ಜನರ ಮುಖದಲ್ಲೂ ನಗು ಮೂಡಿಸಿ ರಾಜಕಾರಣಿಗಳು ಮೂಢನಂಬಿಕೆ ಮತ್ತು ಕಂದಾಚಾರಗಳ ದಾಸರಾಗುತ್ತಿರುವುದಕ್ಕೆ ಅವರ ಬದುಕು ಪಡೆಯುತ್ತಿರುವ ಅನಿರೀಕ್ಷಿತ ತಿರುವುಗಳೂ ಕಾರಣ ಇರಬಹುದು. ಇಂತಹದ್ದೇ ಒಂದು ಅನಿರೀಕ್ಷಿತ ಬೆಳವಣಿಗೆಯಲ್ಲಿ ದೇವರಗುಂಡ ವೆಂಕಪ್ಪಗೌಡ ಸದಾನಂದಗೌಡ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಇದನ್ನು ಅದೃಷ್ಟ ಕರುಣಿಸಿದ ಅವಕಾಶ ಎಂದು ಸಂಭ್ರಮಿಸದೆ ತಮ್ಮ ಸಾಮರ್ಥ್ಯಕ್ಕೆ ಎದುರಾಗಿರುವ ಸವಾಲೆಂದು ಸ್ವೀಕರಿಸುವ ಪ್ರಜ್ಞಾವಂತಿಕೆಯನ್ನು ಅವರು ತೋರಬೇಕಾಗಿದೆ. ಇದು ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷದ ಆಡಳಿತದ ಎರಡನೇ ಪರ್ವ.ಮೊದಲ ಪರ್ವದ ದುರಾಡಳಿತದ ಭಾರವನ್ನು ಬೆನ್ನಿನ ಮೇಲೆ ಹೇರಿಕೊಂಡೇ ಸದಾನಂದ ಗೌಡರು ಮುಖ್ಯಮಂತ್ರಿ ಪಟ್ಟದ ಮೆಟ್ಟಿಲುಗಳನ್ನು ಏರಬೇಕಾಗಿದೆ. ಭ್ರಷ್ಟಾಚಾರ, ಜಾತೀಯತೆ ಮತ್ತು ಅದಕ್ಷತೆಗಳಿಂದ ಕೂಡಿದ್ದ ಸರ್ಕಾರದ ಬಗ್ಗೆ ರಾಜ್ಯದ ಜನ ಬೇಸತ್ತು ಹೋಗಿದ್ದಾರೆ. ಭಿನ್ನ ಚಹರೆಯ ಪಕ್ಷ, ಮಾದರಿ ಆಡಳಿತ ನೀಡಬಹುದೆಂಬ ನಿರೀಕ್ಷೆಗಳೆಲ್ಲ ಹುಸಿಯಾಗಿ ಅವರು ಭ್ರಮನಿರಸನಕ್ಕೀಡಾಗಿದ್ದಾರೆ. ಹಿಂದಿನ ಮುಖ್ಯಮಂತ್ರಿ ಮತ್ತು ಅವರ ಸಹೋದ್ಯೋಗಿಗಳ ಬ್ರಹ್ಮಾಂಡ ಸ್ವರೂಪದ ಭ್ರಷ್ಟಾಚಾರದ ಹಗರಣಗಳಿಂದಾಗಿ ದೇಶದ ಮುಂದೆ ರಾಜ್ಯದ ಜನತೆ ತಲೆ ತಗ್ಗಿಸುವಂತಾಗಿದೆ. ಪಕ್ಷದ ಹಿರಿಯ ನಾಯಕರಾದ ಲಾಲ್‌ಕೃಷ್ಣ ಅಡ್ವಾಣಿ ಅವರೇ `ಡಕಾಯಿತರು ಮತ್ತು ಕಿಸೆಗಳ್ಳರಿಗಿಂತ ಕೆಟ್ಟ ಜನರು ಸರ್ಕಾರದಲ್ಲಿದ್ದಾರೆ~ ಎಂದು ಒಪ್ಪಿಕೊಂಡ ಮೇಲೆ ಉಳಿದವರು ಹೇಳಲು ಏನೂ ಉಳಿದಿಲ್ಲ. ಈ ಕಳಂಕಗಳನ್ನೆಲ್ಲ ತೊಡೆದುಹಾಕಿ ಜನ ಮೆಚ್ಚುವಂತಹ ಆಡಳಿತ ನೀಡಲು ತೀವ್ರವಾದ ಆತ್ಮಶೋಧನೆ ಮತ್ತು ಅಖಂಡವಾದ ನೈತಿಕ ಬಲ ಬೇಕಾಗುತ್ತದೆ. ಈ ಗುಣಗಳನ್ನು ಸದಾನಂದ ಗೌಡರು ರೂಢಿಸಿಕೊಳ್ಳಲಿ. ಅನುಭವದ ಕೊರತೆಯನ್ನು ಹಿರಿಯರ ಮಾರ್ಗದರ್ಶನದ ಮೂಲಕ ಅವರು ತುಂಬಿಕೊಳ್ಳಲಿ. ಭ್ರಷ್ಟಾಚಾರದ ಆರೋಪದಿಂದಾಗಿ ಕಳಂಕಿತರಾಗಿರುವ ಮಾಜಿ ಮುಖ್ಯಮಂತ್ರಿಯ ಅಭ್ಯರ್ಥಿಯಾಗಿಯೇ ಸದಾನಂದ ಗೌಡರು ಹೊರಹೊಮ್ಮಿರುವ ಕಾರಣ ಸಹಜವಾಗಿಯೇ ಮುಂದಿನ ದಿನಗಳ ಅವರ ನಡೆ ನುಡಿಯ ಮೇಲೆ ಸಂಶಯದ ಕಣ್ಣುಗಳು ನೆಟ್ಟಿರುತ್ತವೆ. ಇದರಿಂದಾಗಿ ತಾನೊಬ್ಬ ಸರ್ವಸ್ವತಂತ್ರ ನಾಯಕ, ಯಾರ ಕೈಗೊಂಬೆಯೂ ಅಲ್ಲ ಎನ್ನುವುದನ್ನು ಸಾಬೀತುಪಡಿಸುವ ಸವಾಲು ಕೂಡಾ ಅವರ ಹೆಗಲ ಮೇಲಿದೆ. ವ್ಯಕ್ತಿ ಮಾತ್ರವಲ್ಲ, ವ್ಯವಸ್ಥೆಯೂ ಬದಲಾಗಿದೆ ಎನ್ನುವುದನ್ನು ರಾಜ್ಯದ ಜನತೆಗೆ ಮನವರಿಕೆ ಮಾಡಿಕೊಡುವ ರೀತಿಯಲ್ಲಿ ಅವರು ಕೆಲಸ ಮಾಡಬೇಕಾಗಿದೆ. ತನ್ನ ಪದಚ್ಯುತಿಗೆ ಕಾರಣವಾದ ಲೋಕಾಯುಕ್ತ ವರದಿಯನ್ನು ಬಿ.ಎಸ್.ಯಡಿಯೂರಪ್ಪನವರು ಈಗಾಗಲೇ ಹೈಕೋರ್ಟ್‌ನಲ್ಲಿ ಪ್ರಶ್ನಿಸಿರುವ ಕಾರಣ ಅದನ್ನು ತಿರಸ್ಕರಿಸಬೇಕೆಂಬ ಒತ್ತಡವನ್ನು ಅವರು ಸರ್ಕಾರದ ಮೇಲೆ ಹೇರಲೂ ಬಹುದು. ಇದು ಹೊಸ ಮುಖ್ಯಮಂತ್ರಿಗಳು ಎದುರಿಸಲಿರುವ ಮೊದಲ ಸತ್ವಪರೀಕ್ಷೆ. ಒತ್ತಡಕ್ಕೆ ಸಿಕ್ಕಿ ಮಣಿದರೆ ರಾಜ್ಯದ ಜನತೆ ಕ್ಷಮಿಸಲಾರರು. ಇಲ್ಲಿಯವರೆಗೆ ಸದಾನಂದಗೌಡರ ನಗುಮುಖವನ್ನಷ್ಟೆ ಜನ ಕಂಡಿದ್ದಾರೆ. ತಾನೊಬ್ಬ ದಕ್ಷ ಮತ್ತು ಪ್ರಾಮಾಣಿಕ ಆಡಳಿತಗಾರ ಎಂಬುದನ್ನು ಸಾಬೀತುಪಡಿಸುವ ಹೊಣೆ ಈಗ ಅವರ ಮೇಲಿದೆ. ತಾನು ಮುಖದ ತುಂಬಾ ನಗು ಹರಡಿಕೊಂಡರಷ್ಟೇ ಸಾಲದು, ರಾಜ್ಯದ ಜನತೆಯ ಮುಖದಲ್ಲಿಯೂ ಶಾಂತಿ, ಸಮೃದ್ಧಿ ಸಂತೃಪ್ತಿ ಮತ್ತು ಹೆಮ್ಮೆಯ ನಗು ಮೂಡಿಸುವ ಕೆಲಸವನ್ನು ಅವರು ಮಾಡಬೇಕು. ಇದನ್ನು ಮಾಡುತ್ತಾ ಮಾಡುತ್ತಾ ಅವರ ನಗು ಮಾಸದೆ ಇರಲಿ. ಹಿಂದಿನ ಮುಖ್ಯಮಂತ್ರಿಗಳು ಅವರಿಗೆ ಪಾಠವಾಗಲಿ, ಪ್ರೇರಣೆಯಾಗದಿರಲಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.