ಮೀನ ಮೇಷ ಏಕೆ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ನಡೆದಿರುವ 50 ಭ್ರಷ್ಟಾಚಾರ ಪ್ರಕರಣಗಳಲ್ಲಿ ಐಎಎಸ್, ಐಪಿಎಸ್ ಸೇರಿದಂತೆ 131 ಹಿರಿಯ ಅಧಿಕಾರಿಗಳು ಆರೋಪಿಗಳಾಗಿದ್ದಾರೆ. ಇವರ ಮೇಲಿರುವ ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೇಂದ್ರ ಜಾಗೃತ ದಳ (ಸಿವಿಸಿ) ತನಿಖೆ ನಡೆಸಿ ಮಹತ್ವದ ದಾಖಲೆಗಳನ್ನು ಸಂಗ್ರಹಿಸಿದೆ. ಈ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ಅನುಮತಿ ನೀಡುವಂತೆ ಸರ್ಕಾರಕ್ಕೆ ನಾಲ್ಕು ತಿಂಗಳಿಂದ ಮನವಿ ಮಾಡುತ್ತಿದ್ದರೂ, ಕೇಂದ್ರ ಸರ್ಕಾರ ಮೀನ ಮೇಷ ಎಣಿಸುತ್ತಿರುವುದು ಖಂಡನೀಯ. ಉನ್ನತ ಮಟ್ಟದಲ್ಲಿ ಭ್ರಷ್ಟಾಚಾರ ತಡೆಗಾಗಿ ಸಂಸತ್ತಿನಲ್ಲಿ ಲೋಕಪಾಲ್ ಮಸೂದೆ ಮಂಡಿಸಿರುವ ಕೇಂದ್ರ ಸರ್ಕಾರ, ಭ್ರಷ್ಟಾಚಾರದ ವಿಷಯದಲ್ಲಿ ಹೀಗೆ ಇಬ್ಬಗೆ ನೀತಿಯನ್ನು ಅನುಸರಿಸುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಭ್ರಷ್ಟ ಅಧಿಕಾರಿಗಳನ್ನು ರಕ್ಷಿಸಲು ಸರ್ಕಾರವೇ ಮುಂದಾಗಿದ್ದರೆ, ಈ ಅಧಿಕಾರಿಗಳ ಜೊತೆ ಸಚಿವರುಗಳ ಪಾಲಿರಬಹುದು ಎಂಬ ಅನುಮಾನಕ್ಕೆ ಎಡೆಕೊಡುತ್ತಿದೆ. ಭ್ರಷ್ಟಾಚಾರ ಆರೋಪಗಳನ್ನು ಹೊತ್ತಿರುವ ಅಧಿಕಾರಿಗಳ ರಕ್ಷಣೆ ಸಲ್ಲದು. ಹಣ ಮತ್ತು ಪ್ರಭಾವಗಳಿಂದ ಕಾಯ್ದೆ ಕಾನೂನು ಉಲ್ಲಂಘಿಸಿರುವ ಅಧಿಕಾರಿಗಳಿಂದ ಆಡಳಿತಕ್ಕೆ ಕೆಟ್ಟ ಹೆಸರು ಕಟ್ಟಿಟ್ಟ ಬುತ್ತಿ. ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಲೇ ಬೇಕು. ಆದ್ದರಿಂದ ಪ್ರಾಸಿಕ್ಯೂಷನ್‌ಗಾಗಿ ನಾಲ್ಕು ತಿಂಗಳಿಂದ ವಿಳಂಬ ನೀತಿ ಅನುಸರಿಸುತ್ತಿರುವುದು ಸರ್ಕಾರಕ್ಕೆ ಗೌರವ ತರುವ ವಿಚಾರವಲ್ಲ. ಈಗಾಗಲೇ ಹಲವು ಭ್ರಷ್ಟಾಚಾರ ಪ್ರಕರಣಗಳಿಂದ ಮುಜುಗರ ಎದುರಿಸುತ್ತಿರುವ ಕೇಂದ್ರ ಸರ್ಕಾರಕ್ಕೆ ಉಳಿದಿರಬಹುದಾದ ಅಷ್ಟಿಷ್ಟು ವರ್ಚಸ್ಸು ಭ್ರಷ್ಟ ಅಧಿಕಾರಿಗಳ ರಕ್ಷಣೆಯಿಂದ ಹಾಳಾಗಲಿದೆ ಎಂಬುದನ್ನು ಆಡಳಿತದ ಸೂತ್ರ ಹಿಡಿದಿರುವವರು ತಿಳಿಯಬೇಕು. ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಲು ಅವಕಾಶ ನೀಡದೇ ಹೋದರೆ ತನಿಖಾ ಸಂಸ್ಥೆಗಳು ನಡೆಸಿದ ಸಾಕ್ಷ್ಯಾಧಾರ ಸಂಗ್ರಹಣೆ ಸೇರಿದಂತೆ ಅವುಗಳ ಪ್ರಯತ್ನವೆಲ್ಲ ಹಾಳಾದಂತೆಯೇ. ಜೊತೆಗೆ ಈ ತನಿಖಾ ಸಂಸ್ಥೆಗಳ ನೈತಿಕ ಸ್ಥೈರ್ಯವನ್ನು ಕುಗ್ಗಿಸಿದಂತಾಗುತ್ತದೆ. ಇದರಿಂದ ಕೊನೆಗೆ ಜನರು ತನಿಖಾ ಸಂಸ್ಥೆಗಳ ಬಗೆಗೂ ವಿಶ್ವಾಸ ಕಳೆದುಕೊಳ್ಳುವಂತಾಗುತ್ತದೆ. ಈ ಪರಿಸ್ಥಿತಿ ಕೇಂದ್ರ ಸರ್ಕಾರದಲ್ಲಿ ಮಾತ್ರವಲ್ಲ, ರಾಜ್ಯ ಸರ್ಕಾರಗಳಲ್ಲಿಯೂ ಇದೆ. ಕರ್ನಾಟಕದಲ್ಲಿನ ಲೋಕಾಯುಕ್ತದ ಸ್ಥಿತಿಯೂ ಕೇಂದ್ರ ಜಾಗೃತ ದಳದ ಪರಿಸ್ಥಿತಿಗಿಂತ ಭಿನ್ನವಾಗೇನೂ ಇಲ್ಲ. ರಾಜ್ಯದಲ್ಲಿ ನೂರಾರು ಮಂದಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ದಾಳಿ ನಡೆಸಿದೆ. ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಮಾಹಿತಿ ಸಂಗ್ರಹಿಸಿದೆ. ಕೆಲವು ಪ್ರಕರಣಗಳಲ್ಲಿ ಸರ್ಕಾರದಿಂದ ಅನುಮತಿ ಸಿಗುತ್ತಿಲ್ಲ ಎನ್ನುವ ಅಸಹಾಯಕತೆಯನ್ನು ಹಿಂದಿನ ಲೋಕಾಯುಕ್ತರು ಹಲವು ಬಾರಿ ವ್ಯಕ್ತಮಾಡಿದ್ದಾರೆ. ಭ್ರಷ್ಟ ಅಧಿಕಾರಿಗಳ ವಿರುದ್ಧ ಸರ್ಕಾರವೂ ಯಾವುದೇ ಕ್ರಮಕೈಗೊಂಡಿಲ್ಲ. ಬದಲಾಗಿ ಹಲವು ಭ್ರಷ್ಟ ಅಧಿಕಾರಿಗಳಿಗೆ ಬಡ್ತಿ ನೀಡಿ ಆಯಕಟ್ಟಿನ ಜಾಗಗಳಿಗೆ ನೇಮಕ ಮಾಡಿರುವ ಪ್ರಸಂಗಗಳಿವೆ. ಇಂತಹ ನಡವಳಿಕೆ ಯಾವುದೇ ಸರ್ಕಾರಕ್ಕೆ ಗೌರವ ತರುವುದಿಲ್ಲ. ಭ್ರಷ್ಟಾಚಾರ ಪ್ರಕರಣಗಳಲ್ಲಿ ಅಧಿಕಾರಸ್ಥ ರಾಜಕಾರಣಿಗಳು ಪರೋಕ್ಷವಾಗಿ ಪಾಲ್ಗೊಂಡಿರುವುದೇ ಅಧಿಕಾರಿಗಳಿಗೆ ರಕ್ಷಣೆ ಸಿಗಲು ಕಾರಣ. ಇದು ಭ್ರಷ್ಟಾಚಾರ ನಿವಾರಣೆಯ ಉದ್ದೇಶವನ್ನೇ ವಿಫಲಗೊಳಿಸುವ ಹುನ್ನಾರ. ಜನತಂತ್ರ ವ್ಯವಸ್ಥೆಯಲ್ಲಿನ ಆಡಳಿತ ವ್ಯವಸ್ಥೆಗೆ ಇದು ಶೋಭೆಯಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.