ಆರ್ಥಿಕ ಸುಧಾರಣೆಯ ಯಶಸ್ಸು ಇಪ್ಪತ್ತು ವರ್ಷಗಳ ಹಿಂದೆ ಆರಂಭವಾದ ಆರ್ಥಿಕ ಸುಧಾರಣೆ ದೇಶದ ಹಣಕಾಸು ಪರಿಸ್ಥಿತಿಯನ್ನು ದಿವಾಳಿಯ ಅಂಚಿನಿಂದ ಸದೃಢತೆಯ ಹಂತಕ್ಕೆ ತಂದಿರುವುದು ಸ್ವತಂತ್ರ ಭಾರತದ ಆರು ದಶಕಗಳ ಆಡಳಿತದಲ್ಲಿ ಮಹತ್ವದ ಬೆಳವಣಿಗೆ. ಆರ್ಥಿಕ ತಜ್ಞರಾದ ಡಾ. ಮನಮೋಹನ ಸಿಂಗ್ ಹಣಕಾಸು ಸಚಿವರಾಗಿ 1991ರಲ್ಲಿ ಆರಂಭಿಸಿದ ಸುಧಾರಣೆ ಕ್ರಮಗಳಿಂದ ದೇಶದ ಅರ್ಥವ್ಯವಸ್ಥೆಯ ಸಾಮರ್ಥ್ಯ ಸಾಬೀತುಪಡಿಸುವ ಮಾನದಂಡಗಳಾದ ಆರ್ಥಿಕ ವೃದ್ಧಿ ದರ, ವಿದೇಶಿ ವಿನಿಮಯ ಮೀಸಲು, ರಫ್ತು ವಹಿವಾಟು, ದೂರವಾಣಿ ಸಾಂದ್ರತೆ, ಐ.ಟಿ ಮತ್ತು ಮೊಬೈಲ್ ಕ್ರಾಂತಿ, ಕಾರು ಬೈಕ್‌ಗಳ ತಯಾರಿಕೆ - ಮಾರಾಟ ಭರಾಟೆ, ವಿಮಾನ ಯಾನ, ವೇತನ, ತಲಾ ವರಮಾನ, ಕೌಟುಂಬಿಕ ಉಳಿತಾಯ ಹೆಚ್ಚಳ ಮತ್ತು ಬ್ಯಾಂಕಿಂಗ್ ವಹಿವಾಟಿನ ಚಿತ್ರಣ ಸಂಪೂರ್ಣ ಬದಲಾಗಿದೆ. ಲೈಸೆನ್ಸ್ ರಾಜ್ ವ್ಯವಸ್ಥೆ ಕೊನೆಗೊಂಡು, ನಿರ್ಬಂಧಗಳೂ ಇಲ್ಲವಾಗಿವೆ. ಭಾರಿ ಯಂತ್ರೋಪಕರಣ ಮತ್ತು ಗ್ರಾಹಕ ಬಳಕೆ ಸರಕುಗಳ ಆಮದು ಸರಳಗೊಂಡಿದೆ. ಬಹುರಾಷ್ಟ್ರೀಯ ಸಂಸ್ಥೆಗಳು ಸ್ಥಳೀಯ ಸಂಸ್ಥೆಗಳ ಸಹಯೋಗದಲ್ಲಿ ಜಂಟಿ ಸಂಸ್ಥೆ ಸ್ಥಾಪಿಸಿ ಉತ್ಪಾದನಾ ಚಟುವಟಿಕೆಯ ವೇಗ ವೃದ್ಧಿಸಿವೆ. ಇದರಿಂದ ಗರಿಗೆದರಿದ ವಹಿವಾಟು, ಸೇವಾ ಕ್ಷೇತ್ರವನ್ನು ವ್ಯಾಪಕಗೊಳಿಸಿ ಸೇವಾ ತೆರಿಗೆಯ ಹೊಸಕಲ್ಪನೆ ದೇಶದ ಆದಾಯಕ್ಕೆ ಮುಖ್ಯವಾದ ಮೂಲವಾಗಿದೆ. ವಿದೇಶಿ ವಿನಿಮಯ ಮೀಸಲು ಅಪಾಯಕಾರಿ ಕೆಳಮಟ್ಟದಲ್ಲಿದ್ದ ಕಾರಣ ಚಿನ್ನವನ್ನು ಅಡವು ಇಡಬೇಕಾದ ಅವಸ್ಥೆಗೆ ಮುಟ್ಟಿದ್ದ ಹಂತದಿಂದ ಈಗಿನ 30 ಶತಕೋಟಿ ಡಾಲರ್ ಪ್ರಮಾಣಕ್ಕೆ ಒಯ್ದಿರುವ ಆರ್ಥಿಕ ಶಿಸ್ತು ಉದಾರೀಕರಣದ ಫಲ. ಆದಾಯ ಹೆಚ್ಚಳವಾಗಿದ್ದರೂ ಆಸ್ತಿಯ ಪ್ರಮಾಣದಲ್ಲಿ ಏರಿಕೆಯಾಗಿಲ್ಲ. ಸೇವಾ ಕ್ಷೇತ್ರದಲ್ಲಿ ಆಗಿರುವ ಬೆಳವಣಿಗೆ ಮೂಲಸೌಕರ್ಯ ಕ್ಷೇತ್ರದಲ್ಲಿ ಕಾಣುತ್ತಿಲ್ಲ. ರಸ್ತೆ, ನೀರಾವರಿ, ವಿದ್ಯುತ್ ಉತ್ಪಾದನೆಯಂಥ ಮೂಲ ಅಗತ್ಯಗಳ ನಿರ್ಮಾಣಗಳಿಗೆ ಆದ್ಯತೆ ದೊರಕಿಲ್ಲ. ಮುಕ್ತ ಆಮದು ನೀತಿ, ಕೃಷಿ ಕ್ಷೇತ್ರವನ್ನು ಎಷ್ಟರಮಟ್ಟಿಗೆ ಬಾಧಿಸಿದೆ ಎಂದರೆ ಈ ಇಪ್ಪತ್ತು ವರ್ಷಗಳಲ್ಲಿ ಎರಡು ಲಕ್ಷ ರೈತರು ಸಾಲದ ಬಾಧೆಯಿಂದ ಜೀವ ಕಳೆದುಕೊಂಡ ದಾರುಣ ಸ್ಥಿತಿ ಸೃಷ್ಟಿಯಾಯಿತು. ಜೀವನಾವಶ್ಯಕ ಸರಕುಗಳ ಬೆಲೆ ಏರಿಕೆ ಬಿಸಿ ಬಡವ ಬಲ್ಲಿದರಿಗೂ ಸಂಕಷ್ಟ ತಂದೊಡ್ಡಿದೆ. ಸುಧಾರಣೆಯ ಭರಾಟೆಯಲ್ಲಿ ಕೃಷಿ ವಲಯವನ್ನು ನಿರ್ಲಕ್ಷಿಸಿದ್ದೇ ಇದಕ್ಕೆ ಕಾರಣ. ಭೂಸ್ವಾಧೀನಕ್ಕೆ ತಾರ್ಕಿಕ ಚಿಂತನೆಯ ಅವಶ್ಯಕತೆ ಇದೆ. ಕೃಷಿ ಉತ್ಪನ್ನಗಳ ಸಮರ್ಪಕ ನಿರ್ವಹಣೆಯ ಲೋಪವೂ ಸುಧಾರಿಸಬೇಕಿದೆ. ಭ್ರಷ್ಟ ಅಧಿಕಾರಶಾಹಿ ಮತ್ತು ಅದಕ್ಕಿಂತಲೂ ಭ್ರಷ್ಟವಾದ ರಾಜಕಾರಣಿ- ಉದ್ಯಮಿಗಳ ನಡುವಣ ಅಪವಿತ್ರ ಸಾಂಗತ್ಯದ ಕಾರಣ ಬಡತನ ನಿವಾರಣೆಯ ಯಾವೊಂದು ಕಾರ್ಯಕ್ರಮವೂ ಉದ್ದೇಶಿತ ಜನವರ್ಗಕ್ಕೆ ತಲುಪದಂಥ ವಿಷಮಸ್ಥಿತಿ ನಿರ್ಮಾಣವಾಗಿದೆ. ಮಾಹಿತಿ ತಂತ್ರಜ್ಞಾನ ಕೇಂದ್ರಿತ ಔದ್ಯಮಿಕ ರಂಗ ಸೇವಾ ಕ್ಷೇತ್ರವನ್ನು ಜಾಗತಿಕಮಟ್ಟಕ್ಕೆ ಕೊಂಡೊಯ್ದಿದೆ. ಇದು ಎಷ್ಟು ಕಾಲ ಬೇಡಿಕೆಯನ್ನು ಉಳಿಸಿಕೊಳ್ಳಲಿದೆ ಎಂದು ಹೇಳಲಾಗದು. ಅಭಿವೃದ್ಧಿಯ ಪ್ರಯೋಜನವು ಎಲ್ಲರಿಗೂ ಸಮಾನವಾಗಿ ಲಭಿಸುವಂತೆ, ರಾಜಕೀಯ ಇಚ್ಛಾಶಕ್ತಿ ಮತ್ತು ಜಾಣ್ಮೆ ಪ್ರದರ್ಶಿಸಿದರೆ ಜನರ ಬದುಕು ಇನ್ನಷ್ಟು ಹಸನಾದೀತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.