ಅಪಾಯಕಾರಿ ಬೆಳವಣಿಗೆ ಗದಗ ಜಿಲ್ಲೆಯ ರೈತರ ಕೃಷಿ ಭೂಮಿಯನ್ನು ಕೊರಿಯಾ ಮೂಲದ ಪೋಸ್ಕೋ ಕಂಪೆನಿಯ ಉಕ್ಕು ಕಾರ್ಖಾನೆಗೆ ಕೊಟ್ಟೇ ತೀರುವುದಾಗಿ ಹಠ ಹಿಡಿದಿರುವ ರಾಜ್ಯದ ಬಿಜೆಪಿ ಸರ್ಕಾರ, ಉಡುಪಿ ಕೃಷ್ಣಮಠದ ಪೇಜಾವರ ಶ್ರೀಗಳ ಅನಿರ್ದಿಷ್ಟ ನಿರಶನದ ಎಚ್ಚರಿಕೆಗೆ ಮಂಗಳೂರು ವಿಶೇಷ ಆರ್ಥಿಕ ವಲಯಕ್ಕಾಗಿ ಸ್ವಾಧೀನಪಡಿಸಿಕೊಂಡಿದ್ದ ಭೂಮಿಯನ್ನು ಮುಕ್ತಗೊಳಿಸಿದೆ. ಪೋಸ್ಕೋ ಕಂಪೆನಿಗೆ ಭೂಮಿ ಬಿಟ್ಟುಕೊಡುವುದರ ವಿರುದ್ಧ ಆರಂಭವಾಗಿರುವ ಹೋರಾಟದ ಮುಂಚೂಣಿಯಲ್ಲಿ ಗದುಗಿನ ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ ಮತ್ತು ಮುಂಡರಗಿಯ ಅನ್ನದಾನೀಶ್ವರ ಶ್ರೀಗಳು ಇದ್ದರೂ ಅವರನ್ನು ಲೆಕ್ಕಕ್ಕೆ ತೆಗೆದುಕೊಂಡಂತೆ ವರ್ತಿಸುತ್ತಿಲ್ಲ. ಅನಿರ್ದಿಷ್ಟ ನಿರಶನದ ಬೆದರಿಕೆಗೆ ತಕ್ಷಣವೇ ಮಣಿಯುವ ಮೂಲಕ ಸರ್ಕಾರ ಪೇಜಾವರಶ್ರೀಗಳ ಮಾತನ್ನಷ್ಟೇ ಗೌರವಿಸುತ್ತದೆ; ಉಳಿದ ಧಾರ್ಮಿಕ ಮುಖಂಡರ ಮಾತಿಗೆ ಮಾನ್ಯತೆ ನೀಡುವುದಿಲ್ಲ ಎಂಬ ಸಂದೇಶ ರವಾನಿಸಿದೆ. ಜೊತೆಗೆ, ಕೈಗಾರಿಕೆ ಉದ್ದೇಶಕ್ಕೆ ಸ್ವಾಧೀನಪಡಿಸಿಕೊಂಡ ಭೂಮಿಯನ್ನು ಸಂಘ ಪರಿವಾರದಲ್ಲಿ ವರ್ಚಸ್ಸು ಪಡೆದಿರುವ ಪೇಜಾವರಶ್ರೀಗಳ ಒತ್ತಡಕ್ಕೆ ಬಿಟ್ಟುಕೊಡುವ ಮೂಲಕ ಸಂವಿಧಾನಕ್ಕೆ ಹೊರತಾದ ಶಕ್ತಿಗಳಿಗೆ ಮಣಿಯುತ್ತಿರುವ ಧೋರಣೆಯನ್ನೂ ಪ್ರದರ್ಶಿಸಿದೆ. ಲೋಕಪಾಲ ಕರಡು ರಚನೆಯಲ್ಲಿ ಅಣ್ಣಾ ಹಜಾರೆ ಜೊತೆ ಕೇಂದ್ರ ಸರ್ಕಾರ ತೊಡಗಿದ್ದನ್ನು ಆಕ್ಷೇಪಿಸಿದ ಬಿಜೆಪಿ ನಾಯಕತ್ವದ ಇಬ್ಬಗೆ ನೀತಿಗೂ ಇದು ನಿದರ್ಶನ. ಜನತಂತ್ರ ವ್ಯವಸ್ಥೆಯಲ್ಲಿ ಅಪಾಯಕಾರಿಯಾದ ಬೆಳವಣಿಗೆ. ಕೈಗಾರಿಕೆ ಉದ್ದೇಶಕ್ಕಾಗಿ ಭೂಮಿಯನ್ನು ಗುರುತಿಸುವುದರಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ಎಡವುತ್ತಿರುವುದು ಭೂ ಸ್ವಾಧೀನದ ಹೆಚ್ಚಿನ ಪ್ರಕರಣಗಳಲ್ಲಿ ಬೆಳಕಿಗೆ ಬರುತ್ತಿದೆ. ಸಾರ್ವಜನಿಕ ಸಾರಿಗೆ ಸಂಪರ್ಕದ ವಿನಾ ಉಳಿದ ಯಾವುದೇ ಉದ್ದೇಶಕ್ಕೂ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದು ವಿವೇಕದ ಕ್ರಮವಲ್ಲ. ನೀರಾವರಿ ಸೌಲಭ್ಯವಿದ್ದ ಭೂಮಿಯಷ್ಟೇ ಕೃಷಿ ಜಮೀನು ಎಂಬ ವಿವರಣೆಯೂ ವಿವೇಚನೆಯಿಂದ ಕೂಡಿದ್ದಲ್ಲ. ರಾಜ್ಯದಲ್ಲಿ ಮಳೆ ಆಶ್ರಯದ ಕೃಷಿ ಪ್ರದೇಶ, ನೀರಾವರಿಗೆ ಒಳಪಟ್ಟ ಪ್ರದೇಶಕ್ಕಿಂತಲೂ ಹೆಚ್ಚು ಎಂಬ ವಾಸ್ತವಿಕ ಅಂಶವನ್ನು ಭೂಸ್ವಾಧೀನ ಸಂದರ್ಭದಲ್ಲಿ ನಿರ್ಲಕ್ಷಿಸಲಾಗದು. ಆಸ್ತಿ ಅಭಿವೃದ್ಧಿಯ ಮಾನದಂಡದಂತೆ ಮಾರುಕಟ್ಟೆ ದರದ ಪರಿಹಾರವನ್ನು ನೀಡಿದರೂ ಕೃಷಿಯನ್ನು ಮಾತ್ರವೇ ಅವಲಂಬಿಸಿದ ಜನತೆ ಪರಿಹಾರ ಹಣದಿಂದ ಸ್ವತಂತ್ರ ಬದುಕನ್ನು ರೂಪಿಸಿಕೊಂಡ ಸಂದರ್ಭಗಳು ಕಡಿಮೆ. ಬೃಹತ್ ಯೋಜನೆಗಳಿಗಾಗಿ ನೆಲೆ ಕಳೆದುಕೊಂಡವರ ಬದುಕು ಇದಕ್ಕೆ ನಿದರ್ಶನ. ಕೈಗಾರಿಕೆ ಉದ್ದೇಶದ ವಿಶೇಷ ಆರ್ಥಿಕ ವಲಯಕ್ಕಾಗಿ ಎಷ್ಟು ಅವಶ್ಯಕವೋ ಅಷ್ಟು ಬರಡು ಭೂಮಿಯನ್ನು ಗುರುತಿಸಿ ಅದರಲ್ಲಿ ಕೈಗಾರಿಕೆಗಳು ನೆಲೆಗೊಳ್ಳುವಂತೆ ಮಾಡುವುದು ವಿವೇಕದ ಮಾರ್ಗ. ಕೃಷಿಗಾಗಿ ಸಮತಟ್ಟುಗೊಳಿಸಿದ ಭೂಮಿಯನ್ನು ಹೆಚ್ಚಿನ ಪರಿಹಾರದ ಆಮಿಷ ಒಡ್ಡಿ ಸ್ವಾಧೀನಪಡಿಸಿಕೊಂಡು ಅದರಲ್ಲಿ ಆಸ್ತಿ ಅಭಿವೃದ್ಧಿಯ ದಂಧೆಗೆ ಆಸ್ಪದ ಕೊಡುವುದು ಕೈಗಾರಿಕೆ ಅಭಿವೃದ್ಧಿಯ ವಿಧಾನವಲ್ಲ. ರಾಜ್ಯದಲ್ಲಿ ಕೃಷಿಗೆ ಯೋಗ್ಯವಲ್ಲದ ಸರ್ಕಾರಿ ಬರಡು ಜಮೀನಿಗೆ ಕೊರತೆ ಇಲ್ಲ. ಬಂಜರು ಬಿದ್ದಿರುವ ಜಾಗದಲ್ಲಿ ಹೊರಗಿನ ಬಂಡವಾಳ ಆಕರ್ಷಿಸಿ ಕೈಗಾರಿಕೆಗಳನ್ನು ನೆಲೆಗೊಳಿಸುವುದರಿಂದ ಅಭಿವೃದ್ಧಿ ಹೊಂದದ ಜಿಲ್ಲೆಗಳಲ್ಲಿಯೂ ಬೆಳವಣಿಗೆ ಸಾಧ್ಯವಾಗುತ್ತದೆ. ಅಂಥ ವಿವೇಕವನ್ನು ರಾಜ್ಯ ಸರ್ಕಾರ ಪ್ರದರ್ಶಿಸಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.