ಕಠಿಣ ನಿರ್ಧಾರ ಬೇಕು ಒಂದು ಕಾಲದಲ್ಲಿ ಕೇಂದ್ರ ಸರ್ಕಾರಿ ಸ್ವಾಮ್ಯದ ಹೆಮ್ಮೆಯ ಸಂಸ್ಥೆಯಾಗಿದ್ದ ಭಾರತ ಸಂಚಾರ ನಿಗಮದ (ಬಿಎಸ್‌ಎನ್‌ಎಲ್) ಹಣಕಾಸಿನ ಸ್ಥಿತಿಗತಿ ಬಹಳ ಕೆಟ್ಟಿದೆ. ಬರುವ ಜೂನ್ ಹೊತ್ತಿಗೆ ತನ್ನ 2.8 ಲಕ್ಷ ನೌಕರರಿಗೆ ಸಂಬಳ ಕೊಡಲೂ ಅದರ ಬಳಿ ಕಾಸು ಇರುವುದಿಲ್ಲ ಎಂಬ ವರದಿಯಂತೂ ಕಳವಳಕಾರಿ. 2004-05ನೇ ಆರ್ಥಿಕ ವರ್ಷದಲ್ಲಿ 10183 ಕೋಟಿ ರೂಪಾಯಿ ಲಾಭ ಗಳಿಸಿದ್ದ, ಎರಡು ವರ್ಷದ ಹಿಂದೆ 30 ಸಾವಿರ ಕೋಟಿ ರೂಪಾಯಿ ನಗದು ಮೀಸಲು ಹೊಂದಿದ್ದ ಬಿಎಸ್‌ಎನ್‌ಎಲ್, 2010-11ರಲ್ಲಿ 6384 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ. ಅಲ್ಪಾವಧಿಯಲ್ಲಿ ಅದು ಇಷ್ಟೊಂದು ಹೀನಾಯ ಸ್ಥಿತಿಗೆ ಇಳಿಯಲು ಕಾರಣಗಳನ್ನು ತಿಳಿದುಕೊಳ್ಳುವುದಕ್ಕೆ ಬಹಳ ಬುದ್ಧಿವಂತಿಕೆಯೇನೂ ಬೇಕಿಲ್ಲ. ಗ್ರಾಹಕರ ಬಗ್ಗೆ ಉಡಾಫೆ ಧೋರಣೆ, `ಕೆಲಸದ ಸಂಸ್ಕೃತಿ'ಯನ್ನೇ ಮರೆತ ಸಿಬ್ಬಂದಿ ವರ್ಗ, ಜನಸೇವೆಯನ್ನು ನಿರ್ಲಕ್ಷಿಸಿ ಹಕ್ಕು ಮತ್ತು ಸೌಕರ್ಯಗಳಿಗಷ್ಟೇ ಹೋರಾಡುವ ಕಾರ್ಮಿಕ ಸಂಘಟನೆಗಳು, ದೂರಸಂಪರ್ಕ ಕ್ಷೇತ್ರದಲ್ಲಿ ಈಗಲೂ ನಮ್ಮದೇ ಏಕಸ್ವಾಮ್ಯ ಎಂಬ ಮನೋಭಾವದಲ್ಲಿ ತೇಲಾಡುತ್ತಿರುವ ಅಧಿಕಾರಿ ಸಮೂಹ, ಅಗತ್ಯಕ್ಕಿಂತ ಹೆಚ್ಚು ಸಂಖ್ಯೆಯಲ್ಲಿರುವ ನೌಕರರ ಸೈನ್ಯ, ಸರ್ಕಾರದ ಎಡೆಬಿಡಂಗಿ ನೀತಿ, ಇವೆಲ್ಲ ಸೇರಿಕೊಂಡು ಬಿಎಸ್‌ಎನ್‌ಎಲ್ ಎಂಬ ದೂರಸಂಪರ್ಕ ಕ್ಷೇತ್ರದ ದೈತ್ಯ ಸಂಸ್ಥೆಯನ್ನು ಅವಸಾನದ ಅಂಚಿಗೆ ತಂದು ನಿಲ್ಲಿಸಿವೆ. ಖಾಸಗಿ ಕ್ಷೇತ್ರದ ಸಂಸ್ಥೆಗಳು ಉತ್ತಮ ಸೇವೆ, ಆಕರ್ಷಕ ಯೋಜನೆಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿವೆ. ಆದರೆ ಅದ್ಯಾವುದರ ಪರಿವೆಯೂ ಬಿಎಸ್‌ಎನ್‌ಎಲ್‌ಗೆ ಇಲ್ಲ. ಖಾಸಗಿಯವರಿಗೆ ಪೈಪೋಟಿ ಕೊಟ್ಟು ಗ್ರಾಹಕರ ವಿಶ್ವಾಸ ಉಳಿಸಿಕೊಳ್ಳಬೇಕು ಎಂಬ ಆಸಕ್ತಿಯಂತೂ ಮೊದಲೇ ಇಲ್ಲ. ದೂರವಾಣಿ ಕೆಟ್ಟರೆ, ಬ್ರಾಡ್‌ಬ್ಯಾಂಡ್ ಹಾಳಾದರೆ, ಉಪಕರಣ ಬದಲಿಸುವುದಿದ್ದರೆ, ದೂರವಾಣಿ ಸಂಪರ್ಕವನ್ನು ಸ್ಥಳಾಂತರಿಸುವುದಾದರೆ ಸಿಬ್ಬಂದಿಗೆ ಪದೇಪದೇ ಗೋಗರೆಯಬೇಕು. ಮಧ್ಯದಲ್ಲೇನಾದರೂ ರಜಾ ದಿನಗಳು ಬಂದರಂತೂ ಮುಗಿದೇ ಹೋಯಿತು. ಗ್ರಾಹಕರ ಗೋಳು ಕೇಳುವವರೇ ಇಲ್ಲ ಎಂಬ ಅನುಭವವಂತೂ ಸಾಮಾನ್ಯ. ನಿಗಮದ ಆದಾಯದ ಶೇ 48ರಷ್ಟು (ವರ್ಷಕ್ಕೆ 12 ಸಾವಿರ ಕೊಟಿ ರೂಪಾಯಿ) ನೌಕರರ ಸಂಬಳಕ್ಕೇ ಹೋಗುತ್ತದೆ. ಇದಕ್ಕಿಂತ ಸ್ಪರ್ಧಾತ್ಮಕವಾಗಿ ಸೇವೆ ನೀಡುವ ಖಾಸಗಿ ಟೆಲಿಕಾಂ ಕಂಪೆನಿಗಳು ಸಂಬಳಕ್ಕೆ ಮಾಡುವ ಖರ್ಚು ಅವುಗಳ ಆದಾಯದ ಶೇ 5-6ರಷ್ಟು ಮಾತ್ರ. ತಜ್ಞರ ಪ್ರಕಾರ `ನಿಗಮದಲ್ಲಿ 1 ಲಕ್ಷ ಹೆಚ್ಚುವರಿ ಸಿಬ್ಬಂದಿಗಳಿದ್ದಾರೆ. ಇಲ್ಲಿನ ನೌಕರರ ಸರಾಸರಿ ವಯೋಮಾನ 50 ವರ್ಷಗಳು. ಇವರಲ್ಲಿ ಈಗಿನ ಕಾಲಮಾನಕ್ಕೆ ಬೇಕಾದ ಪರಿಣತಿಯಾಗಲಿ, ಅದನ್ನು ಗಳಿಸಿಕೊಳ್ಳುವ ಕಾತರವಾಗಲಿ ಕಂಡುಬರುತ್ತಿಲ್ಲ. ಆದ್ದರಿಂದ ಹೆಚ್ಚುವರಿ ನೌಕರರಿಗೆ ಸ್ವಯಂ ನಿವೃತ್ತಿ ನೀಡುವುದು ಮತ್ತು ನಿಗಮದಲ್ಲಿ ಸರ್ಕಾರಿ ಬಂಡವಾಳದ ಪ್ರಮಾಣವನ್ನು ಶೇ 51ಕ್ಕಿಂತಲೂ ಕಡಿಮೆ ಮಾಡಿ ಖಾಸಗೀಕರಣಕ್ಕೆ ತೆರೆದುಕೊಳ್ಳುವುದು ಅವಶ್ಯ'. ಸೇವೆಯೇ ಉಸಿರಾಗಬೇಕಾಗಿದ್ದ ಸಂಸ್ಥೆಯೊಂದು ಗ್ರಾಹಕರನ್ನು ನಿಕೃಷ್ಟವಾಗಿ ಕಂಡರೆ ಏನಾಗುತ್ತದೆ ಎಂಬುದಕ್ಕೆ ಇದೊಂದು ಉದಾಹರಣೆ. ಅದನ್ನು ಮತ್ತೆ ಸರಿದಾರಿಗೆ ತರಲು ಅತ್ಯಂತ ಕಠಿಣ ನಿರ್ಧಾರಗಳೇ ಬೇಕು ಎಂಬುದನ್ನು ಸರ್ಕಾರ ಈಗಲಾದರೂ ಅರಿತುಕೊಳ್ಳಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.