ಹೇಯ ಕೃತ್ಯ ಚಿಂತಾಮಣಿ ತಾಲ್ಲೂಕಿನ ಬಾರ್ಲಹಳ್ಳಿ ಮತ್ತು ಯರ‌್ರಕೋಟೆ ಗ್ರಾಮಗಳಲ್ಲಿ ಕಳ್ಳರೆಂದು ಶಂಕಿಸಿ ಹತ್ತು ಮಂದಿ ಯುವಕರನ್ನು ಸಾರ್ವಜನಿಕರು ಬರ್ಬರವಾಗಿ ಕೊಂದು ಹಾಕಿದ ಘಟನೆ ಖಂಡನೀಯ. ವಿವೇಚನೆ ಇಲ್ಲದೆ ತಾವೇ ಕಾನೂನನ್ನು ಕೈಗೆತ್ತಿಕೊಂಡು ನಡೆಸಿದ ಈ ಕೃತ್ಯ ಅಮಾನವೀಯ. ಊರಿಗೆ ಬಂದವರನ್ನು ಕಳ್ಳರೆಂದು ಶಂಕಿಸಿ ಕೊಲ್ಲುವುದು ಅನಾಗರಿಕ ವರ್ತನೆ. ಊರಿಗೆ ಬಂದವರು ಕಳ್ಳರೇ ಆಗಿದ್ದರೆ ಅಥವಾ ಕಳ್ಳರೆಂಬ ಸಂಶಯ ಬಂದಿದ್ದರೆ ಅವರನ್ನೆಲ್ಲ ಹಿಡಿದು ಪೊಲೀಸರ ಕೈಗೆ ಒಪ್ಪಿಸಬೇಕಿತ್ತು. ಆದರೆ ಊರಿಗೆ ಬಂದ 11 ಮಂದಿಯಲ್ಲಿ 10 ಮಂದಿ ಪ್ರಾಣ ಕಳೆದುಕೊಳ್ಳುವಂತೆ ಹೊಡೆದು ಬಡಿದದ್ದು ಸಮರ್ಥನೀಯವಲ್ಲ. ಇಂತಹ ಕೃತ್ಯ ನಡೆಯಲು ಗಡಿಯಲ್ಲಿರುವ ಪೊಲೀಸರ ವರ್ತನೆಯೂ ಕಾರಣ. ಈ ಭಾಗದ ಹಳ್ಳಿಗಳಲ್ಲಿ ಕೆಲವು ತಿಂಗಳಿಂದ ನಿರಂತರವಾಗಿ ಕಳ್ಳತನಗಳು ನಡೆದ ವರದಿಗಳಿವೆ. ಕಳ್ಳತನದ ದೂರು ಮತ್ತು ಕಳ್ಳರೆಂದು ಶಂಕಿಸಿ ಹಿಡಿದುಕೊಟ್ಟವರ ವಿರುದ್ಧ ಪೊಲೀಸರು ಯಾವುದೇ ಕಾನೂನು ಕ್ರಮಕೈಗೊಳ್ಳದೆ ಹೋದುದು ಗ್ರಾಮಸ್ಥರ ಸಿಟ್ಟಿಗೆ ಕಾರಣ ಎನ್ನಲಾಗಿದೆ. ಕಳ್ಳತನದ ಆರೋಪಿಗಳಿಂದ ಹಣ ಪಡೆದು ಅವರ ವಿರುದ್ಧ ಯಾವ ಕ್ರಮವನ್ನೂ ಕೈಗೊಳ್ಳದಿರುವ ಪೊಲೀಸರ ನಿಷ್ಕ್ರಿಯತೆಯಿಂದ ಜನರು ರೋಸಿ ಹೋಗಿದ್ದರು ಎನ್ನುವುದನ್ನು ತಳ್ಳಿಹಾಕಲಾಗದು. ಗ್ರಾಮಾಂತರ ಭಾಗಗಳಲ್ಲಿ ಕೆಲಸ ಮಾಡುವ ಬಹುತೇಕ ಪೊಲೀಸರು ಹಣದ ಆಸೆಗೆ ಕಳ್ಳಕಾಕರ ಬಳಿ ಕೈಯೊಡ್ಡುವ ಚಾಳಿಯನ್ನು ಬೆಳೆಸಿಕೊಂಡಿರುತ್ತಾರೆ. ಕಳ್ಳತನ, ಕೊಲೆ ಮತ್ತು ಇತರೆ ಯಾವುದೇ ಅಪರಾಧ ಪ್ರಕರಣಗಳು ನಡೆದಾಗ ಪೊಲೀಸರಿಗೆ `ಹಬ್ಬ~. ಎಷ್ಟೋ ಕಡೆಗಳಲ್ಲಿ ಪೊಲೀಸ್ ಠಾಣೆಗಳು ಬಂದ ಮೇಲೆಯೇ ಅಪರಾಧಗಳು ಹೆಚ್ಚಿರುವ ಪ್ರಕರಣಗಳಿವೆ. ಇದು ಬೇಲಿಯೇ ಎದ್ದು ಹೊಲ ಮೇಯುವಂಥ ವಿಪರ್ಯಾಸ. ಬಾರ್ಲಹಳ್ಳಿ ಮತ್ತು ಯರ‌್ರಕೋಟೆ ಗ್ರಾಮಗಳ ಜನರ ಆಕ್ರೋಶಕ್ಕೆ ಬಲಿಯಾದ ಹತ್ತು ಮಂದಿ ಯುವಕರು ಆಂಧ್ರ ಪ್ರದೇಶದಿಂದ ಬಂದು ನಕಲಿ ಚಿನ್ನದ ಒಡವೆಗಳನ್ನು ಮಾರಾಟ ಮಾಡುವ ದಂಧೆಯಲ್ಲಿ ತೊಡಗಿದ್ದವರೆಂದು ಪ್ರಾರಂಭಿಕ ವರದಿಗಳಿವೆ. ಗಡಿ ಗ್ರಾಮಗಳಲ್ಲಿ ಮೋಸ, ವಂಚನೆ ಮುಂತಾದ ಅಪರಾಧ ಕೃತ್ಯಗಳು ನಿರಂತರವಾಗಿ ನಡೆಯುತ್ತಿರುತ್ತವೆ. ಸರ್ಕಾರ ಗಡಿ ಗ್ರಾಮಗಳನ್ನು ನಿರ್ಲಕ್ಷಿಸುತ್ತಾ ಬಂದಿರುವುದಕ್ಕೆ ಇಂತಹ ಘಟನೆ ನಡೆದಿರುವುದು ಸಾಕ್ಷಿ. ಈ ಭಾಗದ ಜನರಲ್ಲಿರುವ ಪಾಳೇಗಾರಿಕೆ ಮನೋಭಾವವೂ ಇಂತಹ ಘಟನೆಗಳಿಗೆ ಕಾರಣ. ಇದನ್ನೆಲ್ಲ ಗಮನಿಸಿದರೆ ಗಡಿ ಗ್ರಾಮಗಳಲ್ಲಿ ಸರ್ಕಾರ ಎನ್ನುವುದೇ ಇಲ್ಲ ಎನ್ನುವಂತಾಗಿದೆ. ಅರಾಜಕತೆ ತಾಂಡವವಾಡುತ್ತಿರುವ ಸಂಕೇತವಿದು. ಹತ್ತು ಮಂದಿ ಯುವಕರ ಹತ್ಯೆಗೆ ಕಾರಣರಾದವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವ ಮೂಲಕ ಗಡಿ ಗ್ರಾಮಗಳಲ್ಲಿ ನಾಗರಿಕ ಸರ್ಕಾರ ತನ್ನ ಅಸ್ತಿತ್ವವನ್ನು ಸಾಬೀತುಪಡಿಸಬೇಕಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.