ಸ್ವಸ್ಥ ಸಮಾಜಕ್ಕೆ ಅಪಾಯಕಾರಿ ಅಧಿಕಾರದ ಅಮಲು ನೆತ್ತಿಗೆ ಹತ್ತಿಸಿಕೊಂಡರೆ ಮಾನಸಿಕ ಸ್ಥಿಮಿತ ಕಳೆದುಹೋಗುತ್ತದೆ; ಆಗ ಆ ಅಧಿಕಾರ ಸ್ಥಾನದಲ್ಲಿ ಮುಂದುವರಿಯುವ ನೈತಿಕ ಅರ್ಹತೆ ಉಳಿಯುವುದಿಲ್ಲ. ರಾಜ್ಯದ ಪ್ರೌಢ ಶಿಕ್ಷಣ ಸಚಿವರು ಭಗವದ್ಗೀತೆಯ ಪ್ರಚಾರದ ಒಂದು ಸಭೆಯಲ್ಲಿ ನೀಡಿದ ಒಂದು ಹೇಳಿಕೆ ಅವರು ತಾವು ಹೊಂದಿರುವ ಸ್ಥಾನದಲ್ಲಿ ಮುಂದುವರಿಯುವ ಅರ್ಹತೆ ಕಳೆದುಕೊಂಡಿದ್ದನ್ನು ನಿಚ್ಚಳವಾಗಿ ಬಿಂಬಿಸಿದೆ. ಸಂವಿಧಾನಕ್ಕೆ ಬದ್ಧವಾಗಿ ಕಾರ್ಯನಿರ್ವಹಿಸುವುದಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಸಚಿವರು ತಮ್ಮ ವೈಯಕ್ತಿಕ ಧಾರ್ಮಿಕ ನಂಬಿಕೆಯನ್ನು ಎಳೆಯ ಮಕ್ಕಳ ಮೇಲೆ ಹೇರುವುದನ್ನು ಸಮರ್ಥಿಸಿಕೊಂಡು ಪ್ರಮಾಣ ವಚನವನ್ನು ಉಲ್ಲಂಘಿಸಿದ್ದಾರೆ. `ಭಗವದ್ಗೀತೆ ಅಭಿಯಾನವನ್ನು ವಿರೋಧಿಸುವವರು ದೇಶ ಬಿಟ್ಟು ಹೋಗಲಿ~ ಎಂದು ಹೇಳುವ ಮೂಲಕ ನಿರಂಕುಶ ಧೋರಣೆಯನ್ನು ಪ್ರದರ್ಶಿಸಿದ್ದಾರೆ. ಪ್ರಜಾಸತ್ತೆಯಲ್ಲಿ ನಿರಂಕುಶಾಧಿಕಾರಕ್ಕೆ ಅವಕಾಶವಿಲ್ಲ. ಸಂವಿಧಾನದ ಎದುರು ಯಾವೊಂದು ಧರ್ಮವೂ ಇತರೆ ಧರ್ಮಗಳಿಗಿಂತ ಹೆಚ್ಚಿನದಲ್ಲ. ಅಷ್ಟಕ್ಕೂ ತಮಗೆ ಇಷ್ಟವಾದ ಧಾರ್ಮಿಕ ಆಚರಣೆ ಜನತೆಗೆ ಸಂವಿಧಾನ ನೀಡಿದ ಹಕ್ಕು. ತಾವು ಅನುಸರಿಸುತ್ತಿರುವುದೇ ಸಾರ್ವಕಾಲಿಕ ಧರ್ಮ; ಅದನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕು ಎಂದು ಮಕ್ಕಳ ಮೇಲೆ ಬಲವಂತವಾಗಿ ಹೇರುವಂತೆ ನಡೆದುಕೊಂಡ ಸಚಿವರನ್ನು ಸಂಪುಟದಿಂದ ವಜಾ ಮಾಡಿ ಸಂವಿಧಾನ ರಕ್ಷಣೆ ಮಾಡುವುದು ನಾಗರಿಕ ಆಡಳಿತದ ಕರ್ತವ್ಯ. ರಾಜ್ಯದಲ್ಲಿ ಸಂವಿಧಾನ ವ್ಯವಸ್ಥೆಯ ರಕ್ಷಣೆಗಾಗಿ ನಿಯೋಜಿತರಾದ ರಾಜ್ಯಪಾಲರು ಈ ಕುರಿತಾಗಿ ಗಮನ ಹರಿಸಬೇಕಿದೆ. ಶಾಲೆಗಳಲ್ಲಿ ಭಗವದ್ಗೀತೆ ಕುರಿತಾಗಿ ಪ್ರಚಾರ ನಡೆಸುವ ಮಠವೊಂದರ ಕಾರ‌್ಯಕ್ರಮಕ್ಕೆ ಸರ್ಕಾರ ಕೈ ಜೋಡಿಸುವಂತೆ ಮಾಡುವ ಮೂಲಕ ಜಾತ್ಯತೀತ ತತ್ವವನ್ನು