ಪರೀಕ್ಷಾ ಅಕ್ರಮ; ಕಠಿಣ ಕ್ರಮ ಅವಶ್ಯ ಪರೀಕ್ಷೆಗಳಲ್ಲಿ ನಡೆಯುವ ಅವ್ಯವಹಾರ ತಡೆಗಟ್ಟಲು ಸರ್ಕಾರ ಮತ್ತು ವಿಶ್ವವಿದ್ಯಾಲಯಗಳ ಕ್ರಮಗಳು ವಿಫಲಗೊಳ್ಳುತ್ತಿವೆ. ಪ್ರಶ್ನೆಪತ್ರಿಕೆಗಳ ಸೋರಿಕೆ, ಪರೀಕ್ಷೆಯಲ್ಲಿ ನಕಲು ಮಾಡುವುದು ಮತ್ತು ಮೌಲ್ಯಮಾಪನದಲ್ಲಿ ಮೋಸ ನಡೆದೇ ಇದೆ. ಈ ಅಕ್ರಮಗಳ ವಿರುದ್ಧ ಹಲವಾರು ಕ್ರಮಗಳನ್ನು ತೆಗೆದುಕೊಂಡಿದ್ದರೂ, ಅವ್ಯವಹಾರಗಳನ್ನು ತಡೆಯುವಲ್ಲಿ ಆಡಳಿತ ವ್ಯವಸ್ಥೆ ಸಫಲವಾಗಿಲ್ಲ. ಬೆಂಗಳೂರಿನ ಅಂಬೇಡ್ಕರ್ ಮೆಡಿಕಲ್ ಕಾಲೇಜಿನಲ್ಲಿ ನಡೆಯುತ್ತಿದ್ದ ನರ್ಸಿಂಗ್ ಡಿಪ್ಲೊಮಾ ತರಗತಿ ಪರೀಕ್ಷೆಯಲ್ಲಿ ಯಲಹಂಕದ ಕೆಎನ್‌ಎನ್ ಸ್ಕೂಲ್ ಆಫ್ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ನಕಲು ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ವಿದ್ಯಾರ್ಥಿಗಳು ನಕಲು ಮಾಡಲು ಎರಡೂ ಕಾಲೇಜುಗಳ ಸಿಬ್ಬಂದಿಯೂ ಸೇರಿದಂತೆ ಹದಿಮೂರು ಮಂದಿಯ ತಂಡವೊಂದು ಸಹಕರಿಸಿರುವ ಘಟನೆ ಆತಂಕಕಾರಿ. ಪರೀಕ್ಷೆ ಆರಂಭವಾಗುತ್ತಿದ್ದಂತೆ ಪ್ರಶ್ನೆಪತ್ರಿಕೆ ಪಡೆದು ಉತ್ತರಗಳನ್ನು ಬರೆದು ಪೂರೈಕೆ ಮಾಡುತ್ತಿದ್ದದ್ದು ಅಕ್ಷಮ್ಯ. ಈ ಅಕ್ರಮದಲ್ಲಿ ಭಾಗಿಯಾದವರನ್ನು ಕೇಂದ್ರ ಅಪರಾಧ ವಿಭಾಗದ ಪೊಲೀಸರು ಸಕಾಲದಲ್ಲಿ ಬಂಧಿಸಿರುವುದು ಶ್ಲಾಘನೀಯ. ವಿದ್ಯಾರ್ಥಿಗಳು ನಕಲು ಮಾಡಲು ಸಹಕರಿಸಿದವರ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳುವ ಜೊತೆಗೆ ನಕಲು ಮಾಡಿ ಸಿಕ್ಕಿಬಿದ್ದಿರುವ ವಿದ್ಯಾರ್ಥಿಗಳನ್ನು ಪರೀಕ್ಷೆಯಿಂದ ಡಿಬಾರ್ ಮಾಡಬೇಕು. ಅಂತಹ ಕಠಿಣ ಕ್ರಮಗಳನ್ನು ಕೈಗೊಂಡರೆ ಮಾತ್ರ ಪರೀಕ್ಷಾ ಅಕ್ರಮಗಳಿಗೆ ತಡೆ ಹಾಕಬಹುದು. ತಮ್ಮ ಕಾಲೇಜುಗಳಿಗೆ ಉತ್ತಮ ಫಲಿತಾಂಶ ಬರಲೆಂದು ಇಂತಹ ಅಕ್ರಮಗಳಲ್ಲಿ ತೊಡಗುವುದು ಇತ್ತೀಚಿನ ವರ್ಷಗಳಲ್ಲಿ ಬೀದರ್, ಗುಲ್ಬರ್ಗ ಮತ್ತು ರಾಯಚೂರು ಸೇರಿದಂತೆ ಹಲವು ಕಡೆಗಳಲ್ಲಿ ಪತ್ತೆಯಾಗಿದೆ. ಪರೀಕ್ಷಾ ಅಕ್ರಮ ನಡೆಸುವ ಕಾಲೇಜುಗಳಿಗೆ ಪರೀಕ್ಷಾ ಕೇಂದ್ರವನ್ನು ನೀಡಬಾರದು. ಅಂತೆಯೇ ಸಾಮೂಹಿಕ ನಕಲು ನಡೆಸುವ ಕಾಲೇಜುಗಳ ಮಾನ್ಯತೆಯನ್ನೂ ರದ್ದು ಮಾಡಬೇಕು. ಕೆಲವು ಕಾಲೇಜುಗಳು ಇದನ್ನೇ ಒಂದು ದಂಧೆಯನ್ನಾಗಿ ಮಾಡಿಕೊಂಡಿವೆ. ಪರೀಕ್ಷೆಗಳಲ್ಲಿ ನಕಲು ಮಾಡುವವರು ಮತ್ತು ಅವರಿಗೆ ಪ್ರೋತ್ಸಾಹ ನೀಡುವ ಕಾಲೇಜುಗಳ ಆಡಳಿತವರ್ಗಗಳನ್ನು ಕಾನೂನು ಪ್ರಕಾರ ಬಲಿಹಾಕದಿದ್ದರೆ ಕಷ್ಟಪಟ್ಟು ಓದುವ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದಂತಾಗುತ್ತದೆ. ಇದರಿಂದಾಗಿ ಪ್ರತಿಭಾವಂತ ವಿದ್ಯಾರ್ಥಿಗಳು ಭ್ರಮನಿರಸನಗೊಳ್ಳಲಿದ್ದಾರೆ. ನಕಲು ಮಾಡುವ ವಿದ್ಯಾರ್ಥಿಗಳು ಉತ್ತಮ ಅಂಕ ಪಡೆದು ಮುಂದೆ ಹೋದರೆ ಶಿಕ್ಷಣದ ಗುಣಮಟ್ಟವೂ ಕಳಪೆಯಾಗಲಿದೆ. ಭ್ರಷ್ಟ ಮತ್ತು ಅಕ್ರಮ ಮಾರ್ಗದಿಂದ ಮುಂದೆ ಬರುವ ವಿದ್ಯಾರ್ಥಿಗಳು ಉದ್ಯೋಗಗಳಿಗೆ ಸೇರಿದಾಗ ಆಡಳಿತ ವ್ಯವಸ್ಥೆಯಲ್ಲಿ ಭ್ರಷ್ಟರು ಮತ್ತು ಅದಕ್ಷರು ತುಂಬಿ ಹೋಗಲಿದ್ದಾರೆ. ಇದರ ನೇರ ಪರಿಣಾಮ ಜನಸಾಮಾನ್ಯರ ಮೇಲಾಗಲಿದೆ. ಈಗ ನಡೆದಿರುವ ನಕಲು ಪ್ರಕರಣದ ಹಿನ್ನೆಲೆಯಲ್ಲಿ ನರ್ಸಿಂಗ್ ಪರೀಕ್ಷೆಯನ್ನು ರದ್ದು ಮಾಡಿ ಮರುಪರೀಕ್ಷೆ ನಡೆಸಬೇಕು. ಜೊತೆಗೆ ಪರೀಕ್ಷೆಗಳಲ್ಲಿ ಅಕ್ರಮ ಮತ್ತು ನಕಲು ಮಾಡಲು ಉತ್ತೇಜಿಸುವ ಕಾಲೇಜುಗಳನ್ನು ಕಪ್ಪುಪಟ್ಟಿಯಲ್ಲಿಡಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.