ಜೈಲಿಗೆ ಕಳಿಸಿ ಬಳ್ಳಾರಿ ಜಿಲ್ಲೆಯಲ್ಲಿ ಗಣಿಗಾರಿಕೆಯನ್ನು ಸ್ಥಗಿತಗೊಳಿಸುವಂತೆ ಸುಪ್ರೀಂ ಕೋರ್ಟ್ ಕಳೆದ ಶುಕ್ರವಾರ ತೀರ್ಪು ನೀಡಿದೆ. ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಗಣಿಗಾರಿಕೆಯಿಂದ ಅಲ್ಲಿನ ಪರಿಸರಕ್ಕೆ ಆಗಿರುವ ಹಾನಿಯನ್ನು ಅಧ್ಯಯನ ಮಾಡಿ ವರದಿ ನೀಡುವಂತೆ ಕೇಂದ್ರ ಉನ್ನತಾಧಿಕಾರದ ಸಮಿತಿಗೆ (ಸಿಇಸಿ) ಮಹತ್ವದ ಆದೇಶ ನೀಡಿದೆ. ಅಕ್ರಮ ಗಣಿಗಾರಿಕೆ ಮತ್ತು ಪರಿಸರ ನಾಶವನ್ನು ತಡೆಯಬೇಕಾಗಿದ್ದ ರಾಜ್ಯ ಸರ್ಕಾರದ ಹೊಣೆಗೇಡಿತನವನ್ನು ತೀರ್ಪು ಎತ್ತಿತೋರಿಸಿದೆ. ಬಳ್ಳಾರಿ, ಸಂಡೂರು, ಹೊಸಪೇಟೆ ತಾಲ್ಲೂಕುಗಳ ಗಣಿ ಪ್ರದೇಶದ ಗ್ರಾಮಗಳ ಜನರ ಬದುಕು ಮೂರಾಬಟ್ಟೆಯಾಗಿದೆ. ಸಾಗುವಳಿ ಭೂಮಿಗಳು ಹಾಳಾಗಿವೆ. ನೂರಾರು ಹೆಕ್ಟೇರ್ ಅರಣ್ಯ ಭೂಮಿಯಲ್ಲಿ ಗಣಿಗಾರಿಕೆ ನಡೆದು ಅಪಾರ ಸಸ್ಯ ಹಾಗೂ ಪ್ರಾಣಿ ಸಂಕುಲ ನಾಶವಾಗಿದೆ. ರಾಜ್ಯದ ಬೊಕ್ಕಸಕ್ಕೆ ಬರಬೇಕಾಗಿದ್ದ ಸಾವಿರಾರು ಕೋಟಿ ರೂಪಾಯಿ ಕೆಲವೇ ವ್ಯಕ್ತಿಗಳ ಜೇಬು ಸೇರಿದೆ. ಈ ಅಕ್ರಮಗಳನ್ನು ತಡೆಯಬೇಕಿದ್ದ ರಾಜ್ಯ ಸರ್ಕಾರ ಅಸಹಾಯಕನಂತೆ ಕೈಕಟ್ಟಿ ಕುಳಿತಿದೆ ಎಂಬುದನ್ನು ಸುಪ್ರೀಂ ಕೋರ್ಟಿನ ಗಮನಕ್ಕೆ ತಂದು ಗಣಿಗಾರಿಕೆಯನ್ನು ನಿಯಂತ್ರಿಸುವಂತೆ ಅದರ ಮನವೊಲಿಸಲು ಏಳೆಂಟು ವರ್ಷಗಳು ಬೇಕಾಯಿತು. ಕೊನೆಗೂ ಸುಪ್ರೀಂ ಕೋರ್ಟ್ ಪರಿಸ್ಥಿತಿಯನ್ನು ಮನಗಂಡು ರಾಜ್ಯದ ಖನಿಜ ಸಂಪತ್ತು ಮತ್ತು ಜಿಲ್ಲೆಯ ಪರಿಸರ ರಕ್ಷಣೆ ಮುಂದಾಗಿರುವುದು ಸಮಾಧಾನದ ಸಂಗತಿ. ಗಣಿಗಾರಿಕೆಗೆ ಪರವಾನಗಿ ಕೊಡುವುದು