ಅಧಿಕಾರದ ಅಮಲು ಸರಣಿ ದುರಂತಗಳು ಸಂಭವಿಸಿ ತಮ್ಮದಲ್ಲದ ತಪ್ಪಿಗಾಗಿ ಅಮಾಯಕ ಜನತೆ ಪ್ರಾಣ ಕಳೆದುಕೊಂಡ ಸಂದರ್ಭದಲ್ಲಿ ಜನಪ್ರತಿನಿಧಿಗಳಾದವರು ಅಧಿಕಾರದ ಮದವನ್ನು ಪ್ರದರ್ಶಿಸುವುದು ಅಮಾನವೀಯತೆಯ ಪರಾಕಾಷ್ಠೆ. ಉತ್ತರ ಪ್ರದೇಶದಲ್ಲಿ ರೈಲು ದುರಂತ ಸಂಭವಿಸಿದ ಬೆನ್ನಲ್ಲಿಯೇ ಅಸ್ಸಾಂನಲ್ಲಿ ಗುವಾಹಟಿ- ಪುರಿ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿದ ಘಟನೆ ಯಾವುದೇ ಸರ್ಕಾರಕ್ಕೆ ತುರ್ತು ಪರಿಸ್ಥಿತಿಯ ಸಂದರ್ಭ. ಇಂಥ ಸಂದರ್ಭದಲ್ಲಿ ಅಪಘಾತ ನಡೆದ ಸ್ಥಳಕ್ಕೆ ಧಾವಿಸದಿರಲು ತಮ್ಮ ಅಧಿಕಾರ ಸ್ಥಾನದ ನೆಪವನ್ನು ಮುಂದೆ ಮಾಡಿದ ರೈಲ್ವೆ ಖಾತೆ ರಾಜ್ಯ ಸಚಿವ ಮುಕುಲ್ ರಾಯ್ ವರ್ತನೆ ಅತ್ಯುಗ್ರ ಮಾತುಗಳಲ್ಲಿ ಖಂಡಿಸಲು ಯೋಗ್ಯವಾದ ನಡವಳಿಕೆ. `ನಾನು ರೈಲ್ವೆ ಖಾತೆಯ ರಾಜ್ಯ ಸಚಿವ, ದುರಂತ ಸ್ಥಳದಲ್ಲಿ ಪರಿಹಾರ ಕಾರ್ಯಗಳ ಉಸ್ತುವಾರಿಯನ್ನು ರೈಲ್ವೆ ಜನರಲ್ ಮೇನೇಜರ್ ನೋಡಿಕೊಳ್ಳಬಲ್ಲ~ ಎಂಬರ್ಥದ ಉದ್ದಟತನದ ಉತ್ತರವನ್ನು ನೀಡಿದ ಮುಕುಲ್‌ರಾಯ್ ಯಾವೊಂದು ಸಾರ್ವಜನಿಕ ಸ್ಥಾನಕ್ಕೂ ತಕ್ಕುದಲ್ಲದ ವರ್ತನೆಯನ್ನು ಪ್ರದರ್ಶಿಸಿದ್ದಾರೆ. ಸ್ವತಃ ಪ್ರಧಾನಿ ಅವರ ಆದೇಶವನ್ನೂ ಕಡೆಗಣಿಸಿದ ಅವರಿಗೆ ಜನಪ್ರತಿನಿಧಿಯ ಕರ್ತವ್ಯದ ಪ್ರಾಥಮಿಕ ಪಾಠವನ್ನು ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಕಲಿಸಬೇಕಿದೆ. ಜನಪ್ರತಿನಿಧಿ ಎಂದರೆ ಸಾರ್ವಜನಿಕ ಸೇವಕ. ಜನ ಸಂಕಷ್ಟದಲ್ಲಿ ಇರುವಾಗ ಅದಕ್ಕೆ ಸ್ಪಂದಿಸುವುದು ಮಾನವೀಯ ಲಕ್ಷಣವೇ ಆಗಿರುವಾಗ ಸರ್ಕಾರದಲ್ಲಿ ಸಚಿವನಾಗಿದ್ದ ವ್ಯಕ್ತಿ ಹೀಗೆ ಹೊಣೆಗೇಡಿಯಂತೆ ವರ್ತಿಸಿದ್ದು ಅಕ್ಷಮ್ಯ. ಈಗಿನ ಸಮ್ಮಿಶ್ರ ಸರ್ಕಾರಗಳ ರಾಜಕೀಯ ವ್ಯವಸ್ಥೆಯಲ್ಲಿ ಮಾನವೀಯ ನಡವಳಿಕೆಗಳಿಗಿಂತ ಸಂಖ್ಯೆಯನ್ನು