ಬ್ರಿಟನ್: ಒಡಲಾಳದ ಬೆಂಕಿ ಬ್ರಿಟನ್‌ನ ವಿವಿಧ ಪ್ರದೇಶಗಳಲ್ಲಿ ಕಳೆದ ಐದು ದಿನಗಳಿಂದ ನಡೆಯುತ್ತಿರುವ ಹಿಂಸಾಚಾರ, ಲೂಟಿ ಜನರಲ್ಲಿ ತಲ್ಲಣ ಉಂಟುಮಾಡಿದೆ. ಇದನ್ನು ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಯೆಂದು ಸುಲಭವಾಗಿ ತಳ್ಳಿಹಾಕುವಂತಿಲ್ಲ. ಲಂಡನ್ ಉತ್ತರ ಭಾಗದಲ್ಲಿರುವ ಟೊಟ್ಟನ್‌ಹ್ಯಾಂನಲ್ಲಿ ಶನಿವಾರ ಕಪ್ಪು ಜನಾಂಗಕ್ಕೆ ಸೇರಿದ ಮಾರ್ಕ್ ದುಗ್ಗನ್ ಎಂಬುವವನು ಪೊಲೀಸರ ಗುಂಡಿಗೆ ಬಲಿಯಾದ. ಅವನ ಹತ್ಯೆಯ ವಿರುದ್ಧ ಅಲ್ಲಿನ ಜನ ಆರಂಭಿಸಿದ ಶಾಂತಿಯುತ ಪ್ರತಿಭಟನೆ ಕ್ರಮೇಣ ಹಿಂಸಾಚಾರಕ್ಕೆ ತಿರುಗಿತು. ಅವನು ಮಾದಕ ವಸ್ತು ಜಾಲದ ಭಾಗವಾಗಿದ್ದ ಮತ್ತು ತಮ್ಮ ಮೇಲೆ ಗುಂಡಿನ ದಾಳಿ ನಡೆಸಿದ ಎಂದು ಪೊಲೀಸರು ಹೇಳುತ್ತಾರಾದರೂ ಜನರಿಗೆ ಸರಿಯಾದ ಮಾಹಿತಿ ನೀಡದೆ ದುರ್ವರ್ತನೆಯಿಂದ ವರ್ತಿಸಿದ್ದೇ ಹಿಂಸೆ ಸಿಡಿಯಲು ಕಾರಣವಾಯಿತೆಂದು ಇದೀಗ ಗೊತ್ತಾಗಿದೆ. ಪೊಲೀಸರು ಕಪ್ಪು ಜನರ ವಿರುದ್ಧ ನಡೆಸುತ್ತಿರುವ ದೌರ್ಜನ್ಯದ ಮತ್ತೊಂದು ನಿದರ್ಶನದಂತೆ ಈ ಘಟನೆ ಸಾಮಾಜಿಕ ತಾಣಗಳಲ್ಲಿ ಬಿಂಬಿತವಾಯಿತು. ಮ್ಯಾಂಚೆಸ್ಟರ್, ಲಿವರ್‌ಪೂಲ್, ನಾಟಿಂಗ್‌ಹ್ಯಾಂ, ಬರ್ಮಿಂಗ್‌ಹ್ಯಾಂ ಮುಂತಾದ ಪ್ರದೇಶಗಳು ಹಿಂಸಾಚಾರ, ಲೂಟಿಗೆ ಒಳಗಾಗಿವೆ. ಈ ಘಟನೆಗಳು ಮೂರು ದಶಕಗಳ ಹಿಂದೆ ಬ್ರಿಕ್ಸ್‌ಟನ್‌ನಲ್ಲಿ ನಡೆದ ಹಿಂಸಾಚಾರ, ಲೂಟಿಯನ್ನು ನೆನಪಿಗೆ ತಂದಿವೆ. ಬ್ರಿಕ್ಸ್‌ಸ್ಟನ್ ಗಲಭೆಗಳ ಬಗ್ಗೆ ತನಿಖೆಯೇನೋ ನಡೆದಿದೆ. ಸಣ್ಣ ಪುಟ್ಟ ಅಪರಾಧ ಮಾಡಿದ ಕಪ್ಪುಜನರ ಮೇಲೆ ಪೊಲೀಸರು ಕಠಿಣ ಕ್ರಮ ತೆಗೆದುಕೊಂಡಿರುವುದು ಮತ್ತು ಕಿರುಕುಳ ನೀಡುತ್ತಿರುವ ಅಂಶಗಳು ಬಹಿರಂಗವಾಗಿದ್ದವು. ಆದರೆ ಸರ್ಕಾರ ಪೊಲೀಸು ವ್ಯವಸ್ಥೆಯನ್ನು ಸುಧಾರಿಸಲು ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಪೊಲೀಸರೂ ತಮ್ಮ ಎಂದಿನ ದೌರ್ಜನ್ಯದ ಮಾರ್ಗವನ್ನು ಮುಂದುವರಿಸಿದರು. ಇದರ ಪರಿಣಾಮವಾಗಿಯೇ ಇದೀಗ ಪೊಲೀಸರ ವಿರುದ್ಧ ಯುವಕರ ಪ್ರತೀಕಾರ ಸಿಡಿದಿದೆ. ಬ್ರಿಟನ್ ಆರ್ಥಿಕವಾಗಿ ಸದೃಢವಾಗಿಲ್ಲ. ಆರ್ಥಿಕ ಕುಸಿತದ ನಂತರ ಸಾಮಾಜಿಕ, ಆರ್ಥಿಕ ಕಲ್ಯಾಣ ಕಾರ್ಯಕ್ರಮಗಳಿಗೆ ಹಣ ತಗ್ಗಿದೆ. ನಿರುದ್ಯೋಗ ಮಿತಿ ಮೀರಿದೆ. ಬಡವರ ಸ್ಥಿತಿ ಅದರಲ್ಲಿಯೂ ಆಫ್ರಿಕಾ, ಕೆರೆಬಿಯನ್ ದೇಶಗಳಿಂದ ಬಂದು ನೆಲೆಸಿದ ಜನರ ಸ್ಥಿತಿ ಚಿಂತಾಜನಕವಾಗಿದೆ. ತಮಗೆ ಭವಿಷ್ಯವೇ ಇಲ್ಲ ಎಂದು ಈ ಜನಾಂಗದ ಯುವಕರು ಹತಾಶರಾಗಿದ್ದಾರೆ. ಈ ಹತಾಶೆ ದುಗ್ಗನ್ ಹತ್ಯೆಯಿಂದಾಗಿ ಪೊಲೀಸರ ವಿರುದ್ಧದ ಆಕ್ರೋಶಕ್ಕೆ ಕಾರಣವಾಗಿದೆ. ಬ್ರಿಟನ್‌ನಲ್ಲಿ ಸಾಕಷ್ಟು ಮಂದಿ ಭಾರತೀಯರು, ಪಾಕಿಸ್ತಾನದವರೂ ನೆಲೆಸಿದ್ದಾರೆ. ಇವರು ಆರ್ಥಿಕವಾಗಿ ಕಪ್ಪುಜನರಿಗಿಂತ ಉತ್ತಮ ಸ್ಥಿತಿಯಲ್ಲಿದ್ದಾರೆ. ಕಳೆದ ಐದು ದಿನಗಳಿಂದ ನಡೆದ ಲೂಟಿ, ಹಿಂಸಾಚಾರದಲ್ಲಿ ಹೆಚ್ಚು ಹಾನಿಗೆ ತುತ್ತಾಗಿರುವುದು ಏಷ್ಯಾ ಮೂಲದವರು ನಡೆಸುತ್ತಿದ್ದ ಅಂಗಡಿ ಮುಂಗಟ್ಟುಗಳು. ಇದೊಂದು ವಿಚಿತ್ರ ಸನ್ನಿವೇಶ. ಎರಡೂ ವಲಸೆ ಜನಾಂಗಗಳೇ ಆದರೂ ದೇಶದ ಇಂದಿನ ಸಾಮಾಜಿಕ ಸನ್ನಿವೇಶದಲ್ಲಿ ಪರಸ್ಪರ ಎದುರಾಗಿ ನಿಲ್ಲಬೇಕಾಗಿರುವುದು ಇತಿಹಾಸದ ಕ್ರೂರ ವ್ಯಂಗ್ಯ. ಬ್ರಿಟನ್ ಸರ್ಕಾರ ಇಂಥ ಬೆಳವಣಿಗೆಗಳನ್ನು ಕಾನೂನು ಸುವ್ಯವಸ್ಥೆಯ ಸಮಸ್ಯೆಗಳೆಂದು ಭಾವಿಸದೆ ಅದನ್ನು ಒಂದು ಸಾಮಾಜಿಕ ಆರ್ಥಿಕ ಸಮಸ್ಯೆಂದು ಭಾವಿಸಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಬೇಕಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.