಿಂದ ಇಂತಹ ದಿಟ್ಟತನದ ನಿರ್ಧಾರಗಳನ್ನು ಹೇಗೆ ನಿರೀಕ್ಷಿಸಲು ಸಾಧ್ಯ? ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.