ಆಧರಿಸಿದ ಲೆಕ್ಕಾಚಾರ ಪ್ರಮುಖವಾದದ್ದು. ಪ್ರಾದೇಶಿಕ ಪಕ್ಷಗಳ ಹಂಗಿನಲ್ಲಿ ಸರ್ಕಾರವನ್ನು ನಡೆಸಬೇಕಾದ ಪರಿಸ್ಥಿತಿಯನ್ನು ನಾಜೂಕಾಗಿ ನಿರ್ವಹಿಸುವ ಕಸರತ್ತಿನಲ್ಲಿ ಎಲ್ಲ ಬಗೆಯ ಅಪಮಾನಗಳನ್ನೂ ಸಹಿಸಿಕೊಳ್ಳುವ ಅನಿವಾರ್ಯತೆ. ಕೇಂದ್ರ ಸಂಪುಟದಲ್ಲಿ ಸ್ಥಾನ ಪಡೆದಿದ್ದ ಡಿಎಂಕೆ ಪ್ರತಿನಿಧಿಗಳು ನಡೆಸಿದ ಭ್ರಷ್ಟಾಚಾರವನ್ನು ಸಹಿಸಿಕೊಂಡಿದ್ದ ಕಾರಣಕ್ಕೆ ಸುಪ್ರೀಂ ಕೋರ್ಟಿನ ಕೆಂಗಣ್ಣಿಗೆ ಗುರಿಯಾಗಿರುವ ಪ್ರಧಾನಿ, ಸರ್ಕಾರಕ್ಕೆ ಬೆಂಬಲ ಬೇಕು ಎನ್ನುವ ಕಾರಣಕ್ಕೆ ಕಿರಿಯ ಸಚಿವನೊಬ್ಬ ತನ್ನ ಮಾತನ್ನು ತಿರಸ್ಕರಿಸಿದ ಅಪಮಾನವನ್ನೂ ನುಂಗಿಕೊಳ್ಳಬೇಕಾಗಿದೆ. ತನ್ನ ಕರ್ತವ್ಯಚ್ಯುತಿಗಾಗಿ ಸಚಿವ ಸ್ಥಾನವನ್ನು ಕಳೆದುಕೊಳ್ಳಬೇಕಿದ್ದ ಮುಕುಲ್ ರಾಯ್ ಅವರಿಗೆ ಪ್ರಧಾನಿ ನೀಡಿದ ಶಿಕ್ಷೆ ಎಂದರೆ ಅವರಿಗೆ ನೀಡಲಾಗಿದ್ದ ಎರಡು ಇಲಾಖೆಗಳಲ್ಲಿ ಒಂದನ್ನು ಹಿಂದಕ್ಕೆ ಪಡೆದದ್ದು. ರೈಲ್ವೆ ಮತ್ತು ನೌಕಾಯಾನ ಖಾತೆಗಳ ರಾಜ್ಯ ಸಚಿವರಾಗಿದ್ದ ಮುಕುಲ್ ರಾಯ್ ಕೇಂದ್ರ ಸಂಪುಟ ಪುನರ್‌ರಚನೆಯಲ್ಲಿ ರೈಲ್ವೆ ಖಾತೆಯನ್ನು ಕಳೆದುಕೊಂಡರಷ್ಟೆ. ತಮ್ಮ ಸ್ಪಷ್ಟ ಆದೇಶವನ್ನು ಹೀಗೆ ಸಾರ್ವಜನಿಕವಾಗಿ ಉಲ್ಲಂಘಿಸಿದ ಮೇಲೆಯೂ ಅವರನ್ನು ಸಂಪುಟದಲ್ಲಿ ಇರಿಸಿಕೊಳ್ಳಬೇಕಾದ ಅಸಹಾಯಕ ಪರಿಸ್ಥಿತಿಯನ್ನು ಅನುಭವಿಸುತ್ತಿರುವವರು ಮನಮೋಹನ್ ಸಿಂಗ್ ಒಬ್ಬರೇ. ಸಮ್ಮಿಶ್ರ ಸರ್ಕಾರದಲ್ಲಿ ಸೇರಿಕೊಳ್ಳುವ ರಾಜಕೀಯ ಪಕ್ಷಗಳು ಏಕಪಕ್ಷದ ನಿರಂಕುಶ ವರ್ತನೆಯನ್ನು ಹದ್ದುಬಸ್ತಿನಲ್ಲಿಡುತ್ತವೆ ಎಂಬ ನಿರೀಕ್ಷೆ ಹುಸಿಯಾಗಿ ಪ್ರಾದೇಶಿಕ ಪಕ್ಷಗಳ ದುರಹಂಕಾರಿಗಳು ಪ್ರಧಾನಿಯನ್ನೇ ಅಪಮಾನಿಸಬಲ್ಲರು ಎಂಬುದಕ್ಕೆ ಮುಕುಲ್ ರಾಯ್ ನಡವಳಿಕೆ ನಿದರ್ಶನ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.