ಪಾಕ್: ಹೆಚ್ಚಿದ ಅಮೆರಿಕದ ಒತ್ತಡ ಭಯೋತ್ಪಾದನೆ ವಿರೋಧೀ ಹೋರಾಟದಲ್ಲಿ ಪಾಕಿಸ್ತಾನ ಪ್ರಾಮಾಣಿಕವಾಗಿ ನಡೆದುಕೊಳ್ಳುತ್ತಿಲ್ಲ ಎಂಬುದು ಅಮೆರಿಕಕ್ಕೆ ಕೊನೆಗೂ ಮನವರಿಕೆಯಾದಂತಿದೆ.ಹಾಗೆಂದೇ ಅಮೆರಿಕ ಇದೀಗ ಒತ್ತಡ ತಂತ್ರ ಅನುಸರಿಸಲು ಆರಂಭಿಸಿದೆ. ಭಯೋತ್ಪಾದನೆ ವಿರುದ್ಧದ ಹೋರಾಟಕ್ಕಾಗಿ 2.5 ಬಿಲಿಯನ್ ಡಾಲರ್ ನೆರವು ನೀಡುವುದಾಗಿ ಅಮೆರಿಕ ಘೋಷಿಸಿತ್ತು. ಆ ಪೈಕಿ ಇದೀಗ 800 ದಶಲಕ್ಷ ಡಾಲರ್ ಹಣವನ್ನು ತಡೆಹಿಡಿದಿರುವುದಾಗಿ ಘೋಷಿಸುವ ಮೂಲಕ ಪಾಕಿಸ್ತಾನಕ್ಕೆ ಆಘಾತ ಉಂಟುಮಾಡಿದೆ. ಭಯೋತ್ಪಾದನೆ ವಿರುದ್ಧ ಸ್ವತಂತ್ರವಾಗಿಯೇ ತಾನು ಹೋರಾಟ ನಡೆಸುವುದಾಗಿ ಮತ್ತು ಅಮೆರಿಕದ ನಿರ್ಧಾರದಿಂದ ದೇಶದ ಮೇಲೆ ಯಾವುದೇ ರೀತಿಯ ಪರಿಣಾಮ ಆಗದು ಎಂದು ಪಾಕಿಸ್ತಾನ ಪ್ರತಿಕ್ರಿಯೆ ಸೂಚಿಸಿದೆ. ಇದು ಪಾಕಿಸ್ತಾನದ ಉಡಾಫೆಯ ಮಾತು ಎನ್ನುವುದರಲ್ಲಿ ಅನುಮಾನ ಬೇಕಿಲ್ಲ. ಒಸಾಮಾ ಬಿನ್ ಲಾಡೆನ್ ಹತ್ಯೆಯಿಂದಾಗಿ ಮುಜುಗರಕ್ಕೆ ಒಳಗಾದ ಪಾಕಿಸ್ತಾನದಲ್ಲಿನ ಅಮೆರಿಕದ ಅಧಿಕಾರಿಗಳ ಚಟುವಟಿಕೆಗಳನ್ನು ನಿರ್ಬಂಧಿಸಲು ಮುಂದಾಗಿದೆ. ತರಬೇತಿ ನೀಡಲು ಬರುತ್ತಿದ್ದವರ ಸಂಖ್ಯೆ ತಗ್ಗಿಸಲು ವೀಸಾಗಳ ಮೇಲೆ ಹಾಗೂ ದೇಶದಲ್ಲಿ ಈಗಾಗಲೇ ಇರುವ ಅಮೆರಿಕದ ಮಿಲಿಟರಿ ಅಧಿಕಾರಿಗಳ ಮೇಲೆ ನಿರ್ಬಂಧ ವಿಧಿಸಿದೆ. ಇದು ಸಹಜವಾಗಿಯೇ ಅಮೆರಿಕವನ್ನು ಕುಪಿತಗೊಳಿಸಿ ನೆರವು ಕಡಿತಕ್ಕೆನೆಪವಾಗಿದೆ. ಪಾಕಿಸ್ತಾನಕ್ಕೆ ಅಮೆರಿಕ ಮಿಲಿಟರಿಗೆ ಅಷ್ಟೇ ಅಲ್ಲ, ಅಭಿವೃದ್ಧಿಗೂ ಹಣ ಒದಗಿಸುತ್ತಿದೆ. ಆಫ್ಘಾನಿಸ್ತಾನ ಗಡಿಯಲ್ಲಿ ನಿಯೋಜಿಸಿರುವ ಪ್ರತಿ ಯೋಧನ ವೆಚ್ಚವನ್ನು ಅಮೆರಿಕವೇ ಭರಿಸುತ್ತಿದೆ. ಒಂದು ರೀತಿಯಲ್ಲಿ ಇಡೀ ಪಾಕಿಸ್ತಾನದ ಮಿಲಿಟರಿಯನ್ನು ಅಮೆರಿಕವೇ ಸಾಕಿದಂತಾಗಿದೆ. 