ಅಮೆರಿಕದ ಬಿಕ್ಕಟ್ಟು; ಎಚ್ಚರಿಕೆ ಗಂಟೆ ಜಾಗತಿಕ ಸಾಲ ಮೌಲ್ಯಮಾಪನ ಸಂಸ್ಥೆ ಸ್ಟ್ಯಾಂಡರ್ಡ್ ಅಂಡ್ ಪೂರ್ಸ್‌, ಅಮೆರಿಕ ಸರ್ಕಾರದ ಋಣಭಾರ ಸಾಮರ್ಥ್ಯವನ್ನು 70 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅತ್ಯುನ್ನತ ಮಟ್ಟವಾದ `ಎಎಎ~ ಸ್ಥಾನದಿಂದ `ಎಎ+~ ಸ್ಥಾನಕ್ಕೆ ಇಳಿಸಿರುವುದು ಒಟ್ಟಾರೆ ಜಾಗತಿಕ ಅರ್ಥವ್ಯವಸ್ಥೆಗೆ ಅಶುಭಕಾರಿ ಬೆಳವಣಿಗೆಯಾಗಿದೆ. ವಿಶ್ವದ ಬಲಿಷ್ಠ ಅರ್ಥ ವ್ಯವಸ್ಥೆಯಲ್ಲಿ ಸಾಕಷ್ಟು ಬಿರುಕುಗಳು ಇರುವುದೂ ಇದರಿಂದ ವೇದ್ಯವಾಗುತ್ತಿದೆ. ಸರ್ಕಾರದ ಖಜಾನೆ ಬರಿದಾಗುವ ಅಪಾಯವನ್ನು ಸಾಲದ ಮಿತಿ ಹೆಚ್ಚಿಸಿಕೊಂಡು ಕೊನೆಕ್ಷಣದಲ್ಲಿ ತಪ್ಪಿಸಿಕೊಂಡ ಬೆನ್ನಲ್ಲೇ, ಸರ್ಕಾರದ ಸಾಲ ಮರು ಪಾವತಿ ಸಾಮರ್ಥ್ಯದ ಬಗ್ಗೆ ಹೂಡಿಕೆದಾರರಲ್ಲಿ ಅಪನಂಬಿಕೆ ಮೂಡಿಸಿದ ಈ ವಿದ್ಯಮಾನವು ವಿಶ್ವದಾದ್ಯಂತ ತಲ್ಲಣ ಮೂಡಿಸಿದೆ. ದೇಶದ ಹಣಕಾಸು ಪರಿಸ್ಥಿತಿ ಮೇಲೆ ಅಮೆರಿಕ ಸರ್ಕಾರಕ್ಕೆ ನಿಯಂತ್ರಣ ಇಲ್ಲದಿರುವುದನ್ನೂ ಇದು ಸೂಚಿಸುತ್ತದೆ. ಇದರಿಂದ ಭಾರತ ಸೇರಿದಂತೆ ಜಾಗತಿಕ ಷೇರು ಪೇಟೆಗಳಲ್ಲಿ ಭಾರಿ ಕಂಪನವೂ ಉಂಟಾಗಿದೆ. ಇದು ಹೂಡಿಕೆದಾರರು ಮತ್ತು ವಿದೇಶಿ ಸರ್ಕಾರಗಳಿಗೂ ದಿಗಿಲು ಮೂಡಿಸಿದೆ. ಅಮೆರಿಕವು `ಸಾಲ ಮಾಡಿಯಾದರೂ ತುಪ್ಪ ತಿನ್ನುವ ವ್ಯಸನ~ಕ್ಕೆ ಜೋತು ಬಿದ್ದಿರುವುದೇ ವಿಶ್ವದ ಹಣಕಾಸು ಮಾರುಕಟ್ಟೆಯಲ್ಲಿನ ತಲ್ಲಣಕ್ಕೆ ಮುಖ್ಯ ಕಾರಣ. ಸದ್ಯಕ್ಕಂತೂ ಅಮೆರಿಕದ ಅರ್ಥ ವ್ಯವಸ್ಥೆ ಪರಾಧೀನವಾಗಿದೆ. ಗ್ರಾಹಕರ ವೆಚ್ಚ ಏರಿಕೆಯಾಗದಿರುವುದು ಮತ್ತು ವೃದ್ಧಿ ದರ ಶೇ 1.6ರಷ್ಟೇ ಇರುವುದು ಆರ್ಥಿಕತೆಯ ನೀರಸ ಪ್ರದರ್ಶನಕ್ಕೆ ಕನ್ನಡಿ ಹಿಡಿಯುತ್ತದೆ. ಅಮೆರಿಕವು 2008ರ ಆರ್ಥಿಕ ಹಿಂಜರಿಕೆಯ ನಂತರದ ಕೆಲ ಕಾಲ ಆರ್ಥಿಕ ಚೇತರಿಕೆ ಕಂಡ ಬೆನ್ನಲ್ಲೇ ಮತ್ತೆ ಹಿಂಜರಿಕೆಯತ್ತ ಸಾಗುವ (ಡಬಲ್ ಡಿಪ್) ಸಾಧ್ಯತೆಗಳು ಭಾರತವೂ ಸೇರಿದಂತೆ ವಿಶ್ವದ ಇತರ ಅರ್ಥ ವ್ಯವಸ್ಥೆ ಮೇಲೆ ಪ್ರತಿಕೂಲ ಪರಿಣಾಮ ಬೀರಲಿವೆ. ಮುಂಬೈ ಷೇರುಪೇಟೆಯು ಶುಕ್ರವಾರ ಮತ್ತು ಸೋಮವಾರದ ವಹಿವಾಟಿನಲ್ಲಿ ತೀವ್ರ ಕುಸಿತ ದಾಖಲಿಸಿರುವುದು ಹೂಡಿಕೆದಾರರ ನಿರಾಶೆಯ ಪ್ರತೀಕವಾಗಿದೆ. ಹೂಡಿಕೆದಾರರ ಲಕ್ಷಾಂತರ ಸಂಪತ್ತು ಕರಗಿದೆ. ದೇಶದ ಐ.ಟಿ ರಫ್ತು ಮತ್ತು ರಫ್ತು ವಹಿವಾಟಿನ ಮೇಲೆಯೂ ಇದು ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಗಳಿವೆ. ದೇಶದ 60 ಶತಕೋಟಿ ಡಾಲರ್‌ಗಳ (ರೂ. 2,70,000 ಕೋಟಿ) ಸಾಫ್ಟ್‌ವೇರ್ ರಫ್ತು ಬೇಡಿಕೆಯೂ ಕುಸಿಯುವ ಸಾಧ್ಯತೆಗಳಿವೆ. ತಕ್ಷಣಕ್ಕೆ ಐ.ಟಿ ರಂಗದಲ್ಲಿ ಉದ್ಯೋಗಾವಕಾಶಗಳು ಕಡಿಮೆ ಯಾಗುವ ಸಾಧ್ಯತೆ ಇದೆ. ಇನ್ನೊಂದು ಆರ್ಥಿಕ ಹಿಂಜರಿಕೆಯನ್ನು ಸಮರ್ಥವಾಗಿ ಎದುರಿಸುವ ಬಗ್ಗೆ ದೇಶಿ ಸಾಫ್ಟ್‌ವೇರ್ ದೈತ್ಯ ಸಂಸ್ಥೆಗಳು ವಿಶ್ವಾಸ ತಳೆದಿದ್ದರೂ, ಮುಂಬರುವ ದಿನಗಳ ಬಗ್ಗೆ ಈಗಲೇ ಖಚಿತವಾಗಿ ಏನನ್ನೂ ಹೇಳುವಂತಿಲ್ಲ. ಆದರೆ, ಇತರ ರಫ್ತು ವಹಿವಾಟಿನ ಮೇಲೆ ಖಂಡಿತವಾಗಿಯೂ ಪ್ರತಿಕೂಲ ಪರಿಣಾಮ ಉಂಟಾಗಲಿದೆ. ಡಾಲರ್ ಅಪಮೌಲ್ಯಗೊಂಡು ಭಾರತದ ಸರಕುಗಳು ದುಬಾರಿಯಾಗಲಿವೆ. ಈಗಲೂ ಅಮೆರಿಕದ ಸರ್ಕಾರಿ ಸಾಲ (ಟ್ರೆಜರಿ) ಪತ್ರಗಳು ಜಾಗತಿಕ ಹೂಡಿಕೆದಾರರ ಪಾಲಿಗೆ ಸುರಕ್ಷಿತ ತಾಣಗಳೇ. ಆದಾಗ್ಯೂ, ದೇಶದ ಆರ್ಥಿಕ ವೃದ್ಧಿ ಸಶಕ್ತವಾಗಿರುವ ಹಿನ್ನೆಲೆಯಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಮುಂಬರುವ ದಿನಗಳಲ್ಲಿ ಭಾರತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಣ ಹೂಡಿಕೆಗೆ ಮುಂದಾಗುವ ಸಾಧ್ಯತೆಗಳನ್ನೂ ತಳ್ಳಿಹಾಕುವಂತಿಲ್ಲ. ಅಮೆರಿಕ ಎದುರಿಸುತ್ತಿರುವ ಸದ್ಯದ ಬಿಕ್ಕಟ್ಟು ಭಾರತವೂ ಸೇರಿದಂತೆ ವಿಶ್ವದ ಪ್ರಮುಖ ದೇಶಗಳು ವಿತ್ತೀಯ ಕೊರತೆಗೆ ಕಡಿವಾಣ ವಿಧಿಸುವುದಕ್ಕೆ ಎಚ್ಚರಿಕೆಯ ಗಂಟೆ ಆಗಿರುವುದಂತೂ ಸತ್ಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.