ಮುಖ್ಯಮಂತ್ರಿಯ ನಡೆ ವಿಧಾನಸೌಧದಲ್ಲಿ ವಾರದ ನಾಲ್ಕು ದಿನ ಕುಳಿತುಕೊಂಡು ಕಾರ್ಯನಿರ್ವಹಿಸುವ ನಿರ್ಧಾರವನ್ನು ಪ್ರಕಟಿಸುವ ಮೂಲಕ ನೂತನ ಮುಖ್ಯಮಂತ್ರಿ ಸದಾನಂದಗೌಡರು ತಮ್ಮ ಆಡಳಿತ ಭಿನ್ನವಾಗಿರುವ ಸೂಚನೆ ನೀಡಿದ್ದಾರೆ. ಯಾವುದೇ ಕಡತದ ಕುರಿತ ನಿರ್ಧಾರಕ್ಕೆ ಹದಿನೈದು ದಿನಗಳ ಗಡುವು ನೀಡಿರುವುದು ಆಡಳಿತವನ್ನು ಚುರುಕುಗೊಳಿಸುವ ಒಂದು ಹೆಜ್ಜೆ. ಹೊಸ ಯೋಜನೆಗಳನ್ನು ಪ್ರಕಟಿಸುವುದಕ್ಕಿಂತ ಇರುವ ಕಾರ‌್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದಕ್ಕೆ ಆದ್ಯತೆ ನೀಡಿರುವುದು ಕೂಡ ಅವರ ಇನ್ನೊಂದು ಪ್ರಕಟಣೆ. ಆಡಳಿತ ಸೂತ್ರ ಹಿಡಿದವರು ಅಧಿಕಾರ ಕೇಂದ್ರದಲ್ಲಿದ್ದು ಕೆಲಸ ನಿರ್ವಹಿಸದಿದ್ದರೆ ಏನು ಪರಿಣಾಮವಾಗುತ್ತದೆ ಎಂಬುದನ್ನು ರಾಜ್ಯದ ಜನತೆ ಕಳೆದ ಮೂರು ವರ್ಷಗಳಲ್ಲಿ ಚೆನ್ನಾಗಿಯೇ ಗಮನಿಸಿದ್ದಾರೆ. ರಾಜ್ಯದ ಅಭಿವೃದ್ಧಿ ಕುರಿತಾಗಿ ಸ್ಪಷ್ಟ ಒಳನೋಟ ಮತ್ತು ದೂರದೃಷ್ಟಿ ಇದ್ದರೆ ಗೌಡರ ಆಡಳಿತದ ಅನುಭವ ಕೊರತೆ ಎನಿಸದು. ಸರ್ಕಾರ ಜನಸ್ನೇಹಿಯಾಗಿರಬೇಕೆಂಬ ಕನಿಷ್ಠ ಪ್ರಮಾಣದ ಆದರ್ಶವನ್ನು ಸರ್ಕಾರದ ಮುಖ್ಯಸ್ಥರು ಇಟ್ಟುಕೊಂಡರೆ ಅಧಿಕಾರಶಾಹಿಯನ್ನು ತಮ್ಮಂದಿಗೆ ಕರೆದೊಯ್ಯುವುದು ಕಷ್ಟವಲ್ಲ. ಅಡಳಿತ ಪಕ್ಷದವರನ್ನು ಮಾತ್ರವಲ್ಲದೆ, ಎಲ್ಲ 225 ಶಾಸಕರನ್ನೂ ಸಮಾನವಾಗಿ ಪರಿಗಣಿಸುವ ಸಾಮರಸ್ಯದ ಧೋರಣೆಯನ್ನು ಪ್ರಕಟಿಸಿ ವೃತ್ತಿಪರ ನಿಷ್ಠೆಯಲ್ಲಿ ಆಡಳಿತ ನಡೆಸುವ ನಿರ್ಧಾರವನ್ನು ಸದಾನಂದಗೌಡರು ವ್ಯಕ್ತಪಡಿಸಿದ್ದಾರೆ. ಇದು ಆದರ್ಶದ ಮಟ್ಟದಲ್ಲಿ ಉಳಿಯದೆ ಅನುಷ್ಠಾನದಲ್ಲಿ ಸಾಕಾರಗೊಳ್ಳುವಂತೆ ನೋಡಿಕೊಳ್ಳುವ ನೈತಿಕ ಜವಾಬ್ದಾರಿ ಅವರಿಗೆ ರಾಜ್ಯಾಡಳಿತ ಸೂತ್ರ ಒಪ್ಪಿಸಿದ ಭಾರತೀಯ ಜನತಾ ಪಕ್ಷದ್ದಾಗಿದೆ. ಸಂಪುಟ ರಚನೆಯ ಕಸರತ್ತಿನಲ್ಲಿ ಎದುರಾಗುತ್ತಿರುವ ಸಮಸ್ಯೆಗಳನ್ನು