ಚಿನ್ನ ಆಮದು ನಿಯಂತ್ರಣ ಚಿನ್ನದ ಆಮದಿಗೆ ಕಡಿವಾಣ ವಿಧಿಸಿ, ಬಿಗಡಾಯಿಸುತ್ತಿರುವ ವ್ಯಾಪಾರ ಸಮತೋಲನ ಕೊರತೆ ತಗ್ಗಿಸಲು ಮುಂದಾಗಿರುವ ಕೇಂದ್ರ ಸರ್ಕಾರವು, ಆಮದು ಸುಂಕವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಹೆಚ್ಚಿಸಿರುವುದರಿಂದ ಚಿನ್ನದ ಬೆಲೆ ಅಲ್ಪಾವಧಿಯಲ್ಲಿ ಇನ್ನಷ್ಟು ದುಬಾರಿಯಾಗುವ ಸಾಧ್ಯತೆಗಳಿವೆ. ಚಿನ್ನದ ಆಮದಿನಿಂದ ವಿದೇಶಿ ವಿನಿಮಯದ ರೂಪದಲ್ಲಿ ವಿದೇಶಗಳಿಗೆ ಹರಿದು ಹೋಗುತ್ತಿದ್ದ ಅಪಾರ ಮೊತ್ತದಿಂದ ಚಾಲ್ತಿ ಖಾತೆ ಕೊರತೆ ಹೆಚ್ಚುತ್ತಿರುವುದು ಆತಂಕ ಮೂಡಿಸಿತ್ತು. ಸರಕು ಮತ್ತು ಸೇವೆಗಳ ರಫ್ತಿಗಿಂತ ಅವುಗಳ ಆಮದು ಪ್ರಮಾಣ ಹೆಚ್ಚಳಗೊಂಡು ವ್ಯಾಪಾರ ಸಮತೋಲನದಲ್ಲಿ ಕೊರತೆ ಉಂಟಾಗುವುದನ್ನು ತಪ್ಪಿಸಲು ಇಂತಹ ಕಠಿಣ ಕ್ರಮ ಕೈಗೊಳ್ಳಬೇಕೆಂದು ಭಾರತೀಯ ರಿಸರ್ವ್ ಬ್ಯಾಂಕ್ ನೀಡಿದ್ದ ಸಲಹೆ ಈಗ ಕಾರ್ಯಗತಗೊಂಡಿದೆ. ಜನರು ತಮ್ಮ ಚಿನ್ನ ಖರೀದಿ ಪ್ರವೃತ್ತಿಗೆ ಕೆಲ ಮಟ್ಟಿಗೆ ಕಡಿವಾಣ ವಿಧಿಸಬೇಕು ಮತ್ತು ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದ ಚಿನ್ನ ಹರಿದು ಬರಬೇಕು ಎನ್ನುವುದು ಸರ್ಕಾರದ ಆಶಯವಾಗಿರುವಂತಿದೆ. ದಾಖಲೆ ಪ್ರಮಾಣದ ಚಾಲ್ತಿ ಖಾತೆ ಕೊರತೆಯು ವ್ಯಾಪಾರ ಸಮತೋಲನ ಸೇರಿದಂತೆ ಆರ್ಥಿಕ ರಂಗದಲ್ಲಿ ಹಲವು ಬಗೆಯ ಪ್ರತಿಕೂಲ ಪರಿಣಾಮಗಳನ್ನು ಬೀರುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಚಿನ್ನ ಖರೀದಿ ಇನ್ನಷ್ಟು ತುಟ್ಟಿಯಾಗುವಂತೆ ಮಾಡದೇ ಸರ್ಕಾರಕ್ಕೆ ಅನ್ಯ ಮಾರ್ಗವೇ ಇದ್ದಿರಲಿಲ್ಲ. ಆಮದು ಮೇಲೆ ಹೆಚ್ಚಾಗಿ ಅವಲಂಬಿಸದೇ ಸ್ಥಳೀಯ ಮೂಲಗಳಿಂದಲೇ ಮಾರುಕಟ್ಟೆಯಲ್ಲಿ ಚಿನ್ನದ ಪೂರೈಕೆ ಹೆಚ್ಚಿಸಲು, ಷೇರುಪೇಟೆಯಲ್ಲಿ ವಹಿವಾಟು ನಡೆಸುವ ಚಿನ್ನದ ನಿಧಿ (ಮ್ಯೂಚುವಲ್ ಫಂಡ್ ಗಳ `ಗೋಲ್ಡ್ ಇಟಿಎಫ್') ಮತ್ತು ಚಿನ್ನದ ಠೇವಣಿ ಯೋಜನೆ ಮಧ್ಯೆ ತಳಕು ಹಾಕಲು ಸರ್ಕಾರ ಉದ್ದೇಶಿಸಿರುವುದು ಮತ್ತು ಚಿನ್ನದ ಠೇವಣಿ ನಿಯಮಗಳನ್ನು ಇನ್ನಷ್ಟು ಸರಳೀಕರಣಗೊಳಿಸಿರುವುದು ಫಲ ನೀಡಬೇಕಾಗಿದೆ. ಸರ್ಕಾರದ ಕ್ರಮವು ಚಿನ್ನದ ಆಮದು ನಿರ್ಬಂಧಿಸುವ ಬಗ್ಗೆಯೇ ಅನುಮಾನಗಳಿವೆ. ಈ ಹಿಂದೆಯೂ ಇಂತಹ ಕ್ರಮಗಳು ಉದ್ದೇಶಿತ ಫಲ ನೀಡಿಲ್ಲ. ದುಬಾರಿ ಆಮದು ಸುಂಕವು ಚಿನ್ನದ ಕಳ್ಳಸಾಗಾಣಿಕೆ ಮತ್ತಿತರ ಕಾನೂನುಬಾಹಿರ ವಹಿವಾಟಿಗೆ ಉತ್ತೇಜನ ನೀಡುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ದುಬಾರಿ ಚಿನ್ನ ಬೇಡಿಕೆಗೆ ಕಡಿವಾಣ ಹಾಕುವ ಸಾಧ್ಯತೆಯೂ ಕಡಿಮೆ. ದೇಶಿ ಚಿನ್ನಾಭರಣ ತಯಾರಿಕಾ ಉದ್ದಿಮೆಯು ಬೃಹತ್ ಮಾರುಕಟ್ಟೆ ಹೊಂದಿದ್ದು, ಸದ್ಯಕ್ಕೆ ಉಚ್ಛ್ರಾಯ ಸ್ಥಿತಿಯಲ್ಲಿ ಇರುವಾಗ ದುಬಾರಿ ಆಮದು ಸುಂಕವು ಅದರ ಬೆಳವಣಿಗೆ ನಿರ್ಬಂಧಿಸಬಹುದು. ಆಮದು ನಿರ್ಬಂಧಿಸುವ ಕ್ರಮವು ಅಕ್ರಮ ವಹಿವಾಟಿಗೆ ಹಾದಿ ಮಾಡಿಕೊಟ್ಟರೆ ಅದರ ಅಪಾಯಗಳು ಇನ್ನಷ್ಟು ಗಂಭೀರವಾಗಿರುತ್ತವೆ ಎನ್ನುವುದನ್ನು ಸರ್ಕಾರ ಮರೆಯಬಾರದು. ದೇಶಿ ಚಿನಿವಾರ ಪೇಟೆ ಮತ್ತು ಜನಸಾಮಾನ್ಯರ ಪಾಲಿಗೂ ಸದ್ಯಕ್ಕೆ ಕಹಿಯಾಗಿರುವ ಈ ಕ್ರಮವು, ಉದ್ದೇಶಿತ ಫಲಿತಾಂಶ ನೀಡುವುದೇ ಎನ್ನುವುದಕ್ಕೆ ಮುಂಬರುವ ದಿನಗಳಲ್ಲಿ ಉತ್ತರ ಸಿಗಲಿದೆ. ಮಾರುಕಟ್ಟೆಗೆ ಚಿನ್ನದ ಹರಿವು ಹೆಚ್ಚಿಸಲು ಠೇವಣಿ ನಿಯಮಗಳು ಇನ್ನಷ್ಟು ಸರಳೀಕರಣಗೊಳಿಸಬೇಕಾಗಿದೆ. ಚಿನ್ನದ ಆಮದು ಪ್ರಮಾಣ ತಹಬಂದಿಗೆ ಬರುತ್ತಿದ್ದಂತೆ ತೆರಿಗೆ ಹೆಚ್ಚಳ ನಿರ್ಧಾರ ಪುನರ್‌ಪರಿಶೀಲಿಸುವುದಾಗಿಯೂ ನೀಡಿರುವ ಭರವಸೆಯನ್ನು ಸರ್ಕಾರ ಸೂಕ್ತ ಸಮಯದಲ್ಲಿ ಜಾರಿಗೆ ತರಲು ಮರೆಯಬಾರದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.