2001ರಿಂದ ಇಲ್ಲಿಯವರೆಗೆ ಅಮೆರಿಕವು ಪಾಕಿಸ್ತಾನಕ್ಕೆ ಒದಗಿಸಿರಬಹುದಾದ ನೆರವಿನ ಪ್ರಮಾಣ 21ಬಿಲಿಯನ್ ಡಾಲರ್‌ಗಳು ಎಂಬ ಅಂದಾಜಿದೆ. ನೆರವು ನೀಡಿದ್ದರಿಂದ ಪಾಕಿಸ್ತಾನ ಬದಲಾಗಲಿಲ್ಲ. ಇನ್ನು ನೆರವು ನಿಲ್ಲಿಸಿದರೆ ಬದಲಾಗಬಹುದೇನೋ ನೋಡಬೇಕು. ಪಾಕಿಸ್ತಾನ ಭಯೋತ್ಪಾದಕರ ಸ್ವರ್ಗವಾಗಿದೆ ಎಂಬ ಬಗ್ಗೆ ಅಮೆರಿಕಕ್ಕೆ ಈಗ ಅನುಮಾನವಿಲ್ಲ. ಒಸಾಮಾ ಉತ್ತರಾಧಿಕಾರಿ ಜವಾಹಿರಿ ಸೇರಿದಂತೆ ತಾಲಿಬಾನ್ ಮತ್ತು ಅಲ್‌ಕೈದಾ ನಾಯಕರು ಪಾಕಿಸ್ತಾನದಲ್ಲಿಯೇ ನೆಲೆಮಾಡಿಕೊಂಡಿದ್ದಾರೆ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವ ವಿಚಾರದಲ್ಲಿ ಪಾಕಿಸ್ತಾನ ಉತ್ಸಾಹ ತೋರಿಸುತ್ತಿಲ್ಲ. ಇತ್ತೀಚೆಗೆ ಗಡಿಯಲ್ಲಿ ಬಾಂಬ್ ತಯಾರಿಕೆ ಕಾರ್ಖಾನೆಯೊಂದು ಅಸ್ತಿತ್ವದಲ್ಲಿರುವ ಬಗ್ಗೆ ಮಾಹಿತಿ ನೀಡಿ ದಾಳಿ ನಡೆಸಲು ಸಲಹೆ ನೀಡಲಾಯಿತು. ಆದರೆ ಪಾಕ್ ಸೈನಿಕರು ಅಲ್ಲಿಗೆ ಹೋಗುವ ವೇಳೆಗೆ ಅಲ್ಲಿದ್ದವರೆಲ್ಲ ಪಲಾಯನ ಮಾಡಿದ್ದರು. ಪಾಕಿಸ್ತಾನ ಭಯೋತ್ಪಾದಕರಿಗೆ ನೆಲೆ ಒದಗಿಸಿರುವ ಬಗ್ಗೆ ಭಾರತ ಹಲವು ದಶಕಗಳಿಂದ ಆತಂಕ ವ್ಯಕ್ತಮಾಡುತ್ತ ಬಂದಿದೆ. ಭಯೋತ್ಪಾದನೆ ವಿರುದ್ಧದ ಹೋರಾಟದ ಹೆಸರಿನಲ್ಲಿ ಅಮೆರಿಕ ನೀಡುತ್ತಿರುವ ಮಿಲಿಟರಿ ನೆರವು ಕೂಡಾ ದುರ್ಬಳಕೆಯಾಗುತ್ತಿದೆ ಎಂದೂ ಭಾರತ ಹೇಳುತ್ತಿದೆ. ಪಾಕಿಸ್ತಾನದ ಪ್ರಾಮಾಣಿಕತೆ ಬಗ್ಗೆ ಅಮೆರಿಕಕ್ಕೆ ಅನುಮಾನ ಬಂದಿರುವುದು ಒಳ್ಳೆಯ ಬೆಳವಣಿಗೆ. ಮಿಲಿಟರಿ ನೆರವಿನಲ್ಲಿ ಕಡಿತ ಮಾಡಿದರೆ ಸಾಲದು. ಯಾವುದೇ ರೀತಿಯ ಮಿಲಿಟರಿ ನೆರವು ಪಾಕಿಸ್ತಾನಕ್ಕೆ ಸಿಗದಂತೆ ನೋಡಿಕೊಳ್ಳಬೇಕು. ಅಂಥ ಧೈರ್ಯದ ಕ್ರಮವನ್ನು ಅಮೆರಿಕ ತೆಗೆದುಕೊಳ್ಳಬೇಕಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.