ಗಮನಿಸಿದರೆ ಸದಾನಂದಗೌಡರ ಹಾದಿ ಸುಗಮವಾಗುವುದೆಂಬ ನಂಬಿಕೆ ಮೂಡುತ್ತಿಲ್ಲ. ಮುಖ್ಯಮಂತ್ರಿ ಆಯ್ಕೆಯ ಸಂದರ್ಭದಲ್ಲಿ ಇಬ್ಭಾಗವಾಗಿದ್ದ ಬಿಜೆಪಿ ಶಾಸಕಾಂಗ ಪಕ್ಷದ ಬಿರುಕನ್ನು ಮುಚ್ಚುವ ಪ್ರಯತ್ನಗಳು ಮೂರು ದಿನಗಳ ಸಂಧಾನ ಮಾತುಕತೆಗಳ ನಂತರವೂ ಯಶಸ್ವಿಯಾಗಿಲ್ಲ. ಲೋಕಾಯುಕ್ತರ ವರದಿ ಪ್ರಕಟವಾಗುವ ವಾರದ ಮೊದಲು, ಸರ್ಕಾರದಲ್ಲಿ ಮೂಡಿದ್ದ ಅನಿಶ್ಚಿತತೆ ಮತ್ತು ಗೊಂದಲದ ಸ್ಥಿತಿ, ಭ್ರಷ್ಟಾಚಾರದ ಕಳಂಕ ಹೊತ್ತ ಹಿಂದಿನ ಮುಖ್ಯಮಂತ್ರಿಯ ರಾಜೀನಾಮೆಯ ನಂತರವೂ ತಿಳಿಯಾಗಿಲ್ಲ. ಎರಡು ವಾರಗಳಿಂದ ರಾಜ್ಯದಲ್ಲಿ ಸರ್ಕಾರವೇ ಇಲ್ಲದಂತಹ ಸ್ಥಿತಿ ಇದೆ.ಇದು ಆಡಳಿತ ಪಕ್ಷದ ಶಾಸಕರನ್ನು ಬಾಧಿಸಿದಂತೆ ತೋರುವುದಿಲ್ಲ. ಅಧಿಕಾರವೆನ್ನುವುದು ಜನಸೇವೆಗೆ ಸಿಕ್ಕಿದ ಅವಕಾಶ ಎಂಬುದನ್ನು ಸಂಪೂರ್ಣ ಮರೆತಂತಿರುವ ಬಿಜೆಪಿ ನಾಯಕರು ತಮ್ಮ ಬಣಗಳ ಶಕ್ತಿ ಪ್ರದರ್ಶನದ ಮೂಲಕ ಆಯಕಟ್ಟಿನ ಅಧಿಕಾರ ಸ್ಥಾನಗಳಿಗಾಗಿ ನಿರ್ಲಜ್ಜ ಹೋರಾಟ ನಡೆಸುತ್ತಿದ್ದಾರೆ. ಜನಸೇವಾ ನಿಷ್ಠೆಯ ಜನಪ್ರತಿನಿಧಿಗೆ ಯಾವ ಖಾತೆಯೂ ಮೇಲು ಇಲ್ಲವೇ ಕೀಳು ಅಲ್ಲ. ನಿರ್ದಿಷ್ಟ ಖಾತೆಗಳಿಗಾಗಿ ಪಟ್ಟು ಹಿಡಿಯುವ ಮೂಲಕ ಕೊಳ್ಳೆಯನ್ನು ಹಂಚಿಕೊಳ್ಳಲು ಪರಸ್ಪರ ಪೈಪೋಟಿ ನಡೆಸುವ ದರೋಡೆಕೋರರನ್ನು ನೆನಪಿಸುತ್ತಿದ್ದಾರೆ. ಒಂದು ಕಡೆ ಭ್ರಷ್ಟಾಚಾರದ ಕಳಂಕ ಹೊತ್ತು ಅಧಿಕಾರ ತ್ಯಜಿಸಿದ ಮಾಜಿ ಮುಖ್ಯಮಂತ್ರಿಯ ಹಿತರಕ್ಷಣೆಯ ಒತ್ತಡ, ಇನ್ನೊಂದೆಡೆ ಅಧಿಕಾರಕ್ಕಾಗಿ ಯಾವ ಕ್ರಮಕ್ಕೂ ಹಿಂಜರಿಯದ ಪಕ್ಷದ ಸಹೋದ್ಯೋಗಿಗಳ ಬೆದರಿಕೆಯ ಮಧ್ಯೆ ಸಮತೋಲನ ಸಾಧಿಸುವ ಜಟಿಲ ಸವಾಲಿಗೆ ಒಡ್ಡಿಕೊಂಡಿರುವ ಸದಾನಂದಗೌಡರು, ಪಾತಾಳಕ್ಕಿಳಿದಿರುವ ಪಕ್ಷದ ವರ್ಚಸ್ಸನ್ನು ಹೇಗೆ ಹೆಚ್ಚಿಸಲಿದ್ದಾರೆಂಬುದು ಕುತೂಹಲದ ನಿರೀಕ್ಷೆಯಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.