ಬೆಸ್ಕಾಂ ಕ್ರೌರ್ಯ ಬೆಸ್ಕಾಂ ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ ಮತ್ತೊಂದು ಜೀವ ಬಲಿಯಾಗಿದೆ. ಬೆಂಗಳೂರಿನ ಗಂಗೊಂಡನಹಳ್ಳಿ ಬಡಾವಣೆಯ ಎಂಟು ವರ್ಷದ ಸುನೀತಾ ಎಂಬ ಬಾಲಕಿ ತನ್ನ ಶಾಲೆಯ ಬಳಿ ನೆಲಕ್ಕೆ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ವಿದ್ಯುತ್ ತಂತಿ ನೆಲಕ್ಕೆ ಬೀಳಲು ಶಾರ್ಟ್ ಸರ್ಕಿಟ್ ಕಾರಣ ಎಂದು ಬೆಸ್ಕಾಂ ಅಧಿಕಾರಿಗಳು ಹೇಳಿದ್ದಾರೆ. ಶಾಲೆ ಸಮೀಪದ ನಿವಾಸಿಗಳು ಬೇರೊಂದು ಕಾರಣ ಹೇಳುತ್ತಾರೆ. ಈ ಎರಡೂ ಹೇಳಿಕೆಗಳನ್ನು ಗಮನಿಸಿದರೆ ವಿದ್ಯುತ್ ಮಾರ್ಗಗಳ ನಿರ್ವಹಣೆ ಕೆಲಸ ಸಮರ್ಪಕವಾಗಿ ನಡೆಯುತ್ತಿಲ್ಲ ಎನ್ನುವ ನಿರ್ಧಾರಕ್ಕೆ ಬರಬೇಕಾಗುತ್ತದೆ. ವಿದ್ಯುತ್ ಕಂಬಗಳಲ್ಲಿನ ಅವ್ಯವಸ್ಥೆಯನ್ನು ಕಾಲಕಾಲಕ್ಕೆ ಪರೀಕ್ಷಿಸಿ ದುರಸ್ತಿ ಮಾಡುವ ಜವಾಬ್ದಾರಿ ಬೆಸ್ಕಾಂ ಸಿಬ್ಬಂದಿಯದು. ಸಿಬ್ಬಂದಿಯ ಹೊಣೆಗೇಡಿತನಕ್ಕೆ ಅಮಾಯಕರು ಬಲಿಯಾಗುತ್ತಿದ್ದಾರೆ. ಮಂಗಳವಾರದ ಘಟನೆ ಕುರಿತು ನಿವೃತ್ತ ನ್ಯಾಯಾಧೀಶರಿಂದ ವಿಚಾರಣೆ ಮಾಡಿಸುವುದಾಗಿ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಹೇಳಿದ್ದಾರೆ. ವಿಚಾರಣೆ ನಿರ್ಧಾರ ಸ್ವಾಗತಾರ್ಹ, ಆದರೆ ಇದೊಂದು ಪ್ರಕರಣದ ವಿಚಾರಣೆಯಿಂದ ಪರಿಸ್ಥಿತಿ ಸುಧಾರಿಸೀತು ಎಂದು ನಿರೀಕ್ಷಿಸಲಾಗದು. ಬೆಂಗಳೂರಿನಲ್ಲಿ ಪದೇ ಪದೇ ಇಂತಹ ಘಟನೆಗಳು ಸಂಭವಿಸುತ್ತಲೇ ಇವೆ. ಪ್ರತಿಯೊಂದು ಘಟನೆಗೂ ತಾಂತ್ರಿಕ ಕಾರಣದ ನೆಪ ಹೇಳಿ, ತನಿಖೆ ಮಾಡಿಸುವ ಭರವಸೆ ನೀಡಿ ಸತ್ತವರ ಕುಟುಂಬಗಳಿಗೆ ಇಂತಿಷ್ಟು ಹಣದ ಪರಿಹಾರ ಕೊಟ್ಟು ಕೈತೊಳೆದುಕೊಳ್ಳುವ ಧೋರಣೆಯನ್ನೇ ಬೆಸ್ಕಾಂ ಅನುಸರಿಸುತ್ತ ಬಂದಿದೆ. ಸಿಬ್ಬಂದಿಯ ನಿರ್ಲಕ್ಷ್ಯದ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ವಿದ್ಯುತ್ ಮಾರ್ಗಗಳ ನಿರ್ವಹಣೆಯ ಲೋಪದಿಂದ ಸಾವು ಸಂಭವಿಸಿದರೆ ಅದಕ್ಕೆ ಸಂಬಂಧಪಟ್ಟ ಸಿಬ್ಬಂದಿ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಅವರಿಗೆ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಮಾತ್ರವಲ್ಲದೆ, ರಾಜ್ಯದ ಹಲವು ಜಿಲ್ಲೆಗಳಲ್ಲಿ ಪದೇ ಪದೇ ವಿದ್ಯುತ್ ದುರಂತಗಳು ಸಂಭವಿಸುತ್ತಿವೆ. ವಿದ್ಯುತ್ ಕಂಬಗಳು, ತಂತಿಗಳು ನೆಲಕ್ಕೆ ಬಿದ್ದ ಬಗ್ಗೆ, ಟ್ರಾನ್ಸ್‌ಫಾರ್ಮರ್‌ಗಳು ಸುಟ್ಟ ಹೋದ ಪ್ರಕರಣಗಳ ಬಗ್ಗೆ ಸಾರ್ವಜನಿಕರು ಸಕಾಲದಲ್ಲಿ ದೂರು ನೀಡಿದರೂ ವಿದ್ಯುತ್ ಕಂಪೆನಿಗಳ ಸಿಬ್ಬಂದಿ ತಕ್ಷಣವೇ ದುರಸ್ತಿಗೆ ಮುಂದಾಗುವುದಿಲ್ಲ. ಸಿಬ್ಬಂದಿಯ ವಿಳಂಬ ಧೋರಣೆಯಿಂದ ರೈತರ ಬೆಳೆ ಒಣಗಿದ ನೂರಾರು ಉದಾಹರಣೆಗಳಿವೆ. ಕುಡಿಯುವ ನೀರು ಪೂರೈಕೆ ಅಸ್ತವ್ಯಸ್ತವಾದ ನಿದರ್ಶನಗಳಿವೆ. ರಾಜ್ಯದ ಅನೇಕ ವಿದ್ಯುತ್ ಕಂಪೆನಿಗಳ ನಿರ್ಲಕ್ಷ್ಯ ಧೋರಣೆ ವಿರುದ್ಧ ಸಾರ್ವಜನಿಕರು ಬೀದಿಗೆ ಇಳಿದು ಪ್ರತಿಭಟನೆ ನಡೆಸಿದರೂ ಪರಿಸ್ಥಿತಿಯಲ್ಲಿ ಹೆಚ್ಚಿನ ಬದಲಾವಣೆ ಆಗಿಲ್ಲ. ರಾಜ್ಯ ಸರ್ಕಾರ ವಿದ್ಯುತ್ ದುರಂತಗಳ ತಡೆಗೆ ಗಮನ ಕೊಡಬೇಕು. ಸುರಕ್ಷಿತ ವಿದ್ಯುತ್ ಪ್ರಸರಣ ವ್ಯವಸ್ಥೆಗೂ ಕ್ರಮ ತೆಗೆದುಕೊಳ್ಳಬೇಕು. ಬೆಂಗಳೂರು ನಗರ ಸೇರಿದಂತೆ ರಾಜ್ಯದಲ್ಲಿ ಅಲ್ಲಲ್ಲಿ ವಿದ್ಯುತ್ ಪ್ರವಹಿಸಿ ಸಾವನ್ನಪ್ಪುವವರ ಸಂಖ್ಯೆಯೂ ಹೆಚ್ಚುತ್ತಿದೆ. ಮುನ್ನೆಚ್ಚರಿಕೆ ಕ್ರಮಗಳ ಕೊರತೆಯಿಂದ ಹೀಗಾಗುತ್ತಿದೆ. ಇದಕ್ಕೆ ವಿದ್ಯುತ್ ಕಂಪೆನಿಗಳು ನೇರ ಹೊಣೆಯಲ್ಲವಾದರೂ ಸುರಕ್ಷಿತ ಕ್ರಮಗಳ ಬಗ್ಗೆ ಜನರಿಗೆ ತಿಳುವಳಿಕೆ ಮೂಡಿಸುವ ಕೆಲಸವನ್ನೂ ವಿದ್ಯುತ್ ಕಂಪೆನಿಗಳೇ ಮಾಡಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.