ಕೇಂದ್ರ ಸರ್ಕಾರವೇ ಆದರೂ ಗಣಿ ಕಂಪೆನಿಗಳು ಕ್ರಮಬದ್ಧವಾಗಿ ಗಣಿಗಾರಿಕೆ ಮಾಡುತ್ತಿವೆಯೇ ಎಂಬುದನ್ನು ನೋಡಿಕೊಳ್ಳುವ ಜವಾಬ್ದಾರಿ ರಾಜ್ಯ ಸರ್ಕಾರದ್ದು. ಕಳೆದ ಮೂರುನಾಲ್ಕು ವರ್ಷಗಳಲ್ಲಿ ಅಕ್ರಮ ಗಣಿಗಾರಿಕೆ ರಾಜಾರೋಷವಾಗಿ ನಡೆಯಿತು. ಈ ಕುರಿತು ತನಿಖೆ ನಡೆಸಿದ ಲೋಕಾಯುಕ್ತರು ತಮ್ಮ ಮಧ್ಯಂತರ ವರದಿಯಲ್ಲಿ ಅಕ್ರಮಗಳ ಕರಾಳ ಮುಖಗಳನ್ನು ಎತ್ತಿ ತೋರಿಸಿದ್ದರು. ಆದರೂ ರಾಜ್ಯ ಸರ್ಕಾರ ಕ್ರಮಕ್ಕೆ ಮುಂದಾಗಲಿಲ್ಲ. ಅರಣ್ಯ, ಗಣಿ, ಕಂದಾಯ, ತೆರಿಗೆ ಇಲಾಖೆಗಳ ಉನ್ನತ ಅಧಿಕಾರಿಗಳು, ಜಿಲ್ಲಾ ಆಡಳಿತ ಅಕ್ರಮ ಗಣಿಗಾರಿಕೆ ತಡೆಯಲಿಲ್ಲ. ಜಿಲ್ಲೆಯಿಂದ ಅದಿರು ಸಾಗಣೆ ಮಾಡುವುದನ್ನು ರಾಜ್ಯ ಸರ್ಕಾರ ನಿಷೇಧಿಸಿದ ನಂತರವೂ ಪರಿಸ್ಥಿತಿ ಸುಧಾರಿಸಲಿಲ್ಲ. ಆಂಧ್ರ, ಗೋವಾ ಮೂಲಕ ರಾಜ್ಯದ ಅದಿರು ಹೊರದೇಶಗಳಿಗೆ ರವಾನೆಯಾಗಿದೆ ಎನ್ನುವುದನ್ನು ಲೋಕಾಯುಕ್ತರ ಅಂತಿಮ ವರದಿ ಮತ್ತು ಸಿಇಸಿ ವರದಿಗಳು ಹೇಳಿವೆ. ಜಿಲ್ಲೆಯ ಪರಿಸರವನ್ನು ಪುನರ್ ರೂಪಿಸಲು ತಗಲುವ ವೆಚ್ಚವನ್ನು ಗಣಿ ಕಂಪೆನಿಗಳಿಂದ ವಸೂಲು ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಗಣಿಗಾರಿಕೆಯನ್ನು ಸ್ಥಗಿತಗೊಳಿಸುವುದೇ ಅಂತಿಮ ಕ್ರಮ ಆಗಬಾರದು. ಜಿಲ್ಲೆಯ ಪರಿಸರವನ್ನು ಹಾಳು ಮಾಡಿದ ಮತ್ತು ಖನಿಜ ಸಂಪತ್ತನ್ನು ಕೊಳ್ಳೆ ಹೊಡೆದ ವಂಚಕರ ವ್ಯವಹಾರಗಳನ್ನು ಕುರಿತು ಇನ್ನೂ ಹೆಚ್ಚಿನ ತನಿಖೆ ನಡೆಸಿ ತಪ್ಪಿತಸ್ಥರನ್ನು ಜೈಲಿಗೆ ಕಳುಹಿಸಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.