ನಿರಾಶಾದಾಯಕ ಪುನರ್‌ರಚನೆ ಸಂಪುಟ ಪುನರ್‌ರಚನೆಯ ಅವಕಾಶ ಬಳಸಿಕೊಂಡು ಪ್ರಧಾನಿ ಮನಮೋಹನ್‌ಸಿಂಗ್ ಯುಪಿಎ ಸರ್ಕಾರಕ್ಕೆ ಹೊಸ ರೂಪ ಕೊಡಬಹುದೆಂಬ ನಿರೀಕ್ಷೆ ಹುಸಿಯಾಗಿದೆ. ಭ್ರಷ್ಟಾಚಾರದ ಹಗರಣಗಳಿಂದ ಕಳಂಕ ಮೆತ್ತಿಕೊಂಡ ಸರ್ಕಾರಕ್ಕೆ ಹೊಸ ರೂಪ ಕೊಡುವ ಅಗತ್ಯ ಇತ್ತು. ಆ ಧೈರ್ಯ ತೋರದ ಪ್ರಧಾನಿ ತೇಪೆ ಹಚ್ಚಿ ಕೈತೊಳೆದುಕೊಂಡು ಬಿಟ್ಟಿದ್ದಾರೆ. ಬೇನಿ ಪ್ರಸಾದ್ ವರ್ಮ ಎಂಬ ಹಿಂದುಳಿದ ಜಾತಿ ನಾಯಕನಿಗೆ ಸಂಪುಟ ಸಚಿವರಾಗಿ ಬಡ್ತಿ ನೀಡಿರುವುದು, ಸಲ್ಮಾನ್ ಖುರ್ಷಿದ್ ಅವರನ್ನು ಕಾನೂನು ಸಚಿವರನ್ನಾಗಿ ಮಾಡಿರುವುದು ಮತ್ತು ರಾಜ್ಯ ಸಚಿವರಾಗಿ ರಾಜೀವ್ ಶುಕ್ಲಾ ಅವರನ್ನು ಸೇರಿಸಿಕೊಂಡಿರುವುದಕ್ಕೆ ಈ ವರ್ಷ ನಡೆಯಲಿರುವ ಉತ್ತರಪ್ರದೇಶದ ವಿಧಾನಸಭಾ ಚುನಾವಣೆ ಕಾರಣ. ಮಿಲಿಂದ್ ದೇವ್ರಾ ಮತ್ತು ಜಿತೇಂದ್ರ ಸಿಂಗ್ ರಾಜ್ಯ ಸಚಿವರಾಗಿರುವುದಕ್ಕೆ ರಾಹುಲ್ ಗಾಂಧಿ ಜತೆಗೆ ಅವರು ಹೊಂದಿರುವ ಸ್ನೇಹಸಂಬಂಧ ನೆರವಾಗಿದೆ. ವಿವಾದದ ಸುಳಿಯಲ್ಲಿರುವ ಜೈರಾಮ್ ರಮೇಶ್ ಅವರ ಖಾತೆ ಬದಲಾವಣೆ ಮಾಡಿದರೂ ಅವರಿಗೆ ಬಡ್ತಿ ನೀಡಿ ಸಂಪುಟ ಸಚಿವರನ್ನಾಗಿ ಮಾಡಲಾಗಿದೆ. ಬಿಕ್ಕಟ್ಟಿನ ಸಮಯದಲ್ಲಿ ವಕ್ತಾರರಾಗಿ ಪಕ್ಷವನ್ನು ಮಾಧ್ಯಮಗಳ ಮುಂದೆ ಸಮರ್ಥಿಸಿಕೊಳ್ಳಲು ಪಟ್ಟ ಶ್ರಮಕ್ಕಾಗಿ ಜಯಂತಿ ನಟರಾಜನ್ ಅವರಿಗೆ ಸಚಿವ ಖಾತೆಯ ಉಡುಗೊರೆ. ದಿನೇಶ್ ತ್ರಿವೇದಿ ಅವರನ್ನು ರೈಲ್ವೆ ಸಚಿವರನ್ನಾಗಿ ಮಾಡಲು ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಒತ್ತಡ ಕಾರಣ. ಇವರಲ್ಲಿ ಕೇವಲ ಸ್ವಂತ ಸಾಮರ್ಥ್ಯದ ಮೇಲೆ ಅವಕಾಶ, ಬಡ್ತಿ ಪಡೆದವರು ಯಾರು? ಒತ್ತಡಗಳಿದ್ದರೂ ಈಗಾಗಲೇ ಎರಡು ಖಾತೆಗಳನ್ನು ಕಳೆದುಕೊಂಡ ಡಿಎಂಕೆಯಿಂದ ಹೊಸಬರನ್ನು ಸಂಪುಟಕ್ಕೆ ಸೇರ್ಪಡೆಗೊಳಿಸಿಲ್ಲ ಎನ್ನುವುದೊಂದೇ ಸಮಾಧಾನಕರ ಅಂಶ. ಆದರೆ ಇದೇ ದಿಟ್ಟತನವನ್ನು ಪ್ರಧಾನಿಯವರು ಕೃಷಿಖಾತೆಯಲ್ಲಿ ಸಂಪೂರ್ಣವಾಗಿ ವಿಫಲಗೊಂಡ ಎನ್‌ಸಿಪಿ ನಾಯಕ ಶರದ್ ಪವಾರ್ ವಿಷಯದಲ್ಲಿ ತೋರಿಲ್ಲ. ನಗಣ್ಯರಾಗಿರುವ ಏಳು ಸಚಿವರನ್ನು ಕೈಬಿಟ್ಟರೂ ಪ್ರಮುಖ ಖಾತೆಗಳಾದ ಹಣಕಾಸು, ರಕ್ಷಣೆ, ವಿದೇಶಾಂಗ ವ್ಯವಹಾರ ಮತ್ತು ಗೃಹ ಖಾತೆಗಳನ್ನು ಮುಟ್ಟುವ ಧೈರ್ಯವನ್ನೂ ಅವರು ಮಾಡಿಲ್ಲ. ಸುಪ್ರೀಂ ಕೋರ್ಟ್, ಸಾಲುಸಾಲಾಗಿ ತಮ್ಮ ಸರ್ಕಾರದ ವಿರುದ್ಧ ನೀಡುತ್ತಿರುವ ತೀರ್ಪುಗಳಿಂದಾಗಿ ಮುಜುಗರಕ್ಕೀಡಾಗಿರುವ ಪ್ರಧಾನಿಯವರು ಕಾನೂನು ಸಚಿವರಾಗಿದ್ದ ವೀರಪ್ಪ ಮೊಯಿಲಿ ಅವರ ಖಾತೆ ಬದಲಾವಣೆ ಮೂಲಕ ಮುಖ ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಸ್ವತಂತ್ರ ನಿರ್ಧಾರ ಕೈಗೊಳ್ಳಲಾಗದ ದುರ್ಬಲ ಪ್ರಧಾನಿ ಎಂಬ ಆರೋಪವನ್ನು ಸಮರ್ಥಿಸುವಂತೆ ಮನಮೋಹನ್‌ಸಿಂಗ್ ಸಂಪುಟ ಪುನರ್‌ರಚನೆ ಮಾಡಿರುವುದು ಎದ್ದು ಕಾಣುತ್ತಿದೆ. ಈ ಮೂಲಕ ಎರಡೇ ವರ್ಷಗಳ ಅವಧಿಯಲ್ಲಿ ತಲೆ ಎತ್ತಿರುವ ಆಡಳಿತ ವಿರೋಧಿ ಅಲೆಯನ್ನು, ಹಿಮ್ಮೆಟ್ಟಿಸಲು ಒದಗಿ ಬಂದ ಅವಕಾಶವನ್ನು ಅವರು ಕಳೆದುಕೊಂಡಿದ್ದಾರೆ. ಆದರೆ, ಇದರಿಂದಾಗಿ ಒಂದೆರಡು ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷ ಶಕ್ತಿ ವರ್ಧಿಸಿಕೊಳ್ಳಲೂ ಬಹುದು. ಆದರೆ ದೇಶಕ್ಕೆ ಯಾವುದೇ ಲಾಭ ಇಲ್ಲ. ಕಳೆದೆರಡು ವರ್ಷಗಳಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಅಧೋಗತಿಗೆ ಇಳಿಯುತ್ತಿದ್ದರೂ ರಾಜ್ಯದ ನಾಲ್ವರು ಸಚಿವರನ್ನು ಉಳಿಸಿಕೊಂಡಿರುವುದರಿಂದ ರಾಜ್ಯದ ಜನತೆ ಪ್ರಧಾನಿಯವರಿಗೆ ಕೃತಜ್ಞತೆ ಹೇಳಬಹುದು ಅಷ್ಟೇ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.