ಯಥಾಸ್ಥಿತಿಯ ಮುಂದುವರಿಕೆ ಸುಧಾರಣೆಯ ಸುಳಿವಿಲ್ಲದ ಬದಲಾವಣೆ ವ್ಯರ್ಥ ಕಸರತ್ತು. ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರ ಸಂಪುಟ ಹಿಂದಿನ ಸಂಪುಟದ 21 ಮಂದಿಯನ್ನೂ ಉಳಿಸಿಕೊಂಡಿದೆ. ಇದರಲ್ಲಿ ಲೋಕಾಯುಕ್ತರ ವರದಿಯಲ್ಲಿ ಅಕ್ರಮ ಗಣಿಗಾರಿಕೆಗೆ ಕುಮ್ಮಕ್ಕು ನೀಡಲು ಅಧಿಕಾರ ದುರುಪಯೋಗಪಡಿಸಿಕೊಂಡವರೆಂದು ಹೆಸರಿಸಲಾಗಿದ್ದ ಒಬ್ಬರೂ ಸೇರಿಕೊಂಡಿದ್ದಾರೆ. ಈ ಮೂಲಕ ಹೊಸ ಸರ್ಕಾರಕ್ಕೂ ಕಳಂಕದ ಛಾಯೆ ಮೆತ್ತಿಕೊಂಡಿದೆ. ಅಲ್ಪಸಂಖ್ಯಾತರಿಗೆ ಪ್ರಾತಿನಿಧ್ಯವೇ ಇಲ್ಲ. ಹಿಂದುಳಿದವರ ಪ್ರಾತಿನಿಧ್ಯ ಒಂದು ಸ್ಥಾನಕ್ಕೆ ಸೀಮಿತಗೊಂಡಿದೆ. ಲಿಂಗಾಯತ, ಒಕ್ಕಲಿಗ ಮತ್ತು ಬ್ರಾಹ್ಮಣರಂಥ ಮೇಲುವರ್ಗದವರೇ ಗರಿಷ್ಠ ಪ್ರಮಾಣದಲ್ಲಿ ತುಂಬಿಕೊಂಡಿರುವ ಸದಾನಂದಗೌಡರ ಸಂಪುಟ ಅಧಿಕಾರ ಹಂಚಿಕೆಯಲ್ಲಿ ಸಾಮಾಜಿಕ ಸಮತೋಲನ ಇರಬೇಕೆಂಬ ಪರಿಕಲ್ಪನೆಯನ್ನೇ ಇಟ್ಟುಕೊಂಡಂತಿಲ್ಲ. ತಮ್ಮ ಆಡಳಿತ ಎಷ್ಟು ವಿಭಿನ್ನವಾಗಿರುತ್ತದೆ ಎಂಬುದನ್ನು ಒಂದು ತಿಂಗಳಲ್ಲಿ ತೋರಿಸುವುದಾಗಿ ಹೇಳಿದ್ದ ಸದಾನಂದಗೌಡರು, ನಾಲ್ಕೇ ದಿನಗಳಲ್ಲಿ ತಮ್ಮ ಅಧಿಕಾರ ವೈಖರಿ ಯಥಾಸ್ಥಿತಿಯ ಮುಂದುವರಿಕೆ ಎಂಬ ಸುಳಿವನ್ನು ನೀಡಿದ್ದಾರೆ. ಜೊತೆಗೆ, ಭ್ರಷ್ಟಾಚಾರದ ಕಳಂಕ ಹೊತ್ತು ಅಧಿಕಾರ ತ್ಯಜಿಸಬೇಕಾಗಿ ಬಂದ ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕೈಗೊಂಬೆ ತಾವಲ್ಲ ಎಂಬುದನ್ನು ತೋರಿಸುವ ಅವಕಾಶವನ್ನೂ ಕಳೆದುಕೊಂಡಿದ್ದಾರೆ. ಪಕ್ಷದ ವರಿಷ್ಠ ಮಂಡಲಿಯನ್ನೂ ಪೇಚಿಗೆ ಸಿಕ್ಕಿಸಿದ್ದ ರಾಜ್ಯ ಸರ್ಕಾರದ ಕಳಂಕಿತ ವರ್ಚಸ್ಸನ್ನು ಹೊಸದೊಂದು ಸಚಿವರ ತಂಡದ ಮೂಲಕ ಹೆಚ್ಚಿಸಬಹುದೆನ್ನುವ ನಿರೀಕ್ಷೆಯನ್ನೂ ಅವರು ಹುಸಿಗೊಳಿಸಿದ್ದಾರೆ. ಹಿಂದಿನ ಸಂಪುಟದಲ್ಲಿ ವಹಿಸಿದ್ದ ಖಾತೆಗಳನ್ನು