ಉಲ್ಲಂಘಿಸಿದ ಸಚಿವರು ತಮ್ಮ ವರ್ತನೆ ಪಕ್ಷಪಾತ ಧೋರಣೆಯಿಂದ ಕೂಡಿದ್ದೆಂಬುದನ್ನು ನಿಚ್ಚಳವಾಗಿ ತೋರಿಸಿಕೊಂಡಿದ್ದಾರೆ. ಇದು ಕೂಡ ಅವರು ಕೈಗೊಂಡ ಪ್ರಮಾಣ ವಚನದ ಉಲ್ಲಂಘನೆ. ಹಲವು ಬಗೆಯ ಮತಧರ್ಮಗಳು, ಆಚರಣೆಗಳು, ನಡವಳಿಕೆಗಳ ವೈವಿಧ್ಯ ಇರುವ ಸಮಾಜದಲ್ಲಿ ಎಲ್ಲರಿಗೂ ಅನ್ವಯವಾಗಿರುವುದು ಸಂವಿಧಾನ ನೀಡಿದ ಸಮಾನತೆಯ ತತ್ವ. ಸ್ವಾತಂತ್ರ್ಯ, ಸಮಾನತೆ ಮತ್ತು ಸೋದರತೆಯ ಆದರ್ಶಗಳ ಹಿನ್ನೆಲೆಯಲ್ಲಿ ಮಕ್ಕಳು ವೈಯಕ್ತಿಕ ಸಾಧನೆಯಿಂದ ಸ್ವಾವಲಂಬಿ ಬದುಕನ್ನು ರೂಪಿಸಿಕೊಳ್ಳುವಂತೆ ಅವರನ್ನು ಸಜ್ಜುಗೊಳಿಸಬೇಕಾದುದು ಪ್ರಾಥಮಿಕ ಶಿಕ್ಷಣದ ಆಶಯ. ಮಕ್ಕಳಲ್ಲಿ ವೈಜ್ಞಾನಿಕ ದೃಷ್ಟಿಯನ್ನೂ ವೈಚಾರಿಕ ಚಿಂತನೆಯನ್ನೂ ಉದ್ದೀಪಿಸುವಂತೆ ಪಠ್ಯಕ್ರಮಗಳನ್ನು ಸಂಯೋಜಿಸಬೇಕಿರುವುದು ಸದ್ಯದ ಅವಶ್ಯಕತೆ. ಇದಕ್ಕೆ ವ್ಯತಿರಿಕ್ತ ಪರಿಣಾಮ ಬೀರುವ ಯಾವುದೇ ಅಭಿಯಾನಗಳು ಮಕ್ಕಳಲ್ಲಿ ಸಂಕುಚಿತ ದೃಷ್ಟಿಯನ್ನೂ, ಪರಾವಲಂಬಿ ಧೋರಣೆಯನ್ನೂ, ಜನ್ಮವನ್ನು ಆಧರಿಸಿದ ಮೇಲು ಕೀಳಿನ ಭಾವನೆಯನ್ನೂ ಮೂಡಿಸುವುದು ಸ್ವಸ್ಥ ಸಮಾಜಕ್ಕೆ ಬೇಕಾದ ಅಂಶಗಳಲ್ಲ. ರಾಜ್ಯ ಸಂಪುಟದಲ್ಲಿ ಸಜ್ಜನರೆಂಬ ಪ್ರತೀತಿ ಇದ್ದ ಸಚಿವರು ಭಗವದ್ಗೀತೆ ಪ್ರಚಾರದ ಗೀಳನ್ನು ಹತ್ತಿಸಿಕೊಂಡ ಮಾತ್ರಕ್ಕೆ ಹೀಗೆ ನಿರಂಕುಶ ಪ್ರವೃತ್ತಿಯನ್ನು ಬೆಳೆಸಿಕೊಂಡರೆಂದರೆ, ಇನ್ನು ಅದರ ಬೋಧನೆಗೆ ಗುರಿಯಾಗುವ ಮಕ್ಕಳು ಎಷ್ಟರಮಟ್ಟಿಗೆ ಮತಾಂಧರಾಗಿ ಪರಿವರ್ತನೆ ಆಗಬಹುದೆಂಬುದು ಊಹೆಗೂ ನಿಲುಕದ ಸಂಗತಿ. ರಾಜ್ಯದ ಪ್ರೌಢ ಶಿಕ್ಷಣ ಸಚಿವರು ಇಂಥ ಪ್ರತಿಗಾಮಿ ಧೋರಣೆಯನ್ನು ಪ್ರತಿಪಾದಿಸುತ್ತಿರುವುದರಿಂದ ಅವರ ಅಧಿಕಾರ ಸ್ಥಾನ ದುರುಪಯೋಗವಾಗುತ್ತಿದೆ. ರಾಜ್ಯದ ಭವಿಷ್ಯದ ಪೀಳಿಗೆ ಮತ್ತು ಸಾರ್ವಜನಿಕ ಹಿತದ ದೃಷ್ಟಿಯಿಂದ ಅವರು ಸಚಿವರಾಗಿ ಮುಂದುವರಿಯುವುದು ಸಮಾಜಕ್ಕೆ ಅಪಾಯಕಾರಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.