ಆಡಳಿತ ಸಾಮರ್ಥ್ಯಕ್ಕೆ ಸವಾಲು ಜನರ ಪ್ರಾಣ ರಕ್ಷಣೆಯಲ್ಲಿ ವಿಫಲವಾಗುವ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯುವ ಯೋಗ್ಯತೆ ಇರುವುದಿಲ್ಲ. ಮುಂಬೈನಲ್ಲಿ ಸಂಭವಿಸಿದ ಸರಣಿ ಸ್ಫೋಟಗಳು ಭಯೋತ್ಪಾದಕ ಸಂಘಟನೆಯ ಕೃತ್ಯವೆಂದು ಕೇಂದ್ರ ಸರ್ಕಾರದ ಗೃಹಸಚಿವರು ನೀಡಿರುವ ತಿಪ್ಪೆ ಸಾರಿಸುವ ಹೇಳಿಕೆ ಸರ್ಕಾರದ ಸಂಪೂರ್ಣ ವೈಫಲ್ಯವನ್ನು ಬಿಂಬಿಸಿದೆ. `ಸರಣಿ ಸ್ಫೋಟಗಳನ್ನು ನಡೆಸಬಲ್ಲ ಸಂಘಟನೆಗಳಿಂದ ಇಂಥ ಕೃತ್ಯ ನಡೆದಿದೆ. ಈ ಬಗ್ಗೆ ಬೇಹುಗಾರಿಕೆ ಸಂಸ್ಥೆಗಳಿಗೆ ಯಾವ ಸುಳಿವೂ ಇರಲಿಲ್ಲ~ ಎಂಬುದಂತೂ ಸರ್ಕಾರದ ಆಡಳಿತ ಸಾಮರ್ಥ್ಯವನ್ನೇ ಶಂಕಿಸುವಂಥ ಹೇಳಿಕೆ. ಮುಂಬೈಯಂಥ ದೇಶದ ಆರ್ಥಿಕ ರಾಜಧಾನಿ, ಈಗಾಗಲೇ ಹಲವು ಸಲ ಭಯೋತ್ಪಾದಕರ ದುಷ್ಕೃತ್ಯಕ್ಕೆ ಗುರಿಯಾಗಿದೆ. ನೂರಾರು ಜನ ಪ್ರಾಣ ಕಳೆದುಕೊಂಡ ನಗರದಲ್ಲಿ, ಉಗ್ರಗಾಮಿಗಳು ಇಷ್ಟಪಟ್ಟಾಗ ಸ್ಫೋಟ ನಡೆಸುವುದಕ್ಕೆ ಸಾಧ್ಯವಾಗಿರುವುದು ಮುನ್ನೆಚ್ಚರಿಕೆ ವ್ಯವಸ್ಥೆಯ ಲೋಪದಿಂದಲ್ಲದೆ ಬೇರೆ ಅಲ್ಲ. ಭಯೋತ್ಪಾದಕ ಕೃತ್ಯಗಳಿಗೆ ಆಸ್ಪದವೇ ನೀಡದಂತಹ ಭದ್ರತಾ ವ್ಯವಸ್ಥೆ ಇಲ್ಲದಿದ್ದರೆ ಸಮರ್ಥವಾದ ತನಿಖಾ ಸಂಸ್ಥೆಗಳಿಂದ ಪ್ರಯೋಜನವೇನು? ಬೇಹುಗಾರಿಕೆ ಮತ್ತು ಮುನ್ನೆಚ್ಚರಿಕೆ ಕೊರತೆಯ ಲೋಪವನ್ನು ರಾಜ್ಯ ಸರ್ಕಾರವೂ, ಕೇಂದ್ರ ಸರ್ಕಾರವೂ ಒಪ್ಪಿಕೊಳ್ಳಲೇ ಬೇಕು. ಇಂಥ ದಾಳಿಯ ಸುಳಿವು ಬೇಹುಗಾರಿಕೆ ಸಂಸ್ಥೆಗಳಿಗೆ ಸಿಕ್ಕಿರಲಿಲ್ಲ ಎಂಬ ಗೃಹಸಚಿವರ ಹೇಳಿಕೆ ಸರ್ಕಾರದ ಬೇಹುಗಾರಿಕೆ ಸಂಸ್ಥೆಗಳ ಕಾರ್ಯದಕ್ಷತೆಯನ್ನು ಅನುಮಾನಪಡುವಂತೆ ಮಾಡಿದೆ. `ನಾವು ಇಂಥ ಕಡೆ, ಇಷ್ಟು ಹೊತ್ತಿನಲ್ಲಿ ಬಾಂಬ್ ದಾಳಿ ನಡೆಸಲಿದ್ದೇವೆ~ ಎಂದು ಭಯೋತ್ಪಾದಕ ಸಂಘಟನೆಗಳು ಪೂರ್ವ ಸೂಚನೆ ನೀಡಬೇಕಿತ್ತೆಂದು ಗೃಹಸಚಿವರು ನಿರೀಕ್ಷಿಸುತ್ತಾರೆಯೇ? ಭಯೋತ್ಪಾದನೆ ಜಾಗತಿಕ ಪಿಡುಗು ಎಂಬುದು ನಿಜ. ಅದನ್ನು