ಬಿಜೆಪಿಯಲ್ಲಿ ಬದಲಾವಣೆ ಬಿಜೆಪಿಯಲ್ಲಿ ದಿಢೀರ್ ಬದಲಾವಣೆಯ ಗಾಳಿ ಬೀಸಿದೆ. ಕೊನೆ ಕ್ಷಣದ ಬೆಳವಣಿಗೆಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ರಾಜ್‌ನಾಥ್ ಸಿಂಗ್ ಆಯ್ಕೆಯಾಗಿದ್ದಾರೆ. ಇದುವರೆಗೆ ಅಧ್ಯಕ್ಷರಾಗಿದ್ದ ನಿತಿನ್ ಗಡ್ಕರಿ ಎರಡನೇ ಅವಧಿಗೂ ಮುಂದುವರಿಯುತ್ತಾರೆ ಎಂದೇ ಎಲ್ಲ ನಂಬಿದ್ದರು. ಏಕೆಂದರೆ ಬಿಜೆಪಿಯನ್ನು `ಹಿಂಬದಿಯಿಂದ ನಿಯಂತ್ರಿಸುವ' ಆರ್‌ಎಸ್‌ಎಸ್, ಗಡ್ಕರಿ ಬೆಂಬಲಕ್ಕೆ ದೃಢವಾಗಿ ನಿಂತಿತ್ತು. ಆದರೆ ಮಂಗಳವಾರ ರಾತ್ರಿ ರಾಜಕೀಯ ಗಾಳಿಯೇ ಬದಲಾಗಿ ಹೋಯಿತು. `ಪೂರ್ತಿ ಸಮೂಹದ ಕಂಪೆನಿ'ಗಳ ಮೇಲೆ ಮುಂಬೈನ ಒಂಬತ್ತು ಕಡೆ ಆದಾಯ ತೆರಿಗೆ ಇಲಾಖೆ ನಡೆಸಿದ ತಪಾಸಣೆ ಗಡ್ಕರಿ ಅವರ ಆಸೆಗೆ ತಣ್ಣೀರೆರಚಿತು. ಪೂರ್ತಿ ಸಮೂಹದ ಕಂಪೆನಿಗಳಲ್ಲಿ ಬೇನಾಮಿ ಹೆಸರಲ್ಲಿ ಬಂಡವಾಳ ಹೂಡಿದ ಆರೋಪ ಗಡ್ಕರಿ ಮೇಲೆ ಬಹಳ ಕಾಲದಿಂದ ಇದೆ. ಆದರೂ ಅವರ ಪಕ್ಷಾಧ್ಯಕ್ಷತೆಯನ್ನು ಬಿಟ್ಟು ಕೊಡುವ ಮನಸ್ಥಿತಿಯಲ್ಲಿ ಇರಲಿಲ್ಲ. ಪಕ್ಷದ ಹಿರಿಯ ಮುಖಂಡ ಎಲ್.ಕೆ. ಅಡ್ವಾಣಿ ಸಹ ಗಡ್ಕರಿ ಮುಂದುವರಿಕೆಗೆ ವಿರುದ್ಧವಾಗಿದ್ದರು. `ಅಕ್ರಮ ವಹಿವಾಟಿನ ಕಳಂಕ' ಮೆತ್ತಿಕೊಂಡ ವ್ಯಕ್ತಿಯೊಬ್ಬರು ಬಿಜೆಪಿ ಅಧ್ಯಕ್ಷರಾಗಿ ಮುಂದುವರಿಯುವುದು, ಭ್ರಷ್ಟಾಚಾರದ ವಿರುದ್ಧದ ಹೋರಾಡುವ ಪಕ್ಷದ ನೈತಿಕ ನೆಲೆಗಟ್ಟನ್ನೇ ಅಲುಗಿಸಬಹುದು ಎಂಬ ಆತಂಕ ಅಡ್ವಾಣಿ ಸೇರಿ ಅನೇಕ ಮುಖಂಡರಿಗಿತ್ತು. ಆದರೂ ಗಡ್ಕರಿಯನ್ನು ಆರ್‌ಎಸ್‌ಎಸ್‌ನಂಥ ಸಂಘಟನೆ ಸಮರ್ಥಿಸುತ್ತಲೇ ಬಂತು ಎನ್ನುವುದು ಆಶ್ಚರ್ಯದ ಜತೆಗೆ ಅನುಮಾನವನ್ನೂ ಮೂಡಿಸಿತ್ತು. ಅದಕ್ಕೆಲ್ಲ ಈಗ ತೆರೆ ಬಿದ್ದಿದೆ. ತಮ್ಮ ಮೇಲಿನ ಆರೋಪ ಪಕ್ಷದ ಹಿತಾಸಕ್ತಿಗೆ ಧಕ್ಕೆ ತರಬಾರದು ಎಂಬ ಕಾರಣಕ್ಕಾಗಿ ಎರಡನೇ ಅವಧಿಗೆ ಮುಂದುವರಿಯಲು ಇಷ್ಟಪಡುವುದಿಲ್ಲ ಎಂದು ಗಡ್ಕರಿ ನೀಡಿದ ಹೇಳಿಕೆ, ಮುಖ ಉಳಿಸಿಕೊಳ್ಳುವ ತಂತ್ರವಲ್ಲದೆ ಬೇರೇನಲ್ಲ. ಏಕೆಂದರೆ ಹಿರಿಯ ಧುರೀಣ ರಾಂ ಜೇಠ್ಮಲಾನಿಯವರ ಮಗ ಮಹೇಶ್ ಅವರು ಗಡ್ಕರಿ ವಿರುದ್ಧ ಸ್ಪರ್ಧಿಸುವ ಘೋಷಣೆ ಮಾಡಿದ್ದರು. ಮತ್ತೊಬ್ಬ ಮುಖಂಡ ಯಶವಂತ ಸಿನ್ಹಾ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಉಮೇದುವಾರಿಕೆ ಅರ್ಜಿಯನ್ನು ಪಡೆದುಕೊಂಡು ಗಡ್ಕರಿಗೆ ಸೆಡ್ಡು ಹೊಡೆಯುವ ಸೂಚನೆ ನೀಡಿದ್ದರು. ಇದರ ನಡುವೆ, ಆದಾಯ ತೆರಿಗೆ ಇಲಾಖೆ ಕೂಡ ಗಡ್ಕರಿ ಬೆನ್ನಿಗೆ ಬಿದ್ದಿತ್ತು. ಈ ವರ್ಷ ಕರ್ನಾಟಕ ಸೇರಿ ಅನೇಕ ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ. ಮುಂದಿನ ವರ್ಷ ಲೋಕಸಭೆ ಚುನಾವಣೆ ಬರಲಿದೆ. ಇಲ್ಲೆಲ್ಲ ಬಿಜೆಪಿ ಬಹಳ ನಿರೀಕ್ಷೆ ಇಟ್ಟುಕೊಂಡಿದೆ. ಇನ್ನೊಂದು ಕಡೆ, ಅಕ್ರಮದಲ್ಲಿ ಭಾಗಿಯಾದ, ಭ್ರಷ್ಟಾಚಾರ ನಡೆಸಿದ ಅನೇಕ ರಾಜಕಾರಣಿಗಳು ಜೈಲು ಸೇರುತ್ತಿದ್ದಾರೆ. ಇವೆಲ್ಲವೂ ದಿಢೀರ್ ನಿರ್ಧಾರದ ಹಿಂದೆ ಕೆಲಸ ಮಾಡಿರಬಹುದು. ಹೊಸ ಅಧ್ಯಕ್ಷ ರಾಜ್‌ನಾಥ್ ಸಿಂಗ್ ವಿವಾದಾತೀತ, ಸಮತೂಕ ಮತ್ತು ಸಮಚಿತ್ತದ ನಾಯಕ. ಹಗರಣಗಳ ಕೆಸರು ಅವರಿಗೆ ಅಷ್ಟಾಗಿ ಮೆತ್ತಿಕೊಂಡಿಲ್ಲ. ಚುನಾವಣಾ ರಾಜಕಾರಣದ ತಂತ್ರಗಾರಿಕೆಗಳನ್ನೆಲ್ಲ ಬಲ್ಲವರು. ಆದರೂ, ಪಕ್ಷದ ವರ್ಚಸ್ಸು ಹೆಚ್ಚಿಸಲು ಅವರಿಗೆ ಸಾಧ್ಯವಾಗಬಹುದೇ ಎಂಬುದನ್ನು ಮುಂಬರುವ ದಿನಗಳು ನಿರ್ಧರಿಸಲಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.