ದೂರದೃಷ್ಟಿಯ ಕೊರತೆ ಗದಗ ಜಿಲ್ಲೆಯಲ್ಲಿ ದಕ್ಷಿಣ ಕೊರಿಯಾದ ಪೋಸ್ಕೋ ಕಂಪೆನಿ ಸ್ಥಾಪಿಸಬೇಕೆಂದಿದ್ದ ಉಕ್ಕು ಕಾರ್ಖಾನೆಗೆ ಬೇಕಾಗಿದ್ದ ಭೂಮಿಗಾಗಿ ಕೈಗೊಂಡಿದ್ದ ಭೂ ಸ್ವಾಧೀನ ಪ್ರಕ್ರಿಯೆಗೆ ತಡೆಬಿದ್ದಿದೆ. ಈ ಕ್ರಮ ಕೈಗೊಳ್ಳುವ ಮೂಲಕ ಸರ್ಕಾರ ಕೊನೆಗೂ ರೈತರ ಬೇಡಿಕೆಗಳಿಗೆ ಮಣಿದಿದೆ. ಕೃಷಿ ಬಿಟ್ಟರೆ ಬೇರೇನೂ ವಿದ್ಯೆ ಗೊತ್ತಿಲ್ಲದ ಹಳ್ಳಿಯ ಜನರು ಹಣದಾಸೆಗಾಗಿ ಭೂಮಿ ಕಳೆದುಕೊಂಡು ಬೀದಿ ಪಾಲಾಗುವ ಅಪಾಯವನ್ನು ಅರಿತು ನಡೆಸಿದ ಸಂಘಟಿತ ಹೋರಾಟಕ್ಕೆ ಜಯ ಸಿಕ್ಕಿದೆ. ಹಾಗೆಂದು ಕೈಗಾರಿಕೆಗಳಿಗೆ ಭೂಮಿ ಕೊಡಲೇಬಾರದು ಎಂತಲ್ಲ. ಹಾಗೆಯೇ ಸರ್ಕಾರವೂ ಕೈಗಾರಿಕೆಗಳಿಗೆ ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲೇ ಬಾರದು ಎಂದೇನೂ ಇಲ್ಲ. ಕೃಷಿ ಪ್ರಧಾನವಾದ ನಮ್ಮ ದೇಶದಲ್ಲಿ ಗ್ರಾಮೀಣ ಬದುಕನ್ನು ಅಭಿವೃದ್ಧಿಗೊಳಿಸುವ ಜೊತೆ ಜೊತೆಗೆ ಕೈಗಾರಿಕೆಯ ಪ್ರಗತಿಯನ್ನೂ ಮಾಡಬೇಕಿದೆ. ಯಾವ ಕೈಗಾರಿಕೆಗೆ ಎಷ್ಟು ಭೂಮಿ ಬೇಕು, ಅದು ಎಲ್ಲಿ ಮತ್ತು ಎಂತಹ ಭೂಮಿ ಆಗಿರಬೇಕು ಎನ್ನುವುದನ್ನೂ ಸರ್ಕಾರ ಗಂಭೀರವಾಗಿ ಚಿಂತಿಸಬೇಕು. ಬೃಹತ್ ಉಕ್ಕಿನ ಕಾರ್ಖಾನೆ ಸ್ಥಾಪನೆಗಾಗಿ ಪೋಸ್ಕೋ 3,382 ಎಕರೆ ಭೂಮಿಯ ಅವಶ್ಯಕತೆಯ ಬೇಡಿಕೆ ಇಟ್ಟಿದೆ. ಆದರೆ ಇಷ್ಟು ಪ್ರಮಾಣದ ಭೂಮಿಯನ್ನು ಗದಗ ಜಿಲ್ಲೆಯಲ್ಲಿ ನೀಡಲು ತೀರ್ಮಾನ ಕೈಗೊಂಡಾಗ ಸರ್ಕಾರ ಇದರ ಸಾಧ್ಯಾಸಾಧ್ಯತೆಯ ಬಗೆಗೆ ಗಂಭೀರವಾಗಿ ಚಿಂತನೆ ಮಾಡಿದಂತಿಲ್ಲ. ಪೋಸ್ಕೋಗೆ ಭೂಮಿ ನೀಡುವ ಮತ್ತು ಅದರಿಂದ ಆಗಬಹುದಾದ ಅನುಕೂಲದ ಬಗೆಗೆ ಪಾರದರ್ಶಕತೆ ಕಾಣುತ್ತಿಲ್ಲ. ಇದನ್ನೆಲ್ಲ ನೋಡಿದರೆ ಸರ್ಕಾರಕ್ಕೆ ದೂರದೃಷ್ಟಿಯ ಕೊರತೆ ಇದ್ದಂತಿದೆ. ಕೃಷಿಯನ್ನೇ ಅವಲಂಬಿಸಿರುವ ಹಳ್ಳಿಯ ಜನರು ಇಷ್ಟು ಪ್ರಮಾಣದ ಭೂಮಿಯನ್ನು ಕಳೆದುಕೊಂಡರೆ ಮುಂದೆ ಅವರ ಪಾಡೇನು ಎಂಬ ಬಗೆಗೆ ಸರ್ಕಾರ ಗಂಭೀರವಾಗಿ ಚಿಂತಿಸಬೇಕಿತ್ತು. ಉಕ್ಕು ಕಾರ್ಖಾನೆ ಸ್ಥಾಪನೆಯಾದರೆ ಆ ಹಳ್ಳಿಗಳ ಜನರ ಬದುಕಿಗೆ ಆಸರೆ ಆಗುತ್ತಿತ್ತೇ? ಅದರಿಂದ ಎಷ್ಟು ಜನರಿಗೆ ಉದ್ಯೋಗಾವಕಾಶಗಳು ಸಿಗುತ್ತಿದ್ದವು? ಅದರ ಸಾಧಕ ಬಾಧಕಗಳೇನು ಎಂಬ ಬಗೆಗೆ ಜನರಿಗೆ ಅರಿವು ಮೂಡಿಸುವ ಪ್ರಯತ್ನ ನಡೆದಂತಿಲ್ಲ. ಭೂಮಿ ಕಳೆದುಕೊಳ್ಳುವವರಿಗೆ ಪುನರ್‌ವಸತಿ ಕಲ್ಪಿಸುವ ಮತ್ತು ಕೃಷಿಯನ್ನೇ ಮುಂದುವರಿಸುವ ಜನರಿಗೆ ಪರ್ಯಾಯ ಭೂಮಿ ನೀಡಿಕೆಯಂತಹ ಕಾರ್ಯಕ್ರಮಗಳೇನೂ ಈ ಯೋಜನೆಯಲ್ಲಿ ಪ್ರಕಟವಾಗಲಿಲ್ಲ. ಆದ್ದರಿಂದಲೇ ಜನರು ಹಣದ ಬದಲು ಅನ್ನ ಕೊಡುವ ಭೂಮಿಯನ್ನೇ ಅಪ್ಪಿಕೊಂಡರು. ಹಾಗಾಗಿ ಭೂಮಿ ಕೊಡಲು ಹಿಂದೇಟು ಹಾಕಿದ ರೈತರ ಹೋರಾಟ ಅವರ ಬದುಕಿನ ದೃಷ್ಟಿಯಿಂದ ಸರಿಯಾದ ಕ್ರಮ. ಇತ್ತ ಉದ್ಯಮದ ಬೆಳವಣಿಗೆಗೆ ವಿದೇಶಿ ಬಂಡವಾಳ ಆಕರ್ಷಿಸುವ ಸರ್ಕಾರ, ಕೈಗಾರಿಕೆ ಸ್ಥಾಪನೆಗೆ ಮುಂದೆ ಬಂದ ಉದ್ಯಮಿಗಳಿಗೂ ಮೂಲಭೂತ ಸೌಲಭ್ಯ ಒದಗಿಸಲು ಆಗುತ್ತಿಲ್ಲ. ಇದು ಸರ್ಕಾರದ ಎಡಬಿಡಂಗಿ ನಿಲುವು. ಉದ್ಯಮಗಳಿಗೆ ಕೃಷಿ ಭೂಮಿ ನೀಡಿಕೆಯ ವಿಷಯದಲ್ಲಿ ಸರ್ಕಾರ ಅನುಸರಿಸುತ್ತಿರುವ ನೀತಿಯನ್ನು ಮತ್ತೊಮ್ಮೆ ಪುನರ್‌ವಿಮರ್ಶಿಸಿ ಮುನ್ನಡೆಯುವುದಕ್ಕೆ ಉಡುಪಿ ಮತ್ತು ಗದಗ ಜಿಲ್ಲೆಗಳಲ್ಲಿನ ರೈತರ ಪ್ರತಿಭಟನೆಗಳಿಂದ ಪಾಠ ಕಲಿಯಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.