ದಿಟ್ಟವಾಗಿ ಎದುರಿಸುವ ವ್ಯವಸ್ಥೆಯನ್ನು ಸಮರ್ಥವಾಗಿ ರೂಪಿಸದಿದ್ದರೆ ಭಯೋತ್ಪಾದನೆಯನ್ನು ನಿಗ್ರಹಿಸುವುದು ಸಾಧ್ಯವಿಲ್ಲ. 2001ರ ಸೆಪ್ಟೆಂಬರ್ 11ರ ಭಯೋತ್ಪಾದಕ ದಾಳಿಯ ನಂತರ ಅಮೆರಿಕ ಕೈಗೊಂಡ ಕ್ರಮಗಳು ಅಂಥ ಇನ್ನೊಂದು ದಾಳಿಯನ್ನು ಅಮೆರಿಕದ ನೆಲದಲ್ಲಿ ಮಾಡಲು ಅವಕಾಶವನ್ನೇ ನೀಡಲಿಲ್ಲವೆಂಬುದು ಭಾರತ ಸೇರಿದಂತೆ ಭಯೋತ್ಪಾದನೆಗೆ ಗುರಿಯಾದ ಎಲ್ಲ ದೇಶಗಳಿಗೂ ಮಾದರಿಯಾಗಬೇಕು. ಸಂಸತ್ ಭವನ ಸ್ಫೋಟಿಸಲು ಸಂಚು ನಡೆಸಿದ ಆರೋಪಿಗಳು ಸಿಕ್ಕಿದರೂ ಅವರನ್ನು ಶಿಕ್ಷಿಸಲು ಇನ್ನೂ ಭಾರತಕ್ಕೆ ಸಾಧ್ಯವಾಗಿಲ್ಲ. ಮೂರು ವರ್ಷಗಳ ಹಿಂದೆ ಇದೇ ಮುಂಬೈ ನಗರವನ್ನು ತಲ್ಲಣಗೊಳಿಸಿದ್ದ ಭಯೋತ್ಪಾದಕ ಅಜ್ಮಲ್ ಕಸಬ್ ನ್ಯಾಯಾಲಯದಿಂದ ಗಲ್ಲುಶಿಕ್ಷೆಗೆ ಒಳಗಾಗಿದ್ದರೂ ಅದು ಜಾರಿಯಾಗುವುದೇ ಅನಿಶ್ಚಿತವೆಂಬ ಪರಿಸ್ಥಿತಿ. ಭಾರತದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸಿ ಸಿಕ್ಕಿಬಿದ್ದರೂ ಪಾರಾಗಬಹುದೆಂಬ ನಂಬಿಕೆಯನ್ನು ಇಲ್ಲಿನ ಆಡಳಿತ ವ್ಯವಸ್ಥೆ ಮೂಡಿಸಿರುವಾಗ ಭಯೋತ್ಪಾದಕ ಕೃತ್ಯಗಳನ್ನು ತಡೆಯುವುದು ಹೇಗೆ? ಭಯೋತ್ಪಾದಕರ ಅಡ್ಡೆಗಳಾದ ಪಾಕಿಸ್ತಾನ, ಆಫ್ಘಾನಿಸ್ತಾನದ ನೆರೆಯಲ್ಲಿರುವುದರಿಂದ ಇಂಥ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂದು ಗೃಹಸಚಿವರು ಹತಾಶೆಯಿಂದ ಕೈ ಚೆಲ್ಲುವುದನ್ನು ಒಪ್ಪಿಕೊಳ್ಳಲಾಗದು. ಪಾಕಿಸ್ತಾನದ ಜೊತೆ ಸಂಧಾನ ಯತ್ನವನ್ನು ವಿಫಲಗೊಳಿಸಲು ನಡೆಸಿದ ಕೃತ್ಯವೆಂಬ ವ್ಯಾಖ್ಯಾನವೂ ಲೋಪವನ್ನು ಮುಚ್ಚಿಕೊಳ್ಳುವ ಯತ್ನ. ಭಾರತದಲ್ಲಿ ದುಷ್ಕೃತ್ಯಗಳನ್ನು ನಡೆಸಿದರೆ ಉಳಿಗಾಲವಿಲ್ಲ ಎಂಬ ಸಂದೇಶ ಭಯೋತ್ಪಾದಕ ಸಂಘಟನೆಗಳಿಗೆ ಮುಟ್ಟುವಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಯಾರ ಅಡ್ಡಿ? ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.