ಅದೇ ಸಚಿವರಿಗೆ ಮುಂದುವರಿಸುವ ಮೂಲಕ ಖಾತೆ ಹಂಚಿಕೆಯಲ್ಲಿಯೂ ಸುಧಾರಣೆಯ ಸುಳಿವಿಲ್ಲ. ಸಂಪುಟ ಪುನರ್‌ರಚನೆಯ ಸಂದರ್ಭ ಎಲ್ಲ ಸಚಿವರ ಕಾರ್ಯನಿರ್ವಹಣೆಯ ಮೌಲ್ಯಮಾಪನ ಮಾಡುವ ಅವಕಾಶ. ರಾಜ್ಯದಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದ ಬಿಜೆಪಿ ಈ ಮೂರು ವರ್ಷಗಳ ಅವಧಿಯಲ್ಲಿ ನಡೆಸಿದ ಸಂಪುಟ ವಿಸ್ತರಣೆ ಸಂದರ್ಭಗಳಲ್ಲಿಯೂ ಅಂಥ ಪ್ರಯತ್ನಗಳಿರಲಿಲ್ಲ. ಸಚಿವ ಸ್ಥಾನದಲ್ಲಿದ್ದು ಸಮರ್ಥವಾಗಿ ಕೆಲಸ ಮಾಡಿದವರಿಗೆ ಹೆಚ್ಚಿನ ಹೊಣೆಗಾರಿಕೆ ನೀಡುವ, ಅಧಿಕಾರ ದುರುಪಯೋಗಪಡಿಸಿಕೊಂಡವರನ್ನು ಕೈಬಿಡುವ ವಿವೇಚನೆಯನ್ನೂ ಮುಖ್ಯಮಂತ್ರಿ ಪ್ರದರ್ಶಿಸಿಲ್ಲ. ಯಾರನ್ನು ಸಚಿವರನ್ನಾಗಿ ಆರಿಸಿಕೊಳ್ಳಬೇಕು ಎಂಬುದು ಮುಖ್ಯಮಂತ್ರಿಯ ಪರಮಾಧಿಕಾರ. ಯಾರಿಗೆ ಯಾವ ಖಾತೆ ನೀಡಬೇಕು ಎಂಬುದೂ ಅವರ ವಿವೇಚನೆಗೆ ಬಿಟ್ಟ ಅಧಿಕಾರ. ಇವನ್ನೆಲ್ಲ ಸದಾನಂದಗೌಡರು ಬಳಸಿಕೊಳ್ಳುವ ಧೈರ್ಯವನ್ನೇ ಮಾಡಿಲ್ಲ. ಮೂರು ನಾಲ್ಕು ಸಲ ಗೆದ್ದಿರುವ ಅನುಭವಿ ಶಾಸಕರನ್ನು ಸಚಿವರನ್ನಾಗಿ ಮಾಡಿಕೊಂಡು ಆಡಳಿತಕ್ಕೆ ಹೊಸ ರೂಪ ಕೊಡುವ ಚಿಂತನೆಯನ್ನೂ ನಡೆಸಿಲ್ಲ. ಅಧಿಕಾರಸ್ಥಾನ ಜನಸೇವೆಗೆ ಸಿಕ್ಕಿರುವ ಅವಕಾಶ ಎಂದು ಬಿಜೆಪಿಯ ಯಾರೊಬ್ಬರೂ ಭಾವಿಸಿಲ್ಲ ಎಂಬುದು ಉಪಮುಖ್ಯಮಂತ್ರಿ ಸ್ಥಾನ ಮತ್ತು ಪ್ರಮುಖ ಖಾತೆಗಳಿಗಾಗಿ ಪಟ್ಟು ಹಿಡಿದು ಸರ್ಕಾರ ರಚನೆಯನ್ನು ವಿಳಂಬಗೊಳಿಸಿದ ಭಿನ್ನ ಬಣದ ಹಠಮಾರಿ ಧೋರಣೆಯಲ್ಲಿ ಬಯಲಿಗೆ ಬಂದಿದೆ. ಈಗಿನ ಸರ್ಕಾರಕ್ಕೆ ಉಳಿದ ಅವಧಿ 22 ತಿಂಗಳಷ್ಟೆ. ಅಷ್ಟರಲ್ಲಿ ರಾಜ್ಯದ ಸಂಪತ್ತು ಮತ್ತಷ್ಟು ಲೂಟಿಯಾಗದಂತೆ ನೋಡಿಕೊಂಡರೆ ಅದೇ ಸದಾನಂದಗೌಡರು ಕರ್ನಾಟಕಕ್ಕೆ ಮಾಡುವ ಅನುಪಮ ಸೇವೆಯೆಂಬಂತೆ ತೋರುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.