ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ ಕಾಮನ್‌ವೆಲ್ತ್ ಕ್ರೀಡಾ ಕೂಟದಲ್ಲಿ ನಡೆದಿರುವ ಭ್ರಷ್ಟಾಚಾರದ ಬಗೆಗೆ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಮತ್ತು ಸಿಬಿಐ ತನಿಖೆ ನಡೆಯುತ್ತಿರುವ ಬೆನ್ನಲ್ಲೇ ಹೊರಬಂದಿರುವ ಮಹಾ ಲೇಖಪಾಲರ (ಸಿಎಜಿ) ವರದಿಯು ಕೇಂದ್ರ ಮತ್ತು ದೆಹಲಿ ಸರ್ಕಾರವನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ. ಕ್ರೀಡಾಂಗಣ, ವಸತಿ ಸಮುಚ್ಚಯ ಮತ್ತು ಕ್ರೀಡಾ ಸಾಮಗ್ರಿಗಳ ಖರೀದಿ ಸೇರಿದಂತೆ ಭಾರೀ ಭ್ರಷ್ಟಾಚಾರ ನಡೆದಿರುವುದನ್ನು ಸಿಎಜಿ ತನ್ನ 743 ಪುಟಗಳ ವರದಿಯಲ್ಲಿ ಎತ್ತಿತೋರಿಸಿದೆ. ಭ್ರಷ್ಟಾಚಾರ, ನಿರ್ಲಕ್ಷ್ಯ ಮತ್ತು ಆಡಳಿತ ನಿರ್ವಹಣೆಯಲ್ಲಿ ಆಗಿರುವ ಅಕ್ರಮಗಳಿಂದ ಸುಮಾರು ರೂ 2,300 ಕೋಟಿಯಷ್ಟು ಹಣ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಿರುವುದಾಗಿ ಅಂದಾಜು ಮಾಡಲಾಗಿದೆ. ಸುಮಾರು 11ಸಾವಿರ ಕೋಟಿಗೂ ಹೆಚ್ಚು ಖರ್ಚು ಮಾಡಿ ಈ ಕ್ರೀಡಾ ಕೂಟವನ್ನು ನಡೆಸಲು ಆರಂಭಿಸಿದ ದಿನದಿಂದಲೂ ಭ್ರಷ್ಟಾಚಾರ ಮತ್ತು ಅಕ್ರಮಗಳು ನಡೆಯುತ್ತಿರುವುದಾಗಿ ವ್ಯಾಪಕ ದೂರುಗಳು ಕೇಳಿ ಬಂದಿದ್ದವು. ಕಾಮನ್‌ವೆಲ್ತ್ ಕ್ರೀಡಾಕೂಟ ಸಂಘಟನಾ ಸಮಿತಿ ಅಧ್ಯಕ್ಷ ಸುರೇಶ್ ಕಲ್ಮಾಡಿ, ಅವರ ಜೊತೆ ಕಾರ್ಯನಿರ್ವಹಿಸಿದ ಸಿಬ್ಬಂದಿ, ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಸಚಿವಾಲಯ, ಕ್ರೀಡಾ ಸಚಿವಾಲಯ ಮತ್ತು ದೆಹಲಿ ಸರ್ಕಾರ ನಡೆಸಿದ ಅಕ್ರಮಗಳೇ ಸುಮಾರು 2,300 ಕೋಟಿ ರೂಪಾಯಿ ನಷ್ಟಕ್ಕೆ ಹೊಣೆ ಎಂದು ಸಿಎಜಿ ತನ್ನ ವರದಿಯಲ್ಲಿ ಉಲ್ಲೇಖಿಸಿರುವುದು ಗಂಭೀರವಾದ ವಿಷಯ. ಕೆಲವು ನಿರ್ಮಾಣ ಕಾಮಗಾರಿಯನ್ನು ಗುತ್ತಿಗೆ ಪಡೆದಿದ್ದ ಸಂಸ್ಥೆಗಳು ನಿಧಾನಗತಿಯಲ್ಲಿ ಕೆಲಸ ಮಾಡಿದ್ದೂ ನಷ್ಟಕ್ಕೆ ಕಾರಣ. ಆದರೆ ಈ ಸಂಸ್ಥೆಗಳ ವಿರುದ್ಧ ಕಾಮನ್‌ವೆಲ್ತ್ ಕೀಡಾಕೂಟ ಸಂಘಟನಾ ಸಮಿತಿಯಾಗಲಿ, ದೆಹಲಿ ಸರ್ಕಾರವಾಗಲಿ ಸಕಾಲದಲ್ಲಿ ಕ್ರಮಕೈಗೊಳ್ಳದೇ ಹೋದುದನ್ನು ಗಮನಿಸಿದರೆ ಅಕ್ರಮದಲ್ಲಿ ಎಲ್ಲರೂ ಭಾಗಿ ಎನ್ನುವ ಗುಮಾನಿಗೆ ಸಿಎಜಿ ವರದಿ ಪುಷ್ಟಿ ನೀಡಿದೆ. ಹಾಗಾಗಿ ಕ್ರೀಡಾಕೂಟದ ಅವ್ಯವಹಾರದ ಪ್ರಕರಣವನ್ನು ಈಗಾಗಲೇ ತನಿಖೆ ನಡೆಸುತ್ತಿರುವ ಸಿಬಿಐಗೆ ಈ ವರದಿ ಮತ್ತಷ್ಟು ಪೂರಕ ಮಾಹಿತಿ ದೊರಕಿಸಿಕೊಡುವುದರಿಂದ ತನಿಖೆಯ ಹಾದಿ ಸುಗಮವಾಗಬಹುದು. ಸಿಎಜಿ ವರದಿಯ ಹಿನ್ನೆಲೆಯಲ್ಲಿ ಸಂಸತ್‌ನಲ್ಲಿ ಗದ್ದಲ ನಡೆಸುತ್ತಿರುವ ವಿರೋಧಿ ಬಿಜೆಪಿಯು ಈಗ ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ತಲೆದಂಡಕ್ಕೆ ಪಟ್ಟು ಹಿಡಿದಿದೆ. ಸಿಎಜಿ ವರದಿಯ ಆಧಾರದ ಮೇಲೆ ಸಿಬಿಐ ತನಿಖೆ ನಡೆಯಬೇಕು ಎನ್ನುವ ಬಿಜೆಪಿಯ ವಾದವೇನೋ ಸರಿ. ಆದರೆ ಇದೇ ಮಾನದಂಡವನ್ನು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧದ ಹಲವು ಭ್ರಷ್ಟಾಚಾರ ಪ್ರಕರಣಗಳ ವಿಷಯದಲ್ಲಿ ಸಿಬಿಐ ತನಿಖೆಗೆ ಹಿಂದೇಟು ಹಾಕುವುದು ಆ ಪಕ್ಷದ ಇಬ್ಬಗೆ ನೀತಿಗೆ ನಿದರ್ಶನ. ಇದೇನೇ ಇರಲಿ, ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ನಡೆದಿರುವ ಭ್ರಷ್ಟಾಚಾರಕ್ಕೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತಾಗಲಿ. ಶಿಕ್ಷೆಯ ಜೊತೆಗೆ ಅವರು ನುಂಗಿರುವ ಹಣವನ್ನು ವಾಪಸ್ ಪಡೆಯುವಂತಾದರೆ ಸಿಎಜಿ ವರದಿ ಮತ್ತು ಸಿಬಿಐ ತನಿಖೆಯ ಉದ್ದೇಶ ಮತ್ತು ಶ್ರಮ ಸಾರ್ಥಕವಾದೀತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.