ಸುರಕ್ಷತೆಯ ಲೋಪ ಬಳ್ಳಾರಿ ಜಿಲ್ಲೆಯ ಜಿಂದಾಲ್ ಉಕ್ಕು ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆಯಾಗಿ ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ. ಸತ್ತವರಲ್ಲಿ ಒಬ್ಬ ಕಾರ್ಖಾನೆಯ ಕಾಯಂ ಉದ್ಯೋಗಿ. ಇನ್ನಿಬ್ಬರು ಗುತ್ತಿಗೆ ಆಧಾರದಲ್ಲಿ ನೇಮಕಗೊಂಡವರು. ಬ್ಲಾಸ್ಟ್ ಫರ್ನೆಸ್‌ನಲ್ಲಿ ವಿಷಾನಿಲ ಸೋರಿಕೆಯಾಗುತ್ತಿದೆ ಎಂಬ ಮಾಹಿತಿ ತಿಳಿದು ಅದನ್ನು ಸರಿಪಡಿಸಲು ಈ ಕಾರ್ಮಿಕರು ತೆರಳಿದ್ದರು. ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದೆ ದುರಸ್ತಿಗೆ ಮುಂದಾಗ್ದ್ದಿದರಿಂದ ಅವರು ಜೀವ ಕಳೆದುಕೊಳ್ಳಬೇಕಾಯಿತು ಎನ್ನಲಾಗಿದೆ. ಅಪಾಯದ ಸಾಧ್ಯತೆಗಳಿರುವ ಘಟಕಗಳಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಒದಗಿಸದ ಕಾರ್ಖಾನೆಯ ಆಡಳಿತ ವರ್ಗದ ಬೇಜವಾಬ್ದಾರಿತನವೇ ಈ ದುರಂತಕ್ಕೆ ಕಾರಣ ಎಂದು ಮೃತ ಕಾರ್ಮಿಕರ ಸಂಬಂಧಿಗಳು ಹಾಗೂ ಗುತ್ತಿಗೆ ಕಾರ್ಮಿಕರು ಆರೋಪಿಸಿದ್ದಾರೆ. ಕಾರ್ಖಾನೆ ಆರಂಭವಾದಾಗಿನಿಂದ ಇದುವರೆಗೆ ಹಲವಾರು ಕಾರ್ಮಿಕರು ಸುರಕ್ಷತೆಯ ಕೊರತೆಯಿಂದ ಮೃತಪಟ್ಟಿದ್ದಾರೆ ಎಂಬ ದೂರುಗಳಿವೆ. ಆದರೆ ಆಡಳಿತ ವರ್ಗ ಇಂತಹ ಸಾವುಗಳನ್ನು ಗಂಭೀರವಾಗಿ ಪರಿಗಣಿಸಿಲ್ಲ. ಆದರೆ ಕಾರ್ಮಿಕರು ಸಾಯುವುದು ಸಹಜ ಎನ್ನುವಂತೆ ಅದು ವರ್ತಿಸುತ್ತ ಬಂದಿದೆ. ಸತ್ತವರ ಕುಟುಂಬಗಳಿಗೆ ಹಣದ ಪರಿಹಾರ ನೀಡಿ ಕೈತೊಳೆದುಕೊಳ್ಳುವ ಧೋರಣೆ ಅನುಸರಿಸುತ್ತಿದೆ ಎಂಬ ದೂರುಗಳಿವೆ. ಕಾರ್ಖಾನೆಯಲ್ಲಿ ಉತ್ತರ ಭಾರತದ ರಾಜ್ಯಗಳಿಗೆ ಸೇರಿದ ಕಾರ್ಮಿಕರು ಮತ್ತು ಅಧಿಕಾರಿಗಳೇ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಹಲವಾರು ಸಾವಿನ ಪ್ರಕರಣಗಳು ಬೆಳಕಿಗೆ ಬಂದಿಲ್ಲ. ಈ ಪ್ರಕರಣದಲ್ಲಿ ಸತ್ತವರಲ್ಲಿ ಇಬ್ಬರು ಸ್ಥಳೀಯರು ಹಾಗೂ ಗುತ್ತಿಗೆ ಕಾರ್ಮಿಕರಾಗಿದ್ದರಿಂದ ಅದನ್ನು ಮುಚ್ಚಿಡಲು ಆಗಲಿಲ್ಲ ಎಂಬ ಮಾತುಗಳು ಕೇಳಿ ಬಂದಿದೆ. ಹಿಂದಿನ ಒಂದು ವರ್ಷದ ಅವಧಿಯಲ್ಲಿ ಸುಮಾರು ಹತ್ತೊಂಬತ್ತು ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ ಎಂಬ ಆರೋಪವಿದೆ. ಕಾರ್ಖಾನೆಯಲ್ಲಿ ಕಾರ್ಮಿಕರಿಗೆ ರಕ್ಷಣೆಯೇ ಇಲ್ಲ ಎನ್ನುವಂತಹ ಭಾವನೆ ಅವರಲ್ಲಿ ಬೆಳೆಯಲು ಆಡಳಿತ ವರ್ಗ ಅವಕಾಶ ಕೊಡಬಾರದು. ಇನ್ನೂ ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕವೇ ದುರ್ಘಟನೆಗಳನ್ನು ನಿಯಂತ್ರಿಸಬೇಕು. ಕಾರ್ಖಾನೆಯಲ್ಲಿರುವ ಕಾರ್ಮಿಕ ಸುರಕ್ಷತಾ ಕ್ರಮಗಳನ್ನು ಆಗಾಗ ಪರಿಶೀಲಿಸಿ ಸರಿಪಡಿಸುವ ಜವಾಬ್ದಾರಿ ರಾಜ್ಯ ಕಾರ್ಮಿಕ ಇಲಾಖೆಯದು. ಗುತ್ತಿಗೆ ಆಧಾರದ ಮೇಲೆ ಸ್ಥಳೀಯರನ್ನು ನೇಮಕ ಮಾಡಿಕೊಂಡು ಅವರನ್ನು ಹೆಚ್ಚು ಅಪಾಯಕಾರಿ ಕೆಲಸಗಳಿಗೆ ದುಡಿಸಿಕೊಳ್ಳಲಾಗುತ್ತಿದೆ. ಅವರಿಗೆ ರಕ್ಷಣೆ ಇಲ್ಲ. ಈ ಕಾರ್ಮಿಕರನ್ನು ಪೂರೈಸುವ ಗುತ್ತಿಗೆದಾರರು ಅವರಿಗೆ ಅರ್ಧದಷ್ಟು ವೇತನ ನೀಡಿ ಶೋಷಣೆ ಮಾಡುತ್ತಿದ್ದಾರೆ. ಅವರಿಗೆ ವಸತಿ ಸೌಲಭ್ಯ ನೀಡುವ ವಿಷಯದಲ್ಲೂ ಅನ್ಯಾಯವಾಗುತ್ತಿದೆ ಎಂಬ ದೂರುಗಳಿವೆ. ಕಾರ್ಖಾನೆಯ ಆಡಳಿತ ಈ ಎಲ್ಲಾ ದೂರುಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಕಾರ್ಖಾನೆಯ ಸಿಬ್ಬಂದಿಗಳೆಲ್ಲರ ಜೀವವೂ ಅಮೂಲ್ಯವೇ. ಎಲ್ಲರೂ ಉತ್ಪಾದನೆಯಲ್ಲಿ ತೊಡಗಿದವರೇ. ಹೀಗಾಗಿ ಎಲ್ಲರಿಗೂ ಹೆಚ್ಚಿನ ಸುರಕ್ಷತೆ ಒದಗಿಸಬೇಕು. ಜಿಲ್ಲಾ ಆಡಳಿತ, ಜಿಂದಾಲ್ ಕಾರ್ಮಿಕರ ದೂರುಗಳನ್ನು ಆಲಿಸಿ ಪರಿಸ್ಥಿತಿ ಸುಧಾರಣೆಗೆ ಕ್ರಮ ಕೈಗೊಳ್ಳಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.